ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ದೇವರ ಜೀವನ ವಾಚನ

Last Updated 26 ಮೇ 2017, 12:26 IST
ಅಕ್ಷರ ಗಾತ್ರ

ನಿರ್ಮಾಪಕರು: ರವಿ ಭಾಗ್‌ಚಂದ್ಕಾ
ನಿರ್ದೇಶಕ: ಜೇಮ್ಸ್‌ ಎರ್‌ಸ್ಕಿನ್
ತಾರಾಗಣ: ಸಚಿನ್‌ ತೆಂಡೂಲ್ಕರ್‌, ಅಂಜಲಿ ತೆಂಡೂಲ್ಕರ್‌, ಅಜಿತ್‌ ತೆಂಡೂಲ್ಕರ್‌

‘ಭಾಗ್‌ ಮಿಲ್ಖಾ ಭಾಗ್‌’, ‘ಮೇರಿ ಕೋಮ್‌’, ‘ಎಂ.ಎಸ್‌. ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’, ‘ದಂಗಲ್‌’ – ಹೀಗೆ ಕ್ರೀಡಾಪಟುಗಳ ಜೀವನಾಧಾರಿತ ಸಿನಿಮಾಗಳು ಸದ್ಯ ಬಾಲಿವುಡ್‌ ಅಂಗಳದಲ್ಲಿ ಸಾಲುಸಾಲಾಗಿ ಬರುತ್ತಿವೆ. ಕ್ರೀಡೆಯ ರೋಚಕತೆ, ವೈಯಕ್ತಿಕ ಬದುಕಿನ ಭಾವುಕತೆಗಳನ್ನೇ ಬಂಡವಾಳವಾಗಿಸಿಕೊಂಡು ಗೆದ್ದಿವೆ.

‘ಕ್ರಿಕೆಟ್‌ ದೇವರು’ ಎಂದೇ ಜನಪ್ರಿಯರಾಗಿರುವ ಸಚಿನ್‌ ತೆಂಡೂಲ್ಕರ್‌ ಜೀವನವನ್ನಾಧಾರಿಸಿದ ‘ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್‌’, ಮೇಲೆ ಉಲ್ಲೇಖಿಸಿದ ಸಿನಿಮಾಗಳಿಗಿಂತ ಭಿನ್ನವಾದ ಪ್ರಯತ್ನ. ಸಿನಿಮೀಯ ದಾರಿಯನ್ನು ಬಿಟ್ಟು ಡಾಕ್ಯುಮೆಂಟರಿ ಮಾದರಿಯನ್ನು ಆರಿಸಿಕೊಂಡಿದ್ದಾರೆ ನಿರ್ದೇಶಕ ಜೇಮ್ಸ್‌ ಎರ್‌ಸ್ಕಿನ್.

ಇಡೀ ಸಿನಿಮಾ ಸಚಿನ್‌ ತೆಂಡೂಲ್ಕರ್‌ ಮತ್ತು ಅವರ ಕುಟುಂಬದವರು, ಮತ್ತು ಕೆಲವು ಸಹ ಆಟಗಾರರ ಮಾತುಗಳಲ್ಲಿಯೇ ನಿರೂಪಿತವಾಗುತ್ತ ಹೋಗುತ್ತದೆ. ಹಾಗಾಗಿ ಇದೊಂದು ಬಗೆಯಲ್ಲಿ ಸಚಿನ್‌ ಜೀವನ ವಾಚನ. ಇದೇ ಈ ಸಿನಿಮಾದ ದೌರ್ಬಲ್ಯ ಕೂಡ. ಸಚಿನ್‌ ಮತ್ತು ಕ್ರಿಕೆಟ್‌ ಅಭಿಮಾನಿಗಳಿಗೆ ಈಗಾಗಲೇ ಗೊತ್ತಿರುವ ಸಂಗತಿಗಳು ಮತ್ತು ಹಳೆಯ ಪಂದ್ಯಗಳ ತುಣುಕುಗಳಿಂದಲೇ ಇಡುಕಿರಿದಿರುವ ಈ ಸಿನಿಮಾ, ಕೆಲವು ಕಡೆಗಳಲ್ಲಿ ಟೆಸ್ಟ್‌ ಪಂದ್ಯದ ಮರುಪ್ರಸಾರದಂತೆ ಭಾಸವಾಗುತ್ತದೆ. ಆಯ್ದುಕೊಂಡಿರುವ ಪ್ರಕಾರದ ಬಗೆಗೇ ನಿರ್ದೇಶಕರಿಗೆ ಹಲವು ಗೊಂದಲುಗಳಿರುವುದಕ್ಕೆ  ಚಿತ್ರದುದ್ದಕ್ಕೂ ಪುರಾವೆಗಳು ಸಿಗುತ್ತವೆ.

1979ರಲ್ಲಿ ಮುಂಬೈನ ಬಾಂದ್ರಾದಲ್ಲಿ ಸಚಿನ್‌ ಬಾಲ್ಯದಿಂದ ಸಿನಿಮಾ ಆರಂಭವಾಗುತ್ತದೆ. ರಾಜೀವ್‌ ಗಾಂಧಿ ಹತ್ಯೆ,  ಉದಾರೀಕರಣ ನೀತಿ, ಮುಂಬೈನಲ್ಲಿ ಉಗ್ರರ ದಾಳಿ, ಹೀಗೆ ಭಾರತದ ಏಕತೆಯ ಮೇಲೆ ದಾಳಿ ಮಾಡಿದ ಹಲವು ವಿಘಟನಕಾರಿ ವಿದ್ಯಮಾನಗಳು ಮತ್ತು ಕ್ರಿಕೆಟ್‌ ಜಗತ್ತಿನಲ್ಲಿ ಸಚಿನ್‌ ಹಂತ ಹಂತವಾಗಿ ಬೆಳೆಯುತ್ತ ಭಾರತೀಯರ ಭಾವುಕ ಏಕತೆಯ ಸಂಕೇತವಾಗಿ ರೂಪುಗೊಂಡಿದ್ದನ್ನು ಅಕ್ಕಪಕ್ಕ ಇಟ್ಟು ನೋಡುವ ಪರಿಕಲ್ಪನೆ ಚೆನ್ನಾಗಿದೆ. ಆದರೆ ಅದೊಂದು ರೂಪಕವಾಗಿ ಮನಸಲ್ಲುಳಿಯುವಂತೆ ಹೇಳುವಲ್ಲಿ ವಿಫಲರಾಗಿದ್ದಾರೆ.

ಇಡೀ ಸಿನಿಮಾದಲ್ಲಿ ಯಾವ ದೃಶ್ಯವೂ ಭಾವುಕವಾಗಿ ಮನಸ್ಸನ್ನು ತಟ್ಟುವುದಿಲ್ಲ. ಬದಲಿಗೆ ಮಾಹಿತಿಯಾಗಿ ತಲುಪುತ್ತವಷ್ಟೆ. ಏಕದಿನ ಕ್ರಿಕೆಟ್‌ನಲ್ಲಿ 200 ರನ್ ಗಳಿಸಿದ ವಿಶ್ವದಾಖಲೆ, ಮ್ಯಾಚ್‌ ಫಿಕ್ಸಿಂಗ್‌ ಹಗರಣ, ಟೆನಿಸ್‌ ಎಲ್ಬೋದಿಂದ ಬಳಲುತ್ತಿದ್ದಾಗ ಅನುಭವಿಸಿದ ಹತಾಶೆ, 2007ರ ವಿಶ್ವಕಪ್‌ನಲ್ಲಿ ಭಾರತ ತಂಡದ ಹೀನಾಯ ಪ್ರದರ್ಶನದ ನಂತರದ ಪ್ರಕ್ಷುಬ್ಧತೆ ಇಂಥ ಹಲವು ಘಟನೆಗಳು ಸಚಿನ್‌ರ ಮಾತಿನಲ್ಲಿ ನಿರ್ಭಾವುಕವಾಗಿಯೇ ಉಲ್ಲೇಖಿತವಾಗುತ್ತ ಹೋಗುತ್ತವೆ.

ಕ್ರಿಕೆಟ್‌ ಜಗತ್ತಿನ ಹಲವು ಮೊದಲುಗಳನ್ನು ಸೃಷ್ಟಿಸಿದ ಅಸಾಧಾರಣ ಪ್ರತಿಭೆ ಸಚಿನ್‌ ತೆಂಡೂಲ್ಕರ್‌ ಅವರದು. ಅವರ ವೃತ್ತಿಬದುಕಿನ ಏರಿಳಿತಗಳೇ ಹಲವು ಸಿನಿಮಾಗಳಿಗೆ ವಸ್ತುವಾಗಬಲ್ಲದು. ಆದರೆ ನಿರ್ದಿಷ್ಟ ಅವಧಿಯಲ್ಲಿ ಸಚಿನ್‌ ಕ್ರಿಕೆಟ್‌ ಮತ್ತು ಖಾಸಗೀ ಬದುಕಿನ ಎಲ್ಲ ಮಹತ್ವದ ಘಟನೆಗಳನ್ನು ಹೇಳಿಬಿಡಬೇಕು ಎಂಬ ಭರದಲ್ಲಿ ನಿರ್ದೇಶಕರು ಎಡವಿರುವುದು ಚಿತ್ರದುದ್ದಕ್ಕೂ ಎದ್ದುಕಾಣುತ್ತದೆ.

ಎ.ಆರ್‌. ರೆಹಮಾನ್‌ ಅವರಿಗೆ ಸಂಗೀತ ಮಾಂತ್ರಿಕತೆಯ ಮಂತ್ರ ಮರೆತುಹೋಗಿದೆ ಎನ್ನುವುದನ್ನು ಈ ಸಿನಿಮಾ ಇನ್ನೊಮ್ಮೆ ಸಾಬೀತುಗೊಳಿಸುತ್ತದೆ. ಹಳೆಯ ದೃಶ್ಯಗಳೇ ಇಡಿಕಿರಿದಿರುವುದರಿಂದ ಛಾಯಾಗ್ರಾಹಕ ಕ್ರಿಸ್‌ ಓಪನ್‌ಶಾ ಅವರಿಗೆ ಹೆಚ್ಚಿನ ಕೆಲಸವಿಲ್ಲ.
ಸಚಿನ್‌ ಬದುಕಿನ ಮುಖ್ಯಾಂಶಗಳನ್ನೆಲ್ಲ ಒಮ್ಮೆ ನೆನಪಿಸಿಕೊಳ್ಳಲು ಬಯಸುವ ಅಭಿಮಾನಿಗಳಿಗೆ ‘ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್‌’ ಇಷ್ಟವಾಗಬಹುದು. ಅದನ್ನು ಬಿಟ್ಟು ಕ್ರಿಕೆಟ್‌ ತಾರೆಯ ಬದುಕಿನ ರೋಚಕ ಕಥೆಯನ್ನು ಆಸ್ವಾದಿಸಬೇಕು ಎಂದು ಬಯಸುವವರು ಮತ್ತು ಸಚಿನ್‌ ಜೀವನಚರಿತ್ರೆಯನ್ನು ಆಸ್ವಾದಿಸಬೇಕು ಎಂದು ಬಯಸುವವರಿಬ್ಬರಿಗೂ ಸಿನಿಮಾ ನಿರಾಸೆಯನ್ನೇ ಉಳಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT