ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಧದ ಬಾಗಿಲು

Last Updated 27 ಮೇ 2017, 19:30 IST
ಅಕ್ಷರ ಗಾತ್ರ

-ಕಂನಾಡಿಗಾ ನಾರಾಯಣ

**
‘ಅಂಬುತೀರ್ಥದ ಎಂಕ್ಟೇಶಪ್ಪ ಗಂಧದ ಬಾಗ್ಲು ಇಡ್ಸವ್ನಂತೆ...’ ಎಂಬ ಸುದ್ದಿ ಮಲೆನಾಡ ತುಂಬ ಗಂಧದ ಸುಗಂಧದಂತೆ ಹರಡಿಹೋಯಿತು. ಅದನ್ನು ನೋಡುವುದಕ್ಕಂತಲೇ ಹತ್ತಾರು ಹಳ್ಳಿಗಳಿಂದ ಜನ ಬಂದುಹೋದರು. ಅದೇನು ಅಂದ, ಅದೇನು ಚೆಂದ.. .ಅದರ ಕೆತ್ತನೆಯೇ ನಯನ ಮನೋಹರ... ಐದು ಅಡಿ ಅಗಲ, ಎಂಟು ಅಡಿ ಎತ್ತರದಷ್ಟು ವಿಶಾಲವಾದ ಬಾಗಿಲಿನ ಹಲಗೆಯ ಮೇಲೆ ನರ್ತಿಸುವ ನವಿಲಿನ ಮೋಹಕ ಭಂಗಿ, ಒಂದು ಅಡಿ ಗಾತ್ರದ ಎರಡು ನಿಲುವುಗಳ ಮೇಲೂ ನಳನಳಿಸುವ ಹೂವು, ಅದನ್ನು ಬಳಸಿದ ಬಳ್ಳಿಗಳು ಸುರುಳಿ ಸುರುಳಿಯಾಗಿ ಸುತ್ತುತ್ತ, ಅತ್ತ ನಾಲ್ಕು ಇತ್ತ ನಾಲ್ಕು ಜನ ಅಷ್ಟಲಕ್ಷ್ಮಿಯರ ನಡುವೆ ನೆತ್ತಿ ಮೇಲೆ ಸರಿಯಾಗಿ ಕೂತಿದ್ದ ವೆಂಕಟೇಶ್ವರನಿಗೆ ನೆರಳಾಗಿ ತಲೆಬಾಗಿ ನಿಂತಿದ್ದವು. ಆ ವೆಂಕಟೇಶ್ವರನೋ ಇದೀಗ ತಾನೇ ತಿರುಪತಿಯಿಂದ ಎದ್ದು ಮೈತೊಳೆದು ಬಂದು ಇಲ್ಲಿ ಪ್ರತ್ಯಕ್ಷವಾಗಿರುವಂತೆ ನಗುನಗುತ್ತ ಫ್ರೆಶ್ ಆಗಿ ನಿಂತಿದ್ದ. ಅವನ ಮುಖದ ಮೇಲಿನ ಮಂದಹಾಸ ಬುದ್ಧನದಕ್ಕಿಂತಲೂ ಅಮೋಘವಾಗಿತ್ತು. ‘ಯಾವ ಪುಣ್ಯಾತ್ಮ ಕೆತ್ತಿಸಿದ್ದು?’ ಎಂದು ಕೇಳುವ ಬದಲು, ‘ಯಾವ ಪುಣ್ಯಾತ್ಮ ಕೆತ್ತಿದ್ದು?’ ಎಂದು ಜನ ಕೇಳಲಾರಂಭಿಸಿದ್ದರು. ಕೆತ್ತಿಸಿದ ವೆಂಕಟೇಶನಿಗಿಂತ ಕೂಲಿಗೆ ಕೆತ್ತಿದ ಹೆಸರೇ ಗೊತ್ತಿರದ ಅಜ್ಞಾತ ಜಕಣಾಚಾರಿಯೇ ಮುನ್ನೆಲೆಗೆ ಬಂದು ಪ್ರಸಿದ್ಧಿ ಪಡೆಯುತ್ತಿರುವುದು ಅಸಹನೆ ಎನಿಸಿಲಾರಂಭಿಸಿತು.

ಗಂಧದ ಬಾಗಿಲು ಇರಿಸಿ ಮನೆ ಕಟ್ಟಿಸಬೇಕೆಂಬುದು ಅವನ ಬಾಲ್ಯದ ಕನಸಾಗಿತ್ತು. ಕನಸಿನಲ್ಲಿ ಒಂದು ದಿನ, ತನ್ನ ಸಾಕು ತಂದೆಯ ಎಂಟಂಕಣದ ಮನೆಯ ದೇವರ ಕೋಣೆಯಿಂದ ಕೂಡುಹಾಕಲ್ಪಟ್ಟಿದ್ದ ವೆಂಕಟೇಶ್ವರ ಮುಕ್ತಗೊಂಡು ಎದ್ದು ಹೊರಬರುತ್ತಿದ್ದಂತೆಯೇ ಒಂದೊಂದೇ ಬಾಗಿಲುಗಳು ತೆರೆದುಕೊಳ್ಳುತ್ತಿದ್ದವು. ಕೊನೆಯ ಮುಖ್ಯದ್ವಾರದಿಂದ ಹೊರಬರುತ್ತಿದ್ದಂತೆಯೇ ಒಂದು ಕ್ಷಣ ಗಲಿಬಿಲಿಗೊಂಡು ನಿಂತ ವೆಂಕಟೇಶ್ವರ, ಒಸಲನ್ನು ಬಗ್ಗಿ ಮೂಸಿನೋಡಿ ಆಶ್ಚರ್ಯದಿಂದ ಗಂಧದ ಸುವಾಸನೆಯನ್ನು ಆಸ್ವಾದಿಸಿದ್ದ.

ಹದಿಮೂರು ವಯಸ್ಸಿಗೇ ಆ ಮನೆಯಲ್ಲಿ ಇನ್ನೂ ಸಹಿಸಿಕೊಂಡು ಇರಲು ಸಾಧ್ಯವಾಗದಷ್ಟು ಉಸಿರುಕಟ್ಟಿಹೋಗಿತ್ತು. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಸಗಣಿ ಬಳಿಯಲು ಶುರು ಮಾಡಿದರೆ, ಹಾಲು ಕರೆದು ದನ ಮೇಯಿಸಿಕೊಂಡು ಬಂದು ಮತ್ತೆ ಹಾಲು ಕರೆದು ಹುಲ್ಲು ಹಾಕಿ, ಹೋರಿಗಳಿಗೆ ಸಪ್ಪೆ ತಿನ್ನಿಸಿ, ಅವುಗಳ ಬಿಸಿಯುಸಿರು ಕುಡಿದು ಮಲಗುವ ವೇಳೆಗೆ ರಾತ್ರೆ ಹನ್ನೆರಡಾಗಿರುತ್ತಿತ್ತು. ಶಂಕರಗುಡ್ಡದ ಕಾಡಿನೊಳಗೆ ಲೀಲಾಜಾಲವಾಗಿ ಅಡ್ಡಾಡಿಕೊಂಡು ಇದ್ದವನಿಗೆ ದಾರಿತಪ್ಪಿ ಕಾಡಿಗೆ ಬಂದಿದ್ದ ಹುಲಿಯ ಭಯಕ್ಕಿಂತಲೂ ಮನೆಗೆ ಬಂದಾಗ ಹುಲಿವೇಷ ತೋರಿಸುವ ಸಾಕುತಾಯಿಯೇ ಭೀಕರವಾದ ಭಯ ಹುಟ್ಟಿಸುತ್ತಿದ್ದಳು.

ತಟ್ಟನೆ ಎಚ್ಚರವಾಗಿತ್ತು. ಎದ್ದವನೇ ಅಂಕಣದಿಂದ ಹೊರಬಂದು ನೋಡಿದ. ಸೂರ್ಯನಕೂರಿಗೆ ನಕ್ಷತ್ರಗಳ ಪುಂಜ ಆಗಲೇ ನಾಲ್ಕು ಗಂಟೆಯಾಗಿದೆಯೆಂಬಷ್ಟು ಬಾಗಿದ್ದವು. ಮನೆಬಿಟ್ಟವನು ಓಡುತ್ತ ಓಡುತ್ತ ಕೊನೆಗೆ ಬಾಂಬೆಯನ್ನು ಸೇರಿಕೊಂಡುಬಿಟ್ಟ. ಅಲ್ಲಿಯ ಹೋಟೆಲ್–ಕಂ–ಲಾಡ್ಜಿನಲ್ಲಿ ಸಪ್ಲೈಯರ್ ಆಗಿ ಸೇರಿಕೊಂಡವನು, ಕ್ರಮೇಣ ಮಾಲೀಕನ ವಿಶ್ವಾಸ ಗಳಿಸಿ, ಆತ ಆಚೆ ಹೋಗುತ್ತಿದ್ದ ಗಂಟೆ, ಅರ್ಧಗಂಟೆ ಕಾಲ ಗಲ್ಲಾಪೆಟ್ಟಿಗೆಯನ್ನು ನಿಷ್ಠೆಯಿಂದ ಕಾಯ್ದುಕೊಳ್ಳುತ್ತಿದ್ದುದರಿಂದ, ಮಕ್ಕಳಿಲ್ಲದೆ ವಯಸ್ಸಾದ ಓನರ್ರು ಇವನನ್ನೇ ಕ್ಯಾಷಿಯರ್ ಆಗಿ ನೇಮಿಸಿ ಗಲ್ಲಾದ ಉಸ್ತುವಾರಿ ವಹಿಸುತ್ತಿದ್ದ. ಇನ್ನೂ ವಯಸ್ಸಾಗುತ್ತಿದ್ದಂತೆಯೇ ಲಾಡ್ಜಿನ ಜವಾಬ್ದಾರಿಯನ್ನೂ ಇವನಿಗೇ ವಹಿಸಿ ಒಂದುದಿನ ಇಹಲೋಕ ತ್ಯಜಿಸಿಬಿಟ್ಟ. ವಾರಸುದಾರರಿಲ್ಲದ ಓನರ್ರು ಸತ್ತಮೇಲೆ ಅದೆಲ್ಲದರ ಮೇಲೆ ಹಿಡಿತ ಸಾಧಿಸಿದ್ದ ವೆಂಕಟೇಶ ತಾನೇ ಓನರ್ ಆಗಿಹೋದ. ಹದಿನೈದು–ಇಪ್ಪತ್ತು ವರುಷಗಳಲ್ಲಿ ಈ ಹಂತಕ್ಕೆ ಬಂದು ನಿಂತ ವೆಂಕಟೇಶನಿಗೆ ತನ್ನ ಕಾಲಮೇಲೆ ತಾನು ನಿಲ್ಲುತ್ತಿದ್ದಂತೆಯೇ ಒಂದೊಂದೇ ಆಸೆಗಳು ಚಿಗುರಲಾರಂಭಿಸಿದವು. ಅವುಗಳಲ್ಲಿ, ಒಮ್ಮೆ ತನ್ನ ಊರಿಗೆ ಹೋಗಿಬರಬೇಕು ಎಂಬುದು ಒಂದು, ತನ್ನ ತಂದೆ–ತಾಯಿ ಯಾರೆಂದು ತಿಳಿದುಕೊಳ್ಳಬೇಕೆಂಬುದು ಇನ್ನೊಂದು.

ಯಾರಿಗೂ ಹೇಳದೇ ಕೇಳದೆ ಊರಿಗೆ ಬಂದ. ಎತ್ತಿನ ಗಾಡಿ ಜಾಡುಗಳೆಲ್ಲ ಡಾಂಬರು ರಸ್ತೆಗಳಾಗಿದ್ದವು. ತನ್ನ ಹುಟ್ಟೂರಿನ ಮರಗಳ ದಟ್ಟಣೆ ಕಡಿಮೆಯಾಗಿತ್ತು. ದನಕರುಗಳ ಸಂಖ್ಯೆ ಕ್ಷೀಣಿಸಿತ್ತು. ತನಗೆ ಆಶ್ರಯ ಕೊಟ್ಟಿದ್ದ ಸಾಕುಮನೆಯನ್ನು ಸರಿಯಾಗಿಯೇ ಗುರುತಿಸಿದ. ಮನೆಯ ಮುಂದೆ ಫಾರ್ಚೂನರ್ ಕಾರು ನಿಲ್ಲುತ್ತಿದ್ದಂತೆಯೇ ತುಂಡುಚಡ್ಡಿಯ ಹುಡುಗರು ಕೇಕೆ ಹಾಕಿಕೊಂಡು ಬಂದು ಸುತ್ತುವರಿದವು. ನಾಲ್ಕೈದು ಮನೆಗಳಿದ್ದ ಊರು ಸಿಡಿದು ನಲವತ್ತೈವತ್ತಾಗಿ, ಅವುಗಳೊಳಗಿಂದ ಒಂದೊಂದೇ ಮುದಿಜೀವಗಳು ಹೊರಬಂದು ಕಣ್ಣು ಕಿರಿದು ಮಾಡಿಕೊಂಡು ನೋಡಿದವು. ಯಾರೂ ಗುರುತು ಹಿಡಿಯದಾದಾಗ ತನ್ನ ಕಪ್ಪು ಕನ್ನಡಕ ತೆಗೆದಾಕ್ಷಣ ಅಲ್ಲಿ ತಮ್ಮ ಗೌಡನ ಪ್ರತಿರೂಪವೇ ಕಂಡಂತಾಯಿತು. ಮರುಳಯ್ಯ, ತನ್ನ ಹೆಂಡತಿ ಸತ್ತ ದುಃಖವನ್ನು ತಾಳಲಾರದೇ, ಸತ್ತು ಐದು ವರ್ಷಗಳೇ ಆದವಲ್ಲ, ಇದೇನು ಆತನ ದೆವ್ವವೇ ಎಂದು ಜನ ಪೇಚಾಡಿಕೊಂಡರು. ‘ತಾನು ಎಂಕ್ಟೇಶ’ ಎಂದು ಹೆಸರು ಹೇಳಿದ ಮೇಲೆ ಅವನ ಮೈ ಕೈ ಮುಟ್ಟಿ, ಅವನ ಬಾಲ್ಯ ವಿವರಗಳನ್ನೆಲ್ಲ ಕೇಳಿ ತಿಳಿದು ಖಾತ್ರಿಪಡಿಸಿಕೊಂಡರು.

ಅವನು ಬಂದಿರುವ ವಿಚಾರ ಸಾಕುಅಣ್ಣ ಶ್ರೀನಿವಾಸನ ಕಿವಿಗೆ ಬಿದ್ದು ತಳಮಳಿಸಿದ. ತನ್ನ ಅಪ್ಪ ಮರುಳಯ್ಯ ಅದು ಏಕೆ ಇವನ ಮೇಲೆ ಅಷ್ಟೊಂದು ಪ್ರೀತಿ ಇಟ್ಟಿದ್ದನೋ ಅವನಿಗೂ ತಿಳಿಯದಾಗಿತ್ತು. ಆದರೆ ಸಾಯುವ ಮೊದಲು, ಇಂದಲ್ಲ ನಾಳೆ ಬಂದೇ ಬರುವನೆಂಬ ಭರವಸೆಯ ಮೇಲೆ ತನ್ನ ಆಸ್ತಿಯಲ್ಲಿ ಆತನಿಗೂ ಅರ್ಧಪಾಲು ಬರೆದುಬಿಟ್ಟಿದ್ದ. ಅದರ ವಾರಸುದಾರರಿಲ್ಲದೇ ತಾನೇ ಉಳುಮೆ ಮಾಡುತ್ತಿದ್ದ ಶ್ರೀನಿವಾಸನಿಗೆ ಇವನ ಆಗಮನ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

***
ಊರಿನ ಸರ್ಕಾರಿ ಶಾಲೆಯ ಕಟ್ಟೆಯ ಮೇಲೆ ದಾರಿಹೋಕರು ಒಂದೊಂದು ದಿನ ಆಶ್ರಯ ಪಡೆದು ಹೋಗುತ್ತಿದ್ದರೆ, ಭಿಕ್ಷುಕರು ವಾರ ಹದಿನೈದು ದಿನ ತಂಗಿ ಹೋಗುತ್ತಿದ್ದರು. ಆದರೆ ಮಾನಸಿಕ ಅಸ್ವಸ್ಥೆಯಾದ ಒಬ್ಬಾಕೆ ಬಂದವಳು ಆರು ತಿಂಗಳು, ವರ್ಷವಾದರೂ ಅಲ್ಲಿಂದ ಕದಲಿರಲಿಲ್ಲ. ಮರುಳಯ್ಯ ಹೆಡ್‌ಮೇಷ್ಟ್ರಿಗೆ ತಾಕೀತು ಮಾಡಿದ್ದರಿಂದ ಕಟ್ಟೆಯ ಮೇಲಿನ ಸಂಸಾರದ ವಿಷಯಕ್ಕೆ ಅವರು ತಲೆಹಾಕದೆ ತಮ್ಮ ಪಾಡಿಗೆ ತಾವು ಪಾಠ ಮಾಡಿಕೊಂಡಿದ್ದರು. ಸುತ್ತಮುತ್ತಲ ಹದಿನೈದಿಪ್ಪತ್ತು ಹಳ್ಳಿಗಳಿಗೆ ಇದೊಂದೇ ಶಾಲೆ. ಸುತ್ತಮುತ್ತಲ ಪ್ರದೇಶಕ್ಕೆಲ್ಲ ದೊಡ್ಡ ಕುಳವಾಗಿದ್ದ ಮರುಳಯ್ಯ ತನ್ನ ಇನ್‌ಫ್ಲುಯೆನ್ಸ್ ಬಳಸಿ ಅಂಬುತೀರ್ಥಕ್ಕೆ ಶಾಲೆ ತರಿಸಿದ್ದ.

ಒಂದು ದಿನ ಇದ್ದಕ್ಕಿದ್ದಂತೆ ಆ ಹುಚ್ಚಿ ಗರ್ಭಿಣಿಯಾಗಿಬಿಟ್ಟಿದ್ದಳು! ಆ ವಿಚಾರವನ್ನು ಆಕೆ ಹೇಳಿಕೊಳ್ಳದಿದ್ದರೂ ಊರ ಹೆಂಗಸರಿಗೆ ತಿಳಿದುಹೋಯಿತು. ಆ ಪಿಸುಗುಟ್ಟುವಿಕೆಗಳು ಕಿವಿಕಿವಿಗಳನ್ನು ಹಾದು ಊರಿಗೆಲ್ಲ ಹರಡಿಹೋಯಿತು. ಆಕೆ ಇಲ್ಲಿಗೆ ಬಂದಾಗ ಏನೂ ಇಲ್ಲದವಳು ಈಗ ಗರ್ಭಿಣಿಯಾಗಿದ್ದಾಳೆಂದರೆ ಈ ಊರಿನ ಗಂಡಸರದೇ ಕೆಲಸ ಎಂದು ಎಲ್ಲ ಹೆಂಗಸರೂ ಅವರವರ ಗಂಡಂದಿರ ಮೇಲೆ ಅನುಮಾನ ಪಟ್ಟು ಮನೆಮಠಗಳಲ್ಲೆಲ್ಲ ರಾಣಾರಂಪವಾಯಿತು.

ಅರಳೀಕಟ್ಟೆಯ ಮೇಲೆ ನ್ಯಾಯಕ್ಕೆ ಕೂರಿಸಿದರು. ನ್ಯಾಯಸ್ಥಾನದಲ್ಲಿ ಕುಳಿತಿದ್ದ ಮರುಳಯ್ಯ, ಒಂದು ನಿರ್ಧಾರಕ್ಕೆ ಬಂದ. ಅದಕ್ಕೆ ಯಾರೇ ಕಾರಣರಾಗಿದ್ದರೂ, ಅದರ ಮೂಲ ತನ್ನ ಊರೇ ಆಗಿರಬಹುದಾದ್ದರಿಂದ ಮಾನವೀಯತೆ ದೃಷ್ಟಿಯಿಂದ ಊರವರೆಲ್ಲ ಸೇರಿ ಅವಳ ಬಾಣಂತನದ ಹಾರೈಕೆ ಮಾಡಬೇಕೆಂದು ಫರ್ಮಾನು ಹೊರಡಿಸಿಬಿಟ್ಟ. ಖರ್ಚುವೆಚ್ಚ, ಹುಟ್ಟುವ ಮಗುವಿನ ಉಸ್ತುವಾರಿ ಯಾರದ್ದು ಎಂದು ಜನ ಪ್ರಶ್ನೆ ಮಾಡಿದರು. ಆಗ, ಸಂಪತ್ತಿಗೆ ಸವಾಲಿನ ವಜ್ರಮುನಿ ಥರಾ, ‘ನೀವೆಲ್ಲ ನನಗೆ ಮಕ್ಕಳಿದ್ದ ಹಾಗೆ; ನಾನು ನಿಮಗೆ ತಂದೆಯಿದ್ದ ಹಾಗೆ’ ಎಂದುಬಿಟ್ಟ. ಆ ಮಾತಿನ ಮರ್ಮ ಯಾರಿಗೂ ಗೊತ್ತಾಗದಿದ್ದರೂ ಸುಮ್ಮನೆ ಅವರವರ ದಾರಿ ಹಿಡಿದಿದ್ದರು. ತನ್ನ ಮಾತಿನಂತೆ ಹುಟ್ಟಿದ ಮಗುವನ್ನು ಮರುಳಯ್ಯನೇ ಸಾಕಿ ಸಲಹುತ್ತಿದ್ದ. ಆದರೆ ಮಗುವಿಗೆ ವರ್ಷ ತುಂಬುವುದರೊಳಗೆ ಆಕೆಗೆ ಹುಚ್ಚು ಹೆಚ್ಚಾಗಿ ಎತ್ತ ಹೋದಳೋ ಯಾರಿಗೂ ತಿಳಿಯಲಿಲ್ಲ.

***
ವೆಂಕಟೇಶನಿಗೆ ತನ್ನ ಸಾಕುತಂದೆಯು, ಆಸ್ತಿಯಲ್ಲಿ ತನಗೂ ಅರ್ಧಪಾಲು ಬಿಟ್ಟು ಹೋಗಿರುವನೆಂದು ತಿಳಿದಾಗ ಆಕಾಶವೇ ಗಿರಗಿರನೇ ತಿರುಗಿದಂತಾಯಿತು. ತಾನು ಅನಾಥನಲ್ಲ ಅನಿಸಿತು. ಲಕ್ಷ್ಮಿ ತುಂಬಾ ಡೇಂಜರ್, ತನ್ನನ್ನು ಹಿಂಬಾಲಿಸಿದವರಿಗೆ ಸಿಗದೇ ಮರೀಚಿಕೆಯಂತೆ ಓಡುತ್ತಿರುತ್ತಾಳೆ; ನಿರ್ಲಕ್ಷಿಸಿದವರ ಹಿಂದೆ ಓಡೋಡಿ ಬರುತ್ತಾಳೆ ಅನಿಸಿತು.

ಶ್ರೀನಿವಾಸನಿಗೆ ಆಗಿರಬಹುದಾದ ಸಂಕಟವನ್ನು ಊಹಿಸಿದ ವೆಂಕಟೇಶ – ‘ತಾನೇನು ಪಾಲು ಕೇಳಲು ಬರುವುದಿಲ್ಲ, ಮುಂಬೈಯಲ್ಲಿ ಬೇಕಾದಷ್ಟು ಆಸ್ತಿಯಿದೆ, ಅದರ ಒಂದು ಪಾಲೂ ಇದು ಬೆಲೆ ಬಾಳುವುದಿಲ್ಲ. ಆದರೆ ತನ್ನ ಊರು ಅಂತ ಒಂದಷ್ಟು ಜಾಗ ಕೊಟ್ಟರೆ ಸಾಕು, ಅಲ್ಲಿ ಆಗಾಗ್ಗೆ ಬೇಜಾರಾದಾಗ ಬಂದು ಇದ್ದು ಹೋಗಲು ಒಂದು ಸಣ್ಣ ಮನೆ ಕಟ್ಟಿಕೊಳ್ಳುತ್ತೇನೆ’ ಎಂದು ಹೇಳಿಹೋದ. ಅದು ಹೇಗೆಹೇಗೋ ಶ್ರೀನಿವಾಸನ ಕಿವಿಗೆ ಬಿದ್ದು, ಇದೇ ಒಳ್ಳೆ ಛಾನ್ಸ್ ಎಂದು ತನಗೆ ಬೇಡದ ಸಂಪಂಗಿಕೆರೆ ಮುಂಭಾಗದ, ವ್ಯವಸಾಯಕ್ಕೆ ಯೋಗ್ಯವಲ್ಲದ ಎರೆಮಣ್ಣಿನ ಆರುಎಕರೆ ಹಿಡುವಳಿ, ಅದಕ್ಕೆ ಹೊಂದಿಕೊಂಡಂತೆ ಇದ್ದ ಹತ್ತುಎಕರೆ ಬಗರ್‌ಹುಕುಂ ಜಮೀನನ್ನು ಬಿಟ್ಟುಕೊಡುವುದಾಗಿ ಸ್ವಯಂ ಘೋಷಿಸಿದ. ಇದರಿಂದಾಗಿ ಉಳಿದ ಐನೂರು ಎಕರೆ ಜಮೀನಿನಲ್ಲಿ ತನಗೆ ಆಗಬಹುದಾದ ಲಾಭದ ಬಗ್ಗೆ ಲೆಕ್ಕ ಹಾಕಿ ಒಳಗೊಳಗೇ ಖುಷಿಪಟ್ಟ. ತನ್ನ ತಂದೆ ಬರೆದಿರುವ ಆಸ್ತಿ ವಿವರ ಅವನಿಗೆ ತಿಳಿಯುವ ಮೊದಲೇ ಇದೆಲ್ಲವನ್ನು ಬರೆದುಕೊಟ್ಟು ಭಾಗಪತ್ರ ರಿಜಿಸ್ಟರ್ ಮಾಡಿಕೊಂಡುಬಿಡಬೇಕೆಂದು ಅವಸರಿಸಿದ. ಆದರೆ ತಾನಾಗಿಯೇ ಹೋಗುವುದು ಬೇಡ, ಅವನಾಗಿಯೇ ಬರಲಿ ಎಂಬ ಜಾಣ್ಮೆ ಪ್ರದರ್ಶಿಸಿದ.

ವೆಂಕಟೇಶ ಮತ್ತೆ ಊರಿನ ಕಡೆ ಮುಖ ಮಾಡುವ ವೇಳೆಗೆ ವರ್ಷವೇ ಕಳೆದಿತ್ತು. ತನ್ನ ಬಿಳಿತೊಗಲಿನ ಹೆಂಡತಿ ಮಂದಾಕಿನಿ ಮತ್ತು ನಾಲ್ಕು ವರ್ಷದ ಮಗನನ್ನು ಕರೆದುಕೊಂಡು ಬಂದಾಗ ಊರಿಗೆ ಊರೇ ಬಿಟ್ಟ ಬಾಯಿ ಬಿಟ್ಟುಕೊಂಡು ನೋಡಿತು. ಶ್ರೀನಿವಾಸ ಮತ್ತವನ ಹೆಂಡತಿ ಮಕ್ಕಳು, ವೆಂಕಟೇಶ ಮುಂಬೈಯಲ್ಲಿ ತೊಗಲಿನ ದಂಧೆ ಮಾಡಿ ಶ್ರೀಮಂತನಾಗಿರಬಹುದೆಂದು ವ್ಯಂಗ್ಯವಾಡಿ ಒಳಗೊಳಗೇ ಸವತಿ ಮತ್ಸರ ತೋರಿದರು. ಇಲ್ಲದಿದ್ದರೆ, ಹಿಂದೆ–ಮುಂದೆ ಇಲ್ಲದ ಅವನಿಗೆ ಇಂಥ ಹೆಂಡತಿ ಸಿಗಲು ಸಾಧ್ಯವಿತ್ತೇ ಎಂಬ ಅಸಹನೆಯಿಂದ ಕುದಿದರು.

ವೆಂಕಟೇಶ ಆಗಾಗ್ಗೆ ಬಂದಾಗ ಉಳಿದುಕೊಳ್ಳಲು ಒಂದು ರೆಸಾರ್ಟ್ ಕಟ್ಟುವ ಕನಸಿನ ಫಲವಾಗಿ ತನಗೆ ಬಿಟ್ಟ ಜಮೀನನ್ನೆಲ್ಲ ನೋಡಿಕೊಂಡುಬಂದ. ಅದರೊಳಗೇ ಇದ್ದುದರಲ್ಲಿ ಒಳ್ಳೆ ಜಾಗವನ್ನು ಆರಿಸಿ, ‘ಲೇಕ್‌ವ್ಯೂ ರೆಸಾರ್ಟ್‌’ನ ರೂಪುರೇಷೆ ತಯಾರಿಸಲು ಮುಂಬೈಯಿಂದಲೇ ಇಂಜಿನಿಯರ್‌ ಅನ್ನು ಕರೆಸಿದ. ಸುತ್ತಲೂ ಒಂದು ಕಾಂಪೌಂಡು ಹಾಕಿಸಿ, ಕೆಳಹಂತದಲ್ಲಿ ಆಳುಕಾಳುಗಳಿಗೆಲ್ಲ ಒಂದು ವಿಶಾಲವಾದ ಮನೆ, ಅದರ ಮೇಲೆ ನಿಂತರೆ ಸುತ್ತಮುತ್ತಲ ಕಾಡು–ಕೆರೆ, ಶರಾವತಿ ಹುಟ್ಟಿ ಹರಿವ ಝರಿ – ಕಲ್ಯಾಣಿ – ರಾಮೇಶ್ವರನ ದೇಗುಲಗಳೆಲ್ಲ ಕಾಣುವಂಥ ಖಾಸಗಿ ಕೋಣೆ, ಅದೆಲ್ಲದರ ಮೇಲೊಂದು ಸ್ವಿಮ್ಮಿಂಗ್‌ಪೂಲ್... ಇವನ್ನೆಲ್ಲ ಡಿಸೈನ್ ಮಾಡಿಸಿ ಎಲಿವೇಷನ್‌ನ ಕಲರ್ ಪ್ರಿಂಟ್ ಹಾಕಿಸಿ ನೋಡಿ ಖುಷಿಪಟ್ಟ.

ಕ್ರಮೇಣ ವೆಂಕಟೇಶನ ವಾಸ್ತವ್ಯ ಮುಂಬಯಿಗಿಂತಲೂ ಅಂಬುತೀರ್ಥದಲ್ಲೇ ಹೆಚ್ಚಾಗಲಾರಂಭಿಸಿತು. ಕಿಟಕಿ ಬಾಗಿಲುಗಳನ್ನೆಲ್ಲ ತೀರ್ಥಹಳ್ಳಿಯಲ್ಲಿ ತೇಗದ ಮರದಲ್ಲೇ ಕುಯ್ಯಿಸಿದ್ದ. ಬಾಗಿಲುಪೂಜೆ ಮಾಡುವ ಹಂತಕ್ಕೆ ಬಂದಾಗ, ಇದ್ದಕ್ಕಿದ್ದಂತೆ ಒಂದು ರಾತ್ರಿ ಯಾರೋ ಕಳ್ಳರು ಇವನ ಗದ್ದೆಯೊಳಗಿದ್ದ ಶ್ರೀಗಂಧದ ಮರವನ್ನು ಕಡಿದು ಕದ್ದು ಸಾಗಿಸಲು ಪ್ರಯತ್ನಿಸಿದ್ದರು. ಆದರೆ ಮರದ ಒಂದು ಕೊಂಬೆ, ಮಿಷಿನ್‌ಮನೆಗೆ ಹಾದುಹೋಗಿದ್ದ ಲೈಟುಕಂಬದ ತಂತಿಗೆ ಸಿಕ್ಕಿಹಾಕಿಕೊಂಡು ಚಟಚಟನೆಂದು ಬೆಂಕಿಕಿಡಿಗಳು ಸಿಡಿದಿದ್ದರಿಂದ ಕಳ್ಳರು ಭಯಭೀತರಾಗಿ ಓಡಿಹೋಗಿದ್ದರು.

ಅವನಿಗೆ ಕೂಡಲೇ ಬಾಲ್ಯದ ಗಂಧದ ಬಾಗಿಲನ್ನು ವೆಂಕಟೇಶ್ವರ ಮೂಸಿನೋಡಿದ್ದ ಕನಸು ನೆನಪಾಯಿತು. ಯಾಕೆ ಅದೇ ಮರದಿಂದ ಮೈನ್‌ಡೋರ್ ಮಾಡಿಸಬಾರದು ಎಂದು ಅಚಾನಕ್ಕಾಗಿ ಅನಿಸಿತು. ರೆಂಬೆಕೊಂಬೆಗಳನ್ನೆಲ್ಲ ಕತ್ತರಿಸಿ, ಕಾಂಡವನ್ನು ತೀರ್ಥಹಳ್ಳಿಗೆ ಸಾಗಿಸಿ ಬಾಗಿಲಿನ ಅಳತೆಗೆ ಕುಯ್ಯಿಸಿದ. ಅದನ್ನು ಪ್ಲೈನ್ ಆಗಿ ಜೋಡಿಸಲು ಮನಸ್ಸಾಗಲಿಲ್ಲ. ಕಾರ್ಪೆಂಟರ್‌ನಿಂದ ಅದರ ಮೇಲೆ ಕುಸುರಿ ಕೆಲಸ ಮಾಡಿಸಬಹುದೆಂದುಕೊಂಡ. ಆದರೆ ಬಂದು ನೋಡಿದ ಕಾರ್ಪೆಂಟರ್, ‘ಮರ ಇನ್ನೂ ಹಸಿ ಇದೆ, ಸೀಜನ್ ಆಗಬೇಕು’ ಎಂದುಬಿಟ್ಟ. ಕನಿಷ್ಟ ಒಂದು ವರ್ಷವಾದರೂ ಒಣಗಬೇಕು ಎಂಬುದು ವೆಂಕಟೇಶನಿಗೆ ಅರಗಿಸಿಕೊಳ್ಳಲಾಗಲಿಲ್ಲ. ಅಲ್ಲಿವರೆಗೆ ತಾಳಬೇಕೆಂಬುದೇ ಅವನಿಗೆ ಅಸಹನೀಯವಾಗಿತ್ತು. ಅಷ್ಟರಲ್ಲಿ ಮನೆಯ ಉಳಿದ ಎಲ್ಲ ಕೆಲಸಗಳನ್ನು ಗಂಧದ ಬಾಗಿಲಿನ ಸ್ಟಾಂಡರ್ಡಿಗೆ ಏರಿಸಿ, ಮುಗಿಸಿಕೊಳ್ಳುವಂತೆ ಇಂಜಿನಿಯರ್‌ಗೆ ಹೇಳಿ, ಬಾಗಿಲು ನಿಲುವುಗಳನ್ನು ಒಣಗಿಸುವ ಮತ್ತು  ಕಾಯುವ ಕಾಯಕಕ್ಕೆ ಜನಗಳನ್ನು ನೇಮಿಸಿ ಮುಂಬೈಗೆ ಹಿಂದಿರುಗಿದ.

***
ಹಿಡಿದ ಕೆಲಸ ದಡದಡ ಮುಗಿದುಹೋಗಿಬಿಡಬೇಕೆನ್ನುವ ಜಾಯಮಾನದ ವೆಂಕಟೇಶ ಒಂದು ವರ್ಷ ಕಳೆಯುವುದರೊಳಗೆ ತಳಮಳಿಸಿ ಹೋದ. ಚೌಕಟ್ಟು ಬಾಗಿಲು ಕೂರಿಸುವ ಕೆಲಸವೊಂದನ್ನು ಬಿಟ್ಟು ಉಳಿದ ಕೆಲಸಗಳೆಲ್ಲ ಮುಗಿದುಹೋದವು. ಬಾಗಿಲ ಯೋಗ್ಯತೆಗೆ ಅನುಸಾರವಾಗಿ ಪೋರ್ಟಿಕೋದ ಗೋಡೆಗಳಿಗೆಲ್ಲ ಇಟಾಲಿಯನ್ ಮಾರ್ಬಲ್ಲನ್ನು ಹೆಚ್ಚುವರಿಯಾಗಿ ಅಂಟಿಸಿದ್ದೂ ಆಯಿತು. ಮನೆಗೆ ‘ಅಮರಾವತಿ’ ಎಂಬ ಹೆಸರಿಟ್ಟು, ಅದನ್ನು ಬಂಗಾರದ ಅಕ್ಷರಗಳಲ್ಲಿ ಕೆತ್ತಿಸಿದ್ದೂ ಆಯಿತು.

ಕಾರ್ಪೆಂಟರ್ರು ಚೌಕಟ್ಟನ್ನು ನಯವಾಗಿ ಕೆತ್ತನೆ ಮಾಡಿದ್ದನ್ನು ನೋಡಿ, ಮೆಚ್ಚಿಕೊಂಡು, ಬಾಗಿಲಿನ ಹಲಗೆಯ ಮೇಲೂ ಕೆತ್ತನೆ ಮಾಡುವಂತೆ ಹೇಳಿದ. ಕೆತ್ತನೆ ಮುಗಿಯುವುದರೊಳಗಾಗಿ ಮನೆ ಸುತ್ತಮುತ್ತಲಿನ ಉಬ್ಬುತಗ್ಗುಗಳನ್ನೆಲ್ಲ ಜೆಸಿಬಿಯಿಂದ ಸಮತಟ್ಟುಗೊಳಿಸಿ, ಡಾಂಬರು ರಸ್ತೆ ಮಾಡಿಸಿದ. ನೂರಾರು ತರಹದ ಹೂಗಿಡಗಳು, ಲಾನ್, ಅದಕ್ಕೆ ಸ್ಪ್ರಿಂಕ್ಲರ್ ಎಲ್ಲವೂ ಸಿದ್ಧವಾಗಿ ಸ್ವರ್ಗಲೋಕದ ಅಮರಾವತಿಯನ್ನೇ ಪುನರ್‌ ಸೃಷ್ಟಿಸಿದಂತೆ ಕಾಣುತ್ತಿತ್ತು. ಊರಿಗೆ ಹೋಗಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದು, ಒಂದು ದಿನ ಒಳ್ಳೆಯ ಮುಹೂರ್ತ ನೋಡಿ ಬಾಗಿಲು ಇಡಿಸುವ ಶಾಸ್ತ್ರ ಮಾಡಿದ. ಪೂರ್ಣವಾದ ಮೇಲೆ ನೋಡುತ್ತಾನೆ: ಇಡೀ ಮನೆಗಿಂತಲೂ ಬಾಗಿಲೇ ನಯನಮನೋಹರವಾಗಿ ಎದ್ದು ಕಾಣುತ್ತಿದೆ... ಸುಗಂಧದ ಪರಿಮಳ ಎನ್ನುವುದು ಇಡೀ ವಾತಾವರಣವನ್ನೇ ಆಹ್ಲಾದಕರವನ್ನಾಗಿಸಿದೆ... ತನ್ನ ಜನ್ಮ ಸಾರ್ಥಕವಾಯಿತೆಂದುಕೊಂಡ.

ಯಾವಾಗ ವೆಂಕಟೇಶನ ಮನೆ ಸಿದ್ಧವಾಗಿ ಕಣ್ಮನ ಸೆಳೆಯಲಾರಂಭಿಸಿತೋ ಆಗ ತಾನು ಉಳಿಸಿಕೊಂಡ ನೂರಾರು ಎಕರೆ ಜಾಗಕ್ಕಿಂತ ಈ ಜಾಗವೇ ಶ್ರೀನಿವಾಸನ ಕಣ್ಣು ಕುಕ್ಕಲಾರಂಭಿಸಿತು. ಆತ ಬೇಡವೆಂದು ಬಿಟ್ಟ ಜಾಗದಲ್ಲಿ ವೆಂಕಟೇಶ ಮನೆ ಕಟ್ಟಿಕೊಂಡಿದ್ದರೂ, ನೂರಾರು ಜನ ಬಂದು ಮನೆಯ ಅಂದ, ಅದಕ್ಕೆ ಮುಕುಟಪ್ರಾಯವಾದ ಗಂಧದ ಬಾಗಿಲಿನ ಚೆಂದ ನೋಡಿ ಹೊಗಳಲಾರಂಭಿಸಿದ ಮೇಲೆ, ಮಯನ ಅರಮನೆಯನ್ನು ನೋಡಿ ಸುಯೋಧನ ಹೊಟ್ಟೆಉರಿ ಪಟ್ಟುಕೊಂಡ ಹಾಗೆ, ಅದೇಕೋ ದಾಯಾದಿ ಮತ್ಸರ ಎನ್ನುವುದು ಅವನ ಹೊಟ್ಟೆಯೊಳಗಿನ ಕರುಳನ್ನೆಲ್ಲ ಕಿವುಚಲಾರಂಭಿಸಿತು. ಮರುಳಯ್ಯನ ನಿಜವಾದ ವಾರಸುದಾರನಾದ ತಾನೆಲ್ಲಿ? ಯಾರೋ ಹುಚ್ಚಿಯ ಹೊಟ್ಟೆಯಲ್ಲಿ ಹುಟ್ಟಿದ ಅವನೆಲ್ಲಿ?

ಶ್ರೀನಿವಾಸ, ಹೊಸದಾಗಿ ಬಂದಿದ್ದ ಪ್ರೊಬೇಷನರಿ ಐಎಫ್‌ಎಸ್ ಅಧಿಕಾರಿ ಅಣ್ಣಯ್ಯಗೆ, ‘ಕಾಡಿನ ಗಂಧದ ಮರಗಳನ್ನು ಕಡಿದು ವೆಂಕಟೇಶ ಎನ್ನುವವನು ಅಂಬುತೀರ್ಥದಲ್ಲಿ ಒಂದು ರೆಸಾರ್ಟ್ ಕಟ್ಟಿದ್ದಾನೆ’ ಎಂದು ಮೂಕರ್ಜಿ ಬರೆದು, ಏನೂ ಗೊತ್ತಿಲ್ಲದವನಂತೆ ಕುಂತುಬಿಟ್ಟ. ಗೃಹಪ್ರವೇಶಕ್ಕೆಂದು ನೆಂಟರು, ಗೆಳೆಯರು, ಊರವರು ಎಲ್ಲ ಬಂದಿರುವಾಗ ಫಾರೆಸ್ಟ್ ಡಿಪಾರ್ಟ್‌ಮೆಂಟಿನ ಇಬ್ಬರು ಗಾರ್ಡ್‌ಗಳು ಬಂದು ರೇಂಜ್ ಫಾರೆಸ್ಟರ್ ಕರೆಯುತ್ತಿರುವುದಾಗಿಯೂ, ಈಗಲೇ ಬರುವಂತೆಯೂ ಹೇಳಿದರು. ಇಂಥ ಸಂದರ್ಭದಲ್ಲಿ ಹೇಳಿಕಳಿಸಿದ್ದಕ್ಕೆ ಎಲ್ಲರೆದುರು ಅವಮಾನವಾದಂತಾಗಿ, ವೆಂಕಟೇಶನ ಪಿತ್ತ ನೆತ್ತಿಗೇರಿತು. ‘ಯಾವನಯ್ಯ ಅವನು ನಿಮ್ಮ ರೇಂಜ್ ಆಫೀಸರ್ರು? ಬೇಕಾದ್ರೆ ಅವನಿಗೇ ಇಲ್ಲಿಗೆ ಬರೋಕ್ಕೇಳು...’ ಎಂದು ಸಿಟ್ಟಿನ ಭರದಲ್ಲಿ ಅಂದುಬಿಟ್ಟ.

ಮಾರನೇ ದಿನ ಜಿಲ್ಲೆಯಿಂದ ತಾಲ್ಲೂಕಿಗೆ ಬಂದಿರುವ ಮೂಗರ್ಜಿಯ ಉಲ್ಲೇಖದೊಂದಿಗೆ ನೀಡಿದ ನೋಟೀಸನ್ನು ವೆಂಕಟೇಶ ಹರಿದುಹಾಕಿ ತನ್ನ ಪಾಡಿಗೆ ತಾನು ಮುಂಬೈಗೆ ಹೊರಟುಹೋದ. ರಕ್ಷಿತ ಅರಣ್ಯದ ನಿಷೇಧಿತ ಗಂಧದ ಮರವನ್ನು ಬಳಸಿ, ಕಾನೂನಿಗೆ ವಿರುದ್ಧವಾಗಿ ಮನೆ ಕಟ್ಟಿರುವ ಬಗ್ಗೆ ಇಂತಿಷ್ಟು ದಿನದಲ್ಲಿ ಸಮಜಾಯಿಷಿ ನೀಡಬೇಕೆಂದು ಸೂಚಿಸಿದ ನೋಟೀಸಿಗೆ ಉತ್ತರ ಬರದಾದಾಗ ಇನ್ನೊಂದೆರಡು ನೋಟೀಸುಗಳನ್ನು ಬಾಗಿಲಿಗೆ ಅಂಟಿಸಿ ಫೋಟೋ ಹೊಡೆದುಕೊಂಡು ಬಂದು, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿಬಿಟ್ಟರು.

ಇದರಿಂದ ಕೆರಳಿದ ಎ.ಸಿ.ಎಫ್. ಅಣ್ಣಯ್ಯನೇ ಸರ್ಕಾರೀ ಜೀಪಲ್ಲಿ ಬಂದ ತಕ್ಷಣ ಇಡೀ ಮಲೆನಾಡಾದ ಮಲೆನಾಡೇ, ಹುಲಿಯ ಗರ್ಜನೆಗೆ ಹೆದರಿ ಅಡಗಿಕೊಂಡಂತೆ ಕುಳಿತಿತು. ಒದ್ದೆ ಮಾಡಿಕೊಂಡ ಜನ ಬಾಗಿಲ ಸಂದಿಯಿಂದ ಇಣುಕಿ ನೋಡಿದರೇ ಹೊರತು ಸಾಕ್ಷಿಯಾಗಲು ಒಂದು ನರಪಿಳ್ಳೆಯೂ ಹೊರಬರಲಿಲ್ಲ. ಗಂಧದ ತುಂಡುಗಳನ್ನು ಸೀಜ್ ಮಾಡಿ, ಕೆಲವರನ್ನಾದರೂ ಅರೆಸ್ಟ್ ಮಾಡಿಕೊಂಡುಹೋಗಬೇಕೆಂದು ಬಂದರೆ ಕಳ್ಳರೇ ಸಿಕ್ಕುತ್ತಿಲ್ಲವಲ್ಲ ಎಂದುಕೊಂಡ ಅಣ್ಣಯ್ಯ, ಬಾಗಿಲಿನ ಅಂದ ನೋಡಿ ಮನಸೋತು, ಅದನ್ನು ಕೀಳಿಸಿ ಅಂದಗೆಡಿಸಲು ಮನಸ್ಸು ಬಾರದೇ, ಯಾರಾದರೂ ಬರುವವರೆಗೆ ಕಾಡನಡುವಿನ ಮನೆಯ ಬಾಗಿಲ ಕಾಯಲು ಇಬ್ಬರು ಗಾರ್ಡ್‌ಗಳನ್ನು ನಿಯೋಜಿಸಿ ಹೊರಟುಹೋದ.

ಆದರೆ ಆತ ಶಿವಮೊಗ್ಗ ಸೇರುವ ಮೊದಲೇ ವರ್ಗಾವಣೆಯಾಗಿ ಬೇರೊಬ್ಬಾತ ಬಂದುಬಿಟ್ಟಿದ್ದ. ಜನ, ಅಂಥ ವೀರಪ್ಪನ್‌ನನ್ನೇ ಅಲ್ಲಾಡಿಸಿಬಿಟ್ಟಿದ್ದ ಅಣ್ಣಯ್ಯನಂಥ ಅಣ್ಣಯ್ಯನನ್ನೇ ಬರೀ ಒಂದು ಫೋನಲ್ಲೇ ಎತ್ತಂಗಡಿ ಮಾಡಿಸಿದ ವೆಂಕಟೇಶನ ತಾಕತ್ತಿನ ಬಗ್ಗೆ ದಂತಕಥೆಗಳನ್ನು ಹೆಣೆದು ಮಾತಾಡಿಕೊಂಡು ನಡುಗಿದರು. ಹೊಸದಾಗಿ ಪ್ರಮೋಷನ್ ಮೇಲೆ ಬಂದಿದ್ದ ಎ.ಸಿ.ಎಫ್. ಇದರ ಉಸಾಬರಿಗೇ ಹೋಗದೆ ಸುಮ್ಮನಾದ. ಆದರೆ ಸದರಿ ವರದಿಯು ಯಾರು ಯಾರೋ ಅಧಿಕಾರಿಗಳನ್ನು ದಾಟಿ ಬೆಂಗಳೂರಿನ ಅರಣ್ಯಭವನ ಸೇರಿತು. ಅಲ್ಲಿಂದ ನಿರ್ದೇಶನ ಪಡೆದು ತಾಲ್ಲೂಕಿನ ಮುನ್ಸಿಫ್ ಕೋರ್ಟಿನಲ್ಲಿ ದಾವೆಯೂ ದಾಖಲಾಯಿತು.

ಇದಾವುದರ ಬಗ್ಗೆ ಅರಿವೇ ಇರದ ವೆಂಕಟೇಶ, ಆರು ತಿಂಗಳಿಗೋ ವರ್ಷಕ್ಕೋ ಒಮ್ಮೆ ಊರಿಗೆ ಬರುವುದು, ಎರಡು–ಮೂರು ದಿನ ಹೆಂಡತಿ–ಮಕ್ಕಳೊಂದಿಗೆ ಆರಾಮಾಗಿ ಇದ್ದು ವಾಪಸು ಹೋಗುವುದು ಮಾಡುತ್ತಿದ್ದ. ಕೊನೆಗೊಮ್ಮೆ ಕೋರ್ಟ್ ಸಮನ್ಸ್ ಬಂದಾಗ ಗಾಬರಿಯಾಗಿ ಲಾಯರ್ರನ್ನು ನೇಮಿಸಿದ.

‘ತನ್ನ ಕಕ್ಷಿದಾರನ ಸಾಗುವಳಿ ಜಮೀನಿನಲ್ಲಿ ಬೆಳೆದಿದ್ದ ಮರ ಅದು, ಕಾಡಿನಿಂದ ತಂದದ್ದಲ್ಲ... ಅದೂ ರಾತ್ರಿ ವೇಳೆ ಕಳ್ಳರು ಕದ್ದು ಕಡಿದದ್ದು, ತನ್ನ ಕಕ್ಷಿದಾರ ಕಡಿದದ್ದಲ್ಲ... ಅದನ್ನು ಕಳ್ಳಸಾಗಣೆದಾರರಿಂದ ರಕ್ಷಿಸಿದ್ದು, ದುರುಪಯೋಗವಾಗದಂತೆ ತಡೆಯಲಾಗಿದೆ... ಅವತ್ತೇ ಕಳ್ಳರು ಕದ್ದುಕೊಂಡು ಹೋಗಿದ್ದರೆ ಮಾಲೂ ಇರುತ್ತಿರಲಿಲ್ಲ, ಕಂಪ್ಲೆಂಟೂ ಇರುತ್ತಿರಲಿಲ್ಲ... ಆದರೆ ಈಗ ಸರ್ಕಾರ, ರಕ್ಷಣೆ ಮಾಡಿ ಉಳಿಸಿದ್ದೇ ತಪ್ಪು ಎನ್ನುವಂತೆ ದಾವೆ ಹೂಡಿದೆ. ಅದನ್ನು ಘನ ನ್ಯಾಯಾಲಯ ರದ್ದುಪಡಿಸಬೇಕು’ ಎಂದು ವೆಂಕಟೇಶನ ಪರ ವಾದ ಮಂಡಿಸಿದನು. ತನ್ನ ಸುತ್ತಲಿನ ಕಾಡನ್ನು ದಿನವೂ ನೋಡುತ್ತಿದ್ದ ಸ್ಥಳೀಕರೇ ಆಗಿದ್ದ ನ್ಯಾಯಾಧೀಶರು, ಗ್ರೌಂಡ್ ರಿಯಲಿಟಿಯ ಆಧಾರದ ಮೇಲೆ ವಾದವನ್ನು ಪುರಸ್ಕರಿಸಿ ನಿರಪರಾಧಿ ಎಂದು ತೀರ್ಪು ಕೊಟ್ಟುಬಿಟ್ಟರು.

ನ್ಯಾಯಾಧೀಶರು ಲಂಚ ಪಡೆದು ತೀರ್ಪು ನೀಡಿದ್ದಾರೆಂದು ಶ್ರೀನಿವಾಸ, ಅರಣ್ಯ ಇಲಾಖೆಗೆ ಇನ್ನೊಂದು ಮೂಗರ್ಜಿ ಬರೆದ. ಅದನ್ನು ಆಧಾರವಾಗಿರಿಸಿಕೊಂಡು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲಾಯಿತು. ಕೆಳಗಿನ ಕೋರ್ಟಿನ ತೀರ್ಪನ್ನೇ ಪುನರುಚ್ಚರಿಸುತ್ತಾರೆ ಎಂದು ವೆಂಕಟೇಶ ಮತ್ತು ಅವನ ಲಾಯರ್ರು ಹೆಚ್ಚು ಆಸ್ಥೆ ವಹಿಸದಿದ್ದರಿಂದ, ಪರಾಪರ ವಿಚಾರಿಸಿದಂತೆ ಮಾಡಿದ ನ್ಯಾಯಾಲಯ, ಅಪರಾಧಿಯನ್ನು ಹೀಗೇ ಬಿಟ್ಟರೆ ಇಂಥ ಪ್ರಕರಣಗಳು ಜಾಸ್ತಿಯಾಗುತ್ತವೆಂದು ಭಾವಿಸಿ, ವೆಂಕಟೇಶನನ್ನು ಅಪರಾಧಿಯೆಂದು ತೀರ್ಮಾನಿಸಿ ಆರು ತಿಂಗಳು ಸಜೆ, ಐವತ್ತು ಸಾವಿರ ರೂಪಾಯಿ ದಂಡ, ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ ಒಂದು ತಿಂಗಳು ಜೈಲುಶಿಕ್ಷೆ ಎಂದು ತೀರ್ಪು ನೀಡಿಬಿಟ್ಟಿತು! ಆದರೆ ಅಪೀಲು ಹಾಕಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ಹಾಗೂ ವೈಯಕ್ತಿಕ ಜಾಮೀನನ್ನೂ ಮಂಜೂರು ಮಾಡಿತು.

ಇದು ಯಾವುದೋ ಪೆಟ್ಟಿಕೇಸು ಎಂದುಕೊಂಡಿದ್ದ ವೆಂಕಟೇಶ ‘ಜೈಲುಶಿಕ್ಷೆ’ ಎಂದಾಗ ಹೌಹಾರಿಬಿಟ್ಟ. ಮುಂಬೈಯಿಂದ ಓಡೋಡಿ ಬಂದು ತನ್ನ ವಕೀಲನನ್ನು ನಾಲಾಯಕ್ಕು ಎಂದು ಬೈದು, ಖ್ಯಾತ ಹೈಕೋರ್ಟ್ ನ್ಯಾಯವಾದಿಯೊಬ್ಬರನ್ನು ಹಿಡಿದು, ಅಪೀಲು ಹಾಕಿದ. ಗಂಟೆಗೆ ಇಷ್ಟು ಲಕ್ಷವೆಂಬ ಲೆಕ್ಕಾಚಾರದ ಮೇಲೆ ವಾದಮಾಡುತ್ತಿದ್ದ ಲಾಯರ್ ತಿಮ್ಮರಾಯಪ್ಪ – ಕೂಡಲೇ ಬೇಲ್ ಕೊಡಿಸಿ, ವಾದ ಮಂಡಿಸಲು ಕಾಲಾವಕಾಶ ಕೋರಿದರು.

ಟ್ರಯಲ್‌ಗಳು ನಡೆದವು. ವಾರಕ್ಕೊಂದು, ಹದಿನೈದು ದಿನಕ್ಕೊಂದು ಹಿಯರಿಂಗ್‌ಗಳು ನಡೆಯಲಾರಂಭಿಸಿದವು. ಇದುವರೆಗೂ ನಿರ್ಲಕ್ಷಿಸಿದ್ದ ಕೇಸನ್ನು ಈಗ ಗಂಭೀರವಾಗಿ ಪರಿಗಣಿಸಿದ ವೆಂಕಟೇಶ. ಪತ್ರಿಕೆಗಳು ಅದನ್ನು ದಿನನಿತ್ಯ ಸುದ್ದಿ ಮಾಡಲಾರಂಭಿಸಿದವು. ಶ್ರವ್ಯ ಮತ್ತು ದೃಶ್ಯ ಮಾಧ್ಯಮಗಳು ಗಂಟೆ–ಅರ್ಧಗಂಟೆಯ ಸ್ಟೋರಿ ಮಾಡಿ ಪ್ರಸಾರಿಸಲಾರಂಭಿಸಿದವು. ಸಾಧ್ಯಾಸಾಧ್ಯತೆಯ ಬಗ್ಗೆ ಪ್ಯಾನಲ್ ಡಿಸ್‌ಕಷನ್ ಏರ್ಪಡಿಸಿ ತಮ್ಮದೇ ವಾದ ಮಂಡಿಸಿದವು. ವೆಂಕಟೇಶನ ರೆಸಾರ್ಟ್, ಲೇಕ್‌ವ್ಯೂನ ಪಕ್ಷಿನೋಟ, ಗಂಧದ ಬಾಗಿಲಿನ ಕೆತ್ತನೆಯ ಅವಲೋಕನ, ಅದರ ಸುಗಂಧದ ಬಗ್ಗೆ ತಜ್ಞರಿಂದ ಆಸ್ವಾದನೆಯ ವರದಿ ಎಲ್ಲ ಬಿತ್ತರಗೊಂಡವು.

ಎಲೆಮರೆಯ ಕಾಯಿಯಂತಿದ್ದ ಬಾಗಿಲ ಮೇಲೆ ಟಿ.ವಿ. ಕ್ಯಾಮೆರಾಗಳ ಬೆಳಕು ಬಿದ್ದ ಮೇಲೆ ಯಾರಯಾರದೋ ಕಣ್ಣುಗಳನ್ನು ಕುಕ್ಕಲಾರಂಭಿಸಿತು. ಒಂದು ಮಧ್ಯರಾತ್ರಿ, ಕಾವಲಿಗಿದ್ದ ನಾಲ್ಕೈದು ಆಳುಗಳು ಒಳಗೆ ಮಲಗಿದ್ದಂತೆಯೇ ಯಾವುದೋ ಸದ್ದು ಅವರನ್ನು ಬೆಚ್ಚಿಬೀಳಿಸಿದರೂ, ನೀರೆತ್ತುವ ಮೋಟಾರಿನದಿರಬಹುದೆಂದು ಹಾಗೇ ಅರೆನಿದ್ದೆಯಲ್ಲಿ ಗುಸುಗುಟ್ಟುತ್ತಿದ್ದರು. ಆದರೆ ಢಬಾರನೆ ಗಂಧದ ಬಾಗಿಲು ಹಿಂದಕ್ಕೆ ಬೀಳುತ್ತಿದ್ದಂತೆಯೇ ಒಳಗಿದ್ದವರು ಭಯಭೀತರಾಗಿ ಎಗರಿಬಿದ್ದರು. ಜನ ಒಳಗಿರುವುದರ ಅರಿವಿರದ ಕಳ್ಳರಿಗೆ ಇವರು ತಮ್ಮ ಮೇಲೇ ಆಕ್ರಮಣ ಮಾಡಲು ಎಗರಿದ್ದಿರಬಹುದೆನಿಸಿ, ಯಂತ್ರಚಾಲಿತ ಗರಗಸವನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು.

ವಿಷಯ ತಿಳಿದು ಕೇಸಿಗೆಂದು ಬೆಂಗಳೂರಿಗೆ ಹೋಗಿದ್ದ ವೆಂಕಟೇಶ ಬಂದು ನೋಡುತ್ತಾನೆ: ಬಾಗಿಲು ಹಾರುಬಡಿದಿದೆ. ಕಳ್ಳರು ಹಿಂಜಸ್ ಕಡೆಗೆ ಎರಡು ಇಂಚು, ಟವರ್‌ಬೋಲ್ಟ್–ಲಾಕ್ ಕಡೆಗೆ ನಾಲ್ಕು ಇಂಚು ಬಿಟ್ಟು ಬಂದಷ್ಟು ಬರಲಿ ಎಂದು ಮೇಲಿನಿಂದ ಕೆಳಕ್ಕೆ ನೀಟಾಗಿ ಕತ್ತರಿಸಿಬಿಟ್ಟಿದ್ದಾರೆ. ಬಾಗಿಲಮೇಲೆ ಕೆತ್ತಿದ್ದ ನವಿಲಿನ ರೆಕ್ಕೆಗಳೂ ಕತ್ತರಿಸಿಹೋಗಿವೆ.

ದುಃಖ ತಡೆಯಲಾರದೆ ಅಳು ಬರುವಂತಾಯಿತು. ಆಕ್ರೋಶದಲ್ಲಿ ಪೊಲೀಸ್ ಕಂಪ್ಲೆಂಟ್ ಕೊಡಬೇಕೆಂದುಕೊಂಡ. ಆದರೆ ಈ ವ್ಯವಸ್ಥೆಯಲ್ಲಿ ಈಗ ಅನುಭವಿಸುತ್ತಿರುವುದೇ ಸಾಕು, ಮತ್ತೆ ಪೊಲೀಸು, ಕೋರ್ಟು ಎಂಬುದೆಲ್ಲ ರೇಜಿಗೆಯೆನಿಸಿ ಬಡಗಿಯನ್ನು ಕರೆಸಿ ಯಥಾಸ್ಥಿತಿಯಲ್ಲಿ ಕೂರಿಸಿ, ಹಿಂದಿನಿಂದ ನಾಲ್ಕೈದು ಕಬ್ಬಿಣದ ಪಟ್ಟಿಗಳನ್ನು ಬಡಿದು, ಮುರಿದ ಮೂಳೆಗೆ ರಾಡು ಹಾಕುವಂತೆ ಬೋಲ್ಟ್‌–ನಟ್ ಹಾಕಿಸಿದ. ತೇಪೆ ಮುಚ್ಚಿಸಿ ಪಾಲೀಷು ಮಾಡಿಸಿದ. ಏನೇ ಮಾಡಿದರೂ ಐಬು ಐಬೇ ಅನಿಸಿತು. ಸದ್ಯಕ್ಕೆ ಕೋರ್ಟಿನ ಕೇಸು ಮುಗಿಯಲಿ, ಆಮೇಲೆ ಇಂಥದೇ ಇನ್ನೊಂದು ಮಾಡಿಸಿ ಕೂರಿಸಿದರಾಯ್ತೆಂದು ಸಮಾಧಾನಿಸಿಕೊಂಡ. ಆದರೆ ಮತ್ತೆ ಹೊಸ್ತಿಲ ಸಮೇತ ಕದಿಯಲಾರರೆಂಬುದಕ್ಕೆ ಏನು ಗ್ಯಾರಂಟಿ? ಫ್ಯಾಬ್ರಿಕೇಷನ್ನಿನವರಿಗೆ ಕರೆಸಿ, ದಪ್ಪ ಗೇಜಿನ ಕಬ್ಬಿಣದ ಗೇಟುಗಳನ್ನು ಮಾಡಿಸಿ ಬಂದೋಬಸ್ತಾಗಿ ಫಿಕ್ಸ್ ಮಾಡಿಸಿಬಿಟ್ಟ.

ಅತ್ತ, ಉಚ್ಛನ್ಯಾಯಾಲಯವು ಮುನ್ಸಿಫ್‌ಕೋರ್ಟಿನ ತೀರ್ಪು, ಸೆಷನ್ಸ್‌ಕೋರ್ಟಿನ ತೀರ್ಪುಗಳನ್ನೆಲ್ಲ ಪರಿಗಣಿಸಿ, ಎಲ್ಲ ಸಾಕ್ಷಿಗಳನ್ನು ಕೂಲಂಕಷವಾಗಿ ವಿಚಾರಣೆಗೆ ಒಳಪಡಿಸಿತು. ಅವನು ಹುಟ್ಟಿದಾಗಿನಿಂದ ಊರ ಬಿಟ್ಟು ಓಡಿಹೋಗಿದಾಗಿನವರೆಗೆ ಕೆಲವರು ಹೇಳಿದರೆ, ಇನ್ನೂ ಕೆಲವರು ಅವನು ಇಪ್ಪತ್ತು ವರ್ಷದ ಮೇಲೆ ಊರಿಗೆ ಬಂದ ನಂತರದ ಕಥೆ ಹೇಳಿದರು. ಮಧ್ಯೆಯ ಕಾಲವನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ತುಂಬಿದ. ಹದಿಮೂರು ವರ್ಷದವನಿದ್ದಾಗ ದನ ಕಾಯುವಾಗ ಕಾಡಿನ ಒಳಗನ್ನೆಲ್ಲ ಅರಿತಿದ್ದ ವೆಂಕಟೇಶ, ಗಂಧದ ಕಳ್ಳಸಾಗಣೆದಾರರ ಜೊತೆ ಸೇರಿ ಸ್ಮಗ್ಲರ್ ಆಗಿದ್ದಾನೆಂದು ವಾದಿಸಿದಾಗ ಮಾತ್ರ ಜೈಲಿಗೆ ಹೋದರೂ ಪರವಾಗಿಲ್ಲ, ಅವನನ್ನು ಕೊಚ್ಚಿಹಾಕಿಬಿಡಬೇಕೆನ್ನುವಷ್ಟು ಕೋಪಬಂದಿತ್ತು. ಅಲ್ಲದೆ ಆನೆದಂತದ ಕಳ್ಳಸಾಗಣೆಯಲ್ಲೂ, ಮುಂಬಯಿಯ ಅಂಡರ್‌ಗ್ರೌಂಡ್‌ನ ಸಂಪರ್ಕ ಇರುವ ನೂರಾರು ಕೋಟಿ ಬೆಲೆಬಾಳುವ ಅಂತಾರಾಷ್ಟ್ರೀಯ, ಕುಖ್ಯಾತ ಕಳ್ಳಸಾಗಣೆದಾರನನ್ನಾಗಿ ಪ್ರೊಜೆಕ್ಟ್ ಮಾಡಿದಾಗಲಂತೂ ಕಟಕಟೆಯಲ್ಲೇ ಕಟಕಟನೆಂದು ಹಲ್ಲುಕಡಿದ. ಲಾಡ್ಜಿನ ಓನರ್‌ನ್ನು ಕೊಲೆಮಾಡಿ ಆಸ್ತಿಯನ್ನೆಲ್ಲ ಕಬಳಿಸಿ ಶ್ರೀಮಂತನಾಗಿರುವುದಾಗಿ ವಾದಿಸಿದಾಗ ಇವನ ಕಡೆ ಲಾಯರ್ರು, ‘ಅಬ್ಜೆಕ್ಷನ್ ಯುವರ್ ಆನರ್’ ಎಂಬುದನ್ನು ಬಿಟ್ಟು ಮತ್ತೇನೂ ಮಾತನಾಡದಾಗಿದ್ದ. ತನ್ನ ಮಾತಿನ ಮಧ್ಯೆ ಬಳಸುವ ಸ್ಪಷ್ಟ ಉಚ್ಚಾರದ ಹಿಂದಿ, ಇಂಗ್ಲಿಷಿನ ಉದಾಹರಣೆ ನೀಡಿದ ಸರ್ಕಾರಿ ವಕೀಲ, ಈತ ಹೆಬ್ಬೆಟ್ಟು ಅಂತಲೂ, ಕಾಳಸಂತೆಕೋರರ ಜತೆ ಸೇರಿ ಮಾತನಾಡುವುದನ್ನು ಕಲಿತಿರುವುದೆಂತಲೂ, ಬೇಕಾದರೆ ಒಂದೇ ಒಂದು ಸಾಲು ಇಂಗ್ಲಿಷು ಬರೆಸಿನೋಡಿ ಎಂದು ಸವಾಲು ಹಾಕಿ, ಆತ ಹುಟ್ಟಿದಾಗಿನಿಂದ ಈವರೆಗಿನ ಜನ್ಮ ಜಾಲಾಡಿಬಿಟ್ಟ. ಅಂತಿಮವಾಗಿ ಬಾಗಿಲು–ಚೌಕಟ್ಟನ್ನು ಕೀಳಿಸಿ ಸರ್ಕಾರ ವಶಪಡಿಸಿಕೊಳ್ಳಬೇಕೆಂತಲೂ, ಅಪರಾಧಿಗೆ ಕಠಿಣಶಿಕ್ಷೆ ನೀಡಬೇಕಂತಲೂ ಘನ ನ್ಯಾಯಾಲಯವನ್ನು ಕೋರಿಕೊಂಡು ವಾದ ಮುಗಿಸಿದ.

ಎಲ್ಲದಕ್ಕೂ ತಲೆದೂಗಿದ ನ್ಯಾಯಾಧೀಶರು ಮುಂದಿನ ತಿಂಗಳಿಗೆ ಜಡ್ಜ್‌ಮೆಂಟನ್ನು ಕಾದಿರಿಸಿ ಮುಂದೂಡಿದಾಗ ಇವನ ಹೃದಯಬಡಿತ ಸಾವಿರ ತಲುಪಲಾರಂಭಿಸಿತು. ತಾನು ಮಾಡಿದ ತಪ್ಪಾದರೂ ಏನು? ಯಾರ ಸುದ್ದಿಗೂ ಹೋಗದೆ ನಮ್ಮ ಪಾಡಿಗೆ ನಾವಿರುತ್ತೇವೆಂದರೂ ಈ ಜನ ಬಿಡುವುದಿಲ್ಲವಲ್ಲ ಎಂದು ಪರಿತಪಿಸಿದ. ಅವನಿಗೆ ಹುಚ್ಚುಹಿಡಿದಂತಾಗಲಾರಂಭಿಸಿತು.

ಮುಂಬಯಿಗೆ ಹೋಗಲಾಗದೇ ತೀರ್ಪು ಬರುವವರೆಗೆ ಬೆಂಗಳೂರಿನಲ್ಲೇ ಉಳಿದುಕೊಂಡ. ಯಾರು ಯಾರೋ ಮಿನಿಸ್ಟರುಗಳಿಂದ ಫೋನು ಮಾಡಿಸಿ ಜಡ್ಜ್ ಮೇಲೆ ಪ್ರಭಾವ ಬೀರಿಸಲು ನೋಡಿದ. ಅವರಿಗೆ ಹಣದ ಆಮಿಷ ತೋರಿಸಲೂ ಪ್ರಯತ್ನಿಸಿ ವಿಫಲನಾದ.

ಜಡ್ಜ್‌ಮೆಂಟ್ ದಿನ ಬಂದೇಬಿಟ್ಟಿತು....
ಕಟಕಟೆಯಲ್ಲಿ ನಿಂತ ವೆಂಕಟೇಶನಿಗೆ ‘ಏನಾದರೂ ಹೇಳುವುದು ಬಾಕಿ ಇದೆಯೇ’ ಎಂದು ನೇಣುಗಂಬಕ್ಕೆ ಏರಿಸುವ ಮುನ್ನ ಕೊನೆಯ ಆಸೆ ಕೇಳುವಂತೆ ಕೇಳಿದರು. ‘ತಾನು ತಪ್ಪು ಮಾಡಿಲ್ಲ ಯುವರ್ ಆನರ್’ ಎಂದು ಆರಂಭಿಸಿದವನು, ತನ್ನ ಬದುಕಿನ ದುರಂತ ಕಥೆಯನ್ನು ಯಥಾವತ್ತಾಗಿ ವಿವರಿಸಿ, ತಾನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಷ್ಟಪಟ್ಟು ಮೇಲೆ ಬಂದಿರುವುದಾಗಿಯೂ, ಯಾವುದೇ ಕಾನೂನುಬಾಹಿರ ಚಟುವಟಿಕೆ ಮಾಡಿಲ್ಲವೆಂಬುದಾಗಿಯೂ ಅಲವತ್ತುಕೊಂಡ. ಗೊತ್ತಿದ್ದೋ ಗೊತ್ತಿಲ್ಲದೆಯೋ ಸರ್ಕಾರಕ್ಕೆ  ನಷ್ಟವುಂಟಾಗಿದ್ದರೆ, ಬೇಕಾದರೆ ಪರಿಹಾರವಾಗಿ ಒಂದು ಹತ್ತು ಲಕ್ಷ ರೂಪಾಯಿ ವಂತಿಗೆ ಕೊಡುವುದಾಗಿಯೂ, ದಯವಿಟ್ಟು ಜೈಲುಶಿಕ್ಷೆ ವಿಧಿಸದಂತೆಯೂ ಕೋರಿಕೊಂಡ.

ಜಡ್ಜ್ ಸಾಹೇಬರು ಮುಗುಳ್ನಕ್ಕರು.

ಪಬ್ಲಿಕ್ ಪ್ರಾಸಿಕ್ಯೂಟರ್‌ನ ವಾದ, ಹಿರಿಯ ವಕೀಲ ತಿಮ್ಮರಾಯಪ್ಪನವರ ಪ್ರತಿವಾದಗಳನ್ನು ಆಲಿಸಿ, ಅವುಗಳ ಪರಾಪರ ವಿಚಾರಗಳನ್ನು ಪಟ್ಟಿಮಾಡಿ ಆರೋಪಿಗೆ ಜೈಲುಶಿಕ್ಷೆಯಿಂದ ಖುಲಾಸೆ ಮಾಡಿದರು.

ವೆಂಕಟೇಶನ ಮುಖ ಅರಳಿತು.

ಆದರೆ ಸಾಂಕೇತಿಕವಾಗಿ ಒಂದು ರೂಪಾಯಿ ದಂಡ ಕಟ್ಟಬೇಕೆಂದೂ ಆದೇಶಿಸಿದರು!

ವೆಂಕಟೇಶನ ಮುಖ ಕಪ್ಪಿಟ್ಟಿತು.

‘ಲಕ್ಷ ರೂಪಾಯಿಯೋ ಕೋಟಿ ರೂಪಾಯಿಯೋ ಬೇಕಾದರೆ ಸುಮ್ಮನೆ ಕಟ್ಟುತ್ತೇನೆ, ಆದರೆ ಒಂದು ರೂಪಾಯಿ ದಂಡ ಅಂತ ಕರೀಬೇಡಿ ಬುದ್ದೀ....’ ಎಂದು ಅಂಗಲಾಚಿದ.

ಇದಾವುದನ್ನೂ ಗಣಿಸದ ನ್ಯಾಯಾಧೀಶರು, ಜಡ್ಜ್‌ಮೆಂಟಿನ ಪ್ರತಿಗೆ ತಮ್ಮ ಸಹಿಯನ್ನು ಹಾಕಿ, ಕೊನೆಯ ಚುಕ್ಕೆಯನ್ನು ಇಂಕುಪೆನ್ನಿನ ಮುಳ್ಳು ಮುರಿಯುವಂತೆ ಗುದ್ದಿ, ಇದೇ ತಮ್ಮ ಅಂತಿಮ ತೀರ್ಪು ಎಂಬಂತೆ ಎದ್ದು ಕೈಮುಗಿದು ಹೊರಟುಹೋದರು....

ಕುತೂಹಲದಿಂದ ತೀರ್ಮಾನಕ್ಕಾಗಿ ಕಾದಿದ್ದವರೆಲ್ಲ, ‘ಜುಜುಬಿ ಒಂದು ರೂಪಾಯಿ ದಂಡವಂತೆ...’ ಎನ್ನುತ್ತ, ಇದು ಅಂಥ ಮಹತ್ವದ ತೀರ್ಮಾನವೇನಲ್ಲವೆನ್ನುವಂತೆ ಅಪಹಾಸ್ಯದ ನಗೆ ನಗುತ್ತ, ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಿದರು.

ವೆಂಕಟೇಶ ನಿಂತಿದ್ದ ಕಟಕಟೆಯ ಹಿಡಿಗಳು ಅವನ ಬಿಗಿಹಿಡಿತಕ್ಕೆ ಕಟಕಟನೆಂದು ಮುರಿದುಹೋದವು.

ಜೇಬಿನಿಂದ ಒಂದು ರೂಪಾಯಿ ಕಾಯಿನ್ ತೆಗೆದ.

ಎಡಗೈಯಲ್ಲಿ ಮುರಿದ ಕಟಕಟೆಯ ಒಂದು ಮರದ ತುಂಡು, ಬಲಗೈಯಲ್ಲಿ ಒಂದು ರೂಪಾಯಿ ಕಾಯಿನ್.

ಎಡಗೈಯೆತ್ತಿ ಗಂಧದ ಬಾಗಿಲು ಬೇಕಾ?, ಬಲಗೈಯೆತ್ತಿ ‘ಒಂದು ರೂಪಾಯಿ ಬೇಕಾ? ಗಂಧದ ಬಾಗಿಲು ಬೇಕಾ? ಒಂದು ರೂಪಾಯಿ ಬೇಕಾ? ಗಂಧದ ಬಾಗಿಲು ಬೇಕಾ? ಎಂದು ಪ್ರಲಾಪಿಸುತ್ತ, ತನ್ನನ್ನು ಯಾರೂ ಕೇಳದ ಬೆಂಗಳೂರಿನ ಬೀದಿಬೀದಿಗಳನ್ನೆಲ್ಲ ಹುಚ್ಚನಂತೆ ಸುತ್ತಲಾರಂಭಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT