ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾತನಗೇರಾ ಗ್ರಾಮದ ಯುವಕರ ಪಡೆ ಸಾಧನೆ

Last Updated 26 ಮೇ 2017, 9:46 IST
ಅಕ್ಷರ ಗಾತ್ರ

ಹಳಿಯಾಳ: ಅರಣ್ಯ ಭಾಗದಲ್ಲಿ ಮಳೆ ಬಂದಾಗ ಸುತ್ತಮುತ್ತ ಹರಿದು ಹೋಗುವ ನೀರಿಗೆ ತಡೆಗೋಡೆ ನಿರ್ಮಿಸಿ ಹೂಳೆತ್ತಿದ ಕೆರೆಗೆ ನೀರು ತುಂಬಿಸಿ 150 ಎಕರೆ ಜಮೀನಿಗೆ ನೀರಾವರಿ ಮಾಡಿದ ಹಳಿಯಾಳ ತಾಲ್ಲೂಕಿನ ಕ್ಯಾತನಗೇರಾ ಗ್ರಾಮದ 11 ಯುವಕರ ಪಡೆಗೆ ಶ್ಲಾಘನೆ ವ್ಯಕ್ತವಾಗಿದೆ.

ಕೆಸರೋಳ್ಳಿ ಪಂಚಾಯ್ತಿ ವ್ಯಾಪ್ತಿಗೆ ಬರುವ ತಾಲ್ಲೂಕಿನ ಕ್ಯಾತನಗೇರಾ ಗ್ರಾಮದಲ್ಲಿ ವಿ.ಆರ್.ಡಿ.ಎಂ ಟ್ರಸ್ಟ್‌ ಹಾಗೂ ಉದ್ಯಮಿಗಳ ಸಹಕಾರದಿಂದ ಸಚಿವ ಆರ್.ವಿ.ದೇಶಪಾಂಡೆ ಗ್ರಾಮದಲ್ಲಿಯ 4 ಎಕರೆ ವಿಸ್ತೀರ್ಣವಿರುವ ಕೆರೆಯನ್ನು, 39 ದಿನ ಹೂಳೆತ್ತಲಾಗಿದೆ.

ಈ ಕಾಮಗಾರಿಯಲ್ಲಿ  17,920 ಕ್ಯೂಬಿಕ್ ಗೊರಚು ಮಣ್ಣನ್ನು ಯಾವುದೇ ಹೊಲಗದ್ದೆಗಳಿಗೆ ಉಪಯೋಗಕ್ಕೆ ಬಾರದೇ ಇರುವ ಕಾರಣ ಯುವಕರಾದ ಸಂಜು ಪಾಟೀಲ ನೇತೃತ್ವದಲ್ಲಿ  ಜ್ಯೋತಿಬಾ ಮಾವಳಂಗಿ, ತಾನಾಜಿ ವಾಲೇಕರ, ಪುಂಡ್ಲೀಕ ಮಾವಳಂಗಿ, ಶಿವಲಿಂಗ ಮಾವಳಂಗಿ, ವಿಠ್ಠಲ ವಾಲೇಕರ, ದೇವು ವಡ್ಡರ, ವಿಠ್ಠಲ ಅಪ್ಟೇಕರ, ರಘು ಘಾಡಿ, ಮೋಹನ ಅಪ್ಟೇಕರ, ರಮೇಶ ಪಾಟೀಲ ಸೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ಡೌವಗೆರಂಗಿ ನಾಲಾಕ್ಕೆ ಒಡ್ಡು ಕಟ್ಟಲು ತೀರ್ಮಾನಿಸಿ ಇನ್ನುಳಿದ ಗ್ರಾಮಸ್ಥರ ಬಳಿ ತಮ್ಮ ಯೋಜನೆಯನ್ನು ವಿವರಿಸಿದರು.

ಗ್ರಾಮಸ್ಥರು ಸಹ ಯುವಕರ ಪಡೆಗೆ ಕೈ ಜೋಡಿಸಿ ₹ 2.40 ಲಕ್ಷ  ಹಣ ಸಂಗ್ರಹಿಸಿ ಸತತ 15 ದಿನಗಳ ಕಾಲ ತಮ್ಮ ಸ್ವಂತ ಟ್ರ್ಯಾಕ್ಟರ್ ಬಳಿಸಿ ಮಣ್ಣನ್ನು ತಡೆಗೋಡೆ ನಿರ್ಮಾಣ ಮಾಡಲು ಬಳಿಸಿ ಸುಮಾರು 25 ಫೂಟ್ ಎತ್ತರವಿರುವ ತಡೆಗೋಡೆಯ ಒಡ್ಡನ್ನು ನಿರ್ಮಿಸಿದ್ದಾರೆ.

ತಡೆಗೋಡೆ ನಿರ್ಮಿಸಿದ ನಾಲ್ಕೇ ದಿನದಲ್ಲಿ ಕ್ಯಾತನಗೇರಾ ಗ್ರಾಮದಲ್ಲಿ ಅಕಾಲಿಕ ಮಳೆ ಬಿದ್ದು ತಡೆಗೋಡೆ ನಿರ್ಮಿಸಿದ ನಾಲಾಗಳಲ್ಲಿ ನೀರು ಭರ್ತಿಯಾಗಿದೆ. ಪುನಃ ಗ್ರಾಮಸ್ಥರೆಲ್ಲರೂ ಸೇರಿ ಸಭೆ ನಡೆಸಿ ನೀರನ್ನು ಕೆರೆಗೆ ಭರ್ತಿ ಮಾಡುವ ತೀರ್ಮಾನ ಕೈಗೊಂಡು ಯಾವುದೇ ವಿದ್ಯುತ್ ಸಂಪರ್ಕ ಬಳಸದೇ ತಡೆಗೋಡೆ ಯಲ್ಲಿ ಸಂಗ್ರಹವಾದ ನೀರನ್ನು ಪೈಪ್ ಮುಖಾಂತರ ಒಂದು ತಡೆಗೋಡೆ ಯಿಂದ ಇನ್ನೊಂದು ತಡೆಗೋಡೆಗೆ ನೀರು ಸಾಗುವ ಹಾಗೆ ಯೋಜನೆ ನಿರ್ಮಿಸಿ ನೀರನ್ನು ಗ್ರಾಮದ ಕೆರೆಯಲ್ಲಿ ಭರ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮದಲ್ಲಿಯ ಸುಮಾರು 30–40 ಕೊಳವೆಬಾವಿಗಳಿಗೆ ಕಳೆದ 2 ವರ್ಷ ಗಳಿಂದ ಹನಿ ನೀರು ಕಾಣದೇ ಪಾಳು ಬಿದ್ದಿದ್ದು, ಕಳೆದ ಎರಡು ದಿನಗಳಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಪ್ರತಿ ಕೊಳವೆಬಾವಿಗಳಲ್ಲಿ  2–3 ಇಂಚು ನೀರು ಬರುತ್ತಿದೆ.

‘ಸಚಿವ ಆರ್.ವಿ.ದೇಶಪಾಂಡೆ ಅವರ ಸತತ ಪ್ರಯತ್ನದಿಂದ ಹಳಿಯಾಳ ತಾಲ್ಲೂಕಿನ ಹಲವಾರು ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ವಿ.ಆರ್.ಡಿ.ಎಂ ಟ್ರಸ್ಟ್‌ ಹಾಗೂ ಉದ್ಯಮಿಗಳ ಸಹಕಾರದಿಂದ ಮಾಡಲಾಗುತ್ತಿದ್ದು, ಆಯಾ ಗ್ರಾಮಸ್ಥರು ಒಟ್ಟಾರೇ ಸೇರಿ ಕೆರೆ ಭರ್ತಿ ಮಾಡುವ ಯೋಜನೆಯನ್ನು ರೂಪಿಸಿಕೊಂಡರೆ ಸರ್ಕಾರದಿಂದ ಮಾಡುವ ಕೆಲಸ ಗ್ರಾಮಸ್ಥರೇ ಮಾಡಬಹುದಾಗಿದೆ. ಇದರಿಂದ ತಾಲ್ಲೂಕಿನ ಹಲವಾರು ಕೆರೆಗಳಿಗೆ ನೀರಾವರಿ ಸಹ ಮಾಡಲು ಸಾಧ್ಯ ಎನ್ನುತ್ತಾರೆ ಯುವಕರ ಪಡೆಯ ಮುಖಂಡ ಸಂಜು ಪಾಟೀಲ.

‘ಗ್ರಾಮದಲ್ಲಿ ಶಾಶ್ವತ ನೀರಾವರಿ’
‘ಗ್ರಾಮಸ್ಥರು ಮಾಡಿದ ಈ ಯಶಸ್ವಿ ಯೋಜನೆಗೆ ಸರ್ಕಾರವು ಸಹ ನೆರವು ನೀಡಿ ತಡೆಗೋಡೆಗೆ ಶಾಶ್ವತ ಕಾಂಕ್ರೀಟ್ ಹಾಕಿಸಿ ಭದ್ರ ಪಡಿಸುವುದು ಹಾಗೂ ಬಾಂದಾರ ನಿರ್ಮಾಣ ಮಾಡಿ ಮಳೆ ನೀರು  ಬೇರೆ ಕಡೆ ಹರಿದು ಹೋಗದಂತೆ ಸಂಗ್ರಹಿಸಿದರೇ ಗ್ರಾಮದಲ್ಲಿ ಶಾಶ್ವತ ನೀರಾವರಿಯಾಗಲಿದೆ’ ಎಂದು ಯುವಕರ ಪಡೆಯ ಮುಖಂಡ ಸಂಜು ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT