ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರಕ್ಷಕ ಕಲ್ಪವೃಕ್ಷ’ ಮಳಿಗೆಗೆ ಚಾಲನೆ

Last Updated 27 ಮೇ 2017, 5:30 IST
ಅಕ್ಷರ ಗಾತ್ರ

ಮೈಸೂರು: ದಿನಸಿ, ಔಷಧ ಸೇರಿದಂತೆ ಅಗತ್ಯ ವಸ್ತುಗಳನ್ನು ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಒದಗಿಸಲು ಜಿಲ್ಲಾ ಪೊಲೀಸರು ನಿರ್ಮಿಸಿದ ‘ಆರಕ್ಷಕ ಕಲ್ಪವೃಕ್ಷ ಮಳಿಗೆ’ಗೆ ದಕ್ಷಿಣ ವಲಯ ಐಜಿಪಿ ವಿಪುಲ್‌ ಕುಮಾರ್‌ ಅವರು ಶುಕ್ರವಾರ ಚಾಲನೆ ನೀಡಿದರು.

ಜ್ಯೋತಿನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ (ಡಿಎಆರ್‌) ಆವರಣದಲ್ಲಿ ಈ ಮಳಿಗೆ ಇದೆ. ಕ್ಯಾಂಟೀನ್, ಹಣ್ಣು, ಬೇಕರಿ, ಔಷಧ, ದಿನಸಿ, ಶುದ್ಧ ಕುಡಿಯುವ ನೀರಿನ ಘಟಕ, ಚಾಟ್ ಸೆಂಟರ್‌ ಹಾಗೂ ಸಿಬ್ಬಂದಿಯ ಸಮವಸ್ತ್ರ ಮಳಿಗೆ ಇಲ್ಲಿವೆ. ಡಿಎಆರ್‌ನ 592 ಹಾಗೂ ನಗರ ಪೊಲೀಸರ 916 ವಸತಿ ಗೃಹಗಳಲ್ಲಿರುವ 3 ಸಾವಿರ ಸಿಬ್ಬಂದಿ ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.

‘ಅಪರಾಧ ನಿಯಂತ್ರಣ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಹಾಗೂ ಸಂಚಾರ ನಿಯಂತ್ರಣ ಕಾರ್ಯದ ಒತ್ತಡದಲ್ಲಿ ಪೊಲೀಸರಿದ್ದಾರೆ. ಅನಿವಾರ್ಯ ಸಂದರ್ಭಗಳಲ್ಲಿ ಊರಿನಿಂದ ಹೊರಗೆ ಹೋಗಿ ಕೆಲಸ ಮಾಡಬೇಕಿದೆ. ಇಂತಹ ಸಂದರ್ಭದಲ್ಲಿ ಮನೆಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಸಮಯದ ಕೊರತೆ ಉಂಟಾಗುತ್ತಿದೆ.

ಇವುಗಳನ್ನು ಮನೆಯ ಸಮೀಪದಲ್ಲೇ ಒದಗಿಸುವ ಉದ್ದೇಶದಿಂದ ಕಲ್ಪವೃಕ್ಷ ಮಳಿಗೆ ಆರಂಭಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ತಿಳಿಸಿದ್ದಾರೆ.

ಗುಣಮಟ್ಟದ ಆಹಾರವನ್ನು ಕಡಿಮೆ ಬೆಲೆಗೆ ಒದಗಿಸಲಾಗುತ್ತದೆ. ಪೊಲೀಸರೊಂದಿಗೆ ಸಾರ್ವಜನಿಕರೂ ಊಟ, ತಿಂಡಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಔಷಧಗಳ ಮೇಲೆ ಶೇ 30ರಷ್ಟು ರಿಯಾಯಿತಿ ಘೋಷಿಸಲಾಗಿದೆ. ನ್ಯಾಷನಲ್‌ ಪೊಲೀಸ್‌ ಅಕಾಡೆಮಿ ಪೂರೈಸುವ ಗುಣಮಟ್ಟದ ಸಮವಸ್ತ್ರಗಳು ಇಲ್ಲಿ ಲಭ್ಯ ಇವೆ.

ಪೊಲೀಸ್‌ ಕಮಿಷನರ್‌ ಡಾ.ಎ.ಸುಬ್ರಮಣ್ಯೇಶ್ವರ ರಾವ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಲಾ ಕೃಷ್ಣಸ್ವಾಮಿ, ಡಿಸಿಪಿಗಳಾದ ಡಾ.ಎಚ್‌.ಟಿ.ಶೇಖರ್‌, ಎನ್‌.ರುದ್ರಮುನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT