ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೀರಿನಿಂದ ಕೊಲ್ಹಾರ ಜಾಕ್‌ವೆಲ್‌ಗೆ ಪೈಪ್‌ಲೈನ್‌

Last Updated 27 ಮೇ 2017, 9:11 IST
ಅಕ್ಷರ ಗಾತ್ರ

ಬಳೂತಿ (ವಿಜಯಪುರ): ಅವಳಿ ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಕೊಲ್ಹಾರ ಜಾಕ್‌ವೆಲ್‌ವರೆಗೂ ಪೈಪ್‌ಲೈನ್‌ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಈಗಾಗಲೇ ನದಿಯ ಹಿನ್ನೀರಿನಿಂದ ಕುಡಿಯುವ ನೀರಿಗಾಗಿ ಹಿಮ್ಮುಖವಾಗಿ ನೀರನ್ನು ಕೊಲ್ಹಾರ ಜಾಕ್‌ವೆಲ್‌ ಕಡೆ ಪಂಪ್‌ ಮಾಡಲಾಗುತ್ತಿದೆ. ಮುಂದಿನ 10–15ದಿನದೊಳಗೆ ಪೈಪ್‌ಲೈನ್‌ ನಿರ್ಮಿ ಸಲಾಗುವುದು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜಯಪುರ ನಗರದ ಜನತೆಯ ಕುಡಿಯುವ ನೀರಿನ ಆತಂಕ ದೂರ ಮಾಡಲು ನಿರಂತರ ನಿಗಾ ವಹಿಸಲಾಗಿದೆ. ಆಲಮಟ್ಟಿ ಜಲಾಶಯದ ಹಿನ್ನೀರನ್ನು ಕೊಲ್ಹಾರ ಜಾಕ್‌ವೆಲ್‌ವರೆಗೆ ಹರಿಸಲು 60 ಎಚ್.ಪಿ.ಯ 20 ಮೋಟರ್‌ ಅಳವಡಿಸಿ, ಹಿಮ್ಮುಖವಾಗಿ ನೀರು ಪಂಪ್‌ ಮಾಡಲಾಗುತ್ತಿದೆ.

ನಗರ ನೀರು ಸರಬರಾಜು ಮಂಡಳಿ ಪ್ರಕಾರ 850 ಎಲ್.ಪಿ.ಎಸ್ (ಲೀಟರ್‌ ಪರ್‌ ಸೆಕೆಂಡ್‌) ಪ್ರತಿ ದಿನಕ್ಕೆ ಅಗತ್ಯವಿದ್ದು, ಬುಧವಾರ 410 ಎಲ್.ಪಿ.ಎಸ್ ಪಂಪ್‌ ಮಾಡಲಾಗುತ್ತಿದೆ. ಶುಕ್ರವಾರ ಈ ಪ್ರಮಾಣ 650 ಎಲ್.ಪಿ.ಎಸ್ ಬಂದಾಗ ಸೇಫ್ ಲೆವೆಲ್‌ಗೆ ತಲುಪುತ್ತದೆ.

ಆಲಮಟ್ಟಿ ಜಲಾಶಯದಲ್ಲಿ 7.26 ಟಿ.ಎಂ.ಸಿ ಅಡಿ ನೀರು ಇದ್ದಾಗಲೂ ವಿಜಯಪುರ ನಗರ ಸೇರಿದಂತೆ ವಿವಿಧ ಕುಡಿಯುವ ನೀರು ಸರಬರಾಜು ಜಾಕ್‌ವೆಲ್‌ಗಳ ಮಟ್ಟ 504, 505, 507 ಇದ್ದು, ನೀರಿದ್ದರೂ ಪೂರೈಸ ಲಾಗುತ್ತಿಲ್ಲ. ಮುಂದಿನ 10–-15 ದಿನಗಳಲ್ಲಿ ಜಲಾಶಯದ ಹಿನ್ನೀರಿನಿಂದ ಕೊಲ್ಹಾರ ಜಾಕ್‌ವೆಲ್‌ವರೆಗೆ 10.5 ಕಿ.ಮೀ. ಪೈಪ್‌ಲೈನ್ ಅಳವಡಿಸಲು ಕ್ರಮ ಜರುಗಿಸಲಾಗುತ್ತಿದ್ದು, ಇದರಿಂದ ಜುಲೈ 15ರವರೆಗೆ ಸಹ ನೀರು ಸರಬರಾಜಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮಾಹಿತಿ ನೀಡಿದರು.

ಕೆ.ಆರ್.ಎಸ್, ಕಬಿನಿ ಜಲಾಶಯ ಗಳಲ್ಲಿ ಆರು ಟಿ.ಎಂ.ಸಿ. ಅಡಿ ನೀರು ಸಂಗ್ರಹವಿದ್ದಾಗಲೂ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ 65 ನಗರ ಪಟ್ಟಣಗಳಿಗೆ ವ್ಯವಸ್ಥಿತವಾಗಿ ನೀರು ಪೂರೈಸಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಅವಳಿ ಜಿಲ್ಲೆಗೆ ನೀರಿನ ಸಮಸ್ಯೆ ಬಾಧಿಸುವುದಿಲ್ಲ ಎಂದು ತಿಳಿಸಿದರು.

ಶಾಶ್ವತ ಪರಿಹಾರಕ್ಕೆ ಸಕಾಲ: ‘ಪ್ರಸ್ತುತ ಎದುರಾಗಿರುವ ಸಮಸ್ಯೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ. ಮುಂದೆ ಎದುರಾಗಬಹುದಾದ ಸಮಸ್ಯೆ ಈಗ ಎದುರಾಗಿದ್ದೇ ಒಳ್ಳೆಯದು. ಇದರ ನಿವಾರಣೆಗಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಎಂ.ಬಿ.ಪಾಟೀಲ ಹೇಳಿದರು.

ನೀರಾವರಿ ಸಲಹಾ ಸಮಿತಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟವನ್ನು ನೋಡಿಕೊಂಡು ಈ ವರ್ಷ ಮುಂಗಾರು ಮತ್ತು ಹಿಂಗಾರು ಎರಡು ಬೆಳೆಗೆ ನೀರು ಹರಿಸಿದೆ. ನೀರು ಸಂಗ್ರಹವಿದ್ದ ಸಮಯದಲ್ಲಿ ನೀರಾವರಿ ಸಲಹಾ ಸಮಿತಿ, ಫೆಬ್ರುವರಿ 15ರಿಂದ ಜೂನ್ 30ರವರೆಗೆ ಜಲಾಶಯದಲ್ಲಿನ ನೀರಿನ ನಿರ್ವಹಣೆ ಪ್ರಾದೇಶಿಕ ಆಯುಕ್ತರ ನಿಯಂತ್ರಣದಲ್ಲಿದ್ದು, ನೀರು ಬಿಡುವ ಅಧಿಕಾರ ಜಲಸಂಪನ್ಮೂಲ ಸಚಿವರಿಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಡಿಯುವ ನೀರು ಯೋಜನೆ ಗಳಿಗಾಗಿ ನೀರು ಪೂರೈಸಲು 507 ಮೀಟರ್‌ವರೆಗೂ ನೀರು ಕಾಯ್ದಿಡಬೇಕಾಗುತ್ತದೆ. ಇದಕ್ಕಾಗಿ 22 ಟಿ.ಎಂ.ಸಿ ಅಡಿ ನೀರನ್ನು ಸಂಗ್ರಹಿಸಿ, ಕೇವಲ 1 ಟಿ.ಎಂ.ಸಿ ಅಡಿ ನೀರನ್ನು ಕುಡಿಯುವ ನೀರಿಗಾಗಿ ಬಳಸಿ, ಮಿಕ್ಕ 21 ಟಿ.ಎಂ.ಸಿ ಅಡಿ ನೀರನ್ನು ಬಳಸದೆ ಬಿಡಬೇಕಾಗುತ್ತದೆ.

ಈ ನೀರನ್ನು ಸಹ ಕೃಷಿಗೆ ಬಳಸುವಂತೆ ಅನುಕೂಲವಾಗಲು ಕುಡಿಯುವ ನೀರಿನ ಎಲ್ಲ ಜಾಕ್‌ವೆಲ್‌ಗಳನ್ನು ಒಂದೇ ಸೂರಿನಡಿ ಕೆಳಮಟ್ಟದಲ್ಲಿ ಮದರ್‌ ಜಾಕ್‌ವೆಲ್ ನಿರ್ಮಿಸಿ ನೀರು ಪೂರೈಸಲು ಚಿಂತನೆ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಜಗನ್ನಾಥ ಪಿ.ರೆಡ್ಡಿ, ಸೂಪರಿಟೆಂಡೆಂಟ್‌ ಎಂಜಿನಿಯರ್ ಮಂಜಪ್ಪ, ರಂಗರಾಮ, ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT