ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣೋತ್ಸಾಹದಿಂದ ನಡೆದ ‘ಹೂಳಿನ ಜಾತ್ರೆ’

Last Updated 26 ಮೇ 2017, 10:06 IST
ಅಕ್ಷರ ಗಾತ್ರ

ಹೊಸಪೇಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಘಟಕವು ಇಲ್ಲಿನ ತುಂಗಭದ್ರಾ ಜಲಾಶಯದ ಅಂಗಳದಲ್ಲಿ ಆಯೋಜಿ ಸಿರುವ ‘ಹೂಳಿನ ಜಾತ್ರೆ’ ಗುರುವಾರ ಎಂಟನೇ ದಿನಕ್ಕೆ ಕಾಲಿರಿಸಿತು.

ಎಂಟು ದಿನಗಳಲ್ಲಿ ಸುಮಾರು ಎಂಟೂವರೆ ಎಕರೆ ವಿಸ್ತೀರ್ಣದಲ್ಲಿ ಮೂರು ಅಡಿಗಳಷ್ಟು ಹೂಳು ತೆಗೆಯಲಾಗಿದೆ. ಐದು ಜೆ.ಸಿ.ಬಿ, ಏಳು ಟಿಪ್ಪರ್‌ ಹಾಗೂ 80ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳ ಮೂಲಕ ರೈತರು ತಮ್ಮ ಹೊಲಗಳಿಗೆ ಹೂಳು ಕೊಂಡೊಯ್ದರು. ಬೆಳಿಗ್ಗೆ ಎಂಟು ಗಂಟೆಗೆ ಆರಂಭವಾದ ಹೂಳೆತ್ತುವ ಕೆಲಸ ಸಂಜೆ 6.30ರವರೆಗೆ ನಡೆಯಿತು.
ತಾಲ್ಲೂಕಿನ ಮರಿಯಮ್ಮನಹಳ್ಳಿ, ಹಂಪನಕಟ್ಟೆ, ವ್ಯಾಸನಕೆರೆ, ಅಯ್ಯನಹಳ್ಳಿ ಸೇರಿದಂತೆ ಜಲಾಶಯದ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಹೊಲಗಳಿಗೆ ಹೂಳು ಕೊಂಡೊಯ್ಯುತ್ತಿದ್ದಾರೆ.

ರೈತರು, ಟ್ರ್ಯಾಕ್ಟರ್‌ ಹಾಗೂ ಜೆ.ಸಿ.ಬಿ ಚಾಲಕರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಅಲ್ಪ ಆಹಾರ ಹಾಗೂ ರಾತ್ರಿ ವೇಳೆ ಊಟದ ವ್ಯವಸ್ಥೆಯನ್ನು ಹೂಳೆತ್ತುವ ಜಾಗದಿಂದ ಸ್ವಲ್ಪ ದೂರದಲ್ಲಿಯೇ ಮಾಡಲಾಗಿದೆ. ಗುರುವಾರ ಬೆಳಿಗ್ಗೆ ಉಪ್ಪಿಟ್ಟು, ಕೇಸರಿಭಾತ್‌, ಮಧ್ಯಾಹ್ನ ಅನ್ನ ಹಾಗೂ ಸಾಂಬಾರು ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ಮಂಡಕ್ಕಿ, ಚಹಾ, ಬಿಸ್ಕತ್‌ ಕೊಡಲಾಯಿತು. ರಾತ್ರಿ ಅನ್ನ ಸಾಂಬಾರ್‌ ನೀಡಲಾಯಿತು. ರಾತ್ರಿ ಊಟ ಮುಗಿದ ಬಳಿಕ ರೈತರು ಭಜನೆ, ಜನಪದ ಗೀತೆಗಳನ್ನು ಹಾಡಿ ಕಾಲ ಕಳೆಯುತ್ತಿದ್ದಾರೆ.ಮೇ 24ರಂದು ‘ಹೂಳಿನ ಜಾತ್ರೆ’ ಕೊನೆಗೊಳ್ಳಬೇಕಿತ್ತು. ಆದರೆ, ರೈತರಿಂದ ಉತ್ತಮ ಪ್ರತಿಕ್ರಿಯೆ ದೊರೆತ ಕಾರಣ ಇದೇ 29ರವರೆಗೆ ಜಾತ್ರೆ ವಿಸ್ತರಿಸಲಾಗಿದೆ.

ಶ್ರೀರಾಮುಲು ಭೇಟಿ: ಸಂಸದ ಬಿ. ಶ್ರೀರಾಮುಲು ಗುರುವಾರ ಜಲಾಶಯಕ್ಕೆ ಭೇಟಿ ನೀಡಿ, ರೈತ ಸಂಘ ಕೈಗೆತ್ತಿಕೊಂಡಿರುವ ಕೆಲಸಕ್ಕೆ ಬೆಂಬಲ ಸೂಚಿಸಿದರು. ಬಳಿಕ ಮಾತನಾಡಿ, ‘ರೈತ ಸಂಘ ಹೂಳೆತ್ತುವ ಕೆಲಸ ಕೈಗೆತ್ತಿಕೊಂಡಿರುವುದು ಸಂತಸದ ವಿಷಯ. ನಿಜಕ್ಕೂ ಇದು ಒಳ್ಳೆಯ ಕೆಲಸ. ಎಷ್ಟು ಹೂಳು ಸಾಗಿಸುತ್ತೇವೆ ಎನ್ನುವುದು ಮುಖ್ಯವಲ್ಲ. ಈ ಕೆಲಸಕ್ಕೆ ಮುಂದಾಗಿದ್ದು ಎಲ್ಲಕ್ಕಿಂತ ಮುಖ್ಯವಾದುದು’ ಎಂದು ಹೇಳಿದರು.

‘ಸುಮಾರು 25 ಲಕ್ಷ ಹೆಕ್ಟೇರ್‌ ಪ್ರದೇಶ ತುಂಗಭದ್ರಾ ನೀರಿನ ಮೇಲೆ ಅವಲಂಬನೆಯಾಗಿದೆ. ಜಲಾಶಯದಿಂದ ಹೂಳೆತ್ತುವ ವಿಚಾರ ಅನೇಕ ಬಾರಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಸಲ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದೆ. ನಮ್ಮ ಹೋರಾಟ ಈಗಲೂ ಮುಂದುವರಿದಿದೆ’ ಎಂದರು.

‘ಜಲಾಶಯದಲ್ಲಿನ ಹೂಳಿನ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವರ ಗಮನಕ್ಕೆ ತರಲಾಗುವುದು. ಇಬ್ಬರನ್ನೂ ಇಲ್ಲಿಗೆ ಕರೆಸಿ ವಾಸ್ತವ ಪರಿಸ್ಥಿತಿ ತಿಳಿಸಿಕೊಡಲು ಪ್ರಯತ್ನಿಸುತ್ತೇನೆ. ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ಇದು ಮಹಾಯಜ್ಞ ಇದ್ದಂತೆ. ಎಷ್ಟು ಜನ ದೇಣಿಗೆ ನೀಡಿದರೂ ಸಾಲದು. ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಎರಡೂ ಸರ್ಕಾರಗಳು ದೊಡ್ಡ ಮಟ್ಟದಲ್ಲಿ ಹೂಳೆತ್ತುವ ಕೆಲಸ ಕೈಗೆತ್ತಿಕೊಳ್ಳಬೇಕು’ ಎಂದು ಹೇಳಿದರು.

ಹೂಳಿನ ವಿಚಾರವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪ ಮಾಡುತ್ತಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಎಲ್ಲರೂ ಮಾತಾಡುವ ಬಾಯಿಗೇ ಬೀಗ ಹಾಕಲು ಆಗುವುದಿಲ್ಲ. ಯಾರೇ ಒಳ್ಳೆಯ ಕೆಲಸ ಮಾಡಿದರೂ ಬೆನ್ನು ತಟ್ಟಬೇಕು. ವಿನಾಕಾರಣ ಆರೋಪ, ಪ್ರತ್ಯಾರೋಪ ಮಾಡ ಬಾರದು. ಇದರಲ್ಲಿ ರೈತರ ಹಿತ ಅಡಗಿದೆ. ರಾಜಕೀಯ ಪ್ರಶ್ನೆ ಎಲ್ಲಿಂದ ಬಂತು’ ಎಂದು ಮರು ಪ್ರಶ್ನೆ ಹಾಕಿದರು.

ಭಾರತಿ ಶೆಟ್ಟಿ ಭೇಟಿ: ಗುರುವಾರ ಸಂಜೆ 6.15ರ ಸುಮಾರಿಗೆ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ, ಪಕ್ಷದ ನಾಯಕಿ ಜೆ. ಶಾಂತಾ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರ ಕೆಲಸಕ್ಕೆ ಬೆಂಬಲ ಸೂಚಿಸಿದರು.

ಕಮಲಾಪುರ ಕೆರೆ: ತಾಲ್ಲೂಕಿನ ಕಮಲಾಪುರ ಕೆರೆಯಲ್ಲಿ ನಡೆಯುತ್ತಿರುವ ಹೂಳೆತ್ತುವ ಕೆಲಸ ಗುರುವಾರ ಏಳನೇ ದಿನಕ್ಕೆ ಕಾಲಿರಿಸಿದೆ. ಹತ್ತು ಜೆ.ಸಿ.ಬಿ, ಮೂರು ಹಿಟಾಚಿ ಹಾಗೂ ಸುಮಾರು 200ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ರೈತರು ಮಣ್ಣು ಕೊಂಡೊಯ್ಯುತ್ತಿದ್ದಾರೆ. ಏಳು ದಿನಗಳಲ್ಲೇ ಸುಮಾರು ಹನ್ನೊಂದು ಎಕರೆ ಪ್ರದೇಶದಿಂದ ಐದರಿಂದ ಆರು ಅಡಿಗಳಷ್ಟು ಹೂಳು ಖಾಲಿಯಾಗಿದೆ. ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ಕೆರೆಯು 476 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.

ಯಡಿಯೂರಪ್ಪ ಭೇಟಿ ಮೇ 29ರಂದು
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರು ಇದೇ 29ರಂದು ಬೆಳಿಗ್ಗೆ 9ಕ್ಕೆ ‘ಹೂಳಿನ ಜಾತ್ರೆ’ ನಡೆಯುತ್ತಿರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ಕೊಡುವರು’ ಎಂದು ಸಂಸದ ಬಿ. ಶ್ರೀರಾಮುಲು ತಿಳಿಸಿದರು.

‘ರಾಜ್ಯದಾದ್ಯಂತ ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ಯಡಿಯೂರಪ್ಪನವರು 29ರಂದು ಕೊಪ್ಪಳಕ್ಕೆ ಭೇಟಿ ನೀಡುವ ಕಾರ್ಯಕ್ರಮ ಇದೆ. ಅದಕ್ಕೂ ಮುನ್ನ ಅವರು ಜಲಾಶಯಕ್ಕೆ ಭೇಟಿ  ಕೊಟ್ಟು, ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವರು’ ಎಂದು ಹೇಳಿದರು.

* * 

ಕಾವೇರಿ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಾಗುತ್ತಾರೆ. ತುಂಗಭದ್ರಾ ವಿಚಾರದಲ್ಲಿ ಒಗ್ಗಟ್ಟು ಇಲ್ಲ. ರಾಜಕೀಯ ಮಾಡದೇ ಎಲ್ಲರೂ ಸೇರಿಕೊಂಡು ಮುನ್ನಡೆಯಬೇಕು
ಬಿ. ಶ್ರೀರಾಮುಲು
ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT