ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳಿಂದ ಕಾದು ನೋಡುವ ತಂತ್ರ

ರಾಷ್ಟ್ರಪತಿ ಆಯ್ಕೆ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ– 17 ಪಕ್ಷಗಳು ಭಾಗಿ
Last Updated 26 ಮೇ 2017, 20:12 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ಹುದ್ದೆಗೆ ಮೋದಿ ಸರ್ಕಾರ ಸೂಚಿಸುವ ಹೆಸರು ಒಪ್ಪಿಗೆಯಾಗದೇ ಇದ್ದರೆ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೆಹಲಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿರೋಧ ಪಕ್ಷಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಭೋಜನ ಕೂಟ ಸಭೆಯಲ್ಲಿ ಎನ್‌ಡಿಎಯೇತರ 17 ಪಕ್ಷಗಳು ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದವು.

ಕಡು ವೈರಿ ಪಕ್ಷಗಳಾದ  ಸಮಾಜವಾದಿ ಪಕ್ಷ (ಎಸ್‌ಪಿ) –(ಬಿಎಸ್‌ಪಿ) ಮತ್ತು ತೃಣಮೂಲ ಕಾಂಗ್ರೆಸ್‌ –ಎಡಪಕ್ಷಗಳನ್ನು  ಒಂದೇ ವೇದಿಕೆಗೆ ಕರೆದುಕೊಂಡು ಬರಲು ಈ ಸಭೆ ಯಶಸ್ವಿಯಾಯಿತು.

ವಿರೋಧ ಪಕ್ಷಗಳಲ್ಲಿ ಕಂಡು ಬಂದಿರುವ ಈ ಒಗ್ಗಟ್ಟು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಂದುವರಿಯಲಿದೆ ಎಂದು ಮುಖಂಡರು ಹೇಳಿದ್ದಾರೆ.
ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಸಭೆಗೆ ಗೈರಾದ ಪ್ರಮುಖ ನಾಯಕ. ಆದರೆ ಪಕ್ಷದ ಪರವಾಗಿ ಹಿರಿಯ ಮುಖಂಡ ಶರದ್‌ ಯಾದವ್‌  ಭಾಗವಹಿಸಿದ್ದರು.

‘ರಾಷ್ಟ್ರಪತಿಯಂತಹ ಹುದ್ದೆಗಳಿಗೆ ಎಲ್ಲ ಪಕ್ಷಗಳಿಗೂ ಸಮ್ಮತವಾಗುವಂತಹ ಅಭ್ಯರ್ಥಿಗಳ ಹೆಸರುಗಳನ್ನು ಆಡಳಿತಾರೂಢ ಪಕ್ಷವು ಮೊದಲಿಗೆ ಸೂಚಿಸುವುದು ಇದುವರೆಗೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ, ಈ ಬಾರಿ ಅಂತಹದ್ದು ನಡೆದಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಂ ನಭಿ ಆಜಾದ್‌ ಮತ್ತು ಜೆಡಿಯು ಮುಖಂಡ ಶರದ್‌ ಯಾದವ್‌ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಒಮ್ಮತದ ಅಭ್ಯರ್ಥಿ ಆಯ್ಕೆ ಸಾಧ್ಯವಾಗದಿದ್ದರೆ, ನಮ್ಮ ಗಣರಾಜ್ಯದ ಸಾಂವಿಧಾನಿಕ ಮೌಲ್ಯಗಳನ್ನು ಸಮರ್ಥಿಸಿಕೊಳ್ಳುವಂತಹ ಸಮರ್ಥ ಅಭ್ಯರ್ಥಿಗಳನ್ನು ನಾವು ಆರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ತಪ್ಪಿಲ್ಲ: ಒಂದು ವೇಳೆ ಸರ್ಕಾರ ಯಾರ ಹೆಸರನ್ನಾದರೂ ಪ್ರಸ್ತಾಪಿಸಿದರೆ,ಈ ವಿಚಾರವಾಗಿ ಅದರೊಂದಿಗೆ ಚರ್ಚಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

2002ರಲ್ಲಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಎ.ಪಿ.ಜೆ ಅಬ್ದುಲ್‌ ಕಲಾಂ ಹೆಸರು ಸೂಚಿಸಿದ್ದಾಗ ಒಮ್ಮತ ಮೂಡಿದ್ದನ್ನು ಅವರು ಉದಾಹರಿಸಿದ್ದಾರೆ.

ಮೋದಿ ಭೇಟಿಯಾಗಲಿರುವ ನಿತೀಶ್
ಪಟ್ನಾ:
 ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಶನಿವಾರ ದೆಹಲಿಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆಗಾಗಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರವಾರ ಕರೆದಿದ್ದ ವಿರೋಧ ಪಕ್ಷಗಳ ಸಭೆಗೆ ಗೈರು ಹಾಜರಾದ ಮರುದಿನವೇ ನಿತೀಶ್‌ ಅವರು ತಮ್ಮ ರಾಜಕೀಯ ವೈರಿಯಾಗಿರುವ ಮೋದಿ ಆಯೋಜಿಸಿರುವ ಔತಣಕೂಟದಲ್ಲಿ  ಭಾಗವಹಿಸುತ್ತಿರುವುದು ಕುತೂಹಲ ಕೆರಳಿಸಿದೆ.

ಅಧಿಕೃತ ಆಮಂತ್ರಣದ ಮೇರೆಗೆ ನಿತೀಶ್‌ ಕುಮಾರ್‌ ಅವರು ಮೋದಿಯನ್ನು ಭೇಟಿಯಾಗಲಿದ್ದಾರೆ ಎಂದು ಜೆಡಿಎಯು  ಹೇಳಿಕೊಂಡಿದ್ದರೂ, ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇದು ದೊಡ್ಡ ಹೊಡೆತ ನೀಡಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಬೆಂಬಲದೊಂದಿಗೆ ಸರ್ಕಾರ ನಡೆಸುತ್ತಿರುವ ನಿತೀಶ್‌, ಬಿಜೆಪಿ ನೇತೃತ್ವದ ಎನ್‌ಡಿಎಯತ್ತ ವಾಲುತ್ತಿರುವುದು ರಾಜಕೀಯ ವಲಯದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ವಿರುದ್ಧ ಕೇಳಿ ಬಂದಿರುವ ಭೂ ಹಗರಣಗಳ ಆರೋಪಗಳಿಂದಾಗಿ ನಿತೀಶ್‌, ಲಾಲು ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳಿಗೆ ಇದು ಮತ್ತಷ್ಟು ಪುಷ್ಟಿ ನೀಡಿದೆ. ಭಾರತಕ್ಕೆ ಭೇಟಿ ನೀಡಲಿರುವ ಮಾರಿಷಸ್‌ ಪ್ರಧಾನಿ ಪ್ರವೀಂದ್‌ ಜಗನ್ನಾಥ್‌ ಗೌರವಾರ್ಥ ಮೋದಿ ಅವರು ಔತಣಕೂಟ ಏರ್ಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ಅಧಿಕೃತ ಆಮಂತ್ರಣ ಇರುವುದರಿಂದ ನಿತೀಶ್‌ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿ ಯಾವುದೇ ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚೆ ನಡೆಯುವುದಿಲ್ಲ’ ಎಂದು ಜೆಡಿಯು ವಕ್ತಾರ ಅಜಯ್‌ ಅಲೋಕ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT