ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್‍ಯಾಂಕಿಂಗ್‌ನಲ್ಲಿ ಪ್ರಗತಿ; ಕಸ ವಿಲೇವಾರಿ ಅದೇ ಸ್ಥಿತಿ!

Last Updated 27 ಮೇ 2017, 9:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ ನಡೆಸಿದ ಸ್ವಚ್ಛತಾ ಸಮೀಕ್ಷೆಯಲ್ಲಿ ಹುಬ್ಬಳ್ಳಿ–ಧಾರವಾಡ ಅವಳಿ ನಗರ ದೇಶದ 434 ನಗರಗಳ ಪೈಕಿ 199ನೇ ಸ್ಥಾನ ಪಡೆದಿದೆ. ರಾಜ್ಯದ 27 ನಗರಗಳ ಪೈಕಿ 8ನೇ ಸ್ಥಾನದಲ್ಲಿದೆ.

ಕಳೆದ ಜನವರಿ–ಫೆಬ್ರುವರಿಯಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅವಳಿ ನಗರ ಗರಿಷ್ಠ 2 ಸಾವಿರ ಅಂಕಗಳಿಗೆ 998 ಅಂಕ ಗಳಿಸುವ ಮೂಲಕ 199ನೇ ಸ್ಥಾನ ಪಡೆದಿದೆ. ಕಳೆದ ಸಮೀಕ್ಷೆಯಲ್ಲಿ 992 ಅಂಕಗಳನ್ನು ನಗರ ಪಡೆದುಕೊಂಡಿತ್ತು.

ಪಾಲಿಕೆ ರ್‍್ಯಾಂಕಿಂಗ್‌ನಲ್ಲಿಯೂ ಪ್ರಗತಿ: ಉತ್ತಮ ಸಾಧನೆ ತೋರಿದ ಮಹಾನಗರ ಪಾಲಿಕೆಗಳ ರ್‍್ಯಾಂಕಿಂಗ್‌ನಲ್ಲಿಯೂ ಹು–ಧಾ ಮಹಾನಗರ ಪಾಲಿಕೆ ಪ್ರಗತಿ ಸಾಧಿಸಿದೆ. ದೇಶದ 73 ಮಹಾನಗರ ಪಾಲಿಕೆಗಳ ಪೈಕಿ 43ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಈ ಪಟ್ಟಿಯಲ್ಲಿ ಅವಳಿ ನಗರ 54ನೇ ಸ್ಥಾನದಲ್ಲಿತ್ತು.

ಘನ ತ್ಯಾಜ್ಯ ನಿರ್ವಹಣೆ ಹಾಗೂ ತ್ಯಾಜ್ಯ ವಿಲೇವಾರಿ, ಶಿಕ್ಷಣ ಹಾಗೂ ಸಾಮರ್ಥ್ಯ ವೃದ್ಧಿಗೆ ಶೇ 45 ಅಂಕ, ಕ್ಷೇತ್ರ ಪರಿಶೀಲನೆಗೆ ಶೇ 25, ನಾಗರಿಕರ ಪ್ರತಿಕ್ರಿಯೆಗೆ ಶೇ 30ರಷ್ಟು ಅಂಕ ನಿಗದಿ ಮಾಡಲಾಗಿತ್ತು.

ತ್ಯಾಜ್ಯ ಸಂಗ್ರಹದಲ್ಲಿ ಸಾಧನೆ: ಘನ ತ್ಯಾಜ್ಯ ಸಂಗ್ರಹ ಮತ್ತು ನಿರ್ವಹಣೆಯಲ್ಲಿ ಪಾಲಿಕೆ ಉತ್ತಮ ಸಾಧನೆ ತೋರಿದೆ. ಈ ವಲಯದಲ್ಲಿ ಅದು 287 ಅಂಕ ಗಳಿಸಿದೆ. ರಾಜ್ಯದ ಸರಾಸರಿ ಇರುವುದು 216 ಅಂಕಗಳು ಮಾತ್ರ. ಆದರೆ, ಈ ವಿಷಯದಲ್ಲಿ ಮೈಸೂರಿಗಿಂತ ಹುಬ್ಬಳ್ಳಿ–ಧಾರವಾಡ ಹಿಂದಿದೆ. ಮೈಸೂರು 360 ಅಂಕ ಪಡೆದಿದೆ.

ಕಸ ಸಂಗ್ರಹಿಸುವಲ್ಲಿ ತೋರುವ ಆಸಕ್ತಿಯನ್ನು ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದರಲ್ಲಿ ತೋರಿ­ಸಿಲ್ಲ. ಘನತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಯಲ್ಲಿ ಪಾಲಿಕೆ ಪಡೆದಿರುವ ಅಂಕ 16 ಮಾತ್ರ. ಈ ವಿಷಯದಲ್ಲಿ ರಾಜ್ಯದ ಸರಾಸರಿ 72 ಅಂಕ ಇವೆ. ರಾಷ್ಟ್ರೀಯ ಸರಾಸರಿ 41 ಇದೆ.

ಕಸ ಬೇರ್ಪಡಿಸುವಿಕೆ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಅದನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ವೈಜ್ಞಾನಿಕ ವಿಧಾನಗಳನ್ನು ಪಾಲಿಕೆ ಅಳವಡಿಸಿಕೊಳ್ಳಬೇಕಿದೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.

ರ್‍್ಯಾಂಕಿಂಗ್‌ ಸಮಾಧಾನ ತಂದಿಲ್ಲ: ‘ಅವಳಿ ನಗರದ ಸ್ವಚ್ಛತೆಯ ಕಡೆಗೆ ಗಮನ ಕೊಡಲಾಗುವುದು. ಮುಂದಿನ ಸಮೀಕ್ಷೆ ವೇಳೆ, ಮೊದಲ 100ರೊಳಗಿನ ಸ್ಥಾನ ಪಡೆಯಲು ಪ್ರಯತ್ನಿಸಲಾಗುವುದು  ಎಂದು ಪಾಲಿಕೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹೇಳಿದರು.

‘ಪ್ರತಿ ಮನೆಗೆ ಹೋಗಿ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ವರ್ಷ­ದೊಳಗೆ ಸಮರ್ಪಕವಾಗಿ ಅನುಷ್ಠಾನ­ಗೊಳಿಸಲಾಗುವುದು.  ಮಲವಿಸರ್ಜನೆ ಮುಕ್ತ ಪ್ರದೇಶವಾಗಿ ಘೋಷಿಸ­ಲಾಗುವುದು’ ಎಂದು ಅವರು ತಿಳಿಸಿದರು.

‘ಕಳೆದ ವರ್ಷ 16 ಸಾವಿರ ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿತ್ತು. ಈಗಾಗಲೇ, 6,700 ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಇನ್ನೂ, 7,500 ಶೌಚಾಲಯಗಳು ನಿರ್ಮಾಣ ಹಂತದ ಮುಕ್ತಾಯದಲ್ಲಿವೆ ಎಂದರು.

ಅಂಕಿ–ಅಂಶ

998 ಸಮೀಕ್ಷೆಯಲ್ಲಿ ಮಹಾನಗರ ಪಾಲಿಕೆ ಪಡೆದಿರುವ ಅಂಕಗಳು

3,352 ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ನಿವಾಸಿಗಳ ಸಂಖ್ಯೆ

* * 

ಈ ಬಾರಿಯ ಸಮೀಕ್ಷೆಯಲ್ಲಿ ಅವಳಿ ನಗರದ ರ್‍್ಯಾಂಕಿಂಗ್‌ ಉತ್ತಮ­ಗೊಂ­ಡಿದೆ. ಆದರೆ, ಈ ಸ್ಥಾನ ತೃಪ್ತಿಕರ­ವಾಗಿ­ದೆಯೇ ವಿನಾ ಸಮಾಧಾನ ತಂದಿಲ್ಲ
ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ
ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT