ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹44ಲಕ್ಷ ಅನುದಾನ ಸರ್ಕಾರಕ್ಕೆ ವಾಪಸ್

Last Updated 27 ಮೇ 2017, 7:26 IST
ಅಕ್ಷರ ಗಾತ್ರ

ಯಾದಗಿರಿ: ಬಿಆರ್‌ಜಿಎಫ್‌ ಯೋಜನೆ ಯಲ್ಲಿ ಕಾಮಗಾರಿಗಳ ಕ್ರಿಯಾಯೋಜ ನೆಗೆ ಅನುಮೋದನೆ ನೀಡದೆ ಉಳಿದ ₹44 ಲಕ್ಷ  ಅನುದಾನ ಸರ್ಕಾರಕ್ಕೆ ವಾಪಸ್‌ ಹೋಗಿರುವುದಕ್ಕೆ ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ನಮಗೆ ತಾಲ್ಲೂಕು ಪಂಚಾಯಿತಿ ಬಜೆಟ್‌ನಲ್ಲಿ ಇಷ್ಟೊಂದು ಅನುದಾನ ಇದೆ ಎಂಬುದೇ ಗೊತ್ತಿಲ್ಲ. ನೀವು ಸದಸ್ಯರ ವಿಶೇಷ ಸಭೆ ನಡೆಸಿದ್ದೀರಿ. ಆಗಲೂ ಅನುದಾನ ಇರುವ ಬಗ್ಗೆ ಸದಸ್ಯರ ಗಮನಕ್ಕೆ ಏಕೆ ತಂದಿಲ್ಲ’ ಎಂದು ಸದಸ್ಯರು ಕಾರ್ಯನಿರ್ವಾಹಕ ಅಧಿಕಾರಿ ಯನ್ನು ಪ್ರಶ್ನಿಸಿದರು.

‘ಅನುದಾನ ಸರ್ಕಾರಕ್ಕೆ ವಾಪಸ್‌ ಕಳುಹಿಸುವಾಗ ಸದಸ್ಯರ ಸಭೆ ನಡೆಸಿ ಮಾಹಿತಿ ನೀಡಬಹುದಿತ್ತು. ನಾವು ಶಾಸಕ, ಸಚಿವರಿಗೆ ಅಷ್ಟೇ ಅಲ್ಲ ಸರ್ಕಾ ರಕ್ಕೂ ಮನವಿ ಮಾಡಿಕೊಳ್ಳುತ್ತಿದ್ದೇವು. ಇಲ್ಲವೇ ಅನುದಾನ ಬಳಕೆಗೆ ಶೀಘ್ರ ಕ್ರಿಯಾಯೋಜನೆಯನ್ನಾದರೂ ರೂಪಿಸಬಹುದಿತ್ತು.

ನಿಮ್ಮಂತಹ ಅಧಿಕಾರಿಯಿಂದಾಗಿ ಅಭಿವೃದ್ಧಿಗೆ ಹಿನ್ನಡೆ ಯಾಗುತ್ತಿದೆ. ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ’ ಎಂದು ಸದಸ್ಯರು ಇಒ ಪ್ರಾಣೇಶ್‌ ರಾವ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಸದಸ್ಯರ ಪ್ರಶ್ನೆಗೆ ಇಒ ಪ್ರತಿಕ್ರಿಯಿಸಿ, ‘ಬಿಆರ್‌ಜಿಎಫ್‌ ಯೋಜನೆ ಕೇಂದ್ರ ಸರ್ಕಾರದ್ದು. ಉಳಿದ ಅನುದಾನ ಕೂಡಲೇ ಖಜಾನೆಗೆ ಮರಳಿಸಬೇಕು ಎಂಬುದಾಗಿ ಆದೇಶ ಬಂದಿದ್ದರಿಂದ ಅನುದಾನ ಹಿಂದಿರುಗಿಸಲಾಗಿದೆ. ನಾನು ಸರ್ಕಾರದ ಆದೇಶ ಪಾಲಿಸಿದ್ದೇನೆ’ ಎಂದರು.

₹5ಲಕ್ಷ ಅವ್ಯವಹಾರ: ತಾಲ್ಲೂಕಿನಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆಗೆ ಒಟ್ಟು ₹5ಲಕ್ಷ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ. ಇದೂ ಕೂಡ ಸಭೆಯಲ್ಲಿ ಸದಸ್ಯರಿಂದ ಅನುಮೋದನೆಗೊಂಡಿಲ್ಲ. ಆರೋಗ್ಯ ಕೇಂದ್ರಗಳ ನಿರ್ವಹಣೆಗೆ ಕ್ರಿಯಾ ಯೋಜನೆ ನೀಡಿದವರ್ಯಾರು? ಕೂಡಲೇ ಅನುಮೋದನೆಗೊಂಡಿರುವ ಕಾಮಗಾರಿ ಬಾಕಿ ಅನುದಾನವನ್ನು ತಡೆಹಿಡಿಯಬೇಕು.

ಕ್ರಿಯಾಯೋಜನೆಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿ ಸಬೇಕು’ ಎಂದು ಸದಸ್ಯರಾದ ಮಲ್ಲಿ ಕಾರ್ಜುನ ಎಸ್‌.ಅರುಣಿ, ಮಖಬೂಲ್‌ ಪಟೇಲ್‌, ಭಾಸ್ಕರ್‌ರೆಡ್ಡಿ, ಈಶ್ವರ್‌ ನಾಯಕ್ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮಲ್ಲಪ್ಪ, ‘ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಬಿಲ್‌ ಪಾವತಿಯಾಗಿದೆ. ಕೆಲವೊಂದು ಕಾಮಗಾರಿಗಳು ನಡೆದಿಲ್ಲ. ಹಾಗಾಗಿ, ಬಿಲ್ ಪಾವತಿಸಿಲ್ಲ’ ಎಂದರು.

ಅಧಿಕಾರಿಗಳಿಗೆ ಷೋಕಾಸ್ ನೋಟಿಸ್‌: ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಗೆ ಪದೇಪದೇ ಗೈರಾಗುವ ಕ್ಷೇತ್ರ ಶಿಕ್ಷಣಾಧಿ ಕಾರಿ ಹಾಗೂ ಜೆಸ್ಕಾಂನ ಎಇಇ ಅವರಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿ ಕೂಡಲೇ ಹಿಂಬರಹ ಪಡೆಯ ಬೇಕು.

ಸಾಧ್ಯವಾದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಗಳಿಗೂ ಅವರ ವಿರುದ್ಧ ವರದಿ ಕಳುಹಿಸ ಬೇಕು’ ಎಂದು ಸದಸ್ಯರು ಅಧ್ಯಕ್ಷರನ್ನು ಒತ್ತಾಯಿಸಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಷು ಎಸ್.ರಾಠೋಡ ಅಧಿಕಾರಿಗಳಿಗೆ ನೋಟಿಸ್ ಜಾರಿಮಾಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದರು.ಅಧಿಕಾರಿಗಳ ಹಾಜರಾತಿ ಪಡೆದ ಸದಸ್ಯರು, ಅಧಿಕಾರಿಗಳ ಹೆಸರು, ಯಾವ ಇಲಾಖೆ ಎಂಬುದರ ಬಗ್ಗೆ ಕೇಳಿ ಪರಿಚಯಿಸಿಕೊಂಡ ಪ್ರಸಂಗವೂ ಸಭೆಯಲ್ಲಿ ನಡೆಯಿತು

ವಸತಿ ನಿಲಯ ನಿರ್ವಹಣೆ ₹5ಲಕ್ಷ ಅವ್ಯವಹಾರ: ವಸತಿ ನಿಲಯಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬಂದರೂ ಅವುಗಳ ನಿರ್ವಹಣಾ ವೆಚ್ಚದ ಲೆಕ್ಕ ಶೀರ್ಷಿಕೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಆದರೆ, ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯ ಗಮನಕ್ಕೆ ತರದೇ ಸದಸ್ಯರ ಅನುಮೋದನೆ ಪಡೆಯದೇ ₹ 5ಲಕ್ಷ ನಿರ್ವಹಣಾ ವೆಚ್ಚ ಅನುದಾನ ದುರ್ಬಳಕೆ ಆಗಿದೆ ಎಂದು ಸದಸ್ಯರಾದ ಚಂದಪ್ಪ ಕಾವಲೆರ ಆರೋಪಿಸಿದರು.

ಇದಕ್ಕೆ ಸದಸ್ಯರಾದ ಮಖಬೂಲ ಪಟೇಲ್, ಈಶ್ವರ್, ಮಲ್ಲಿಕಾರ್ಜುನ ಅವರು ದನಿ ಗೂಡಿಸಿ, ‘ಅಧಿಕಾರಿಗಳು ನಮಗೆ ಏನೂ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಾರೆ’ ಎಂದು ದೂರಿದರು.

50 ವಿದ್ಯಾರ್ಥಿಗಳಿಗೆ ಕೇವಲ 8 ತಟ್ಟೆ!
ಸೈದಾಪುರದಲ್ಲಿರುವ ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಬರುವ ಮೂರು ವಿದ್ಯಾರ್ಥಿ ವಸತಿ ನಿಲಯಗಳಿವೆ. ಒಂದು ಬಾಲಕಿಯರ ವಸತಿ ನಿಲಯ, ಎರಡು ಬಾಲಕರ ವಸತಿ ನಿಲಯಗಳು ಇವೆ. ಬಾಲಕರ ವಸತಿ ನಿಲಯಗಳ ಸ್ಥಿತಿ ಅಧೋಗತಿಗೆ ತಲುಪಿವೆ.

ಇಂದಿರಾ ನಗರದಲ್ಲಿನ ವಸತಿ ನಿಲಯದಲ್ಲಿನ ಮಕ್ಕಳ ಸ್ಥಿತಿತುಂಬಾ ಹೀನಾಯವಾಗಿದೆ ಎಂದು ಸೈದಾಪುರ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯ ಚಂದಪ್ಪ ಕಾವಲೆರ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದರು.

‘ವಸತಿ ನಿಲಯದಲ್ಲಿ 50 ಮಂದಿ ಬಡ ವಿದ್ಯಾರ್ಥಿಗಳು ಇದ್ದಾರೆ. ಅವರಿಗೆ ಊಟ ಮಾಡಲಿಕ್ಕೂ ತಟ್ಟೆಗಳಿಲ್ಲ. ಕೇವಲ 8 ತಟ್ಟೆಗಳು ಮಾತ್ರ ಇದ್ದು, ಮೂವರು ವಿದ್ಯಾರ್ಥಿಗಳು ಒಂದು ತಟ್ಟೆಯಲ್ಲಿ ಏಕಕಾಲದಲ್ಲಿ ಊಟ ಮಾಡುವಂತಹ ಸ್ಥಿತಿ ಇದೆ. ಆಹಾರದ ಗುಣಮಟ್ಟ ತೀರಾ ಕಳಪೆ ಇದೆ. ವಿದ್ಯುತ್‌ ವೈರ್‌ಗಳು ಇಲ್ಲವಾಗಿದ್ದು, ಮಳೆಗಾಲದಲ್ಲಿ ಶಾರ್ಟ್ ಸರ್ಕೀಟ್‌ ಉಂಟಾಗಿ ಅನಾಹುತ ಸಂಭವಿಸಲಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಸಭೆಯ ಸ್ವಾರಸ್ಯಗಳು...
* ‘ನನಗೆ ಖರ್ಗೆ ಸಾಹೇಬ್ರು ಗೊತ್ತು. ನೀವೇನು ಸಂಬಂಧ ಇಲ್ಲ’ ಎಂದು ಟಿಎಚ್‌ಒ ಮಲ್ಲಪ್ಪ ಹೇಳುತ್ತಾರೆ ಎಂದು ಸದಸ್ಯರ ಈಶ್ವರ್‌ ನಾಯಕ್ ಸಭೆಯಲ್ಲಿ ಅಳಲು                    ತೋಡಿಕೊಂಡರು
*  ‘ಎಷ್ಟು ಕೊಟ್ಟು ಬಂದಿದ್ದೀರಿ...’ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಗಣಪತಿ ಪೂಜಾರಿ ಅವರನ್ನು  ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಷು ರಾಠೋಡ       ಪ್ರಶ್ನಿಸಿದಾಗ ಸಭೆ ನಗೆಗಡಲಲ್ಲಿ ತೇಲಿತು
*  ನೀವೆಷ್ಟು ತಗೊಂಡೀರಿ ಹೇಳಿ? ಎಂದು ಅಧಿಕಾರಿಗಳ ಪರವಾಗಿ ಮಾತನಾಡಿದ ಅಧ್ಯಕ್ಷರನ್ನು ಸದಸ್ಯ ಮಖಬೂಲ ಪಟೇಲ್ ಪ್ರಶ್ನಿಸಿದಾಗ ಅಧ್ಯಕ್ಷರು ಪೆಚ್ಚುಮೋರೆ ಹಾಕಿ         ಕುಳಿತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT