ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ಆಧಾರ ನಾಟಿಕೋಳಿ ಸಾಕಣೆ

Last Updated 27 ಮೇ 2017, 9:40 IST
ಅಕ್ಷರ ಗಾತ್ರ

ಮಾಡಬಾಳ್‌ (ಮಾಗಡಿ):ಯುವಕರು ಸರ್ಕಾರಿ ನೌಕರಿಯನ್ನೇ ನಂಬಿ ಕೂರುವ ಬದಲು ನಾಟಿಕೋಳಿ ಸಾಕುವುದರಿಂದ ನಾಲಿಗೆಗೆ ರುಚಿ ನೀಡುವುದರೊಂದಿಗೆ ನಗದು ಗಳಿಸಿ ಕುಬೇರರಾಗಬಹುದು ಎಂಬುದು ಹೋಬಳಿಯ ಕಿಲ್ಲೇದಾರನ ಪಾಳ್ಯದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರದಿಂದ ನಾಟಿಕೋಳಿ ಸಾಕಿರುವ ಬಿಳಿಯಪ್ಪ ಅವರ ಅನಿಸಿಕೆಯಾಗಿದೆ.

ಮಾಗಡಿಯ ಶುಕ್ರವಾರದ ಸಂತೆಯಲ್ಲಿ  ಮಾರಾಟಕ್ಕೆ ಇಟ್ಟರೆ, ಕೋಳಿಯೊಂದಕ್ಕೆ ಕನಿಷ್ಠ ₹750ರಿಂದ 850 ಸಿಗುತ್ತದೆ. ನಾಲ್ಕೈದು ತಿಂಗಳಿಗೆ ಕನಿಷ್ಠ ₹25 ಸಾವಿರದಿಂದ 30 ಸಾವಿರ ಗಳಿಸಬಹುದು. ನಾಟಿ ಕೋಳಿಗೆ ಇಂದಿಗೂ ಭಾರಿ ಭೇಡಿಕೆ ಇದೆ ಎಂದರು.

ಇಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗದಿದ್ದರೆ, ಕೋಳಿಮರಿ ಖರೀದಿಸಿರುವ ಮೈಸೂರಿನ ಸಂಸ್ಥೆಗೆ ಧರ್ಮಸ್ಥಳದ ಸಂಸ್ಥೆಯ ಒಪ್ಪಂದದಂತೆ ಮಾರಾಟ ಮಾಡುತ್ತೇವೆ. ನಾಟಿಕೋಳಿ ಸಾಕಲು ಕನಿಷ್ಠ 10ರಿಂದ 13 ಸಾವಿರ ಖರ್ಚಾ ಗುತ್ತದೆ ಎಂದು ಬಿಳಿಯಪ್ಪ ವಿವರಿಸಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ಶಶಿಕುಮಾರ್‌ ಮಾತನಾಡಿ, ತಾಲ್ಲೂಕಿನಲ್ಲಿ 500 ಯುವಕರಿಗೆ ತಲಾ 50ರಂತೆ ನಾಟಿಕೋಳಿ ಮರಿ ಸಾಕುವುದಕ್ಕೆ ನೀಡಿದ್ದೇವೆ. ಆಹಾರ ಖರೀದಿಗೆ ಸಂಸ್ಥೆಯ ವತಿಯಿಂದ ತಲಾ ₹5 ಸಾವಿರ ಸಾಲ ನೀಡಿದ್ದೇವೆ ಎಂದು ಅವರು ತಿಳಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಗ್ರಾಮೀಣ ಯುವಕರ ಸಬಲೀಕರಣಕ್ಕೆ ನಾಟಿಕೋಳಿ ಸಾಕುವ ಯೋಜನೆ ಜಾರಿಗೊಳಿಸಲಾಗಿದ್ದು, ಉತ್ತಮವಾದ ಪ್ರೋತ್ಸಾಹವಿದೆ ಎಂದರು.

ಹುಟ್ಟಿದ ಊರುಬಿಟ್ಟು ನಗರದತ್ತ ವಲಸೆ ಹೋಗುವ ಬದಲು ನಾಟಿಕೋಳಿ ಸಾಕುವುದರಿಂದ ಸ್ವಾಭಿಮಾನಿಗಳಾಗಿ ಬದುಕಬಹುದು ಎಂಬ ಆತ್ಮವಿಶ್ವಾಸ ಯುವಜನರಲ್ಲಿ ಬೆಳೆಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಬಾಬುನಾಯಕ್‌ ವಿವರಿಸಿದರು. ಬಿಳಿಯಪ್ಪ ಸಾಕಿರುವ ನಾಟಿಕೋಳಿ  ನೋಡಿದೊಡನೆ, ಮಾಂಸಪ್ರಿಯರ ಬಾಯಲ್ಲಿ ನೀರೂರುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ಗಿರೀಶ್‌.

ನಾಟಿಕೋಳಿ ಸಾಕಿ ನಾಲ್ಕು ಕಾಸು ನೋಡಿ ಎಂದು ರೈತ ಬಾಲಿಚಿಕ್ಕಣ್ಣ ತಿಳಿಸಿದರು. ರುಚಿಯಾಗಿರುತ್ತದೆ. ಇದರ ಮೊಟ್ಟೆಯಂತೂ ಅಮೃತ ಸಮಾನ ಎಂಬುದು ನರಸಿಂಹಯ್ಯ ಅವರ ಅನಿಸಿಕೆ.         

ಸಾಗಿ ಬಂದ ಹಾದಿ ..
‘ರೈತರ ತೋಟದಲ್ಲಿ ಬೆಳೆದಿದ್ದ ಎಳನೀರನ್ನು ಸೈಕಲ್‌ ಮೇಲೆ ಕಟ್ಟಿಕೊಂಡು ಮಾಗಡಿ ಪೇಟೆಗೆ ಹೋಗಿ ಇಡೀ ದಿನ ಸುತ್ತಿಕೊಂಡು ಎಳನೀರು ಮಾರುತ್ತಿದ್ದೆ. ಹೊಟ್ಟೆ ಬಟ್ಟೆಗೆ ಸಾಕಾಗು ತ್ತಿರಲಿಲ್ಲ.

ಕೊನೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ಶಶಿಕುಮಾರ್‌ ಅವರು ನನ್ನನ್ನು ಮಾತನಾಡಿಸಿ ನಾಟಿ ಕೋಳಿ ಸಾಕುವ ವಿಧಾನ ತಿಳಿಸಿದರು. 50 ನಾಟಿಕೋಳಿ ಮರಿಗಳನ್ನು ಸಾಲದ ರೂಪದಲ್ಲಿ ನೀಡಿದರು.

ವಾರಕ್ಕೊಮ್ಮೆ ಸಂಸ್ಥೆಗೆ ₹10ರಂತೆ, ಸಾಲ ತೀರಿಸುವುದು, ನಾಲ್ಕೈದು ತಿಂಗಳು ಕೋಳಿ ಮರಿಗಳನ್ನು ಸಾಕಿದರೆ ಬೆಳೆಯುತ್ತವೆ’ ಎಂದು ಬಿಳಿಯಪ್ಪ ಸಾಗಿ ಬಂದ ಹಾದಿ ಬಗ್ಗೆ ಮೆಲುಕು ಹಾಕಿದರು.

* * 

ನಾಟಿಕೋಳಿ ಸಾಕಿದವರನ್ನು  ಗೌರವಿಸಲಾಗುತ್ತಿದೆ. ಪ್ರಾಮಾಣಿಕತೆಯಿಂದ ನಿತ್ಯ ಸ್ವಲ್ಪ ಸಮಯ ವಿನಿಯೋಗಿಸಿದರೆ ಸಾಕು ನಾಟಿಕೋಳಿಗಳಿಗೆ ಬೆಲೆ ಸಿಗಲಿದೆ
ಶಶಿಕುಮಾರ್‌
ಕೃಷಿ ಅಧಿಕಾರಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT