ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಜರ್ ಮೂರ್ ಜೇಮ್ಸ್ ಬಾಂಡ್ ನಂ. 1

Last Updated 27 ಮೇ 2017, 19:30 IST
ಅಕ್ಷರ ಗಾತ್ರ

ಅಗೋ ಅಲ್ಲಿ ಜೇಮ್ಸ್ ಬಾಂಡ್! ವಿಮಾನ ನಿಲ್ದಾಣದಲ್ಲಿ ಪತ್ರಿಕೆ ಓದುತ್ತಿದ್ದ ವ್ಯಕ್ತಿಯನ್ನು ತನ್ನ ಅಜ್ಜನಿಗೆ ತೋರಿಸಿ ಬಾಲಕನೊಬ್ಬ ಸಂಭ್ರಮದಿಂದ ಉದ್ಗರಿಸಿದ್ದ. ಮೊಮ್ಮಗನ ಬಯಕೆಯ ಮೇರೆಗೆ ಅಜ್ಜ ಆಟೊಗ್ರಾಫ್‌ಗೆ ಕೋರಿಕೆ ಸಲ್ಲಿಸಿದ. ವಿಮಾನದ ಟಿಕೆಟ್ ಹಿಂಭಾಗದಲ್ಲಿ ಆತ ಸಹಿ ಮಾಡಿಕೊಟ್ಟ. ಹುಡುಗನಿಗೆ ಸಮಾಧಾನವಾಗಲಿಲ್ಲ. ತನ್ನ ನೆಚ್ಚಿನ ಬಾಂಡ್ ಬೇರೆ ಯಾವುದೋ ಹೆಸರನ್ನು ಬರೆದಿದ್ದಾನೆ ಎನ್ನುವ ಅಸಮಾಧಾನ ಆತನದು. ಜೇಮ್ಸ್‌ ಬಾಂಡ್‌ ಬದಲಿಗೆ ಟಿಕೆಟ್‌ನ ಹಿಂಭಾಗದಲ್ಲಿ ಇದ್ದ ಹೆಸರು ರೋಜರ್ ಮೂರ್!

ಇದು ಯಾವುದೋ ಬಾಲಕನೊಬ್ಬನ ನೆನಪಷ್ಟೇ ಅಲ್ಲ. ವಿಶ್ವದ ಕೋಟ್ಯಂತರ ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ರೋಜರ್ ಉಳಿದುಕೊಂಡಿರುವುದು ಬಾಂಡ್ ರೂಪದಲ್ಲೇ. ನಟಿಸಿದ ಪಾತ್ರವೊಂದು ಕಲಾವಿದನನ್ನು ಮೀರಿ ನಿಂತ ಉದಾಹರಣೆಯಿದು. ಜೇಮ್ಸ್‌ ಬಾಂಡ್‌ ಎನ್ನುವುದು ಮೂರ್‌ ತೆರೆಯ ಮೇಲೆ ನಿರ್ವಹಿಸಿದ ಪಾತ್ರವಷ್ಟೇ ಆಗಿರಲಿಲ್ಲ. ನಿಜದ ಬದುಕಿನಲ್ಲೂ ಅವರು ಬಾಂಡ್‌ನಷ್ಟೇ ವರ್ಣರಂಜಿತ ವ್ಯಕ್ತಿತ್ವ ಹೊಂದಿದ್ದರು; ನಿರಂತರವಾಗಿ ಯಾವುದೋ ಹುಡುಕಾಟದಲ್ಲಿ ತೊಡಗಿಕೊಂಡಂತಿದ್ದರು.

ರೋಜರ್ ಮೂರ್ (ಅ.14, 1927 – ಮೇ 23, 2017) ಜನಿಸಿದ್ದು ಲಂಡನ್‌ನ ಸ್ಟಾಕ್‌ವೆಲ್ ನಗರದಲ್ಲಿ. ಅವರ ತಂದೆ ಆಲ್‌ಫ್ರೆಡ್ ಮೂರ್ ಪೊಲೀಸ್‌ ಅಧಿಕಾರಿ, ಅಮ್ಮ ಲಿಲ್ಲಿಯನ್ ಗೃಹಿಣಿ. ಪೊಲೀಸ್‌ ಅಪ್ಪ ತನ್ನ ಮಗನಿಗೆ ಬಾಲ್ಯದಿಂದಲೇ ಶಿಸ್ತಿನ ಪಾಠ ಕಲಿಸಲು ಪ್ರಯತ್ನಿಸಿದರು. ಪೈಸೆ ಪೈಸೆ ಲೆಕ್ಕ ಇಡುವ ಜೀವನದ ಗಣಿತ ಹೇಳಿಕೊಟ್ಟರು. ಹಾಗೆಂದು ಮೂರ್‌ ಬದುಕು ವಿಪರೀತ ಶಿಸ್ತುಬದ್ಧವೇನೂ ಆಗಿರಲಿಲ್ಲ. ಅಶಿಸ್ತಿನಲ್ಲೂ ಒಂದು ಬಗೆಯ ಜೀವನಸೌಂದರ್ಯವಿದೆ ಎನ್ನುವಂತೆ ಬದುಕಿದರು.

ವಿನೋದದ ಮಾತುಗಳ ಮೂಲಕ ಎಲ್ಲರನ್ನೂ ನಗಿಸುತ್ತ, ತನ್ನನ್ನು ಲೇವಡಿ ಮಾಡಿಕೊಂಡು ನಗಬಲ್ಲ ಪ್ರೌಢಿಮೆ ಅವರದಾಗಿತ್ತು. ತನ್ನ ಮಿತಿಗಳನ್ನು ಅರಿತಿದ್ದ ಹಾಗೂ ಸ್ವಯಂ ವಿಮರ್ಶೆಗೆ ಒಡ್ಡಿಕೊಳ್ಳುವ ಪ್ರಾಮಾಣಿಕತೆ ಹೊಂದಿದ್ದ ಅವರಿಗೆ – ‘ಕೊಲೆಗಾರನಂತೆ ಕಾಣಬೇಕಿದ್ದ ದೃಶ್ಯಗಳಲ್ಲಿ ನವೆದುಹೋದ ಪ್ರೇಮಿಯಂತೆ ನಾನು ಕಾಣಿಸಿದ್ದಿದೆ’ ಎಂದು ತಮ್ಮ ಬಗ್ಗೆ ಹೇಳಿಕೊಳ್ಳಬಲ್ಲ ದಿಟ್ಟತನವಿತ್ತು. ತನ್ನನ್ನು ತಾನು ಗಂಭೀರವಾಗಿ ತೆಗೆದುಕೊಳ್ಳುವ ಜಾಯಮಾನ ಅವರದಾಗಿರಲಿಲ್ಲ.

ನಟನಾಗಿ ನೆಲೆ ಕಂಡುಕೊಳ್ಳುವುದಕ್ಕೆ ಮುನ್ನ ಮೂರ್‌ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದರು. ವಾರಾಂತ್ಯದ ದಿನಗಳಲ್ಲಿ ಗೌಳಿಗನೊಬ್ಬನಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಗೆಳೆಯರೊಂದಿಗೆ ಬೇಕರಿಯಲ್ಲಿ ಬ್ರೆಡ್‌–ಕೇಕ್‌ಗಳ ಟ್ರೇಗಳನ್ನು ಎತ್ತಿಡುವ ಕೆಲಸ ಮಾಡಿದ್ದರು. ಅನಿಮೇಷನ್‌ಗೆ ಸಂಬಂಧಿಸಿದ ಫಿಲ್ಮ್‌ ಕಂಪೆನಿಯೊಂದರಲ್ಲಿ ಕೆಲ ಕಾಲ ದುಡಿದಿದ್ದರು. ಜಾಹೀರಾತುಗಳಿಗೆ ರೂಪದರ್ಶಿಯಾದರು, ದೂರದರ್ಶನದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಹೀಗೆ ಹಲವು ಕೆಲಸಗಳಲ್ಲಿ ಕಳೆದುಹೋಗಿದ್ದ ಮೂರ್‌, ಅಪ್ಪನ ಶಿಫಾರಸಿನ ಮೇರೆಗೆ ಬ್ರಯಾನ್‌ ಡೆಸ್ಮಂಡ್‌ ಹರ್ಸ್ಟ್‌ ಎನ್ನುವ ನಿರ್ದೇಶಕನ ಗರಡಿ ಸೇರಿಕೊಂಡರು. ‘ಸೀಜರ್ ಅಂಡ್‌ ಕ್ಲಿಯೊಪಾತ್ರ’ ಸಿನಿಮಾದಲ್ಲಿ ಪುಟ್ಟ ಅವಕಾಶ ದೊರೆಯಿತು. ನಂತರ, ಹರ್ಸ್ಟ್‌ ಮೂಲಕವೇ ಅವರು ‘ರಾಯಲ್‌ ಅಕಾಡೆಮಿ ಆಫ್‌ ಡ್ರಮಾಟಿಕ್‌ ಆರ್ಟ್ಸ್‌’ ಸೇರಿಕೊಂಡು, ಅಲ್ಲಿ ನಟನೆಯ ಪಟ್ಟುಗಳನ್ನು ಕಲಿತುಕೊಂಡರು. 

ಎರಡನೇ ಮಹಾಯುದ್ಧದ ನಂತರ ಒತ್ತಾಯದಿಂದ ‘ರಾಷ್ಟ್ರೀಯ ಸೇವೆ’ಗೆ ಸೇರ್ಪಡೆಯಾಗಬೇಕಾಯಿತು. ಪಶ್ಚಿಮ ಜರ್ಮನಿಯಲ್ಲಿ ಪುಟ್ಟ ಸೇನಾಕೋಠಿಯೊಂದನ್ನು ಮುನ್ನಡೆಸುವ ಅವಕಾಶವೂ ಅವರಿಗೆ ದೊರೆಯಿತು. ಇದೆಲ್ಲದರ ಫಲವಾಗಿ ಕುಲೀನ ಇಂಗ್ಲಿಷ್‌ ವ್ಯಕ್ತಿಯ ವರ್ಚಸ್ಸು ಅವರಿಗೆ ದೊರೆಯಿತು. ಅದಾದ ನಂತರ ಅವರ ಆಸಕ್ತಿ ಮತ್ತೆ ಸಿನಿಮಾದತ್ತ ಹರಿಯಿತು.

ಮೂರ್‌ ದೃಶ್ಯಮಾಧ್ಯಮದಲ್ಲಿ ಮೊದಲು ಜನಪ್ರಿಯರಾಗಿದ್ದು ಟೆಲಿವಿಷನ್‌ ಷೋಗಳ ಮೂಲಕ. ನಿರ್ಮಾಣ, ನಿರ್ದೇಶನದ ಜೊತೆಗೆ ನಟನಾಗಿಯೂ ತೊಡಗಿಕೊಂಡಿದ್ದ ‘ದಿ ಸೇಂಟ್‌’ ಎನ್ನುವ ಷೋ ಅವರಿಗೆ ಹೆಸರು ತಂದುಕೊಟ್ಟಿತು. ಮೂರ್ ಟೆಲಿವಿಷನ್ ಷೋಗಳಲ್ಲಿ ತೊಡಗಿಕೊಂಡಿದ್ದ ಸಮಯದಲ್ಲಿ, ಜೇಮ್ಸ್‌ ಬಾಂಡ್‌ ಪಾತ್ರಗಳಲ್ಲಿ ಸಿಯಾನ್‌ ಕಾನರಿ ಗುರ್ತಿಸಿಕೊಂಡಿದ್ದರು. ಬಾಂಡ್‌ ಪಾತ್ರಗಳಿಗೆ ಕಾನರಿ ವಿದಾಯ ಹೇಳಿದ ನಂತರ, ಆ ಸಮವಸ್ತ್ರ ಮೂರ್‌ ಅವರಿಗೆ ದೊರೆಯಿತು.

‘ಲಿವ್ ಅಂಡ್ ಲೆಟ್ ಡೈ’ (1973) ಚಿತ್ರದ ಮೂಲಕ ಮೂರ್ ಮೊದಲ ಬಾರಿಗೆ ‘ಜೇಮ್ಸ್ ಬಾಂಡ್‌ 007’ ಪಾತ್ರದಲ್ಲಿ ಕಾಣಿಸಿಕೊಂಡರು. ಪಾತ್ರಕ್ಕಾಗಿ ಕೂದಲು ಕತ್ತರಿಸಿಕೊಂಡು, ತೂಕ ಇಳಿಸಿಕೊಂಡ ಅವರು ಬಾಂಡ್‌ ಪಾತ್ರಗಳಿಗೆ ಹೊಸ ಮೆರುಗೊಂದನ್ನು ತಂದುಕೊಟ್ಟರು. ಸಿಗರೇಟ್‌ ಹೊಗೆಯ ಪ್ರಭಾವಳಿಯಲ್ಲಿ ಮದಿರೆ–ಮಾನಿನಿಯರಿಂದ ಸುತ್ತುವರೆದ ಗೂಢಚಾರಿ ಚಿತ್ರರಸಿಕರ ಕಾಮನೆಗಳಿಗೆ ಕಚಗುಳಿ ಇಡುವಂತಿದ್ದ. 1973ರಿಂದ 1985ರ ಅವಧಿಯಲ್ಲಿ ಏಳು ಬಾಂಡ್‌ ಸಿನಿಮಾಗಳಲ್ಲಿ ಮೂರ್‌ ನಟಿಸಿದರು.

‘ಲಿವ್ ಅಂಡ್ ಲೆಟ್ ಡೈ’, ‘ದಿ ಸ್ಪೈ ಹೂ ಲವ್ಡ್ ಮಿ’, ‘ಫಾರ್ ಯುವರ್ ಐಸ್ ಓನ್ಲಿ’, ‘ಮೂನ್ ರಾಕರ್’, ‘ದ ಮ್ಯಾನ್ ವಿಥ್ ದ ಗೋಲ್ಡನ್ ಗನ್’, ‘ಆಕ್ಟೋಪಸಿ’, ‘ಎ ವ್ಯೂ ಟು ಎ ಕಿಲ್’ ಅವರ ನಟನೆಯ ಪ್ರಸಿದ್ಧ ಚಿತ್ರಗಳು. 2004 ಮತ್ತು 2008ರಲ್ಲಿ ನಡೆದ ಸಮೀಕ್ಷೆಗಳಲ್ಲಿ ‘ಅತ್ಯುತ್ತಮ ಬಾಂಡ್‌’ ಎನ್ನುವ ಗೌರವ ಸಂದಿರುವುದು, ಆ ಪಾತ್ರಗಳೊಂದಿಗೆ ಮೂರ್‌ ಹೊಂದಿದ್ದ ಅವಿನಾಭಾವ ಸಂಬಂಧವನ್ನು ಸೂಚಿಸುವಂತಿದೆ. ‘ಮೈ ವರ್ಡ್ ಈಸ್ ಮೈ ಬಾಂಡ್’ ಆತ್ಮಕಥನದಲ್ಲಿ, ಬಾಂಡ್‌ ಪಾತ್ರದೊಂದಿಗಿನ ಅವರ ನಂಟಿನ ವಿವರಗಳಿವೆ.

ನಟನಾಗಿ ಜನಪ್ರಿಯತೆಯ ಉತ್ತುಂಗಕ್ಕೇರಿದರೂ ಅವರ ವೈಯಕ್ತಿಕ ಬದುಕಿನಲ್ಲಿ ಏರಿಳಿತಗಳಿದ್ದವು. ನಾಲ್ಕು ಸಲ ಮದುವೆಯಾದರು. ಮೊದಲ ಮದುವೆಯಾದಾಗ ಅವರು ಹದಿನೆಂಟರ ಹುಡುಗ. ಎಪ್ಪತ್ತೈದನೇ ವಯಸ್ಸಿನಲ್ಲಿ ನಾಲ್ಕನೇ ಮದುವೆ ಮಾಡಿಕೊಂಡರು. ಪ್ರತಿ ಮಧುಚಂದ್ರದ ಆರಂಭ
ದಲ್ಲೂ ಕಡಿದುಕೊಂಡ ನಂಟುಗಳ ಇರುಸುಮುರುಸುಗಳಿದ್ದವು. ಮೊದಲ ಹೆಂಡತಿ ಚಹಾ ಕಪ್ಪನ್ನು ಎಸೆದಿದ್ದರೆ, ಎರಡನೇ ಹೆಂಡತಿ ಗಿಟಾರನ್ನು ಗಂಡನ ತಲೆಗೆ ಅಪ್ಪಳಿಸಿದ್ದಳು. ಅಪ್ಪ ಹೇಳಿಕೊಟ್ಟ ಶಿಸ್ತು, ದಾಂಪತ್ಯಕ್ಕೆ ಸಂಬಂಧಿಸಿದಂತೆ ಮೂರ್‌ ಅವರಿಗೆ ಉಪಯೋಗಕ್ಕೆ ಬಂದಂತಿರಲಿಲ್ಲ.

ಭಾರತದ ಬಗ್ಗೆ ಮೂರ್‌ ಅವರಿಗೆ ವಿಶೇಷ ಕಾಳಜಿಯಿತ್ತು. 1982ರಲ್ಲಿ ಮೊದಲಬಾರಿಗೆ ‘ಆಕ್ಟೋಪಸಿ’ ಸಿನಿಮಾದ ಚಿತ್ರೀಕರಣಕ್ಕೆಂದು ಅವರು ಭಾರತಕ್ಕೆ ಬಂದಿದ್ದರು. ರಾಜಸ್ತಾನದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ಅವರ ಗಮನವನ್ನು ಇಲ್ಲಿನ ಬಡತನ, ಮಕ್ಕಳ ಅಪೌಷ್ಟಿಕತೆ ಸೆಳೆದವು. ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಜಗತ್ತಿನ ಗಮನ ಸೆಳೆಯಲು ಪ್ರಯತ್ನಿಸಿದರು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರಿಗೆ ‘ಯುನಿಸೆಫ್‌’ನ ರಾಯಭಾರಿ ರೂಪದ ಗೌರವ ದೊರೆತಿತ್ತು.

ಇಂಗ್ಲೆಂಡ್‌ನಲ್ಲಿ ಜನಿಸಿದ ಮೂರ್‌ ಕೊನೆಯುಸಿರೆಳೆದಿದ್ದು ಸ್ವಿಟ್ಜರ್ಲೆಂಡ್‌ನಲ್ಲಿ. ಸಿನಿಮಾಗಳ ಮೂಲಕ ದೇಶ–ಕಾಲಗಳ ಚೌಕಟ್ಟು ಮೀರಲು ಹಂಬಲಿಸಿದ ಅವರು, ಜೇಮ್ಸ್‌ ಬಾಂಡ್‌ ರೂಪದಲ್ಲಿ ಚಿತ್ರರಸಿಕರ ಮನಸ್ಸುಗಳಲ್ಲಿ ಮರುಹುಟ್ಟು ಪಡೆಯುತ್ತಲೇ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT