ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು

Last Updated 26 ಮೇ 2017, 19:30 IST
ಅಕ್ಷರ ಗಾತ್ರ

1. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೆ, ಆಗ ಹುಡುಗಿಯು ನನ್ನನ್ನು ಪ್ರೀತಿಸುತ್ತಿದ್ದಳು. ಆದರೆ ಈಗ ಇದ್ದಕ್ಕಿದ್ದ ಹಾಗೇ ನನ್ನಿಂದ ದೂರ ಆಗಿದ್ದಾಳೆ. ಕಾರಣ ಏನು ಎಂದು ತಿಳಿದಿಲ್ಲ. ಇದರಿಂದ ನಾನು ತುಂಬಾ ನೊಂದಿದ್ದೇನೆ. ಓದಿನಲ್ಲೂ ಆಸಕ್ತಿ ಇಲ್ಲ. ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ.
-ಹೆಸರು ಬೇಡ, ಊರು ಬೇಡ
ನೀವು ನಿಮ್ಮ ವಯಸ್ಸು ಮತ್ತು ಯಾವ ತರಗತಿಯಲ್ಲಿ ಓದುತ್ತಿದ್ದೀರಿ ಎಂಬುದನ್ನು ತಿಳಿಸಿಲ್ಲ. ಅದೇನೇ ಇರಲಿ ಓದುವ ಸಮಯದಲ್ಲಿ ಓದಿಗೆ ಪ್ರಾಮುಖ್ಯ ನೀಡಿ.  ನಿಮ್ಮ ಜೀವನದ ಗುರಿ ಸಾಧಿಸಲು ಓದು ಮುಖ್ಯ. ಉಳಿದೆಲ್ಲಾ ವಿಷಯಗಳು ಇಲ್ಲಿ ನಗಣ್ಯ. ನೀವು ಪ್ರೀತಿಸುತ್ತಿರುವ ಹುಡುಗಿಯೂ ಈ ಕಾರಣಕ್ಕೆ ನಿಮ್ಮಿಂದ ದೂರವಾಗಿರಬೇಕು. ಅವರಿಗೆ ಜೀವನದ ಪ್ರಾಶಸ್ತ್ಯಗಳ ಅರಿವಾಗಿರಬೇಕು. ಬಹುಶಃ ಆಕೆ ತನ್ನ ಓದಿನ ಮೇಲೆ ಹೆಚ್ಚಿನ ಗಮನ ಹರಿಸಿರಬೇಕು. ನೀವು ಓದಿ ಉತ್ತಮ ಕೆಲಸ ಗಿಟ್ಟಿಸಿಕೊಂಡರೆ ಆಗ ಉಳಿದೆಲ್ಲವೂ ತಾನಾಗೇ ನಿಮ್ಮ ಬಳಿಗೆ ಬರುತ್ತದೆ. ಜೀವನದಲ್ಲಿ ಆಗಬೇಕಾದ ಸಮಯಕ್ಕೆ ಎಲ್ಲವೂ ಆಗುತ್ತದೆ. ನೀವು ಮನಸಾರೆ ಒಬ್ಬರನ್ನು ಪ್ರೀತಿಸುತ್ತಿದ್ದರೆ ಅವರ ಒಳಿತನ್ನು ಬಯಸುವ ಮನಸ್ಸು ನಿಮ್ಮದಾಗಬೇಕು.

2. ನಾನು 22 ವರ್ಷದ ಯುವಕ. ನಾನು ಕೆಲವೊಮ್ಮೆ ರಾತ್ರಿ ನಿದ್ದೆಯಲ್ಲಿ ಮಾತನಾಡುತ್ತೇನೆ. ಇದಕ್ಕೆ ಕಾರಣ ತಿಳಿದಿಲ್ಲ. ಇನ್ನು ಕೆಲವೊಮ್ಮೆ ನಿದ್ದೆಗಣ್ಣಲ್ಲೇ  ಗಾಬರಿಗೊಳ್ಳುತ್ತೇನೆ. ನನಗೆ ಏನಾದರೂ ಆಗಿದೆಯೇ ಎಂದು ತುಂಬಾ ಭಯಪಡುತ್ತೇನೆ. ಈ ಸಮಸ್ಯೆಯಿಂದ ನಾನು ತುಂಬಾ ನೊಂದಿದ್ದೇನೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.
-ರಾಘು, ಊರು ಬೇಡ
ಮಕ್ಕಳು ಹಾಗೂ ಯುವಕರಲ್ಲಿ ಇದೊಂದು ಸಾಮಾನ್ಯ ಸಮಸ್ಯೆ. ಮನಸ್ಸು ಆರೆಪ್ರಜ್ಞಾವಸ್ಥೆಯಲ್ಲಿದ್ದಾಗ ತುಂಬಾ ಕ್ರಿಯಾಶೀಲವಾಗಿರುತ್ತದೆ. ಹಾಗಾಗಿ ನಿದ್ದೆಯಲ್ಲಿದ್ದಾಗ ಮಾತನಾಡುವುದು, ನಡೆದಾಡುವಂತಹ ಪ್ರಕ್ರಿಯೆಗಳನ್ನು ಮಾಡುತ್ತಾರೆ. ಕೆಲವೊಮ್ಮೆ ವಿಪರೀತ ಮಾನಸಿಕ ಒತ್ತಡದಿಂದ ಕೂಡ ನಿದ್ದೆಯಲ್ಲಿ ನಡೆದಾಡುವುದು ಅಥವಾ ಮಾತನಾಡುವುದನ್ನು ಮಾಡುತ್ತಾರೆ. ಧ್ಯಾನ ಮಾಡುವುದನ್ನು ಅಭ್ಯಾಸ ಮಾಡುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಧ್ಯಾನ ನಿಮ್ಮ ಮನಸ್ಸನ್ನು ಶಾಂತಗೊಳಿಸಿ, ನಿಮಗೆ ಆಂತರಿಕ ಸಮಾಧಾನ ನೀಡುತ್ತದೆ. ಬೆಳಿಗ್ಗೆ ಅರ್ಧ ಗಂಟೆ, ರಾತ್ರಿ ಮಲಗುವ ಮೊದಲು 20 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ನೀವು  ನಿದ್ದೆಯಲ್ಲಿ ಮಾತನಾಡುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ ವ್ಯಥೆ ಪಡಬೇಡಿ. ಒಂದು ತಿಂಗಳು ಧ್ಯಾನ ಮಾಡಿದ ಮೇಲೂ  ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯದಿದ್ದರೆ ಆಗ ಮನಃಶಾಸ್ತ್ರಜ್ಞರನ್ನು ಭೇಟಿ ಮಾಡಿ.

3. ನಾನು ಒಬ್ಬನನ್ನು ತುಂಬಾ ಪ್ರೀತಿಸುತ್ತಿದ್ದೆ. ಅವನು ನನಗೆ  ಮೋಸ ಮಾಡಿ ದೂರವಾದ. ನಾನು ವೀಕ್ ಮೈಂಡೆಡ್‌ ಅಲ್ಲ. ಆದರೆ ಅವನಿಲ್ಲದೇ ಬದುಕಲು ಆಗುತ್ತಿಲ್ಲ. ನಾನು ಅವನ ಬಳಿ ನನ್ನ ಜೊತೆ ಇರುವಂತೆ ಬೇಡಿಕೊಂಡಿದ್ದೆ. ಅವನು ಇರಲಿಲ್ಲ. ನಾನು ಯೂನಿವರ್ಸಿಟಿ ಟಾಪರ್. ಆದರೆ ನನಗೆ ಈ ನೋವನ್ನು ಭರಿಸಲು ಆಗುತ್ತಿಲ್ಲ. ನನಗೆ ಮಾಡಿದ ಮೋಸದ ಅರಿವು ಅವನಿಗಾಗಬೇಕು ಎಂಬುದು ನನ್ನ ಬಯಕೆ.
-ಹೆಸರು ಬೇಡ, ಊರು ಬೇಡ
ಪ್ರೀತಿ ಎನ್ನುವುದು ಒಂದು ಮಧುರ ಅನುಭೂತಿ. ನಿಮ್ಮ ಭಾವನೆಗಳೊಂದಿಗೆ ಸಾಗುವ ಒಂದು ಸುಂದರ ಅನುಭವ ಪ್ರೀತಿ. ಆದರೆ ನೀವು ಪ್ರೀತಿಯ ಇತಿಮಿತಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಒತ್ತಾಯಪೂರ್ವಕವಾಗಿ ಪ್ರೀತಿಯನ್ನು ಪಡೆದುಕೊಳ್ಳುವುದರಿಂದ  ಭವಿಷ್ಯದಲ್ಲಿ ನಿಮಗೆ ನಿರಾಸೆ ಉಂಟಾಗಬಹುದು. ಒಬ್ಬ ವ್ಯಕ್ತಿಯಿಂದ ಮೋಸ ಹೋದಾಗ ಅಥವಾ ಅವರ ಮನಸ್ಸಲ್ಲಿ ನಮ್ಮ ಬಗ್ಗೆ ನಿರುತ್ಸಾಹ  ಮೂಡಿದಾಗ, ಆ ವ್ಯಕ್ತಿಯ ಬಗ್ಗೆ ಕೋಪ ಹಾಗೂ ಬೇಸರ ಮೂಡುವುದು ಸಹಜ.

ವಾಸ್ತವವನ್ನು ಅರಿಯಿರಿ. ಇದರಿಂದ ನೀವು ನಿರಾಳರಾಗಬಹುದು. ಪ್ರೀತಿ ನಮ್ಮೊಳಗೆ ಮಧುರ ಅನುಭವ ಹಾಗೂ ಕ್ಷಮಿಸುವುದನ್ನು ಕಲಿಸುತ್ತದೆ. ಮೋಸ ಹೋಗಿದ್ದೇನೆ ಎಂಬ ಋಣಾತ್ಮಕ ಭಾವನೆಯಿಂದ ಹೊರಗೆ ಬನ್ನಿ. ಒಂದಲ್ಲ ಒಂದು ದಿನ ನಿಮ್ಮ ಹುಡುಗನಿಗೆ ನಿಮ್ಮ ಪ್ರೀತಿಯ ಆಳ ಅರಿವಾಗುತ್ತದೆ. ನೀವು ನಿಮ್ಮ ಓದು ಮತ್ತು ಭವಿಷ್ಯದತ್ತ ಗಮನ ಹರಿಸಿ. ಸದ್ಯ ನೀವು ಯಾವುದಕ್ಕೆ ಪ್ರಾಶಸ್ತ್ಯ ನೀಡಬೇಕು ಎಂಬುದನ್ನು ತಿಳಿದು ಅದರತ್ತ ಗಮನ ಕೊಡಿ. ಬದುಕು ಸುಂದರವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT