ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊರಕೆ ಹಿಡಿದು ಪ್ರತಿಭಟನೆ: ಅಸಮಾಧಾನ

Last Updated 26 ಮೇ 2017, 10:27 IST
ಅಕ್ಷರ ಗಾತ್ರ

ರಾಮನಗರ: ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಗುತ್ತಿಗೆ ಪೌರಕಾರ್ಮಿಕ ಸಂಘದ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಪೊರಕೆ ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಯಿತು.

ನಗರದ ಅಂಬೇಡ್ಕರ್ ಭವನದ ಎದುರು ಸಮಾವೇಶಗೊಂಡ ರಾಮನಗರ, ಬಿಡದಿ, ಮಾಗಡಿ, ಚನ್ನಪಟ್ಟಣ, ಕನಕಪುರದಲ್ಲಿನ ಸ್ಥಳೀಯ ನಗರ ಸಂಸ್ಥೆಗಳ ಗುತ್ತಿಗೆ ಪೌರಕಾರ್ಮಿಕರು ಎಂ.ಜಿ. ರಸ್ತೆ ಮೂಲಕ ಕಂದಾಯ ಭವನದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿಬಂದರು. ತಮ್ಮ ಬೇಡಿಕೆ ಈಡೇರಿಸುವವರೆಗೂ ಕಾರ್ಯ ನಿರ್ವಹಿಸುವುದಿಲ್ಲ ಎಂದು ಎಚ್ಚರಿಸಿದರು.

‘ಗುತ್ತಿಗೆ ಪೌರಕಾರ್ಮಿಕರು, ನೀರು ಸರಬರಾಜು ಮಾಡುವ ಕಾರ್ಮಿಕರನ್ನು ಕಾಯಂಗೊಳಿಸಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ತಮ್ಮ 160 ಅಂಶಗಳ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಗುತ್ತಿಗೆ ಪೌರ ಕಾರ್ಮಿಕರು ಹಾಗೂ ವಾಟರ್‌ಮನ್‌ಗಳ ಸೇವೆ ಕಾಯಂಗೊಳಿಸಬೇಕು’ ಎಂದು  ಆಗ್ರಹಿಸಿದರು.

‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಗುತ್ತಿಗೆ ಪದ್ಧತಿ ತಡೆಯಲು ರಾಜ್ಯ ಸಚಿವ ಸಂಪುಟ ಸಭೆಯು 2016ರ ಏಪ್ರಿಲ್‌ 4ರಂದು ಚರ್ಚಿಸಿ 2017ರ ಮಾರ್ಚ್ ತಿಂಗಳೊಳಗೆ ವಿಶೇಷ ನೇಮಕಾತಿ ನಿಯಮ ರೂಪಿಸಿ ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಕಾಂಯಂಗೊಳಿಸಲು ತೀರ್ಮಾನಿಸಿತ್ತು. ಆದರೆ, ಮೇ ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಕರ್ನಾಟಕ ಮುನ್ಸಿಪಲ್‌ ಕಾರ್ಪೋರೇಶನ್‌ ಆ್ಯಕ್ಟ್‌ 1977ರ ಸೆಕ್ಷನ್ 92/ಬಿ ಶೆಡ್ಯೂಲ್ 11ರಲ್ಲಿ ಸಫಾಯಿ ಕರ್ಮಚಾರಿಗಳು ಮಾಡುವ ಎಲ್ಲ ಕೆಲಸಗಳು ಅವಶ್ಯಕ ಕಡ್ಡಾಯ ಸೇವೆಗಳೆಂದು ಪರಿಗಣಿಸಬೇಕಾಗುತ್ತದೆ. ಇಂತಹ ಅಗತ್ಯ ಸೇವೆಗಳನ್ನು ಗುತ್ತಿಗೆ ನೀಡುವುದು ಕಾನೂನು ಬಾಹಿರ. ಸುಪ್ರೀಂಕೋರ್ಟ್‌ ಗುತ್ತಿಗೆ ನೌಕರರ ಸೇವೆ ಕಾಯಂ ಪರ ತೀರ್ಪು ನೀಡಿದ್ದರೂ, ರಾಜ್ಯ ಸರ್ಕಾರ ಇದನ್ನು ಉಲ್ಲಂಘಿಸಿದೆ’ ಎಂದು ಆರೋಪಿಸಿದರು.

‘ಸರ್ಕಾರದ ಎಲ್ಲ ಸೌಲಭ್ಯ ಈ ನೌಕರರಿಗೂ ಸಿಗುವಂತೆ ಆಗಬೇಕು. ಅಲ್ಲಿಯವರೆಗೂ ಸ್ವಚ್ಛತಾ ಕಾರ್ಯಗಳಲ್ಲಿ ಭಾಗವಹಿಸುವುದಿಲ್ಲ. ಈ ಬಗ್ಗೆ ಸರ್ಕಾರವು ಸಕಾರಾತ್ಮಕ ನಡೆ ತೊರದಿದ್ದಲ್ಲಿ ಜೂ.8ರಿಂದ ರಾಜ್ಯದಾದ್ಯಂತ ನೌಕರರು ಸ್ಥಳೀಯ ಸಂಸ್ಥೆಗಳ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ’ ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದೇವೇಂದ್ರ, ಗೌರವ ಅಧ್ಯಕ್ಷ ರಾಜು, ಉಪಾಧ್ಯಕ್ಷ ಮೋಹನ್, ಮುಖಂಡರಾದ ಚಂದ್ರಶೇಖರ್, ವೆಕಂಟರಾಮು, ಎನ್.ಗಿರೀಶ್, ಮಂಜು, ಶ್ರೀನಿವಾಸ, ಸ್ವಾಮಿ, ನಾಗಣ್ಣ, ಚಲಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT