ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಿಗಾಗಿ ನಿತ್ಯ ಧರಣಿ ನಡೆಸಲು ಸಿದ್ಧ’

Last Updated 26 ಮೇ 2017, 20:27 IST
ಅಕ್ಷರ ಗಾತ್ರ

ಗದಗ: ಗದಗ–ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಸುವಲ್ಲಿನ ವೈಫಲ್ಯ ಖಂಡಿಸಿ ಮತ್ತು ಆಸ್ತಿ ತೆರಿಗೆ ಹೆಚ್ಚಿಸಿರುವ ನಗರಸಭೆ ಕ್ರಮ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪಕ್ಷದ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಗರದ ಮಹೇಂದ್ರಕರ್‌ ವೃತ್ತದಿಂದ ಗಾಂಧಿ ವೃತ್ತದವರೆಗೆ ಪಾದಯಾತ್ರೆ ನಡೆಸಿದರು.

ನಂತರ ಮಾತನಾಡಿದ ಯಡಿಯೂರಪ್ಪ ‘ಅವಳಿ ನಗರಕ್ಕೆ ಎರಡು ತಿಂಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ಏಳು ದಶಕಗಳಿಂದ ಗದುಗಿನಲ್ಲಿ ಕಾಂಗ್ರೆಸ್‌ ಆಡಳಿತ ನಡೆಸಿದರೂ ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ’ ಎಂದು ಟೀಕಿಸಿದರು.

‘ಬಿಜೆಪಿ ಪ್ರತಿಭಟನೆ ಮಾಡಲಿರುವ ವಿಷಯ ತಿಳಿದು, ಒಂದು ವಾರ್ಡ್‌ನಲ್ಲಿ ಇದೇ 24ರಂದು 24x7 ಕುಡಿಯುವ ನೀರಿನ ಯೋಜನೆಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ’ ಎಂದು ಅವರು ಟೀಕಿಸಿದರು.

‘ಸಚಿವ ಎಚ್‌.ಕೆ. ಪಾಟೀಲರ ಕ್ಷೇತ್ರದಲ್ಲೇ ನೀರಿಗಾಗಿ ಹಾಹಾಕಾರ ಮುಗಿಲು ಮುಟ್ಟಿದೆ. ದಪ್ಪ ಚರ್ಮದ ಸರ್ಕಾರ, ಇಂತಹ ಗಂಭೀರ ಪರಿಸ್ಥಿತಿ
ಯಲ್ಲೂ ಏನೂ ಮಾಡದೆ ನಿದ್ರೆಗೆ ಜಾರಿದೆ. ಬಿಜೆಪಿ ಹೋರಾಟ ಮಾಡುತ್ತಿದೆ ಎಂಬ ಕಾರಣಕ್ಕೆ ಗದಗ ನಗರದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಹೋರಾಟ ಮಾಡಿದರೆ ಮಾತ್ರ ನೀರು ಕೊಡುವುದಾದರೆ, ನಾನು ಗದುಗಿನಲ್ಲಿ ನಿತ್ಯವೂ ಧರಣಿ ನಡೆಸಲು ಸಿದ್ಧ’ ಎಂದರು.

‘ಸಚಿವ ಪಾಟೀಲರು ಜನರಿಗೆ ನೀರು ಕೊಡದಿದ್ದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನರೆಲ್ಲ ಸೇರಿ ಅವರಿಗೆ ನೀರು ಕುಡಿಸಬೇಕು. ಅಂದಾಗ ಮಾತ್ರ ಪಾಟೀಲರಿಗೆ ನೀರಿನ ಗಂಭೀರ ಸಮಸ್ಯೆ ಮನದಟ್ಟಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹೇಳಿದರು.

ಜೂ.4ರಂದು 24x7 ನೀರಿನ ಯೋಜನೆಗೆ ಸಿ.ಎಂ ಚಾಲನೆ
ಗದಗ:
‘ಗದಗ–ಬೆಟಗೇರಿ ಅವಳಿ ನಗರದಲ್ಲಿ 24x7 ಕುಡಿಯುವ ನೀರಿನ ಪ್ರಾಯೋಗಿಕ ಯೋಜನೆಗೆ ಜೂನ್‌ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ ಪಾಟೀಲ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘24x7 ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮುಗಿಯುತ್ತಾ ಬಂದಿದೆ. ಕೆಲವು ವಾರ್ಡ್‌ಗಳಲ್ಲಿ ಸದ್ಯ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಶೀಘ್ರದಲ್ಲೇ ಈ ಯೋಜನೆ ಆರಂಭವಾಗಲಿದ್ದು, ಅವಳಿ ನಗರದ ಜನತೆಗೆ ನಿರಂತರ ಕುಡಿಯುವ ನೀರು ಲಭಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT