ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಸಲಾಡ್‌ ರುಚಿಲೋಕ

Last Updated 26 ಮೇ 2017, 19:30 IST
ಅಕ್ಷರ ಗಾತ್ರ

ಸಲಾಡ್ ಡಯೆಟ್‌ ಪ್ರಿಯರ ನೆಚ್ಚಿನ ಆಹಾರ. ಹಣ್ಣು, ಸೊಪ್ಪು, ತರಕಾರಿಗಳಿಂದ ತಯಾರಿಸಬಹುದಾದ  ಸಲಾಡ್‌ಗಳು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ, ಬಾಯಿಗೂ ರುಚಿ. ಹಲವರಿಗೆ ಊಟದ ಜೊತೆ ಸಲಾಡ್ ತಿನ್ನುವುದು ಅಭ್ಯಾಸ.

ಮಧ್ಯಾಹ್ನ ಅಥವಾ ರಾತ್ರಿ ಊಟದ ನಂತರ ಸಲಾಡ್ ತಿನ್ನುವುದರಿಂದ ದೇಹಕ್ಕೆ ಪೌಷ್ಟಿಕಾಂಶಗಳು ದೊರೆಯುತ್ತವೆ.  ವಿವಿಧ ತರಕಾರಿ, ಹಣ್ಣು, ಸೊಪ್ಪುಗಳಿಂದ ಯಾವ್ಯಾವ ರೀತಿ ಸಲಾಡ್‌ಗಳನ್ನು ತಯಾರಿಸಬಹುದು ಎಂಬುದನ್ನು ವಿವರಿಸಿದ್ದಾರೆ, ಟಿ.ಪಿ. ನಾಗರತ್ನ.

**

ಟ್ವಿನ್ ಮೆಲನ್ ಸಲಾಡ್ 

ಬೇಕಾಗುವ ಸಾಮಗ್ರಿಗಳು
ಹೆಚ್ಚಿದ ಕಲ್ಲಂಗಡಿ ಹೋಳು – 2 ಬಟ್ಟಲು
ಕರ್ಬುಜದ ಹೋಳು – 1 ಬಟ್ಟಲು
ಹಸಿಮೆಣಸಿನಕಾಯಿ – 2
ಶುಂಠಿ – ಸ್ವಲ್ಪ
ಪುದಿನಾ – ಸ್ವಲ್ಪ
ನಿಂಬೆರಸ ಮತ್ತು ಉಪ್ಪು – ರುಚಿಗೆ (ಉಪ್ಪಿನ ಬದಲು ಕಪ್ಪುಉಪ್ಪನ್ನು ಉಪಯೋಗಿಸಿ)
ಜೇನುತುಪ್ಪ – 2 ಚಮಚ
ತೆಂಗಿನತುರಿ – 2ರಿಂದ 3 ಚಮಚ
ಚಿಲ್ಲಿಪ್ಲೇಕ್‌ (ಮೆಣಸಿನಬೀಜ) – ಅರ್ಧ ಚಮಚ

ತಯಾರಿಸುವ ವಿಧಾನ

ಹಣ್ಣುಗಳನ್ನು ಒಂದು ಕಪ್‌ಗೆ ಹಾಕಿ. ಜೇನು, ಚಿಲ್ಲಿಫ್ಲೇಕ್, ತೆಂಗಿನತುರಿ ಬಿಟ್ಟು  ಮಿಕ್ಕೆಲ್ಲಾ ಪದಾರ್ಥಗಳನ್ನು ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿ ಹಣ್ಣುಗಳ ಮೇಲೆ ಉದುರಿಸಿ, ಜೇನುತುಪ್ಪವನ್ನು ಹಾಕಿ. ಕೊನೆಯಲ್ಲಿ ತೆಂಗಿನತುರಿ ಮತ್ತು ಚಿಲ್ಲಿಪ್ಲೇಕ್‌ ಉದುರಿಸಿ. ತಿನ್ನಲು ಕೊಡುವಾಗ ಬೆರೆಸಿ ಕೊಡಿ, ಇಲ್ಲವೇ ಫ್ರಿಡ್ಜ್‌ನಲ್ಲಿಟ್ಟು ಕೊಡಿ. ಈ ಸಲಾಡನ್ನು ಮೊದಲೇ ಬೆರೆಸಿಟ್ಟರೆ ನೀರು ಬಿಟ್ಟಿಕೊಳ್ಳುತ್ತದೆ.

**

ಕ್ಯಾಪ್ಸಿಕಂ, ದಾಳಿಂಬೆ ಸಲಾಡ್

ಬೇಕಾಗುವ ಸಾಮಗ್ರಿಗಳು

ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ – 1 ಬಟ್ಟಲು
ದಾಳಿಂಬೆಯ ಬೀಜ – ನಾಲ್ಕೈದು ಚಮಚ
ತೆಂಗಿನತುರಿ – 2ರಿಂದ 3 ಚಮಚ
ಕೊತ್ತುಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ
ಮೊಸರು, ಇಂಗು, ಸಾಸಿವೆ ಒಗ್ಗರಣೆಗೆ

ತಯಾರಿಸುವ ವಿಧಾನ

ತವಾಗೆ ಸ್ವಲ್ಪ ಎಣ್ಣೆ ಹಾಕಿ ಕ್ಯಾಪ್ಸಿಕಂ ಚೂರುಗಳನ್ನು ಹಾಕಿ ವಾಸನೆ ಹೋಗುವಂತೆ ಹುರಿದು ತೆಗೆಯಿರಿ. ತೆಂಗಿನತುರಿ, ಕೊತ್ತುಂಬರಿ ಸೊಪ್ಪು, ಇಂಗು ಸೇರಿಸಿ ರುಬ್ಬಿ, ಮೊಸರಿಗೆ ಸೇರಿಸಿ. ಕ್ಯಾಪ್ಸಿಕಂ, ದಾಳಿಂಬೆಯ ಬೀಜ, ಉಪ್ಪು ಸೇರಿಸಿ ಕರಿಮೆಣಸಿನ ಪುಡಿ ಸೇರಿಸಿ. ಇದಕ್ಕೆ ಒಗ್ಗರಣೆ ಹಾಕಿ ಕಲೆಸಿ ರುಚಿ ನೋಡಿ.

**

ಕ್ಯಾಪ್ಸಿಕಂ ಮತ್ತು ಮೊಸರಿನ ಸಲಾಡ್ ‌

ಬೇಕಾಗುವ ಸಾಮಗ್ರಿಗಳು
ಮೊಸರು ಮತ್ತು ಹೆಚ್ಚಿದ ಕ್ಯಾಪ್ಸಿಕಂ ಹೋಳುಗಳು – ತಲಾ 1ಬಟ್ಟಲು
ಬೇಯಿಸಿದ ಹೀರೆಕಾಯಿ – 1/4 ಬಟ್ಟಲು
ಹಸಿಮೆಣಸು – 1ರಿಂದ 2
ತೆಂಗು – ಅರ್ಧ ಬಟ್ಟಲು
ಜೀರಿಗೆ– ಅರ್ಧ ಚಮಚ
ಉಪ್ಪು – ರುಚಿಗೆ
ತುಪ್ಪ ಮತ್ತು ಒಗ್ಗರಣೆ ಸಾಮಗ್ರಿಗಳು
ಕೊತ್ತುಂಬರಿ ಸೊಪ್ಪು – ಸ್ವಲ್ಪ
ತಯಾರಿಸುವ ವಿಧಾನ
ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಕ್ಯಾಪ್ಸಿಕಂ ಹೋಳುಗಳನ್ನು ಹಸಿ ವಾಸನೆ ಹೋಗುವಂತೆ ಬಾಡಿಸಿ ತೆಗೆಯಿರಿ.  ಜೀರಿಗೆ, ಮೆಣಸನ್ನು ತುಪ್ಪದಲ್ಲಿ ಹುರಿದು ತೆಂಗು, ಹೀರೆಕಾಯಿ, ಕೊತ್ತುಂಬರಿಸೊಪ್ಪು ಸೇರಿಸಿ ರುಬ್ಬಿ. ಮೊಸರು, ಕ್ಯಾಪ್ಸಿಕಂ ಹೋಳು, ಉಪ್ಪು ಸೇರಿಸಿ ಬೆರೆಸಿ. ತುಪ್ಪದಲ್ಲಿ ಸಾಸಿವೆ, ಇಂಗು ಒಣಮೆಣಸು, ಕರಿಬೇವಿನ ಒಗ್ಗರಣೆ ಕೊಡಿ.

**

ವೆಜ್ ಖಾಜಾನ ವಿತ್ ಸಿರಿಧಾನ್ಯ

ಬೇಕಾಗುವ ಸಾಮಗ್ರಿಗಳು

ಸ್ವಲ್ಪ ದಪ್ಪಕ್ಕೆ ತುರಿದ ಕ್ಯಾರೆಟ್‌
ಗಡ್ಡೆಕೋಸು
ದಾಳಿಂಬೆಬೀಜ
ಮೂಲಂಗಿ
ಬೇಯಿಸಿದ ಅಮೆರಿಕನ್  ಜೋಳ
ಟೊಮೆಟೊ
ಬೇಯಿಸಿದ ಸಿರಿಧಾನ್ಯ – 2ರಿಂದ 3 ಚಮಚ
ಬೀಜ ತೆಗೆದ ದ್ರಾಕ್ಷಿಯ ತುಂಡುಗಳು
ದಪ್ಪ ಮೆಣಸಿನಕಾಯಿ
ಹೆಚ್ಚಿದ ತುಳಸಿ ಎಲೆಗಳು – 2
ಜೇನುತುಪ್ಪ
ಕಪ್ಪುಉಪ್ಪು
ಬೇಬಿಕಾರ್ನ್‌
ಪೇರ್‌ಹಣ್ಣಿನ ತುಂಡು
ಬಾಳೆದಿಂಡಿನ ಹೋಳುಗಳು

ತಯಾರಿಸುವ ವಿಧಾನ

ಮೇಲಿನ ಎಲ್ಲ ಪದಾರ್ಥಗಳನ್ನು ಬೌಲ್‌ಗೆ ಹಾಕಿ ಬೆರೆಸಿ. ನಂತರ ಮೆಣಸಿನಹುಡಿ, ಜೇನುತುಪ್ಪ, ಚಾಟ್‌ಮಸಾಲ, ಚಿಲ್ಲಿಫ್ಲೇಕ್‌, ಉಪ್ಪು, ನಿಂಬೆರಸ ಉದುರಿಸಿ ಕಲಸಿ ಫ್ರಿಡ್ಜ್‌ನಲ್ಲಿಟ್ಟು ತಿನ್ನಲು ಕೊಡಿ.

**

ಸೊಪ್ಪುಗಳ ಸಲಾಡ್

ಬೇಕಾಗುವ ಸಾಮಗ್ರಿಗಳು

ಮೆಂತ್ಯ, ಪಾಲಾಕ್‌, ಮೂಲಂಗಿ, ದಂಟು ಮುಂತಾದ ಸಣ್ಣಗೆ ಹೆಚ್ಚಿದ ಸೊಪ್ಪುಗಳು, ಹಸಿನೆಲಗಡಲೆ ಬೀಜ, ಬೇಯಿಸಿದ ಜೋಳ, ತೆಂಗಿನತುರಿ, ನಿಂಬೆರಸ, ಉಪ್ಪು, ಟೊಮೆಟೊ

ತಯಾರಿಸುವ ವಿಧಾನ

ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಬೌಲ್‌ಗೆ ಹಾಕಿ ಕಲೆಸಿ. ಹತ್ತು ನಿಮಿಷ ಬಿಟ್ಟು ತಿನ್ನಲು ಕೊಡಿ.

**

ಅಂಕುರಿ ಖಜಾನ

ಬೇಕಾಗುವ ಸಾಮಗ್ರಿಗಳು

ಮೊಳಕೆ ಕಾಳುಗಳು – (ಕಾಬೂಲ್‌, ಕಡಲೇಕಾಯಿ, ಕಡಲೆಕಾಯಿ ಬೀಜ ಮತ್ತು ಮಾಮೂಲಿ ಕಡಲೆ) ಸಣ್ಣಗೆ ಹೆಚ್ಚಿದ ಕ್ಯಾರೆಟ್‌, ಹುರುಳಿಕಾಯಿ, ಗಡ್ಡೆಕೋಸು, ಸಿಹಿಗುಂಬಳ, ಕಲ್ಲಂಗಡಿಹಣ್ಣಿನ ಬಿಳಿ ಭಾಗದ ಚೂರು, ಕ್ಯಾಪಿಕ್ಸಂ, ದಾಳಿಂಬೆ ಬೀಜ, ಬೇಯಿಸಿ ಸಣ್ಣದಾಗಿ ಹೆಚ್ಚಿದ ಬಾಳೆಕಾಯಿ, ನಿಂಬೆರಸ, ಬೇಯಿಸಿದ ಅಮೆರಿಕನ್ ಜೋಳ, ಉಪ್ಪು, ಹಸಿಮೆಣಸಿನ ಪೇಸ್ಟ್ ಬೇಸ್ಟ್‌

ತಯಾರಿಸುವ ವಿಧಾನ

ಬೌಲ್‌ನಲ್ಲಿ ಎಲ್ಲಾ ಪದಾರ್ಥಗಳನ್ನು ಹಾಕಿ ಬೆರೆಸಿ ಫ್ರಿಡ್ಜ್‌ನಲ್ಲಿಟ್ಟರೆ ಅಂಕುರಿ ಖಜಾನ ತಿನ್ನಲು ರೆಡಿ.

**

ಕೆಂಪು ಎಲೆಕೋಸು ಮತ್ತು ಮರಸೇಬಿನ ಸಲಾಡ್

ಬೇಕಾಗುವ ಸಾಮಗ್ರಿಗಳು

ಸಣ್ಣಗೆ ಹೆಚ್ಚಿದ ಎಲೆಕೋಸು – 1 ಬಟ್ಟಲು
ಹೆಚ್ಚಿದ ಮರಸೇಬು – 1/2 ಬಟ್ಟಲು
ನಿಂಬೆರಸ
ಹಸಿಮೆಣಸಿನ ಪೇಸ್ಟ್‌
ಉಪ್ಪು – ರುಚಿಗೆ
ತಯಾರಿಸುವ ವಿಧಾನ
ಮೇಲಿನ ಎಲ್ಲವನ್ನು ಬೆರೆಸಿ ಉಪ್ಪು, ನಿಂಬೆಯ ರಸ ಸೇರಿಸಿ ಎರಡು ನಿಮಿಷ ಬಿಟ್ಟು ತಿನ್ನಲು ಕೊಡಿ .

(ಟಿ.ಪಿ. ನಾಗರತ್ನ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT