ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮದುರೋ ಡಾಮ್’ ಉದ್ಯಾನವೇ ಒಂದು ಊರು

Last Updated 27 ಮೇ 2017, 19:30 IST
ಅಕ್ಷರ ಗಾತ್ರ

ಪ್ರವಾಸಿ ಸ್ಥಳಗಳನ್ನು ಪರಿಚಯಿಸುವಾಗ, ‘ಸಮುದ್ರ ಮಟ್ಟದಿಂದ ಈ ಸ್ಥಳ ಇಷ್ಟು ಎತ್ತರದಲ್ಲಿದೆ’ ಎಂದು ಹೇಳುವುದು ಸಾಮಾನ್ಯ. ಆದರೆ, ಹಾಲೆಂಡ್ ಸಮುದ್ರ ಮಟ್ಟದಿಂದ ಕೆಳಗಿರುವ ದೇಶ. ನೆದರ್ಲೆಂಡ್ ಎಂದೂ ಕರೆಯಲಾಗುವ ಈ ರಾಷ್ಟ್ರ ಯುರೋಪ್‌ನ ಸಣ್ಣ ದೇಶಗಳಲ್ಲೊಂದು.

ಪುರಾಣ ಇತಿಹಾಸಗಳಲ್ಲಿ ಬಾಲಕ–ಬಾಲಕಿಯರ ಧೈರ್ಯ ಸಾಹಸಗಳನ್ನು ಬಣ್ಣಿಸುವ ಅನೇಕ ಕಥೆಗಳನ್ನು ನಾವು ಕಾಣಬಹುದು. ನಮ್ಮ ಮಹಾಕಾವ್ಯಗಳಲ್ಲೂ ಇಂತಹ ಸಾಹಸ ಪ್ರಸಂಗಗಳು ಕಡಿಮೆ ಇಲ್ಲ. ಇಂಥ ಸಾಹಸಿ ಹುಡುಗನೊಬ್ಬ ಹಾಲೆಂಡ್‌ ಜನರ ಅಸ್ಮಿತೆಯ ಭಾಗವಾಗಿರುವುದು ಕುತೂಹಲಕರ.

ಹಾಲುಗೆನ್ನೆಯ ಪೋರನೊಬ್ಬ ಸೇನೆಗೆ ಸೇರಿ, ತಾಯ್ನಾಡಿನ ರಕ್ಷಣೆಗಾಗಿ ಸೆಣಸಿದ ಕಥೆಯದು. ಜಾರ್ಜ್ ಮದುರೋ ಎನ್ನುವ ಈ ಬಾಲಕ ಜರ್ಮನಿಯ ನಾಜಿ ಶಿಬಿರದಲ್ಲಿ ಹದಿಹರೆಯದಲ್ಲೇ ಅಸುನೀಗಿದ ದೇಶಪ್ರೇಮಿ. ಈತನ ಸಾಹಸಕಥನವನ್ನು ಹೇಳುವಂತೆ, ದಿ ಹೇಗ್‌ ಪಟ್ಟಣದಲ್ಲಿರುವ ‘ಮದುರೋಡಾಮ್’ ಮಿನಿಯೇಚರ್ ಉದ್ಯಾನ ರೂಪುಗೊಂಡಿದೆ. ಇದು ಉದ್ಯಾನವಾದರೂ ಇದರ ಸ್ವರೂಪ ಪುಟ್ಟ ದೇಶದ ಪೂರ್ಣಚಿತ್ರವನ್ನು ನೀಡುವಂತಿದೆ.

ಮದುರೋ ನೆನಪಿನಲ್ಲಿ ಆತನ ಪೋಷಕರು 1952ರಲ್ಲಿ ನಿರ್ಮಿಸಿದ ಈ ವಿಶಿಷ್ಟ ಉದ್ಯಾನದಲ್ಲಿರುವ ಕೆಲವು ವಸ್ತು ವಿಶೇಷಗಳನ್ನು 25 ಪಟ್ಟು ಹಿಗ್ಗಿಸಿದ್ದರೆ, ಇನ್ನೂ ಕೆಲವನ್ನು 25ರಷ್ಟು ಕುಗ್ಗಿಸಿ ನೆಲೆಗೊಳಿಸಿರುವುದೊಂದು ವಿಶೇಷ. ಇಡೀ ಉದ್ಯಾನದ ಮೊದಲ ಆಕರ್ಷಣೆ ಸುತ್ತಲೂ ಹರಡಿರುವ ಹಸಿರುಸಿರಿ.

ಚಿಕ್ಕ ಎಲೆಗಳ ಗಿಡ್ಡಮರಗಳು, ತರುಲತೆಗಳು ತುಂಬಿಕೊಂಡಿರುವ ಈ ಪಾರ್ಕ್ ಹಾಲೆಂಡ್‌ನ ಪ್ರತಿಯೊಂದು ಮೂಲೆಯನ್ನೂ ಕಾಣಿಸುವಂತೆ ರೂಪುಗೊಂಡಿದೆ. ಇಲ್ಲಿ ಸುಂದರ ಕಟ್ಟಡಗಳಿವೆ, ಚೌಕಗಳಿವೆ, ವಿಶಾಲವಾದ ರಸ್ತೆಗಳೂ ಇವೆ. ಆದರೆ, ಇದ್ಯಾವುದೂ 60 ಸೆಂಟಿಮೀಟರ್‌ಗಳಿಗಿಂತ ಎತ್ತರ ಇಲ್ಲ!  ಉದ್ಯಾನದಲ್ಲಿನ ಹೊಲದಲ್ಲಿ ರೈತರಿದ್ದಾರೆ, ಕಾವಲುಭಟರಿದ್ದಾರೆ, ಯಂತ್ರಗಳನ್ನು ದುರಸ್ತಿ ಮಾಡುವ ಪರಿಣಿತರೂ ಇಲ್ಲುಂಟು. ಪೈಲಟ್‌ನೊಂದಿಗೆ ಸದ್ದು ಮಾಡುತ್ತ ವಿಮಾನ ಹಾರುವುದನ್ನೂ ಕಾಣಬಹುದು.

ನೀರನ್ನು ಸ್ನೇಹಿತನಂತೆ ಕಾಣುವ ಡಚ್ ಜನರು ತೋರುವ ‘ಜಲಪ್ರೀತಿ’ ಅನುಕರಣೀಯ. ಗಾಳಿಯಂತ್ರಗಳು ಹಾಲೆಂಡ್‌ನ ರಾಷ್ಟ್ರೀಯ ಸಂಕೇತ. ಈ ಉದ್ಯಾನದಲ್ಲಿರುವ ಗಾಳಿಯಂತ್ರಗಳು ನಿಯಮಬದ್ಧವಾಗಿ ತಿರುಗುತ್ತವೆ, ಅಷ್ಟೇ ಅಲ್ಲ – ಅವು ನೀರನ್ನು ಎತ್ತುವುದು ನೋಡುಗರಲ್ಲಿ ಅಚ್ಚರಿ ಹುಟ್ಟಿಸುವಂತಿದೆ.
ತಮ್ಮ ದೇಶವನ್ನು, ದೇಶದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯವನ್ನು ಉದ್ಯಾನದಲ್ಲಿ ಯಥಾವತ್ತಾಗಿ ಬಿಂಬಿಸಲಾಗಿದೆ. ಹಾಲೆಂಡ್‌ನ ವೈಜ್ಞಾನಿಕ ಅನ್ವೇಷಣೆಗಳು, ರಾಷ್ಟ್ರದ ವಾಸ್ತುಶೈಲಿಯ ಕಟ್ಟಡಗಳು, ಸಂಪರ್ಕಕ್ಕಾಗಿ ಬಳಸುವ ನೀರಹಾದಿಗಳು – ಇವೆಲ್ಲದರೊಂದಿಗೆ ಮನರಂಜನೆಗೆ ಹಾಗೂ ಕ್ರೀಡಾವಿನೋದಕ್ಕೂ ಉದ್ಯಾನದಲ್ಲಿ ಅವಕಾಶವಿದೆ.

ಉಳಿದೆಲ್ಲ ಉದ್ಯಾನಗಳಿಗಿಂತ ವಿಭಿನ್ನವಾಗಿರುವ ಮದುರೋ ಉದ್ಯಾನದಲ್ಲಿ ಬಾಲಕ ಜಾರ್ಜ್‌ನ ಸಾಹಸವನ್ನು ‘ಥ್ರಿ–ಡಿ’ ತಂತ್ರಜ್ಞಾನದಲ್ಲಿ ನಿರೂಪಿಸುವ, ಐದು ನಿಮಿಷಗಳ ದೃಶ್ಯ ಅನುಭವಕ್ಕೂ ಪ್ರವಾಸಿಗರು ಒಳಗಾಗಬಹುದು. ಮಕ್ಕಳಲ್ಲಿ ಸಾಹಸ ಮನೋಭಾವ ಮೂಡಿಸಲು ಸುರಕ್ಷಿತ ಸಾಹಸಕ್ರೀಡೆಗಳನ್ನು ಪಾರ್ಕ್ ಹೊಂದಿದೆ.

ಮದುರೋಡಾಮ್ ಉದ್ಯಾನದ ಆದಾಯವನ್ನು ‘ಡಚ್ ವಿದ್ಯಾರ್ಥಿ ಸಂಘ’ಕ್ಕೆ ದೇಣಿಗೆ ನೀಡುವ ಪರಿಪಾಠವಿದೆ. ಜೊತೆಗೆ, ಕ್ಷಯಪೀಡಿತ ವಿದ್ಯಾರ್ಥಿಗಳು ರೋಗಮುಕ್ತರಾಗಿ ಶಿಕ್ಷಣ ಮುಂದುವರೆಸುವ ಏರ್ಪಾಡು ಇಲ್ಲಿದೆ. ಇದಕ್ಕಾಗಿ ಡಚ್ ವಿದ್ಯಾರ್ಥಿ ಸಮೂಹಕ್ಕೆ ಮದುರೋಡಾಮ್‌ ಪಾರ್ಕ್ ಕೊಡಮಾಡುತ್ತಿರುವ ವಾರ್ಷಿಕ ದೇಣಿಗೆಯ ಮೊತ್ತ 6ರಿಂದ 10 ಲಕ್ಷ ಯುರೋಗಳು.

ಈ ಉದ್ಯಾನದ ಇನ್ನೊಂದು ವಿಶೇಷವೆಂದರೆ – ಹೇಗ್‌ನಲ್ಲಿ ಇರುವ ಇದಕ್ಕೆ ಒಂದು ನಗರದ ಸ್ಥಾನಮಾನ ಕಲ್ಪಿಸಿರುವುದು ಹಾಗೂ ಅದಕ್ಕೊಬ್ಬ ಮೇಯರ್ ಇರುವುದು. ಇದು ಸ್ಥಾಪನೆಗೊಂಡಿದ್ದು 1952ರಲ್ಲಿ. ಆಗ ಮದುರೋಡಾಮ್‌ನ ಮೇಯರ್ ಆಗಿದ್ದವರು ರಾಣಿ ಬಿಟೆಕ್ಸ್. 1980ರಲ್ಲಿ ಬಿಟೆಕ್ಸ್ ದೇಶದ ಮಹಾರಾಣಿಯಾಗಿ ಪಟ್ಟಾಭಿಷೇಕವಾದ ಮೇಲೆ ಅವರು ಪಾರ್ಕ್‌ನ ಮಹಾಪೋಷಕಿಯಾಗಿ ಮುಂದುವರಿದರು.

ಯುರೋಪ್‌ನ ದೇಶಗಳಲ್ಲಿ ಜನಬಾಹುಳ್ಯ ಬಹಳ ಕಡಿಮೆ. ಮದುರೋಡಾಮ್ ಪಾರ್ಕ್‌ನಲ್ಲೂ ನಿರ್ವಾಹಕರ ಸಂಖ್ಯೆ ಕಡಿಮೆ. ಮಾನವಸಂಪನ್ಮೂಲದ ಕೊರತೆಯನ್ನು ತಂತ್ರಜ್ಞಾನದ ಮೂಲಕ ತುಂಬಿಸಲಾಗಿದೆ. ತಂತ್ರಜ್ಞಾನ ಉಪಯೋಗಿಸಿಕೊಂಡು ಉದ್ಯಾನದಲ್ಲಿನ ಪ್ರತಿಯೊಂದು ವಿಷಯವನ್ನೂ ಪುಟ್ಟ ಧ್ವನಿಸಾಧನದ ಮೂಲಕ ತಿಳಿಯಬಹುದು. ಇಲ್ಲಿ ಇದಕ್ಕಾಗಿ ತಂತ್ರಜ್ಞಾನ ಆಧಾರಿತ ಪುಟ್ಟ ಕಾರ್ಡ್‌ನ್ನೂ ಒದಗಿಸಲಾಗುವುದು.

ಉದ್ಯಾನದಲ್ಲಿ ರೂಪುಗೊಂಡಿರುವ ಟುಲಿಪ್ ಉದ್ಯಾನ, ಜಾಗತಿಕ ನ್ಯಾಯಾಲಯ, ರಾಜಮನೆತನಗಳ ಮನೆಗಳು, ಇಗರ್ಜಿಗಳು, ಚೌಕಗಳಲ್ಲಿರುವ ಪ್ರತಿಮೆಗಳು – ಎಲ್ಲವನ್ನೂ ವಿವಿಧ ಭಾಷೆಗಳಲ್ಲಿ (ಅಗತ್ಯಕ್ಕೆ ತಕ್ಕಂತೆ) ತಿಳಿಯುವ ಅನುಕೂಲ ಈ ಪಾರ್ಕ್‌ನ ಇನ್ನೊಂದು ವೈಶಿಷ್ಟ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT