ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ‘ಮಕ್ಕಳ ಮನೆ’

Last Updated 27 ಮೇ 2017, 5:40 IST
ಅಕ್ಷರ ಗಾತ್ರ

ಮದ್ದೂರು: ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕುಸಿತ ತಪ್ಪಿಸುವ ಸಲುವಾಗಿ ನಗರಕೆರೆ ಗ್ರಾಮದ ಪ್ರಜ್ಞಾವಂತ ಯುವಜನರು ‘ಮಕ್ಕಳ ಮನೆ’ ಆರಂಭಿಸಿದ್ದಾರೆ. ಗ್ರಾಮದಲ್ಲಿ 1929ರಲ್ಲಿ ಆರಂಭ ಗೊಂಡ ಸರ್ಕಾರಿ ಶಾಲೆ ಅಂದಿನಿಂದ 2000ನೇ ಇಸವಿಯವರೆಗೂ ಉತ್ತಮ ದಾಖಲಾತಿ ಹೊಂದಿತ್ತು. 500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡಿದ್ದ ಈ ಶಾಲೆಯಲ್ಲಿ 10ಕ್ಕೂ ಹೆಚ್ಚು ಶಿಕ್ಷಕರಿದ್ದರು.

ವರುಷ ಉರುಳಿದಂತೆ ಖಾಸಗಿ ಶಾಲೆಗಳ ಹಾವಳಿಯಿಂದಾಗಿ ಬಸವಳಿದ  ಈ ಶಾಲೆಯಲ್ಲಿ ಮಕ್ಕಳ ದಾಖಲಾತಿ ಇಳಿಮುಖವಾಗತೊಡಗಿತು. 2010ರ ವೇಳೆಗೆ ಗ್ರಾಮಕ್ಕೆ ತಾಲ್ಲೂಕು, ಜಿಲ್ಲಾ ಕೇಂದ್ರಗಳಿಂದ ಹಳದಿ ಬಣ್ಣದ ಖಾಸಗಿ ಶಾಲಾ ಬಸ್‌, ವ್ಯಾನ್‌ ಧಾವಿಸುತ್ತಿದ್ದಂತೆ  ಮೂರಂಕಿಯಲ್ಲಿದ್ದ  ಶಾಲಾ ದಾಖಲಾತಿ ಪ್ರಮಾಣ, ಒಂದಂಕಿಗೆ ಇಳಿದಿತ್ತು. ಪ್ರಸ್ತುತ ಈ ಸಾಲಿನಲ್ಲಿ  ಶಾಲೆಯಲ್ಲಿ ಒಟ್ಟು 7 ತರಗತಿಗಳಿಂದ 59 ವಿದ್ಯಾರ್ಥಿಗಳಿದ್ದಾರೆ.

ತಾವು ವ್ಯಾಸಂಗ ಮಾಡಿದ ಸರ್ಕಾರಿ ಶಾಲೆಯ ದುಸ್ಥಿತಿ ಕಂಡು ಮರುಗಿದ ಗ್ರಾಮದ ರೈತಪರ ಹೋರಾಟಗಾರ ನ.ಲಿ.ಕೃಷ್ಣ,  ‘ಕರ್ಮಯೋಗಿ ಎನ್.ಎಂ. ಲಿಂಗಪ್ಪ  ಸುಸ್ಥಿರ ಸಮಾಜಮುಖಿ ಚಿಂತನ ಟ್ರಸ್ಟ್’ ನೇತೃತ್ವದಲ್ಲಿ  ಎರಡು ವರ್ಷಗಳ ಹಿಂದೆ (ಜೂನ್ 06, 2016) ಇಲ್ಲಿನ ಸರ್ಕಾರಿ ಶಾಲೆಯ ಕೊಠಡಿಯೊಂದರಲ್ಲಿ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ (ಎಲ್‌ಕೆಜಿ– ಯುಕೆಜಿ) ಪೂರ್ವ ಪ್ರಾಥಮಿಕ ತರಗತಿ ಒಳಗೊಂಡ ‘ಮಕ್ಕಳ ಮನೆ’ ಆರಂಭಿಸಿದರು.

ಈ ‘ಮಕ್ಕಳ ಮನೆ’ಯ ಎಲ್‌ಕೆಜಿ ಯಲ್ಲಿ 6 ಮಕ್ಕಳು,  ಯುಕೆಜಿಯಲ್ಲಿ 6 ಮಕ್ಕಳು ಸೇರಿ ಒಟ್ಟು 12 ಮಕ್ಕಳು 2016–17ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.  ಈ ಎರಡು ತರಗತಿ ಗಳಿಗೆ ಟ್ರಸ್ಟ್ ವತಿಯಿಂದ ಇಬ್ಬರು ಖಾಸಗಿ ಶಿಕ್ಷಕರನ್ನು ನೇಮಿಸಲಾಗಿದೆ.  ಇಲ್ಲಿನ ಮಕ್ಕಳಿಗೆ  ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಈ ಶಿಕ್ಷಕರ ವೇತನ ಇನ್ನಿತರ ಭತ್ಯೆಗಳನ್ನು ಟ್ರಸ್ಟ್ ಭರಿಸುತ್ತಿದೆ.

‘ಟ್ರಸ್ಟ್‌ನ  ಸಮಾಜಮುಖಿ ಕಾರ್ಯ ದಿಂದ ಪ್ರೇರಣೆಗೊಂಡ ಮಕ್ಕಳ ಪೋಷಕರು,  ತಮ್ಮ ಮಕ್ಕಳಿಗೆ ತಾವೇ ಪುಸ್ತಕ, ಸಮವಸ್ತ್ರ ಇತರೆ ಪರಿಕರ ಖರೀದಿಸಿದ್ದಾರೆ. ಹೀಗಾಗಿ, ಟ್ರಸ್ಟ್‌ ಮೇಲೆ ಬೀಳುತ್ತಿದ್ದ ಆರ್ಥಿಕ ಹೊರೆ ಕಡಿಮೆ ಯಾಗಿದೆ. ಅಲ್ಲದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಮುಂದಿನ ತರಗತಿಗೆ ದಾಖಲು ಮಾಡುತ್ತೇವೆ ಎಂಬ ಭರವಸೆಯೂ ನೀಡಿದ್ದಾರೆ.

ಹೀಗಾಗಿ ತಮ್ಮ ಪ್ರಯತ್ನಕ್ಕೆ ಇನ್ನಷ್ಟು ಪೋಷಕರು ಕೈಜೋಡಿಸಿದರೆ ನಮ್ಮೂರಿನ ಸರ್ಕಾರಿ ಶಾಲೆ ಮುಚ್ಚುವ ಪ್ರಮೇಯವೇ ಇರುವುದಿಲ್ಲ’ ಎನ್ನುತ್ತಾರೆ ಟ್ರಸ್ಟ್‌  ಕಾರ್ಯದರ್ಶಿ ಎನ್.ಎಸ್. ಜಗದೀಶ್.‘ಮಕ್ಕಳ ಮನೆ’ಯ ಆರಂಭ ಇಲ್ಲಿನ ಸರ್ಕಾರಿ ಶಾಲೆಯ ಉಳಿವಿಗೆ ಪ್ರೇರಣೆ ಸಿಕ್ಕಂತಾಗಿದೆ. ಗ್ರಾಮದ ಪೋಷಕರು ಈ ಪ್ರಯತ್ನವನ್ನು ಇನ್ನಷ್ಟು ಬೆಂಬಲಿಸುವ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT