ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

678 ದಿನಗಳು ಗತಿಸಿದರೂ ಸಿಗದ ನ್ಯಾಯ

Last Updated 27 ಮೇ 2017, 7:15 IST
ಅಕ್ಷರ ಗಾತ್ರ

ಸೇಡಂ: ಬೇಡಿಕೆ ಈಡೇರಿಕೆಗಾಗಿ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ತಾಲ್ಲೂಕಿನ ನೃಪತುಂಗ–ಹಂಗನಳ್ಳಿ ರೈತರು ಧರಣಿ  ನಡೆಸುತ್ತಿದ್ದು, 678 ದಿನಗಳು ಪೂರೈಸಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿಲ್ಲ.

ತಾಲ್ಲೂಕಿನ ರಾಜಶ್ರೀ ಸಿಮೆಂಟ್ ಕಂಪೆನಿ ತನ್ನ ನಾಲ್ಕನೇ ಘಟಕಕ್ಕಾಗಿ ರೈತರಿಂದ ಭೂಮಿ ಖರೀದಿಸಿತ್ತು. ‘ಭೂಮಿ ಖರೀದಿಯ ವ್ಯವಹಾರದಲ್ಲಿ ಗೈರಾಣಿ ಭೂಮಿ ಹಾಗೂ ರೈತರ ಭೂಮಿಯ ದರದಲ್ಲಿ ವ್ಯತ್ಯಾಸವಾಗಿದ್ದು, ಅದನ್ನು ಸರ್ಕಾರ ಬಗೆಹರಿಸಬೇಕು ಮತ್ತು ಕಂಪೆನಿ ಭೂಮಿ ಖರೀದಿಯಲ್ಲಿ ರೈತರಿಗೆ ನೀಡಿದ ಭರವಸೆಯನ್ನು ಈಡೇರಿಸಬೇಕು’ ಎನ್ನುವುದು ರೈತರ ಬೇಡಿಕೆ.

ಮಾಜಿ ಸಚಿವ ಎಸ್.ಕೆ ಕಾಂತಾ ಅವರ ನೇತೃತ್ವದಲ್ಲಿ ಧರಣಿ ಆರಂಭವಾದಾಗಿನಿಂದಲೂ ರೈತರು ಗ್ರಾಮ ಪಂಚಾಯಿತಿ, ತಹಶೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಕಂದಾಯ ಹಾಗೂ ಕಾನೂನು ಇಲಾಖೆಯ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ.

‘ಒಂದಿಲ್ಲೊಂದು ದಾಖಲೆ ಪತ್ರಗಳನ್ನು ಸಂಗ್ರಹಿಸಿ, ಅಧಿಕೃತ ದಾಖಲೆಗಳನ್ನು ಪಡೆದು ಉನ್ನತ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಇದರ ಕುರಿತು ವೈದ್ಯಕೀಯ, ಕಂದಾಯ ಹಾಗೂ ಕಾನೂನು ಸಚಿವರ ಗಮನಕ್ಕೂ  ತಂದಿದ್ದಾರೆ.  ಆದರೆ ಇದುವರೆಗೆ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ’ ಎಂದು ರೈತ ಚಂದ್ರಶೇಖರ ಕಟ್ಟಿಮನಿ ದೂರುತ್ತಾರೆ.

‘ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತದೆ ಎನ್ನುವ ವಿಶ್ವಾಸ ಇಲ್ಲಿಯವರೆಗೆ  ರೈತರಲ್ಲಿತ್ತು. ಆದರೆ ಈಚೆಗೆ ಮಾಜಿ ಸಚಿವ ಎಸ್.ಕೆ ಕಾಂತಾ ಅವರು ಸರ್ಕಾರದಿಂದ ಪಡೆದಿರುವ ಮಾಹಿತಿಯಿಂದ ರೈತರ ಬೇಡಿಕೆ ಹುಸಿಯಾಗಿದೆ. ಒಂದೂವರೆ ವರ್ಷಕ್ಕಿಂತ ಅಧಿಕ ಕಾಲ ಅನೇಕ ಸಂಕಷ್ಟಗಳನ್ನು ಎದುರಿಸಿ ಧರಣಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಧರಣಿ ನಿರತ ಕಮಲಿಬಾಯಿ ಊಡಗಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕಾಂತಾ ಪಡೆದ ಮಾಹಿತಿಯಲ್ಲೇನಿದೆ?: ಮಾಜಿ ಸಚಿವ ಎಸ್.ಕೆ ಕಾಂತಾ ಅವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ‘ಸೇಡಂನಲ್ಲಿ ನಡೆಯುತ್ತಿರುವ ರೈತರ ಅನಿರ್ಧಿಷ್ಟಾವಧಿ ಧರಣಿ ಕುರಿತು ಸರ್ಕಾರ ಲಿಖಿತ ಕಾನೂನು ದಾಖಲೆ ಪತ್ರಗಳನ್ನು ನೀಡಬೇಕು ಮತ್ತು ರೈತರ ಬೇಡಿಕೆಯ ಕುರಿತು ಸ್ಪಷ್ಟನೆ ನೀಡಬೇಕು’ ಎಂದು ಕೋರಿದ್ದರು ಎನ್ನಲಾಗಿದೆ.

ಆದರೆ ಅವರ ಪಡೆದ ಮಾಹಿತಿಯ ಪ್ರಕಾರ ‘ನಮಗೆ ನಿಮ್ಮ ಹೋರಾಟದ ಕುರಿತು ಕಂದಾಯ ಇಲಾಖೆಗೆ ಯಾವುದೇ ಪತ್ರಗಳು, ದಾಖಲೆಗಳು ಹಾಗೂ ಕಡತಗಳು ತಲುಪಿಲ್ಲ’ ಎನ್ನುವ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಕಂದಾಯ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಹಾಗೂ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗೆ ಕಡತಗಳನ್ನು ಸಲ್ಲಿಸುವಂತೆ ಬರೆದಿರುವ ಪತ್ರಗಳು ಕಾಂತಾ ಅವರಿಗೆ ಈಚೆಗೆ ಸಿಕ್ಕಿವೆ.

ಜುಲೈನಲ್ಲಿ ಪಾದಯಾತ್ರೆ
‘ಉಪವಿಭಾಗಾಧಿಕಾರಿ ಕಚೇರಿ ಎದುರು ಸುಮಾರು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಕುಳಿತರೂ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿಲ್ಲ. ಜುಲೈ ತಿಂಗಳ ಮೊದಲ ವಾರದವರೆಗೆ ಸರ್ಕಾರದ ಮೇಲೆ ನಂಬಿಕೆಯಿಟ್ಟು ಧರಣಿಯನ್ನು ಮುಂದುವರಿಸುತ್ತೇವೆ.

ಬೇಡಿಕೆ ಈಡೇರದೇ ಇದ್ದಲ್ಲಿ ಸೇಡಂನಿಂದ ಕಲಬುರ್ಗಿಯವರೆಗೆ ಪಾದಯಾತ್ರೆ ಮಾಡುತ್ತೇವೆ’ ಎಂದು ಸಾಮಾಜಿಕ ಕಾರ್ಯಕರ್ತ ಅಶೋಕ ಶೀಲವಂತ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ಬೇಡಿಕೆಗಳನ್ನು ಈಚೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದು, ಅವರು ಕಂಪೆನಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ’ ಎಂದು ತಿಳಿಸಿದರು.

ಪ್ರಶಾಂತ ಕೇರಿ, ಉಮೇಶ ಚವಾಣ್, ಚಂದ್ರಶೇಖರ ಕಟ್ಟಿಮನಿ, ಭದ್ರಮ್ಮ, ಕಮಲಿಬಾಯಿ ಊಡಗಿ, ಜಗನ್ನಾಥ ಕರನಕೋಟ, ಬಸವರಾಜ ಕುಂಬಾರ, ಇಸ್ಮಾಯಿಲ್ ಊಡಗಿ, ಚಂದಮ್ಮ ಕುಂಬಾರ ಇದ್ದರು.
 

* * 

ಸರ್ಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಕುಳಿತು ಎರಡು ವರ್ಷ ಸಮೀಪಿಸಿದರೂ ಸರ್ಕಾರ ಗಮನ ಹರಿಸಿಲ್ಲ. ಜನಪ್ರತಿನಿಧಿಗಳು ಗಮನಹರಿಸಬೇಕು
ಚಂದ್ರಶೇಖರ ಕಟ್ಟಿಮನಿ
ಧರಣಿ ನಿರತ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT