ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 27–5–1967

Last Updated 26 ಮೇ 2017, 19:30 IST
ಅಕ್ಷರ ಗಾತ್ರ

ಜನಮನದ ಕೊಳೆ ಕಳೆಯಲು ಭರದ ಯತ್ನಕ್ಕೆ ಕರೆ 
ರತ್ನತ್ರಯ ಮಂಟಪ– ಶ್ರವಣಬೆಳಗೊಳ, ಮೇ 26–
‘ಜನಮನದ ಕೊಳೆಯನ್ನು ಕಳೆಯುವುದಕ್ಕೂ, ಹೃದಯ ಶುದ್ಧಿ ಸಾಧಿಸುವುದಕ್ಕೂ ಯತ್ನವು ಭರದಿಂದ ನಡೆಯಬೇಕು. ಒಬ್ಬ ಸೇನಾಪತಿ ಮಾಡುವ ಕಾರ್ಯಕ್ಕಿಂತ ಸಾಹಿತಿ ಮಾಡುವ ಸೇವೆಯು ದೀರ್ಘ ಪರಿಣಾಮಕಾರಿ; ಸ್ಥಿರ ಪರಿವರ್ತನೆ ಸಾಧನ’.
–ಎಂಬುದಾಗಿ ನಲವತ್ತಾರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಆಚಾರ್ಯ ಆದಿನಾಥ ನೇಮಿನಾಥ ಉಪಾಧ್ಯೆ ಅವರು ‘ಜನಮನದ ಅಂತರಂಗ ಸುಧಾರಣೆ’ಗೆ ಸಾಹಿತಿಗಳಿಗೂ ಸಾಹಿತ್ಯ ಪ್ರೇಮಿಗಳಿಗೂ ಕರೆ ಇತ್ತರು.

ಆಡಳಿತ ಭಾಷೆಗಾಗಿ ಶಬ್ದಗ್ರಂಥ ಸಿದ್ಧತೆ
ರತ್ನತ್ರಯ ಮಂಟಪ, ಮೇ 26–
ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಕಾರ್ಯದಲ್ಲಿ ಸರಕಾರ ಈಗಾಗಲೇ 500 ಪುಟಗಳ ಪುಸ್ತಕವನ್ನು ಸಿದ್ಧಗೊಳಿಸಿ ಮುದ್ರಣಕ್ಕೆ ಕಳುಹಿಸಿದೆಯೆಂದು ಕಾನೂನು ಸಚಿವ ಶ್ರೀ ಎಸ್.ಆರ್. ಕಂಠಿ ಅವರು ಇಂದು ಇಲ್ಲಿ ತಿಳಿಸಿದರು.
ವಿಶಾಲವಾದ ರತ್ನತ್ರಯ ಮಂಟಪದಲ್ಲಿ 46ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಸಚಿವರು, ಇನ್ನು ಒಂದೆರಡು ತಿಂಗಳಲ್ಲೇ ಆಡಳಿತ ಶಬ್ದಗಳ ಗ್ರಂಥ ಹೊರ ಬೀಳುವುದೆಂದರು. ಎಲ್ಲ ಹಂತದಲ್ಲಿ ಕನ್ನಡ ಆಡಳಿತ ಭಾಷೆಯಾಗುವ ವಿಚಾರದಲ್ಲಿ ಒಂದು ಶಾಶ್ವತ ಸಮಿತಿಯನ್ನು ರಚಿಸಲು ಸರಕಾರ ನಿರ್ಧರಿಸಿದೆ. ಸಚಿವರ ಅಧ್ಯಕ್ಷತೆಯಲ್ಲಿ ಈ ಸಮಿತಿ ಏರ್ಪಡಲಿದೆ.

ಬಾಹುಬಲಿ ಸನ್ನಿಧಿಯಲ್ಲಿ ಸಮ್ಮೇಳನಾರಂಭ
ರತ್ನತ್ರಯ ಮಂಟಪ, ಶ್ರವಣಬೆಳಗೊಳ, ಮೇ 26–
ಕನ್ನಡ ಸಾಹಿತ್ಯ ಚಿಲುಮೆಯನ್ನು ಉಕ್ಕಿಸಿದ ಜೈನರ ಆರಾಧ್ಯ ದೇವತೆಯ ಸನ್ನಿಧಿಯಲ್ಲಿ 46ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಾರಂಭ.
ನಾಡಿನ ನಾನಾ ಮೂಲೆಗಳಿಂದ ಬಂದ ಕನ್ನಡ ಕವಿಗಳ ಮೇಳ. ಭಂಡಾರ ಬಸದಿ ಬಳಿ ಕನ್ನಡ ನಾಡ ಧ್ವಜವನ್ನು ಸಮ್ಮೇಳನಾಧ್ಯಕ್ಷ ಶ್ರೀ ಆದಿನಾಥ ನೇಮಿನಾಥ ಉಪಾಧ್ಯೆ ಮತ್ತು ರಾಷ್ಟ್ರಧ್ವಜವನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ. ವೆಂಕಟಸುಬ್ಬಯ್ಯ ಅವರು ಅನಾವರಣ ಮಾಡಿ, ಶ್ರವಣಬೆಳಗೊಳದ ಸಮ್ಮೇಳನದ ಕಲಾಪ ಆರಂಭಿಸಿದರು.

ಚಿಕ್ಕ ಭಾಷಣ
ಹಿಂದೆ ಮದ್ರಾಸಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ದಿವಂಗತ ಟಿ.ಪಿ. ಕೈಲಾಸಂ ಅವರು ಮಾಡಿದ ಅಧ್ಯಕ್ಷ ಭಾಷಣವೇ ಅತ್ಯಂತ ಚಿಕ್ಕದು. ಕೇವಲ ನಾಲ್ಕೂವರೆ ಪುಟಗಳಷ್ಟು. ಅದನ್ನು ಬಿಟ್ಟರೆ ಶ್ರೀ ಉಪಾಧ್ಯೆ ಅವರ ಭಾಷಣವೇ ಚಿಕ್ಕದು. ಹದಿನಾರು ಪುಟಗಳಷ್ಟು.

ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಶ್ರೀ ಧರ್ಮವೀರ
ನವದೆಹಲಿ, ಮೇ 26–
ಪ್ರಸ್ತುತ ಪಂಜಾಬ್ ಮತ್ತು ಹರಿಯಾನ ರಾಜ್ಯಗಳ ರಾಜ್ಯಪಾಲರಾದ ಶ್ರೀ ಧರ್ಮವೀರ ಅವರನ್ನು ಜೂನ್ 1ರಿಂದ ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆಯೆಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT