ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ನಗರಕ್ಕೆ ವಾಹನಗಳ ಪ್ರವೇಶವಿಲ್ಲ!

Last Updated 27 ಮೇ 2017, 19:30 IST
ಅಕ್ಷರ ಗಾತ್ರ

ಇಟಲಿಯನ್ನರಿಂದ ‘ವೆನೀಸಿಯಾ’ ಎಂದು ಕರೆಸಿಕೊಳ್ಳುವ ವೆನಿಸ್ ನಗರ 118 ದ್ವೀಪಗಳಿಂದ ರಚಿತವಾದ ನಗರ. ನೀರಿನ ಕಾಲುವೆಗಳೇ ದಾರಿಗಳು. ವೆಸ್ಪಾ ಸ್ಕೂಟರ್‌ ಮತ್ತು ಫಿಯೆಟ್‌ ಕಾರನ್ನು ವಿಶ್ವಕ್ಕೆ ನೀಡಿದ ಇಟಲಿಯ ಈ ನಗರದಲ್ಲಿ ವಾಹನಗಳಿಗೆ ಪ್ರವೇಶವಿಲ್ಲ. ಕಾಲ್ನಡಿಗೆಯಿಂದಲೇ ಊರಲ್ಲಿ ಸಂಚರಿಸಬೇಕು. ನಗರದ ಪ್ರತಿಯೊಂದು ಸಂದುಗೊಂದಿಗೂ ಹೋಗಲು ಕಾಲುವೆಗಳಿವೆ. ದೋಣಿಯನ್ನು ಸಂಚಾರಕ್ಕೆ ಬಳಸುತ್ತಾರೆ. ನಗರವನ್ನು ಇಬ್ಭಾಗಿಸುವ ಮುಖ್ಯ ಕಾಲುವೆ ಕೆನಾಲ್‌ ಗ್ರಾಂಡೀಯಲ್ಲಿ ಲಾಂಚುಗಳ ಸಂಚಾರವಿದೆ. ಮೋಟಾರು ವಾಹನಗಳಿಲ್ಲದ ವೆನಿಸ್‌ ಇನ್ನೂ ಪ್ರಾಚೀನವಾಗಿಯೇ ಇದೆ. ಇಲ್ಲಿಗೆ ಬರುವವರಷ್ಟೆ ಆಧುನಿಕರು.
ವೆನಿಸಿನಲ್ಲಿ ಲಾಂಚುಗಳು ಸಿಟಿ ಬಸ್ಸುಗಳಿದ್ದಂತೆ. ಚಿಕ್ಕ ಮೋಟರ್‌ಬೋಟ್‌ಗಳು ಟ್ಯಾಕ್ಸಿ ಆಟೋಗಳಂತೆ ಮತ್ತು ಹುಟ್ಟುಹಾಕುತ್ತಾ ಚಲಿಸುವ ಗೊಂಡೋಲ ಪ್ರವಾಸಿ ಜೋಡಿಗಳಿಗೆ ಹೇಳಿ ಮಾಡಿಸಿದಂತಹುದು. ಇಲ್ಲಿನ ಕಾಲುವೆಗಳಲ್ಲಿ ತೇಲಾಡುವ ಮೋಹದಿಂದ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಕಾಲುವೆಗಳ ಎರಡೂ ಪಕ್ಕಗಳಲ್ಲಿ ನಡೆದಾಡಲು ಪಾದಚಾರಿ ಮಾರ್ಗಗಳಿವೆ.

‘ಏಡ್ರಿಯಾಟಿಕ್‌ನ ರಾಣಿ’, ‘ನೀರಿನ ನಗರ’, ‘ಮುಖವಾಡಗಳ ನಗರಿ’, ‘ಸೇತುವೆಗಳ ನಗರ’, ‘ತೇಲುವ ನಗರ’, ‘ಕಾಲುವೆಗಳ ನಗರ’ ಎಂದೆಲ್ಲಾ ಕರೆಸಿಕೊಳ್ಳುವ ವೆನಿಸ್‌, ಕ್ರಿ.ಶ. 7ನೇ ಶತಮಾನದಲ್ಲಿ ವೆನಿಟಿ ಜನರ ನೆಲೆನಿಲ್ಲುವಿಕೆಯಿಂದಾಗಿ ನಿರ್ಮಾಣವಾಯಿತು. ವೆನಿಟಿ ಜನರು ನೀರಿನಲ್ಲಿ ಮರದ ಕಂಬಗಳನ್ನು ನೆಟ್ಟು ಅದರ ಮೇಲೆ ಮನೆಗಳನ್ನು ನಿರ್ಮಿಸಿದರು. ನಂತರ ವ್ಯಾಪಾರಿ ಕೇಂದ್ರವಾಗಿ, ಧಾರ್ಮಿಕ ಸ್ಥಾನವಾಗಿ, ರಾಜಕೀಯದ ನೆಲೆಯಾಗಿ ಅಭಿವೃದ್ಧಿಯಾಯಿತು. ವ್ಯಾಪಾರದ ವೃದ್ಧಿಯಾದಂತೆ ಅಪೂರ್ವ ಕಟ್ಟಡಗಳಿಂದ, ಕಲಾಕೃತಿಗಳಿಂದ ಐಶ್ವರ್ಯಭರಿತವಾಗಿ ಸಿಂಗಾರಗೊಂಡಿತು. 16ನೇ ಶತಮಾನದಲ್ಲಿ ಮುಖ್ಯ ವ್ಯಾಪಾರ ವ್ಯವಸ್ಥೆಯು ಅಟ್ಲಾಂಟಿಕ್‌ ಹಾಗೂ ಉತ್ತರ ಹಾಗೂ ದಕ್ಷಿಣ ಅಮೆರಿಕಗಳ ಕಡೆಗೆ ಸ್ಥಳಾಂತರಗೊಂಡಾಗಲೇ ಇದರ ಪ್ರಾಬಲ್ಯವು ದುರ್ಬಲವಾಯಿತು.

1797ರಲ್ಲಿ ನೆಪೋಲಿಯನ್‌ ಈ ನಗರವನ್ನು ವಶಪಡಿಸಿಕೊಂಡು ಅದನ್ನು ಆಸ್ಟ್ರಿಯದ ಆಳ್ವಿಕೆಗೆ ಒಪ್ಪಿಸಿದನು. 1866ರಲ್ಲಿ ವೆನಿಸ್‌ ನಗರವು ಇಟಲಿಯ ಒಂದು ಭಾಗವಾಯಿತು.

(ಸೆಂಟ್‌ ಮಾರ್ಕ್ಸ್‌ ಚೌಕದಲ್ಲಿರುವ ಅಪೂರ್ವ ಶಿಲ್ಪ ವಿನ್ಯಾಸದ ಕಟ್ಟಡ)

ಸೇಂಟ್‌ ಮಾರ್ಕ್ಸ್‌ ಚೌಕ
ವೆನಿಸ್‌ ನಗರದ ಅತ್ಯಂತ ದೊಡ್ಡ ಭೂಭಾಗ ಮತ್ತು ಹೃದಯ ಭಾಗವಾದ ‘ಸೇಂಟ್‌ ಮಾರ್ಕ್ಸ್‌ ಚೌಕ’ ರಮಣೀಯವಾದ ಸ್ಥಳ. ಡೋಗ್ಸ್‌ ಅರಮನೆ, ಸೇಂಟ್‌ ಮಾರ್ಕ್ಸ್‌ ಚರ್ಚ್‌, ಜೈಲು, ಕ್ಲಾಕ್‌ ಟವರ್‌ ಮುಂತಾದ ಅಪೂರ್ವ ಶಿಲ್ಪ ವಿನ್ಯಾಸದ ಕಟ್ಟಡಗಳಿಲ್ಲಿವೆ. 11ರಿಂದ 15ನೇ ಶತಮಾನದ ಮಧ್ಯೆ ನಿರ್ಮಿಸಿರುವ ಗಾಥಿಕ್‌ ಶೈಲಿಯ ಚರ್ಚ್‌ನ ಒಳಹೊರಗುಗಳು ಸುಂದರ ವಿನ್ಯಾಸ ಹಾಗೂ ಅಪೂರ್ವ ವರ್ಣಚಿತ್ರಗಳಿಂದ ಆಕರ್ಷಿಸುತ್ತದೆ. ಅರಮನೆ ಆವರಣಕ್ಕೆ ಹೊಂದಿಕೊಂಡಂತೆ ಇರುವ ಬಂದೀಖಾನೆಯನ್ನು ಜೋಡಿಸುವ ಬಿಳಿ ಸೇತುವೆಯಿದೆ. ‘ಬ್ರಿಡ್ಜ್‌ ಆಫ್‌ ಸೈ’(ನಿಟ್ಟುಸಿರಿನ ಸೇತುವೆ) ಎಂದು ಕರೆಯುವ ಇಲ್ಲಿ ಬಂಧಿತರ ನಿಟ್ಟುಸಿರಿನ ನೆನಪುಗಳಿವೆ. ಅರಮನೆಯ ಆಗಿನ ನ್ಯಾಯಾಧೀಶರಿಂದ ಮರಣದಂಡನೆಗೆ ಗುರಿಯಾಗಿ ಆಪಾದಿತರು ಕೊನೆಯದಾಗಿ ಈ ಸೇತುವೆ ಮೂಲಕ ಹಾದು ಹೋಗುವಾಗ ವೆನಿಸ್‌ನ ಅಂತಿಮ ದರ್ಶನ ಪಡೆಯುತ್ತಿದ್ದರು. ಇಂಗ್ಲಿಷ್‌ ಕವಿ ಥಾಮಸ್‌ ಹುಡ್‌ ‘ದ ಬ್ರಿಡ್ಜ್‌ ಆಫ್‌ ಸೈಸ್‌’ ಎಂಬ ಕವನವನ್ನು ಬರೆದಿದ್ದಾರೆ.

ಈ ಚೌಕದಲ್ಲಿ ಪಾರಿವಾಳಗಳು ಹಿಂಡುಗಟ್ಟಲೇ ಇವೆ. ಕಾಳನ್ನು ಕೈಯಲ್ಲಿ ಹಿಡಿದುಕೊಂಡರೆ ಸಾಕು ಕೈ, ಮೈಮೇಲೆ ಕುಳಿತೇ ತಿನ್ನುತ್ತವೆ. ಪ್ರವಾಸಿಗರ ಕೈಗೆ ಕಾಳು ನೀಡಿ ಎರಡು ಮೂರು ಯೂರೋ ಕೇಳಿ ಪಡೆಯುವ ಯುವಕರೂ ಇಲ್ಲಿದ್ದಾರೆ. ಅಲ್ಲಿಯೇ ಕುಳಿತು ಚಿತ್ರ ಬಿಡಿಸುವ, ಚಿತ್ರಗಳನ್ನು ಮಾರುವ ಕುಂಚ ಕಲಾವಿದರೂ ಇದ್ದಾರೆ.

ಮುಖ್ಯ ಚೌಕದಲ್ಲಿ ಯಾವಾಗಲೂ ಜನರಿಂದ ಕಿಕ್ಕಿರಿದಿರುವ ಹೊರಾಂಗಣದ ಕೆಫೆಗಳು (ಕಾಫಿಯಂಗಡಿಗಳು) ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇಲ್ಲಿ ಚಿಕ್ಕ ಚಿಕ್ಕ ಶಾಸ್ತ್ರೀಯ ಆರ್ಕೆಸ್ಟ್ರಾಗಳ ಸಂಗೀತವನ್ನು ಕೇಳಿಸಿಕೊಳ್ಳುತ್ತಾ, ಪಾನೀಯವನ್ನೋ ಅಥವಾ ಜಿಲೆಟೊ ಐಸ್‌ಕ್ರೀಮ್‌ ಆಸ್ವಾದಿಸುತ್ತಾ ಕಾಲಪ್ರವಾಹದಲ್ಲಿ ಹಿಂದಕ್ಕೆ ಸರಿಯಬಹುದು.

ವೆನಿಸ್‌ನ ಅರಮನೆ, ವಸ್ತುಸಂಗ್ರಹಾಲಯ ಮತ್ತು ಚರ್ಚುಗಳಲ್ಲಿ ಹಲವಾರು ಪ್ರಸಿದ್ಧ ಕಲಾಕಾರರು ಬಿಡಿಸಿರುವ ಚಿತ್ರಗಳಿವೆ. ಇಲ್ಲಿರುವ ಅಂಗಡಿಗಳಲ್ಲಿ ಪ್ರವಾಸಿಗರು ಇಷ್ಟಪಡುವ ವಿಶಿಷ್ಟ ವಸ್ತುಗಳನ್ನು ಮಾರುತ್ತಾರೆ. ಮುಖವಾಡ ಮಾರಾಟ ಮಾಡುವ ದೊಡ್ಡ ಅಂಗಡಿಗಳೇ ಇಲ್ಲಿವೆ. ವೆನಿಸ್‌ನ ವಿಶೇಷಗಳಾದ ಬುರಾನೋ ಎಂಬ ದ್ವೀಪದಲ್ಲಿ ತಯಾರಿಸಲಾಗುವ ಲೇಸು ಮತ್ತು ಕಸೂತಿ ಉತ್ಪನ್ನಗಳು, ಮುರಾನೋ ದ್ವೀಪದಲ್ಲಿ ಸಿದ್ಧವಾಗುವ ಸೊಗಸಾದ ಸ್ಫಟಿಕ ಹಾಗೂ ಗಾಜಿನ ಪದಾರ್ಥಗಳು ಇಲ್ಲಿನ ಪೇಟೆಯಲ್ಲಿ ಲಭ್ಯ. ಈ ಉತ್ಪನ್ನಗಳು ಹೇಗೆ ತಯಾರಾಗುತ್ತವೆ ಎಂಬುದನ್ನು ಪ್ರಾತ್ಯಕ್ಷಿಕವಾಗಿಯೂ ತೋರಿಸುವರು. ಇಲ್ಲಿನ ನಿವಾಸಿಗಳು ಪುಷ್ಪಪ್ರಿಯರು. ಮನೆಯ ಮುಂದೆ ಕಿಟಕಿಯ ಮುಂದಿನ ಸ್ವಲ್ಪ ಜಾಗದಲ್ಲೂ ಬಣ್ಣ ಬಣ್ಣದ ಹೂಕುಂಡಗಳಿರುತ್ತವೆ.

(‘ಬ್ರಿಡ್ಜ್‌ ಆಫ್‌ ಸೈ’(ನಿಟ್ಟುಸಿರಿನ ಸೇತುವೆ)

ಮರದ ದಿಮ್ಮಿಗಳ ಅಡಿಪಾಯ
ಮನೆ ಮತ್ತು ಕಟ್ಟಡಗಳನ್ನು ಕಲ್ಲು–ಸಿಮೆಂಟ್ ಅಡಿಪಾಯದ ಮೇಲೆ ಕಟ್ಟುವುದು ರೂಢಿ. ವೆನಿಸ್‌ ನಗರದ ಕಟ್ಟಡಗಳನ್ನು ಮರದ ದಿಮ್ಮಿಗಳ ರಾಶಿಯ ಮೇಲೆ ನಿರ್ಮಿಸಿರುವುದು ವಿಶೇಷ. ಇದಕ್ಕಾಗಿ ಲಕ್ಷಾಂತರ ಮರದ ದಿಮ್ಮಿಗಳನ್ನು ಬಳಸಿಕೊಳ್ಳಲಾಗಿದೆ. ಮರದ ದಿಮ್ಮಿಗಳನ್ನು ಒಂದರ ಪಕ್ಕ ಒಂದು ಜೋಡಿಸಿ ಅದರ ಮೇಲೆ ‘ಇಸ್ಟ್ರಯನ್‌’ ಸುಣ್ಣದ ಕಲ್ಲುಗಳನ್ನು ಮುಚ್ಚಲಾಗಿದೆ. ಈ ಅಡಿಪಾಯದ ಮೇಲೆ ಇಟ್ಟಿಗೆಯಿಂದ ಮನೆಗಳನ್ನು ಕಟ್ಟಲಾಗಿದೆ. ಇದಕ್ಕೆ ಪ್ರಮುಖ ಕಾರಣ – ವೆನಿಸ್‌ ಪದೇ ಪದೇ ನೀರಿನಲ್ಲಿ ಮುಳುಗಡೆಯಾಗುವುದು. ನಿಯಮಿತವಾಗಿ ಖನಿಜಯುಕ್ತ ನೀರು ಹರಿಯುತ್ತಿರುವುದರಿಂದ ಮರದ ದಿಮ್ಮಿಗಳು ಕಲ್ಲಿನಂಥ ಆಯಕಟ್ಟನ್ನು ಒದಗಿಸುತ್ತವೆ. ಹೀಗಾಗಿ ಇವು ಇಂದಿಗೂ ಹಾಳಾಗದೇ ಉಳಿದಿವೆ.

ಮಾರ್ಕೊ ಪೋಲೋ
ಬ್ರಿಟಿಷರು ಭಾರತವನ್ನು ಆಳುವುದಕ್ಕೆ, ಯೂರೋಪಿಯನ್ನರು ಏಷ್ಯಾಖಂಡದತ್ತ ಆಕರ್ಷಿತರಾಗಲು ಕಾರಣ ಶತಮಾನಗಳ ಹಿಂದೆ ಸಾಹಸಿ ಮಾರ್ಕೊ ಪೋಲೋ ವರ್ಣಿಸಿದ್ದ ಏಷ್ಯಾ ಖಂಡದ ಐಶ್ವರ್ಯ. ಮಾರ್ಕೊ ಪೋಲೋನನ್ನು ‘ಮಧ್ಯಯುಗದ ಪ್ರವಾಸಿಗಳ ಚಕ್ರವರ್ತಿ’, ‘ಭೂಗೋಳದ ಪಿತಾಮಹ’ ಎಂದೆಲ್ಲಾ ಕರೆಯುತ್ತಾರೆ. ಏಳು ಶತಮಾನಗಳ ಹಿಂದೆ, ಈ ಪ್ರಪಂಚದ ಭೂಪಟವನ್ನೇ ಇನ್ನೂ ಬರೆಯದಿದ್ದಾಗ, ಪ್ರಯಾಣದ ಸೌಕರ್ಯಗಳಿರದಿದ್ದ ಕಾಲದಲ್ಲಿ ಇಟಲಿಯಿಂದ ಹೊರಟು ಟರ್ಕಿ, ಇರಾಕ್‌, ಇರಾನ್‌, ಆಫ್ಘಾನಿಸ್ತಾನ, ಟಿಬೆಟ್‌, ದಕ್ಷಿಣ ರಷ್ಯಾ, ಮಂಗೋಲಿಯ, ಚೀನಾ, ಜಾವಾ, ಸುಮಾತ್ರ, ಶ್ರೀಲಂಕಾ, ಭಾರತ ಮುಂತಾದ ದೇಶಗಳನ್ನು ಸುತ್ತಿ ಬಂದ ಈತ ಸಾಹಸಿ ಪ್ರವಾಸಿ. ಅವನು ನೋಡಿದ್ದ ಸ್ಥಳಗಳನ್ನು ಯೂರೋಪಿಯನ್ನರು ನೋಡಿದ್ದು ನೂರಾರು ವರ್ಷಗಳ ಅನಂತರ. ಅದ್ಭುತ ಪ್ರವಾಸ ಕಥನಕಾರ ಮಾರ್ಕೊ ಪೋಲೋ ಹುಟ್ಟಿದ್ದು ಮತ್ತು ನಿಧನನಾಗಿದ್ದು ವೆನಿಸ್‌ನಲ್ಲಿ. ಕ್ರಿ.ಶ.1324ರಲ್ಲಿ ಮಾರ್ಕೊ ಪೋಲೊ ಸತ್ತಾಗ ಅವನನ್ನು ವೆನಿಸ್‌ನ ಸೇಂಟ್‌ ಲೋರೆನ್ಜೋ ಚರ್ಚಿನಲ್ಲಿ ಸಮಾಧಿ ಮಾಡಿದರು.

ದೋಣಿ ಸಾಗಲಿ ಮುಂದೆ ಹೋಗಲಿ
1979 ರ ‘ದಿ ಗ್ರೇಟ್‌ ಗ್ಯಾಂಬ್ಲರ್‌’ ಹಿಂದಿ ಚಲನಚಿತ್ರದ ‘ದೋ ಲಫ್ಜೋಂಕಿ ದಿಲ್‌ ಕಿ ಕಹಾನಿ’ ಎಂಬ (ಅಮಿತಾಬ್‌ ಬಚ್ಚನ್‌ ಮತ್ತು ಜೀನತ್‌ ಅಮಾನ್‌ ನಟನೆಯಲ್ಲಿ) ಹಾಡು ಚಿತ್ರೀಕರಣಗೊಂಡಿದ್ದು ವೆನಿಸ್‌ನ ಕಾಲುವೆಗಳಲ್ಲಿ, ಗೊಂಡೋಲಾ ದೋಣಿಯಲ್ಲಿ. ಗೊಂಡೋಲಾ ಎಂದು ಕರೆಯುವ ಈ ಚೂಪುದೋಣಿಯಲ್ಲಿ ನಡೆಸುವ ದೋಣಿವಿಹಾರ ಮನಸ್ಸಿಗೆ ಮುದ ನೀಡುತ್ತದೆ. ಹೋಟೆಲ್‌ಗಳು, ಕಟ್ಟಡಗಳ ನಡುವೆ ದಾರಿಯುದ್ದಕ್ಕೂ ಸಿಗುವ ಸೇತುವೆ ಬುಡದಲ್ಲಿ ಹಾಯುತ್ತಾ, ಪ್ರವಾಸಿಗರಿಗೆ ಕೈ ಬೀಸುತ್ತಾ, ಕಪ್ಪು ಪ್ಯಾಂಟ್‌ ಮತ್ತು ಕಪ್ಪು ಪಟ್ಟಿಗಳ ಟೀಶರ್ಟ್‌ ಧರಿಸಿರುವ ಅಂಬಿಗರ ಚಾಕಚಕ್ಯತೆಯನ್ನು ಮೆಚ್ಚುತ್ತಾ, ತಿರುವುಗಳಲ್ಲಿ ಇನ್ನೊಂದು ಬದಿಯಿಂದ ಬರುವ ದೋಣಿಗಳು ಕಾಣಲೆಂದು ಇರಿಸಿರುವ ದೊಡ್ಡ ಭೂತಗಾಜುಗಳಲ್ಲಿ ಬಗ್ಗಿ ನೋಡುತ್ತಾ, ಫೋಟೋ ಕ್ಲಿಕ್ಕಿಸುತ್ತಾ ಸಾಗುವ ಸುಖಾನುಭವ ವೆನಿಸ್ಸನ್ನು ಅವಿಸ್ಮರಣೀಯಗೊಳಿಸುತ್ತದೆ.

**

ಮುಳುಗುತ್ತಿದೆ ವೆನಿಸ್‌
ವೆನಿಸ್‌ ನಗರವು ಬದುಕಿ ಉಳಿಯಲಿಕ್ಕಾಗಿ ಹೋರಾಡುತ್ತಿದೆ. 1951ರಲ್ಲಿ ಈ ಐತಿಹಾಸಿಕ ಕೇಂದ್ರದಲ್ಲಿ 1.75 ಲಕ್ಷದಷ್ಟಿದ್ದ ನಿವಾಸಿಗಳ ಸಂಖ್ಯೆಯು 2014ರಲ್ಲಿ ಕೇವಲ 55 ಸಾವಿರಕ್ಕೆ ಇಳಿದಿದೆ; ಆಸ್ತಿಯ ಬೆಲೆಗಳಲ್ಲಿ ವಿಪರೀತ ಏರಿಕೆ, ಕೆಲಸದ ಕೊರತೆ ಮತ್ತು ತೀರ ಕಡಿಮೆ ಆಧುನಿಕ ಸೌಕರ್ಯಗಳಿರುವುದೇ ಇದಕ್ಕೆ ಕಾರಣ. ನಗರದ ಇತಿಹಾಸ ಪ್ರಸಿದ್ಧ ಭಾಗಗಳನ್ನು ಆಗಿಂದಾಗ್ಗೆ ಪ್ರವಾಹದಿಂದ ಮುಳುಗಿಸುವ ನೀರಿನ ಉಬ್ಬರವೂ ಮತ್ತೊಂದು ಕಾರಣವೆಂದು ದೂರಲಾಗಿದೆ.

(ನೀರಿನ ಮೇಲೆ ತೇಲುವಂತೆ ಕಾಣುವ, ವೆನಿಸ್‌ನ ಹೆಗ್ಗುರುತಿನಂತೆ ದೂರದಿಂದ ಕಾಣುವ ಕ್ಲಾಕ್‌ ಟವರ್‌)

ಜಗತ್ತಿನ ಅತಿ ಸುಂದರ ನಗರ, ತೇಲುವ ನಗರ ಎಂದೂ ಕರೆಸಿಕೊಂಡಿರುವ, ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಈ ವೆನಿಸ್‌ ನಗರವನ್ನು ವೀಕ್ಷಿಸಲು ಪ್ರತಿ ದಿನ 50ರಿಂದ 70 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ವೆನಿಸ್‌ನಲ್ಲಿ 150 ಕಾಲುವೆಗಳಿವೆ. 400ಕ್ಕೂ ಹೆಚ್ಚು ಸೇತುವೆಗಳಿವೆ. ಇಂಥಹ ವೆನಿಸ್‌ ಪ್ರತಿವರ್ಷ 1–2 ಮಿಲಿ ಮೀಟರ್‌ಗಳಷ್ಟು ನೀರು ಪಾಲಾಗುತ್ತಿದೆ. ಹೀಗಾಗಿ ಇದನ್ನು ‘ಮುಳುಗುತ್ತಿರುವ ನಗರ’ ಎಂದೂ ಕರೆಯಲಾಗುತ್ತದೆ.

ಮಾನವ ನಿರ್ಮಿತ ಸುಂದರ ಅದ್ಭುತವೊಂದು ಮುಳುಗಿಹೋಗುವುದನ್ನು ತಡೆಯಲು ಹಾಗೂ ಪ್ರವಾಹದ ನಿರ್ವಹಣೆಗೆ ‘ಮೋಸ್‌ ಅಣೆಕಟ್ಟು’ ಯೋಜನೆ ನಡೆಯುತ್ತಿದೆ. ವೆನಿಸ್ಸಿನ ಕಾಲುವೆಯೊಳಕ್ಕೆ ಹೆಚ್ಚಿನ ಪ್ರವಾಹದ ನೀರು ನುಗ್ಗದಂತೆ ತಡೆಯುವುದು ಇದರ ಉದ್ದೇಶ.

**

‘ಗೆಜೆಟ್‌’ ಮೂಲ
ವೆನಿಸ್‌ ನಗರದಲ್ಲಿ ಹಿಂದೆ ‘ಗಜೆಟ್‌’ ಹೆಸರಿನ ಒಂದು ಸಣ್ಣ ನಾಣ್ಯ ಚಲಾವಣೆಯಲ್ಲಿತ್ತು. 1556ರಲ್ಲಿ ‘ಗಜೆಟ್‌’ ಹೆಸರಿನಿಂದಲೇ ಅಲ್ಲಿನ ಸರ್ಕಾರ ಒಂದು ವೃತ್ತಪತ್ರಿಕೆ ಹೊರಡಿಸುತ್ತಿತ್ತು. ಒಂದು ‘ಗಜೆಟ್‌’ ನಾಣ್ಯಕ್ಕೆ ಪತ್ರಿಕೆಯನ್ನು ಮಾರಿದುದೇ, ಪತ್ರಿಕೆಗೆ ಆ ಹೆಸರಿಡಲು ಕಾರಣ. ‘ಗೆಜೆಟು’ ಎಂದರೆ ಸುದ್ದಿಯ ಹಾಳೆ ಎಂಬರ್ಥ ಬಂದಿತು. ಆದರೆ ಇಂದು ಗೆಜೆಟ್‌, ಸರ್ಕಾರದ ಅಧಿಕೃತ ಪ್ರಕಟಣೆ. ಗೆಜೆಟಿನಲ್ಲಿ ಸರ್ಕಾರ ಮುಖ್ಯ ಆಜ್ಞೆಗಳನ್ನು ಪ್ರಕಟಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT