ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾಮದು! ಇಳಿದು ಬರಲಿ ನೀರಾಪೇಟೆ...

Last Updated 27 ಮೇ 2017, 19:30 IST
ಅಕ್ಷರ ಗಾತ್ರ

‘ನಮ್ಮ ದೇಶಕ್ಕೆ ಮಹಾತ್ಮಾ ಗಾಂಧಿಯನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಗೊತ್ತಾ ಸಾರ್’ ಎಂದು ಪ್ರಶ್ನೆ ಮಾಡಿದರು ಬಳ್ಳಾರಿಯ ‘ಸುಕೊ ಬ್ಯಾಂಕ್’ ಸಂಸ್ಥಾಪಕ ಅಧ್ಯಕ್ಷ ಮನೋಹರ ಮಸ್ಕಿ.

ನಾನು ಥಟ್ಟನೆ ಅದನ್ನು ಅಲ್ಲಗಳೆದೆ. ‘ಮಹಾತ್ಮಾ ಗಾಂಧಿ ಮತ್ತು ಗಾಂಧಿತತ್ವ ಭಾರತದಿಂದ ರಫ್ತಾಗಬೇಕು. ರಫ್ತಾಗಿದೆ. ರಫ್ತಾಗುತ್ತಲೇ ಇದೆ’ ಎಂದೆ. ‘ಇಲ್ಲ ಸಾರ್, ಈಗ ನೀರಾ ಹೆಸರಿನಲ್ಲಿ ಗಾಂಧಿ ಆಮದು ಮಾಡಿಕೊಳ್ಳಲಾಗುತ್ತಿದೆ’ ಎಂದರು.

‘ಅಯ್ಯೋ, ಗಾಂಧಿಯನ್ನು ಆಮದು ಮಾಡಿಕೊಳ್ಳಲು ಬೇರೆ ಯಾವುದೇ ವಸ್ತುವೂ ಸಿಗಲಿಲ್ವಾ? ನೀರಾ ಹೆಸರಿನಲ್ಲಿ ಗಾಂಧಿ ಭಾರತಕ್ಕೆ ಬರುತ್ತಿದ್ದಾರಾ?’ ಎನ್ನುವ ಅಚ್ಚರಿ ನನ್ನದು.

‘ಹೌದು, ಫಿಲಿಪ್ಪೀನ್ಸ್ ದೇಶದ ನೀರಾ ಉತ್ಪನ್ನಕ್ಕೆ ಮಹಾತ್ಮಾ ಗಾಂಧಿ ಅವರೇ ಬ್ರ್ಯಾಂಡ್ ಅಂಬಾಸಡರ್. ನೀರಾ ಉತ್ಪನ್ನಗಳ ಮೇಲೆ ಗಾಂಧಿ ಚಿತ್ರವನ್ನು ಹಾಗೂ ನೀರಾ ಬಗ್ಗೆ ಗಾಂಧಿ ಹೇಳಿದ ಮಾತುಗಳನ್ನೂ ಹಾಕಿದ್ದಾರೆ. ಅಲ್ಲಿಂದ ನಮ್ಮ ದೇಶಕ್ಕೆ ನೀರಾ ಉತ್ಪನ್ನಗಳು ಆಮದಾಗುತ್ತವೆ. ಗಾಂಧಿ ಮಾತುಗಳು ಅವರಿಗೆ ಅರ್ಥವಾಗಿದೆ. ಅದನ್ನು ಅವರು ಬಳಸಿಕೊಳ್ಳುತ್ತಿದ್ದಾರೆ. ಆದರೆ ಕರ್ನಾಟಕದ ಸರ್ಕಾರಕ್ಕೆ ಇನ್ನೂ ಇದು ಅರ್ಥವಾಗಿಲ್ಲ’ ಎಂದು ಅವರು ವಿಷಾದಿಸಿದರು.

ನೀರಾ ಉತ್ಪನ್ನಕ್ಕೆ ಗಾಂಧೀಜಿ ಅವರನ್ನೇ ಯಾಕೆ ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಲಾಯಿತು ಎನ್ನುವುದಕ್ಕೂ ಫಿಲಿಪ್ಪೀನ್ಸ್‌ನವರು ವಿವರ ನೀಡಿದ್ದಾರೆ. ಗಾಂಧೀಜಿ ಅವರ ಪ್ರಕಾರ, ವಿಶ್ವದ ಬಡತನ ನಿವಾರಣೆಗೆ ನೀರಾ ಉತ್ಪನ್ನಗಳೇ ಉತ್ತರ.

‘ತೆಂಗಿನ ನೀರಿನಿಂದ ಜೇನುತುಪ್ಪಕ್ಕೆ ಸಮನಾದ ಸಕ್ಕರೆ ತಯಾರಿಸಬಹುದು. ಇದು ಸಂಪೂರ್ಣ ನೈಸರ್ಗಿಕ. ಈ ಸಕ್ಕರೆ ಯಾವುದೇ ಕಾರ್ಖಾನೆಯಲ್ಲಿ ತಯಾರಾಗುವುದಿಲ್ಲ. ರೈತರು ಅತ್ಯಂತ ಸುಲಭವಾಗಿ ಸ್ಥಳೀಯವಾಗಿಯೇ ಈ ಸಕ್ಕರೆಯನ್ನು ತಯಾರಿಸಬಹುದು. ವಿಶ್ವದ ಬಡತನವನ್ನು ಹೋಗಲಾಡಿಸಲು ಇದೊಂದು ಉತ್ತಮ ಮಾರ್ಗ. ಕಡು ಬಡತನದ ನಿರೋಧಕ ಇದು’ ಎಂದು ಗಾಂಧೀಜಿ ಅವರು ಮೇ 3, 1939ರ ‘ಹರಿಜನ’ ಪತ್ರಿಕೆಯಲ್ಲಿ ಬರೆದಿದ್ದರು. ಫಿಲಿಪ್ಪೀನ್ಸ್ ತನ್ನ ನೀರಾ ಉತ್ಪನ್ನಗಳ ಮೇಲೆ ಆ ಮಾತುಗಳನ್ನು ಬಳಸಿಕೊಂಡಿದೆ.

ಮಹಾತ್ಮಾ ಗಾಂಧೀಜಿ ಅವರು ಆಹಾರದ ಬಗ್ಗೆಯೂ ಸಾಕಷ್ಟು ಸಂಶೋಧನೆ ನಡೆಸಿದ್ದರು. ಆಹಾರದಲ್ಲಿ ಅವರು ಬಹಳ ಕಟ್ಟುನಿಟ್ಟು. ಅವರ ನಿತ್ಯದ ಆಹಾರ ಎಂದರೆ ಒಂದು ಲೀಟರ್ ಆಡಿನ ಹಾಲು, 150 ಗ್ರಾಂ ಗೋಧಿ ಮತ್ತು ಅನ್ನ, 75 ಗ್ರಾಂ ಸೊಪ್ಪು, 125 ಗ್ರಾಂ ತರಕಾರಿ, 25 ಗ್ರಾಂ ತರಕಾರಿ ಸೊಪ್ಪು, 40 ಗ್ರಾಂ ತುಪ್ಪ, 50 ಗ್ರಾಂ ನೀರಾ ಸಕ್ಕರೆ.

ನೀರಾ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟಕ್ಕೆ ಕರ್ನಾಟಕದಲ್ಲಿ ಇನ್ನೂ ಅನುಮತಿ ಸಿಕ್ಕಿಲ್ಲ. ಇದಕ್ಕಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆದಿದ್ದರೂ ಪ್ರಯೋಜನವಾಗಿಲ್ಲ. ನೀರಾ ಇಳಿಸಲು ಅನುಕೂಲವಾಗುವಂತೆ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದರೂ ಅದಿನ್ನೂ ಕಾಯ್ದೆಯಾಗಿ ಜಾರಿಗೆ ಬಂದಿಲ್ಲ. ಕರ್ನಾಟಕದಲ್ಲಿ ನೀರಾ ಕುರಿತಂತೆ ಅಧ್ಯಯನ ನಡೆಸಲು ಸಮಿತಿಯೊಂದನ್ನು ರಚಿಸಲಾಗಿತ್ತು. ಮನೋಹರ ಮಸ್ಕಿ ಅವರು ಅದರ ಸಂಚಾಲಕರಾಗಿದ್ದರು. ತಮ್ಮ ಸಂಬಂಧಿಯ ಮದುವೆಯಲ್ಲಿ ನೀರಾ ಹಂಚಿದವರು ಅವರು. ‘ನೀರಾ ಇಳಿಸಲು ಅನುಮತಿ ನೀಡಬೇಕು’ ಎಂದು ಹೋರಾಟದಲ್ಲಿ ತೊಡಗಿಕೊಂಡವರು. ದೇಶದ ಬೇರೆ ಬೇರೆ ಭಾಗಗಳಿಗೆ ತೆರಳಿ ನೀರಾ ಬಗ್ಗೆ ಅಧ್ಯಯನ ನಡೆಸಿದವರು.

ನೀರಾ ಅತ್ಯಂತ ಶಕ್ತಿಯುತ ಆಹಾರ. ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಹೆಚ್ಚು. ಕೊಬ್ಬು ಕಡಿಮೆ. ನೀರಾ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ಚೇತೋಹಾರಿ. ವಿಟಮಿನ್ ಎ, ಬಿ, ಸಿ ಇರುವ ಏಕೈಕ ಪಾನೀಯ. ಕಬ್ಬಿಣದ ಅಂಶ ಹೆಚ್ಚು. ಅಸ್ತಮಾ, ಟಿಬಿ, ಮೂಲವ್ಯಾಧಿಗೆ ಇದು ಔಷಧಿ. ಜಾಂಡೀಸ್ ನಿರೋಧಕ. ಮಾಂಸಖಂಡ, ಮಿದುಳು ಬೆಳವಣಿಗೆಗೆ ಪೂರಕ. ಕಣ್ಣಿನ ಆರೋಗ್ಯಕ್ಕೂ ಇದು ಒಳ್ಳೆಯದು ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

ನೀರಾ ಅಂದರೆ ಹೆಂಡ ಎಂಬ ಮನೋಭಾವನೆ ನಮ್ಮಲ್ಲಿ ಇದೆ. ನೀರಾವನ್ನು ವಾತಾವರಣಕ್ಕೆ ತೆರೆದಿಟ್ಟರೆ ಅದು ಹೆಂಡವಾಗುತ್ತದೆ. ಆದರೆ ನೀರಾ ಹೆಂಡವಾಗದಂತೆ ಮತ್ತು ಅದನ್ನು ಆರೋಗ್ಯ ಪೇಯವಾಗಿಯೇ ಉಳಿಸಿಕೊಳ್ಳಲು ಸಾಕಷ್ಟು ತಂತ್ರಜ್ಞಾನ ಈಗ ಲಭ್ಯವಿದೆ. ಅದನ್ನು ಬಳಸಿಕೊಂಡರೆ ರಾಜ್ಯದಲ್ಲಿ 7.66 ಲಕ್ಷ ‘ಗ್ರೀನ್ ಕಾಲರ್’ ಉದ್ಯೋಗ ಸೃಷ್ಟಿಸಬಹುದು ಎನ್ನುತ್ತದೆ ಒಂದು ಅಧ್ಯಯನ. ನೀರಾಕ್ಕೆ ಅನುಮತಿ ನೀಡಿದರೆ ವಾರ್ಷಿಕ ₹ 46 ಸಾವಿರ ಕೋಟಿ ಆದಾಯ ಗಳಿಸಬಹುದು. ಇದರಿಂದ ತಲಾದಾಯ ಕೂಡ ಹೆಚ್ಚಾಗುತ್ತದೆ.

ರಾಜ್ಯದಲ್ಲಿ 5.11 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ. 5,87,35,240 ತೆಂಗಿನ ಮರಗಳು ನಮ್ಮಲ್ಲಿವೆ. ವರ್ಷಕ್ಕೆ ಸರಾಸರಿ 7.66 ತೆಂಗಿನಕಾಯಿ ಉತ್ಪಾದನೆಯಾಗುತ್ತದೆ. ಕರ್ನಾಟಕದ 13 ಜಿಲ್ಲೆಗಳಲ್ಲಿ, ಅಂದರೆ – ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಉಡುಪಿ, ದಕ್ಷಿಣಕನ್ನಡ, ರಾಮನಗರ, ದಾವಣಗೆರೆ, ಚಾಮರಾಜನಗರ, ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ತೆಂಗು ಬೆಳೆಯಲಾಗುತ್ತದೆ. ಇಡೀ ದೇಶದಲ್ಲಿಯೇ ಅತ್ಯಂತ ಹೆಚ್ಚು ತೆಂಗು ಬೆಳೆಯುವ ಜಿಲ್ಲೆ ಎಂದರೆ ತುಮಕೂರು. ಒಂದು ಹೆಕ್ಟೇರ್ ಗೆ 150 ಮರದಂತೆ ಒಂದು ಕಾಯಿಗೆ ₹ 10 ರಂತೆ ಲೆಕ್ಕ ಹಾಕಿದರೆ ತೆಂಗಿನಕಾಯಿ ಮಾರಾಟದಿಂದ ಈಗ ರಾಜ್ಯ ₹ 3785 ಕೋಟಿ ಗಳಿಸುತ್ತಿದೆ. ಇದೇ ನೀರಾಕ್ಕೆ ಅನುಮತಿ ನೀಡಿದರೆ ಹತ್ತಿರ ಹತ್ತಿರ ₹ 50 ಸಾವಿರ ಕೋಟಿ ರೂಪಾಯಿ ಆದಾಯ ಗಳಿಸಬಹುದು.

ನೀರಾ ಅನುಮತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವೇ ನೇಮಿಸಿದ ಸಮಿತಿಯ ಅಧ್ಯಯನದ ಪ್ರಕಾರ ನೂರಕ್ಕೆ ಒಂದರಷ್ಟು ಮರಗಳಲ್ಲಿ ನೀರಾ ಇಳಿಸಲು ಅನುಮತಿ ನೀಡಿದರೆ 4599 ಲಕ್ಷ ಲೀಟರ್ ನೀರಾ ಸಿಗುತ್ತದೆ. ಇದರಿಂದ ಸುಮಾರು ₹4600 ಕೋಟಿ ಆದಾಯ ಬರುತ್ತದೆ. ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ₹1150 ಕೋಟಿ ಆದಾಯ ಬರುತ್ತದೆ. ರೈತರಿಗೆ ₹2300 ಕೋಟಿ ಸಿಗುತ್ತದೆ.

ಶೇ. 5ರಷ್ಟು ಮರಗಳಿಗೆ ನೀರಾ ಇಳಿಸಲು ಅನುಮತಿ ನೀಡಿದರೆ 2,29,95 ಲಕ್ಷ ಲೀಟರ್ ನೀರಾ ತೆಗೆಯಬಹುದು. ಇದರಿಂದ ₹22,996 ಕೋಟಿ ಆದಾಯವಿದೆ. ಶೇ. 10ರಷ್ಟಕ್ಕೆ ಅನುಮತಿ ನೀಡಿದರೆ ₹ 46 ಸಾವಿರ ಕೋಟಿ ಆದಾಯ ಗಳಿಸಬಹುದು.

ಒಂದು ಗಿಡಕ್ಕೆ ಕನಿಷ್ಠ 2 ಲೀಟರ್ ನೀರಾವನ್ನು, ವರ್ಷದಲ್ಲಿ 300 ದಿನ ತೆಗೆಯಬಹುದು. ಒಂದು ಲೀಟರ್ ಗೆ ಕನಿಷ್ಠ ₹ 100 ಬೆಲೆ ಇದೆ. ತೆಂಗಿನಕಾಯಿ ಮಾರಾಟದಿಂದ ಸಿಗುವುದಕ್ಕಿಂತ 7 ಪಟ್ಟು ಹೆಚ್ಚು ಆದಾಯ ಸಿಗುತ್ತದೆ.

ನಮ್ಮ ಪಕ್ಕದ ಕೇರಳದಲ್ಲಿ ಈಗಾಗಲೇ ನೀರಾ ಇಳಿಸಲು ಅನುಮತಿ ನೀಡಿದ್ದು, ಕೇರಳದ ನೀರಾ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸಿವೆ. ಕೇರಳದಲ್ಲಿ ಒಂದು ಗಿಡಕ್ಕೆ ತಿಂಗಳಿಗೆ ಸರಾಸರಿ ₹ 2511 ಆದಾಯ ಇದೆ. ಕೇರಳದ ಮಾಧವನ್ ಕುಟ್ಟಿ 17 ಮರಗಳಿಂದ ಮಾಸಿಕ ₹ 87 ಸಾವಿರ ಗಳಿಸುತ್ತಾರೆ.

‘ನೀರಾ ಇಳಿಸಲು ವೈಜ್ಞಾನಿಕ ಮತ್ತು ಆರೋಗ್ಯಕರ ತಂತ್ರಜ್ಞಾನ ಇಲ್ಲ’ ಎಂದು ಸರ್ಕಾರ ಹೇಳುತ್ತಿದೆ. ಆದರೆ ರಾಜ್ಯದ ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಈಗಾಗಲೇ 13 ಕಂಪೆನಿಗಳು ನೋಂದಣಿಯಾಗಿವೆ. ನೀರಾ ಇಳಿಸಲು ಬೇಕಾಗುವ ತಂತ್ರಜ್ಞಾನವನ್ನು ‘ತೆಂಗು ಅಭಿವೃದ್ಧಿ ಮಂಡಳಿ’ ನೀಡುತ್ತಿದೆ. ನೀರಾ ಇಳಿಸುವ ತಂತ್ರಜ್ಞರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ.  

ನೀರಾ ಇಳಿಸಲು ಕುಶಲಕರ್ಮಿಗಳು ಬೇಕು. ಇಂತಹ ತರಬೇತಿ ಪಡೆದುಕೊಂಡ ನೂರಾರು ಮಂದಿ ಈಗ ರಾಜ್ಯದಲ್ಲಿ ಇದ್ದಾರೆ. ರಾಜ್ಯದಲ್ಲಿ ಶೇ. 1ರಷ್ಟು ಮರಗಳಿಂದ ನೀರಾ ಇಳಿಸಲು ಅನುಮತಿ ನೀಡಿದರೆ 76,600 ಕುಶಲಕರ್ಮಿಗಳು ಬೇಕು. ಅಂದರೆ ಅಷ್ಟೊಂದು ಜನಕ್ಕೆ ‘ಗ್ರೀನ್ ಕಾಲರ್’ ಉದ್ಯೋಗ ಲಭ್ಯವಾಗುತ್ತದೆ.

ನಕ್ಷರಸ್ಥರು ಅಥವಾ ಕಡಿಮೆ ಓದಿದವರು ಸಹ ಈ ಕೆಲಸವನ್ನು ಮಾಡಿ ಅತ್ಯುತ್ತಮ ಗಳಿಕೆ ಮಾಡಬಹುದು. ಶೇ. 10ರಷ್ಟು ಮರಗಳಲ್ಲಿ ನೀರಾ ಇಳಿಸಲು ಅನುಮತಿ ನೀಡಿದರೆ ನಮ್ಮ ರಾಜ್ಯಕ್ಕೆ ಬೇಕಾಗುವ ಕುಶಲಕರ್ಮಿಗಳ ಸಂಖ್ಯೆ 7.66 ಲಕ್ಷ. ಅಸ್ಸಾಂ ರಾಜ್ಯದ ನಾಗೋನ್ ಜಿಲ್ಲೆಯ ಅನಾನುಲಕ್ ಅಬ್ದುಲ್ ರಸಾಕ್ ನೀರಾ ಇಳಿಸುವುದರಿಂದ ಮಾಸಿಕ ₹ 54,500 ಗಳಿಸುತ್ತಿದ್ದಾರೆ. ಪಾಲಕ್ಕಾಡಿನ ಸುರೇಶ್, ಕೇರಳದ ಗೋಪಿನಾಥ್ ಮುಂತಾದವರು ಕೇವಲ ನೀರಾ ಇಳಿಸುವುದರಿಂದಲೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಮಹಿಳೆಯರೂ ಕೂಡ ನೀರಾ ಇಳಿಸುವುದರಲ್ಲಿ ಪ್ರವೀಣರಾಗಬಹುದು.

‘ನೀರಾದಲ್ಲಿ ಒಂದಿನಿತೂ ಆಲ್ಕೊಹಾಲ್ ಇಲ್ಲ. ಅದೊಂದು ಆರೋಗ್ಯಪೂರ್ಣ ಪೇಯ. ಲೀಟರ್‌ಗೆ ನೂರು ರೂಪಾಯಿಗೂ ಹೆಚ್ಚು ಹಣ ಕೊಟ್ಟು ನೀರಾವನ್ನು ಹೆಂಡ ಮಾಡಿಕೊಂಡು ಕುಡಿಯುವ ಸಾಹಸಕ್ಕೆ ಹೋಗುವವರು ಕಡಿಮೆ’ ಎನ್ನುವುದು ನೀರಾ ಪರ ವಾದ ಮಾಡುವವರ ಅಭಿಪ್ರಾಯ. ರಾಜ್ಯದ ಆದಾಯವನ್ನು ಹೆಚ್ಚಿಸುವ ತೆಂಗು ರೈತರ ನೆರವಿಗೆ ಬರುವ ಇಚ್ಛೆ ಇದ್ದರೆ ನಮ್ಮ ಅಧಿಕಾರಸ್ಥರು ನೀರಾ ಕುಡಿದೇ ತೀರ್ಮಾನ ಕೈಗೊಳ್ಳಬೇಕು.

ನೀರಾ ಹೆಸರಿನಲ್ಲಿ ಗಾಂಧೀಜಿ ನಮ್ಮ ದೇಶಕ್ಕೆ ಆಮದಾಗುವುದನ್ನು ತಪ್ಪಿಸಿ, ಅವರೇ ಹೇಳಿದಂತೆ ಬಡತನದ ವಿರುದ್ಧ ಪ್ರತಿ ಅಸ್ತ್ರವನ್ನು ಬಿಡಬೇಕು. ಅದಕ್ಕೆ ಸಿದ್ಧರಾಗುವುದು ಇಂದಿನ ತುರ್ತು.

**

ರಾಜ್ಯಕ್ಕೆ ಹೊಸತಲ್ಲ

ನೀರಾ ಇಳಿಸುವುದು ರಾಜ್ಯಕ್ಕೆ ಹೊಸ ಸಂಪ್ರದಾಯವೇನೂ ಅಲ್ಲ. ಗೃಹ ಕೈಗಾರಿಕೆಯನ್ನು ರೂಪಿಸುವ ಉದ್ದೇಶದಿಂದ ಅರವತ್ತರ ದಶಕದಲ್ಲಿ ನೀರಾ ಇಳಿಸಲು ಅವಕಾಶ ಕಲ್ಪಿಸಲಾಗಿತ್ತು. ಖಾದಿ ಬೋರ್ಡ್ ಆಶ್ರಯದಲ್ಲಿ ನೀರಾ ಇಳಿಸಲಾಗುತ್ತಿತ್ತು. ನೀರಾದಿಂದ ಬೆಲ್ಲ, ಸಕ್ಕರೆಯನ್ನೂ ಅಲ್ಪ ಪ್ರಮಾಣದಲ್ಲಿ ತಯಾರಿಸಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT