ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ: ಅಂಗಡಿ, ಮನೆಗಳ ತೆರವು

Last Updated 26 ಮೇ 2017, 10:10 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಎಪಿಎಂಸಿ ಪ್ರದೇಶವನ್ನು ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಮನೆಗಳು ಮತ್ತು ಗೂಡಂಗಡಿಗಳನ್ನು ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಸಿಬ್ಬಂದಿ ಗುರುವಾರ ತೆರವುಗೊಳಿಸಿದರು.

ಬೆಳಿಗ್ಗೆ 6 ರ ವೇಳೆಗೆ ಉಪವಿಭಾಗಾಧಿಕಾರಿ ಪಿ.ಎನ್‌.ಲೋಕೇಶ್‌ ಅವರ ಉಪಸ್ಥಿತಿಯಲ್ಲಿ ತೆರವು ಕಾರ್ಯಾಚರಣೆ ಆರಂಭವಾದಾಗ ಕೆಲವರು ಗೂಡಂಗಡಿಗಳನ್ನು ಸ್ವಯಂಪ್ರೇರಣೆಯಿಂದ ತೆರವುಗೊಳಿಸಿದರು. ನಾಲ್ಕೈದು ಮನೆಗಳನ್ನೂ ಇದೇ ವೇಳೆ ತೆರವುಗೊಳಿಸಲಾಯಿತು.

ವಾಗ್ವಾದ: ಮುನ್ಸೂಚನೆ ಇಲ್ಲದೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕೆಲವರು ಅಧಿಕಾರಿ–ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಅದಕ್ಕೆ ಸೊಪ್ಪು ಹಾಕದ ಸಿಬ್ಬಂದಿ, ಒಂದು ತಿಂಗಳ ಹಿಂದೆಯೇ ಮುನ್ನೆಚ್ಚರಿಕೆ ನೋಟಿಸ್‌ ನೀಡಲಾಗಿತ್ತು. ಆದರೂ ತೆರವುಗೊಳಿಸದೇ ಇದ್ದುದರಿಂದ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಬೆಳಿಗ್ಗೆ 11ರವರೆಗೂ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 81 ಅಂಗಡಿಗಳನ್ನು ತೆರವುಗೊಳಿಸಿದರು.

ಅನಿವಾರ್ಯ: ಬೆಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವ ವೃತ್ತದ ಆಸುಪಾಸಿನಲ್ಲಿ ರಸ್ತೆ ಒತ್ತುವರಿ ಮಾಡಲಾಗಿದ್ದ ಅಂಗಡಿಗಳನ್ನು ಸುಗಮ ಸಂಚಾರ ಮತ್ತು ಅಪಘಾತ ನಿಯಂತ್ರಣ ದೃಷ್ಟಿಯಿಂದ ತೆರವುಗೊಳಿಸುವುದು ಅನಿವಾರ್ಯವಾಗಿತ್ತು ಎಂದು ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮೋತಿ ವೃತ್ತದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದ ಸಂದರ್ಭದಲ್ಲೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿಗಳು ಎಪಿಎಂಸಿ ಸಮೀಪದಲ್ಲೂ ಒತ್ತುವರಿ ತೆರವು ಮಾಡುವಂತೆ ಸೂಚಿಸಿದ್ದರು. ಅದರಂತೆ ಪಾಲಿಕೆ ಮತ್ತು ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಂಡು ದಿನಾಂಕ ನಿಗದಿ ಮಾಡಲಾಗಿತ್ತು ಎಂದರು.

ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿರುವ ಹಳೇ ಸ್ಪಿನ್ನಿಂಗ್‌ಮಿಲ್‌ ಸಮೀಪದ ಜಾಗವನ್ನೂ ಒತ್ತುವರಿ ಮಾಡಲಾಗಿದ್ದು, ಅಲ್ಲಿಯೂ ತೆರವು ಕಾರ್ಯಾಚರಣೆ ನಡೆಸಲಾಗುವುದು. ಮಹದೇವತಾತಾ ಮಠದ ರಸ್ತೆಯಲ್ಲೂ ಒತ್ತುವರಿ ತೆರವು ಮಾಡಲಾಗುವುದು ಎಂದು ತಿಳಿಸಿದರು.ಪಾಲಿಕೆಯ ಎಂಜಿನಿಯರ್‌ ಕಿರಿಯ ಲೋಕನಾಥ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು.

ಮುಖಂಡರ ಭೇಟಿ: ತೆರವು ಕಾರ್ಯಾಚರಣೆ ಸ್ಥಳಕ್ಕೆ ಬಿಜೆಪಿ ಮುಖಂಡ ಜಿ.ಸೋಮಶೇಖರರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಭೇಟಿ ನೀಡಿ ಒತ್ತುವರಿದಾರರಿಗೆ ಸಾಂತ್ವಾನ ಹೇಳಿದರು. ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಬೇಕು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡಬೇಕು ಎಂದು ಕೋರಿದರು. ಪಾಲಿಕೆ ಸದಸ್ಯರಾದ ಎಸ್‌.ಮಲ್ಲನಗೌಡ, ಶ್ರೀನಿವಾಸ ಮೋತ್ಕರ, ಮುಖಂಡರಾದ ವೀರ ಶೇಖರರೆಡ್ಡಿ, ರಾಮಾಂಜನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT