ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಣೆ ಪರ ಇರಾನಿಯರ ಒಲವು

Last Updated 26 ಮೇ 2017, 19:30 IST
ಅಕ್ಷರ ಗಾತ್ರ

ಕಳೆದ ವಾರಾಂತ್ಯದಲ್ಲಿ ಇರಾನಿಯರು ಬೀದಿಗಿಳಿದು ವಿಜಯೋತ್ಸವ ಆಚರಿಸಿದರು. ಗಣನೀಯ ಬಹುಮತದಿಂದ ಮರುಆಯ್ಕೆಯಾಗಿರುವ ಅಧ್ಯಕ್ಷ ಹಸನ್ ರೌಹಾನಿ ಅವರ ಗೆಲುವನ್ನು ಸಂಭ್ರಮಿಸಲು  ಇಸ್ಲಾಂ ನಿಯಮಗಳನ್ನು ಗಾಳಿಗೆ ತೂರಿ ಕುಣಿದಾಡಿದರು.

ಚುನಾವಣಾ ಫಲಿತಾಂಶದಿಂದ ಉತ್ತೇಜಿತರಾಗಿ ರಾಜಧಾನಿ ಟೆಹರಾನ್‌ನಲ್ಲಿ ಸೇರಿದ್ದವರು, ರೌಹಾನಿ ಅವರ ಎರಡನೇ ಅವಧಿಯಲ್ಲಿ ತಾವು ನಿರೀಕ್ಷಿಸುತ್ತಿರುವ ಕೆಲಸಗಳನ್ನು ಬೇಡಿಕೆ ರೂಪದಲ್ಲಿ ಮಂಡಿಸಿದರು. ಪ್ರತಿಪಕ್ಷಗಳ ಮುಖಂಡರನ್ನು ಗೃಹಬಂಧನದಿಂದ ಬಿಡು ಗಡೆ ಮಾಡಬೇಕು, ಮುಕ್ತ ಚಿಂತನೆಗೆ ಅವಕಾಶ ಇರ ಬೇಕು, ನಿತ್ಯಜೀವನದ ಮೇಲೆ ಕಡಿಮೆ ಕಟ್ಟುಪಾಡು ಗಳಿರುವಂತೆ ನೋಡಿಕೊಳ್ಳಬೇಕು ಎಂದು  ಒತ್ತಾಯಿಸಿದರು.

ಪಶ್ಚಿಮದೊಂದಿಗೆ ಉತ್ತಮ ಬಾಂಧವ್ಯ ಹಾಗೂ ಇರಾನ್‌ನ ಆರ್ಥಿಕತೆಗೆ ಹೆಚ್ಚು ವಿದೇಶಿ ಬಂಡವಾಳ ಸೆಳೆಯುವ ರೌಹಾನಿ ಅವರ ಪ್ರಯತ್ನಗಳಿಗೆ ಈ ಗೆಲುವು ಒತ್ತಾಸೆಯಾಗಲಿದೆ ಎಂಬ ನಿರೀಕ್ಷೆಯನ್ನೂ ಅವರ ಬೆಂಬಲಿಗರು ಹೊಂದಿದ್ದಾರೆ. ಇರಾನ್‌ ವಿರುದ್ಧ ಬಲವಾದ ಮೈತ್ರಿಕೂಟ ರಚನೆಗೆ ಸಂಬಂಧಿಸಿದಂತೆ ಚರ್ಚಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೌದಿ ಮತ್ತು ಇತರ ಅರಬ್‌ ನಾಯಕರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲೇ, ರೌಹಾನಿ ಅವರು ಶೇ 57ರಷ್ಟು ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ.

ಪಾಶ್ಚಿಮಾತ್ಯ ಶಕ್ತಿಗಳ ಜೊತೆಗಿನ ಪರಮಾಣು ಒಪ್ಪಂದವನ್ನು ಟೀಕಿಸಿದ್ದ ತೀವ್ರವಾದಿ ಮೌಲ್ವಿ ಎಬ್ರಾಹಿಂ ರೈಸಿ ಅವರ ಸೋಲು, ರೌಹಾನಿ ಅವರ ಬೆಂಬಲಿಗರಲ್ಲಿ ನಿರಾಳ ಭಾವ ಮೂಡಿಸಿತ್ತು. ವಿಜಯೋತ್ಸವದಲ್ಲಿ ‘ಬೈ ಬೈ ರೈಸಿ’ ಎಂಬ ಘೋಷಣೆಗಳು ಮೊಳಗಿದವು.

ಕಳೆದ ದಶಕಗಳಲ್ಲಿ ಇರಾನ್ ಸಮಾಜ ಮಹತ್ವದ ಬದಲಾವಣೆ ಕಂಡಿರುವುದರ  ದ್ಯೋತಕ ಎಂದೇ ಈ ಫಲಿತಾಂಶವನ್ನು ಪರಿಗಣಿಸಲಾಗುತ್ತಿದೆ. ಉಪಗ್ರಹ ಆಧಾರಿತ ಟಿ.ವಿ.ಗಳ ಪ್ರಭಾವ, ಅಗ್ಗದ ದರದಲ್ಲಿ ಅಂತರರಾಷ್ಟ್ರೀಯ ಪ್ರವಾಸ, ಅಂತರ್ಜಾಲ ಸೌಲಭ್ಯ, ದೊಡ್ಡ ನಗರಗಳಿಗೆ ವಲಸೆ, ಉನ್ನತ ಶಿಕ್ಷಣಕ್ಕೆ ಅವಕಾಶ ಪಡೆದಿರುವ ಇಲ್ಲಿನ ಸಮಾಜ ಈಗ ಮಧ್ಯಮ ವರ್ಗದ ಮೌಲ್ಯಗಳಿಗೆ ತೆರೆದುಕೊಂಡಿದೆ.

ತಮ್ಮ ಎರಡನೇ ಅವಧಿಯಲ್ಲೂ ರೌಹಾನಿ ಆರ್ಥಿಕತೆಗೆ ಹೆಚ್ಚು ಗಮನ ಹರಿಸುವರೋ ಅಥವಾ  ಬೆಂಬಲಿಗರ ಇಚ್ಛೆಗೆ ಪೂರಕವಾಗಿ ಸಾಮಾಜಿಕ ಸುಧಾರಣೆಗಳಿಗೂ ಒತ್ತು ನೀಡುವರೋ ಎಂಬ ಅತಿ ದೊಡ್ಡ ಪ್ರಶ್ನೆ ಈಗ ಉದ್ಭವಿಸಿದೆ.

ಟೆಹರಾನ್ ಸುತ್ತಮುತ್ತಲಿನ ಪ್ರದೇಶಗಳ ಮಧ್ಯಮ ವರ್ಗದ ಜನರಂತೂ ರೌಹಾನಿ ಗೆಲುವಿನಿಂದ ಆನಂದತುಂದಿಲರಾಗಿ, ಕಾರುಗಳನ್ನೇರಿ ಅಬ್ಬರದ ಸಂಗೀತ ಹಾಕಿಕೊಂಡು ಸುತ್ತಾಡಿದರು. ಮತಗಟ್ಟೆಗಳ ಎದುರು ಗಂಟೆಗಟ್ಟಲೆ ಸಾಲುಗಟ್ಟಿ ನಿಂತು ಮತ ಚಲಾಯಿಸಿದ್ದ ಅವರೆಲ್ಲ, ಬೀದಿಗಳಲ್ಲಿ ಒಗ್ಗೂಡುವುದರ ಮೇಲೆ ನಿಷೇಧ ಹೇರಿದ್ದರ ನಡುವೆಯೂ ಆಗಾಗ ಕಾರಿನಿಂದ ಕೆಳಗಿಳಿದು ನರ್ತಿಸುತ್ತಾ ಸಂಭ್ರಮಿಸಿದರು. ಪೊಲೀಸ್ ಅಧಿಕಾರಿಗಳು ನಸುನಗುತ್ತಾ ಇದನ್ನೆಲ್ಲಾ ನೋಡುತ್ತಾ ನಿಂತರು. ಪುಟ್ಟ ಮಕ್ಕಳನ್ನೂ ತಳ್ಳುಗಾಡಿಯಲ್ಲಿ ಕರೆತಂದಿದ್ದ ಮಧ್ಯಮ ವರ್ಗದವರು, ತಂಪು ಕನ್ನಡಕ ಧರಿಸಿದ್ದ ಯುವಜನ, ತೂತುಬಿದ್ದ ಶೂ ತೊಟ್ಟ ನಿರುದ್ಯೋಗಿಗಳು ಎಲ್ಲರನ್ನೂ ಒಳಗೊಂಡಿದ್ದ ಗುಂಪು ಉದ್ದನೆಯ ಸರದಿಯಲ್ಲಿ ಸಾಗಿತು.

ಟೆಹರಾನ್‌ನ ಕೇಂದ್ರ ವಲಿ– ಎ– ಅಸರ್ ವೃತ್ತದಲ್ಲಿ ನೆರೆದಿದ್ದ ಸಾವಿರಾರು ಮಂದಿ,  ಮಾಜಿ ಪ್ರಧಾನಿ ಮಿರ್ ಹುಸೇನ್ ಮೌಸವಿ, ಅವರ ಪತ್ನಿ ಜಹ್ರಾ ರಹನವಾರ್ದ್ ಮತ್ತು ಸಂಸತ್ತಿನ ಮಾಜಿ ಸಭಾಧ್ಯಕ್ಷ ಮೆಹದಿ ಕರೌಬಿ ಅವರ ಬಿಡುಗಡೆಗೆ ಆಗ್ರಹಿಸಿ ಘೋಷಣೆ ಕೂಗಿದರು.
2009ರಲ್ಲಿ ಮಹಮದ್ ಅಹಮದಿನೆಜದ್ ಅವರ ಚುನಾವಣಾ ಗೆಲುವನ್ನು ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಈ ಪ್ರತಿಪಕ್ಷ ನಾಯಕರನ್ನು, ವಿಚಾರಣೆ ನಡೆಸದೇ 2011ರಿಂದಲೂ ಗೃಹಬಂಧನದಲ್ಲಿ ಇರಿಸಲಾಗಿದೆ.

‘ಈಗ ರೌಹಾನಿ ಹೆಚ್ಚು ಸ್ವಾತಂತ್ರ್ಯ ನೀಡಬೇಕು, ಸರ್ಕಾರಿ ಸ್ವಾಮ್ಯದ ರೇಡಿಯೊ ಮತ್ತು ಟಿ.ವಿಗಳಲ್ಲಿ ತೀವ್ರವಾದಿಗಳ ಏಕಸ್ವಾಮ್ಯ ಮುರಿಯಬೇಕು, ಪತ್ರಿಕಾ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಬೇಕು’ ಎನ್ನುತ್ತಾರೆ ಷಿಯಾ ಮುಸ್ಲಿಂ ಮೌಲ್ವಿ ಫಾಜಿಲ್ ಮೆಬೋದಿ. ‘ಇದನ್ನೆಲ್ಲಾ ಸಾಧಿಸಬೇಕಾದರೆ, ತೀವ್ರಗಾಮಿಗಳ ಪ್ರಭಾವ ಇರುವ ನ್ಯಾಯಾಂಗ ಮತ್ತು ಭದ್ರತಾ ಪಡೆಗಳು ತಮ್ಮ ದೃಷ್ಟಿ ಕೋನ ಬದಲಿಸಿಕೊಳ್ಳುವಂತೆ ಮನವೊಲಿಸಲೇಬೇಕು. ಶೇ 70ರಷ್ಟು ಭರವಸೆಗಳನ್ನಾದರೂ ಈಡೇರಿಸದಿದ್ದರೆ ರೌಹಾನಿ ಭವಿಷ್ಯ ಮಸುಕಾಗುತ್ತದೆ’ ಎನ್ನುತ್ತಾರೆ ಅವರು.

‘ರೌಹಾನಿ ಅವರ ಅಧಿಕಾರ ಅವಧಿಗಿಂತ ಮೊದಲಿದ್ದ ಕಠಿಣ ದಿನಗಳಿಗೆ ರೈಸಿ ಅವರು ನಮ್ಮನ್ನು ಕರೆದೊಯ್ಯಬಹುದೆಂಬ ಭೀತಿ ನಮಗಿದೆ. ಹೀಗಾಗಿ ಅವರು ಅಧಿಕಾರಕ್ಕೆ ಬಾರದಂತೆ ತಡೆಯಲು ನಿಶ್ಚಯಿಸಿದ್ದೇವೆ’ ಎಂದು ಚುನಾವಣೆ ಸಂದರ್ಭದಲ್ಲಿ ಬಹುತೇಕರು ಹೇಳಿದ್ದರು. ಜಾಗತಿಕ ವಿವಾದಗಳು ಮತ್ತು ಆಂತರಿಕವಾಗಿ ಸದಾ ಬಿಗಿ ಭದ್ರತೆಯ ನಡುವೆ ಬದುಕಬೇಕಾದ ಸಂದರ್ಭ ಇತ್ತು ಎಂದು ಹೇಳಲಾಗುವ ಅಹಮದಿನೆಜದ್‌ ಅವರ ಅಧಿಕಾರ ಅವಧಿಯನ್ನು ಉದ್ದೇಶಿಸಿ ಅವರೆಲ್ಲ ಈ ಮಾತು ಹೇಳಿದ್ದರು.

ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು, ‘2009ರಲ್ಲಿ  ಸಾಮೂಹಿಕ ಪ್ರತಿಭಟನೆಗಳು ನಡೆದಾಗಿನಿಂದಲೂ ಉಸಿರುಗಟ್ಟುವ ವಾತಾವರಣ ವನ್ನು  ಎದುರಿಸಿದ್ದೇನೆ. ಇಂದು ರಾತ್ರಿ ಎಲ್ಲ ಭಾವನೆ ಗಳೂ ಬಹಿರಂಗಗೊಂಡಿವೆ’ ಎಂದರು.

ಆಂತರಿಕ ಸಚಿವಾಲಯವು ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘ಎಲ್ಲ ಬಗೆಯ ಬೀದಿ ಸಂಭ್ರಮಾಚರಣೆಗಳನ್ನು ನಿಷೇಧಿಸಲಾಗಿದೆ. ಒಳಾಂಗಣಗಳಲ್ಲಿ ವಿಜಯೋತ್ಸವ ಆಚರಿಸಬಯಸುವವರು ಅನುಮತಿ ಪಡೆಯಬೇಕು’ ಎಂದು ಪುನರುಚ್ಚರಿಸಿದೆ.

ರೌಹಾನಿ ಅವರ ಚುನಾವಣಾ ಪ್ರಚಾರ ಕಾರ್ಯದ ನಿರ್ದೇಶಕ ಮಾರ್ಟೆಜಾ ಹಾಜಿ ಸಹ, ಬೀದಿಗಳಲ್ಲಿ ವಿಜಯೋತ್ಸವ ಆಚರಿಸದಂತೆ ಮಾಧ್ಯಮಗಳ ಮೂಲಕ ಕರೆ ಇತ್ತಿದ್ದಾರೆ.

ಟೆಹರಾನ್‌ನ ಅಮೀರ್‌ಕಬೀರ್‌ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಪಕ್ಷಗಳ ನಾಯಕರ ಬಿಡುಗಡೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಿದ್ದುದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದೆ. ಬದಲಾವಣೆ ಬಯಸಿ ಮತ ಚಲಾಯಿಸಿದವರಿಗೆ ಸಂಭ್ರಮಾಚರಣೆಗೆ ಹಲವು ಕಾರಣಗಳಿವೆ. ಇರಾನ್‌ನ  ಸುಧಾರಣಾವಾದಿಗಳು ಮತ್ತು ಸೌಮ್ಯವಾದಿಗಳು ಟೆಹರಾನ್‌ನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಎಲ್ಲ 21 ಸ್ಥಾನಗಳನ್ನೂ ಬಗಲಿಗೇರಿಸಿಕೊಂಡು ತೀವ್ರವಾದಿಗಳನ್ನು ಸಂಪೂರ್ಣವಾಗಿ ಬದಿಗೆ ಸರಿಸಿದ್ದಾರೆ. ರೈಸಿ ಅವರ ತವರಾದ ಮಶದ್, ಟೆಹರಾನ್‌ನ ಉಪನಗರ ಕರಾಜ್, ಯಾಜಿದ್ ಮತ್ತು ಜಹೇದನ್‌ಗಳ ಸ್ಥಳೀಯ ಆಡಳಿತಗಳಲ್ಲೂ ಸುಧಾರಣಾವಾದಿಗಳು ಜಯಭೇರಿ ಬಾರಿಸುತ್ತಿದ್ದಾರೆ.

ತೀವ್ರವಾದಿಗಳಿಗೆ ಜನರ ಪ್ರೀತಿಯ ಮತಗಳಿಕೆ ಸಾಧ್ಯವಿಲ್ಲ ಎಂಬುದು ಅರಿವಾಗಿದೆ. ಆದರೆ ಅವರು ತಮ್ಮ ನಿಯಂತ್ರಣದಲ್ಲಿರುವ ಅಧಿಕಾರ ಕೇಂದ್ರಗಳ ಮೂಲಕ ತಮ್ಮ ಧೋರಣೆಗಳನ್ನು ಹೇರಲು ಸಮರ್ಥರಾಗಿದ್ದಾರೆ.

‘ಆದರೂ ರೌಹಾನಿ ಆರ್ಥಿಕ ಪ್ರಗತಿ ಸಾಧಿಸಿದ್ದೇ ಆದರೆ, ನ್ಯಾಯಾಂಗ ಅವರಿಗೆ ಅಡೆತಡೆ ಉಂಟು ಮಾಡಲು ಸಾಧ್ಯವಾಗದು. ತಳಸ್ತರದವರು ಮತ್ತು ಬಡವರನ್ನು ಒಲಿಸಿಕೊಳ್ಳಲು ಸಫಲರಾದರೆ ಅವರು ಸಹ ಇತರ ಬದಲಾವಣೆಗಳನ್ನು ತರಲು  ಅಡ್ಡಿಯಾಗಲಾರರು’ ಎನ್ನುತ್ತಾರೆ ಅರ್ಥಶಾಸ್ತ್ರಜ್ಞ ಸಯೀದ್‌ ಲೇಲಜ್‌.

ದಿ ನ್ಯೂಯಾರ್ಕ್ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT