ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 15ಕ್ಕೆ ಮೈಷುಗರ್‌ ಪುನರಾರಂಭ?

Last Updated 27 ಮೇ 2017, 5:46 IST
ಅಕ್ಷರ ಗಾತ್ರ

ಮಂಡ್ಯ: ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ನಗರದ ಮೈಷುಗರ್‌ ಆವರಣ ಒಂದು ತಿಂಗಳಿಂದ ವಿವಿಧ ಚಟುವಟಿಕೆಗಳಿಗೆ ತೆರೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಅವರ ಭರವಸೆಯಂತೆ ಜುಲೈ 15ರಿಂದ ಕಾರ್ಖಾನೆ ಕಾರ್ಯಾರಂಭ ಮಾಡಲಿದೆ ಎಂಬ ವಿಶ್ವಾಸ ಕಾರ್ಮಿಕರಲ್ಲಿದೆ.

ಶನಿವಾರ (ಮೇ 27) ಕಾರ್ಖಾನೆಗೆ ಬಾಯ್ಲರ್‌ ಇನ್‌ಸ್ಪೆಕ್ಟರ್‌ ಭೇಟಿ ನೀಡಲಿ ದ್ದು, ಬಾಯ್ಲರ್‌ ಕಾರ್ಯ ನಿರ್ವಹಣೆ ಕುರಿತು ಪ್ರಮಾಣ ಪತ್ರ ನೀಡಲಿದ್ದಾರೆ. ಸಹವಿದ್ಯುತ್‌ ಘಟಕ ಕಾರ್ಯಾರಂಭಕ್ಕೆ ₹ 6 ಕೋಟಿ ವೆಚ್ಚದಲ್ಲಿ ಈಗಾಗಲೇ 4 ಸಾವಿರ ಟನ್‌ ಬೆಕಾಸ್‌ ಪೌಡರ್‌ (ಕಬ್ಬಿನ ಸಿಪ್ಪೆಯ ಪುಡಿ), 2 ಸಾವಿರ ಟನ್‌ ಸೌದೆ ತರಿಸಲಾಗಿದೆ. ಕಾರ್ಖಾನೆ ವ್ಯಾಪ್ತಿಯಲ್ಲಿ ಎರಡೂವರೆ ಲಕ್ಷ ಟನ್‌ ಕಬ್ಬಿನ ಬೆಳೆ ಇದ್ದು, ರೈತರಿಂದ ಒಪ್ಪಿಗೆ ಪಡೆಯುವ ಕಾರ್ಯ ಭರದಿಂದ ಸಾಗಿದೆ.

‘ಹೊಸದಾಗಿ ಬಂದಿರುವ ಕಾರ್ಖಾನೆ ಕಬ್ಬು ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿ ಗೌಡ ಹಾಗೂ ವಿವಿಧ ಕ್ಷೇತ್ರ ಪಾಲಕರು ಕಬ್ಬು ಬೆಳೆಗಾರರ ಸಂಪರ್ಕದಲ್ಲಿದ್ದು, ಸದ್ಯ ಒಂದು ಲಕ್ಷ ಹೆಕ್ಟೇರ್‌ ಕಬ್ಬಿನ ಒಪ್ಪಿಗೆ ಪಡೆದಿದ್ದಾರೆ. ಈ ಎಲ್ಲ ಚಟುವಟಿಕೆ ಗಮನಸಿದರೆ ಕಾರ್ಖಾನೆ ಜುಲೈ 15ರಂದು ಆರಂಭ ಆಗುವುದರಲ್ಲಿ ಅನುಮಾನ ಇಲ್ಲ. ನಿನ್ನೆ ತಾನೆ ನಮಗೂ ಒಂದು ತಿಂಗಳ ಸಂಬಳ ಕೊಟ್ಟಿದ್ದಾರೆ. ಆದಷ್ಟು ಬೇಗ ಕಾರ್ಖಾನೆ ಆರಂಭ ಆಗಿ, ಸಕ್ಕರೆ ಬಿದ್ದರೆ ಸಾಕು. ನಮ್ಮ ಸಂಬಳ ಬಂದೇ ಬರುತ್ತದೆ’ ಎಂದು ಹೆಸರು ಹೇಳಲು ಇಚ್ಚಿಸದ ಮೈಷುಗರ್‌ ಕಾರ್ಮಿಕರೊಬ್ಬರು ಹೇಳಿದರು.

ಏ.14ರ ಅಂಬೇಡ್ಕರ್‌ ಜಯಂತಿ ದಿನ ಕಾರ್ಖಾನೆಯ ಬಾಯ್ಲರ್‌ಗೆ ಬೆಂಕಿ ಹಚ್ಚಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ಶಾಸಕ ಅಂಬರೀಷ್‌ ಸಹ ವಿದ್ಯುತ್‌ ಘಟಕಕ್ಕೆ ಪೂಜೆ ಸಲ್ಲಿಸಿ ಕಾರ್ಖಾನೆ ಆರಂಭಕ್ಕೆ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಜಿಲ್ಲೆಯ ಎಲ್ಲಾ ಶಾಸಕರು ಮೈಷುಗರ್‌ ಉಳಿಸಬೇಕು ಎಂಬ ಕಾಳಜಿ ತೋರಿದ್ದು ಜುಲೈ 15ರಂದು ಕಾರ್ಖಾನೆ ಕಾರ್ಯಾರಂಭ ಮಾಡಲಿದೆ ಎಂದು ಹೋದಲ್ಲಿ ಬಂದಲ್ಲಿ ಭರವಸೆ ನೀಡುತ್ತಿದ್ದಾರೆ.

‘ಕಾರ್ಖಾನೆ ಹಾಗೂ ಸಹ ವಿದ್ಯುತ್‌ ಘಟಕ ಎರಡೂ ಏಕಕಾಲದಲ್ಲಿ ಕಾರ್ಯಾ ರಂಭ ಮಾಡಲಿವೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಚ್ಛಾ ಸಾಮಾಗ್ರಿ ಸಂಗ್ರಹಿಸಿಡಲಾಗಿದೆ. ಕಾರ್ಮಿ ಕರಿಗೆ ಸಂಬಳ ವಿತರಣೆ ಮಾಡಲಾಗಿದ್ದು, ಅವರಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸಲಾಗಿದೆ’ ಎಂದು ಮೈಷುಗರ್‌ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್‌ ತಿಳಿಸಿದರು.

ಖಾಲಿ ಹುದ್ದೆಗಳಿಗೆ ಸಂದರ್ಶನ: ಮೈಷುಗರ್‌ನಲ್ಲಿ ಖಾಲಿ ಇದ್ದ ಪ್ರಮುಖ ಹುದ್ದೆಗಳ ಭರ್ತಿಗೆ ಸಂದರ್ಶನ ಮಾಡ ಲಾಗಿದ್ದು, ಇದು ಕಾರ್ಖಾನೆ ಪುನಾರಂಭ ನಿರೀಕ್ಷೆ ಇಮ್ಮಡಿಗೊಳಿಸಿದೆ. ಬೆಂಗಳೂರಿನಲ್ಲಿರುವ ಮೈಷುಗರ್‌ ಭವನದಲ್ಲಿ ಈಚೆಗೆ ಸಂದರ್ಶನ ನಡೆದಿದ್ದು, ಗುತ್ತಿಗೆ ಆಧಾರದ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಉಪ ರಾಸಾಯನಿಕ ಎಂಜಿನಿಯರ್‌, ಸಹ ರಾಸಾಯನಿಕ ಎಂಜಿನಿಯರ್‌, ಸಿವಿಲ್‌ ಎಂಜಿನಿಯರ್‌, ಮೆಟೀರಿಯಲ್‌ ಎಂಜಿನಿಯರ್‌, ಮೆಕ್ಯಾನಿಕಲ್‌ ಎಂಜಿನಿಯರ್‌, ಲ್ಯಾಬ್‌ ಎಂಜಿನಿಯರ್‌ ಮುಂತಾದ ಹುದ್ದೆಗಳ ನೇಮಕಾತಿಗೆ ಸಂದರ್ಶನ ನಡೆಸಲಾಗಿದೆ.

ರೈತರ ಆತ್ಮಹತ್ಯೆ ಹೆಚ್ಚಳ: ‘ಮೈಷುಗರ್‌ ಆರಂಭವಾದರೆ ನೂರು ರೂಪಾಯಿ ಕಡಿಮೆ ಕೊಟ್ಟರೂ ಪರವಾಗಿಲ್ಲ, ರೈತರು ಕಬ್ಬು ಪೂರೈಸುತ್ತಾರೆ. ಸರ್ಕಾರಿ ಸ್ವಾಮ್ಯದ ಈ ಕಾರ್ಖಾನೆ ಜೊತೆ ರೈತರಿಗೆ ಭಾವ ನಾತ್ಮಕ ಸಂಬಂಧವಿದೆ. ಕಾರ್ಖಾನೆ ಆರಂಭಿಸಲು ಸಕ್ಕರೆ ಸಚಿವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಖಾಸಗಿಯವರ ಲಾಬಿಗೆ ಮಂತ್ರಿಗಳು ಮಣಿಯುತ್ತಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಲು ಮೈಷುಗರ್‌ ಸ್ಥಗಿತಗೊಂಡಿದ್ದೇ ಪ್ರಮುಖ ಕಾರಣ. ಕಾರ್ಖಾನೆ ಆರಂಭವಾಗದಿದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ’ ಎಂದು ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಸಂಬೂನಹಳ್ಳಿ ಸುರೇಶ್‌ ಹೇಳಿದರು.

ಬೆಲೆ ನಿಗದಿ ಸವಾಲು
ಮಂಡ್ಯ: ಟನ್‌ ಕಬ್ಬಿಗೆ ಆಲೆಮನೆ ಯಲ್ಲೇ ₹ 3,200 ಕೊಡುತ್ತಿದ್ದಾರೆ. ಹೀಗಾಗಿ, ಬೆಲೆ ನಿಗದಿ ಮೈಷುಗರ್‌ ಮುಂದಿರುವ ದೊಡ್ಡ ಸವಾಲಾಗಿದೆ. ‘ಕೇಂದ್ರ ಸರ್ಕಾರದ ಆದೇಶದಂತೆ ನ್ಯಾಯಯುತವಾಗಿ ಟನ್‌ ಕಬ್ಬಿಗೆ ₹ 2,550 ಕೊಡಲೇಬೇಕು. ನಂತರ ಹೆಚ್ಚಿಗೆ ಇನ್ನೆಷ್ಟು ಕೊಡಬೇಕು ಎಂಬುದನ್ನು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ರೈತರಿಗೆ ಅನ್ಯಾಯವಾಗದಂತೆ ಉತ್ತಮ ಬೆಲೆ ನೀಡಲು ಚಿಂತನೆ ನಡೆದಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT