ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಷಕಾರಿ ಭೂಮಿಯ ಫಲವತ್ತತೆ ಹೆಚ್ಚಿಸುವೆ’

ಕೇರಳದ ವಿದ್ಯಾರ್ಥಿನಿ ಜೆಮಿ ಜೋಸೆಫ್‌ಗೆ 13 ಚಿನ್ನದ ಪದಕ
Last Updated 27 ಮೇ 2017, 19:30 IST
ಅಕ್ಷರ ಗಾತ್ರ

ಧಾರವಾಡ: ‘ಕೇರಳದಲ್ಲಿ ಕೃಷಿ ಭೂಮಿ ಹಿಂದೆಂದಿಗಿಂತ ಹೆಚ್ಚು ವಿಷಕಾರಿ ಯಾಗಿದೆ. ಅಕ್ಕಿ ಸೇರಿದಂತೆ ಪ್ರಮುಖ ಆಹಾರ ಪದಾರ್ಥಗಳನ್ನು ಬೇರೆ ರಾಜ್ಯಗಳಿಂದ ತರಿಸಿಕೊಳ್ಳುತ್ತಿದ್ದೇವೆ. ಹೀಗಾಗಿ ಮಣ್ಣಿನ ಫಲವತ್ತತೆ ವೃದ್ಧಿಗೆ ಶ್ರಮಿಸುವುದೇ ನನ್ನ ಮುಂದಿನ ಗುರಿ...’
ಹೀಗೆ ಹೇಳಿದ್ದು, ಕೃಷಿ ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ಸ್ನಾತಕ ಪದವಿಯಲ್ಲಿ 13 ಚಿನ್ನದ ಪದಕ ಪಡೆದ ಕೇರಳದ ಎರ್ನಾಕುಲಂನ ಜೆಮಿ ಜೋಸೆಫ್‌.

ಹೆಚ್ಚು ಚಿನ್ನದ ಪದಕ ಪಡೆಯುವ ಮೂಲಕ ಘಟಿಕೋತ್ಸವದಲ್ಲಿ ‘ಚಿನ್ನದ ಹುಡುಗಿ’ಯಾಗಿ ಹೊರಹೊಮ್ಮಿದ ಸಂಭ್ರಮವನ್ನು ಅವರು ‘ಪ್ರಜಾವಾಣಿ’ ಯೊಂದಿಗೆ ಹಂಚಿಕೊಂಡರು.

‘ಮಣ್ಣಿನ ಕುರಿತು ಸಂಶೋಧನೆ ನಡೆಸುವುದರ ಜತೆಗೆ ರೈತರ ಬದುಕು ಸುಧಾರಣೆಗೂ ಶ್ರಮಿಸುತ್ತೇನೆ’ ಎಂದು ಅವರು ಹೇಳಿದರು.

ಕೇರಳ ರಾಜ್ಯದ ಇನ್ನೊಬ್ಬ ಯುವತಿ ಫಾತಿಮಾ ಜೆಹ್ಲಾ ಐದು ಚಿನ್ನ, ವಿಜಯಪುರದ ಉಮಾ ಆರ್. ಬ್ಯಾಡಗಿ, ಧಾರವಾಡದ ಅಭಿರಾಜ ಪ್ರಕಾಶ ಮತ್ತು ಶಿರಸಿಯ ಅಶ್ವಿನ್‌ ತಲಾ ಮೂರು ಚಿನ್ನದ ಪದಕ ಸ್ವೀಕರಿಸಿದರು.
* * *
ಮಾತು ಬಾರದ ರೈತನ ಮಗನಿಗೆ ಐದು ಪದಕ


ಜಮಾಲುದ್ದೀನ್‌ ಅವರನ್ನು ಸಹಪಾಠಿ ಅಭಿನಂದಿಸಿದರು

ಧಾರವಾಡ: ‘ಮಾತು ಬಾರದ ಕೃಷಿಕ ಅಪ್ಪ, ಪ್ರಾಥಮಿಕ ಶಾಲೆ ಮೆಟ್ಟಿಲು ಹತ್ತದ ತಾಯಿಯೇ ನನ್ನ ಈ ಸಾಧನೆಗೆ ಪ್ರೇರಣೆ’ ಎಂದು ಸ್ನಾತಕೋತ್ತರ ಪದವಿಯಲ್ಲಿ ಐದು ಚಿನ್ನದ ಪದಕ ಪಡೆದ ಕೇರಳದ ಮಳಪ್ಪುರಂನ ಎ.ಜಮಾಲುದ್ದೀನ್‌ ಭಾವುಕರಾಗಿ ಹೇಳಿದರು.

‘ಬಾಲ್ಯದಿಂದ ತಂದೆಯ ಕೈ ಸನ್ನೆಯೇ ಹೆಚ್ಚು ಆಕರ್ಷಣೀಯ ಅನ್ನಿಸುತ್ತಿತ್ತು. ಆದರೆ, ಅದು ವೈಕಲ್ಯ ಎಂದು ಅರಿವಾದಾಗ ಮನಸ್ಸಿಗೆ ನೋವಾಯಿತು. ಆದರೆ, ತಾಯಿ ನನಗೆ ಸ್ಫೂರ್ತಿ ತುಂಬಿದರು. ಸಾಧನೆಯ ಹಾದಿಗೆ ಮಾರ್ಗದರ್ಶಿಯಾದರು. ಜೀವನದಲ್ಲಿ ತಂದೆ ತುಂಬಿದ ನೈತಿಕ ಸ್ಥೈರ್ಯ ಮರೆಯಲಾಗದು’ ಎಂದು ಕುಟುಂಬದ ಸದಸ್ಯರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.

‘ಹುಟ್ಟಿನಿಂದ ಮಾತು ಬಾರದ ತಂದೆ ಮಹಮ್ಮದ್‌ ಕುಟ್ಟಿ ನಾಲ್ಕನೇ ತರಗತಿಯಲ್ಲೇ ಶಾಲೆ ಬಿಟ್ಟು, ಕೃಷಿಯಲ್ಲಿ ತೊಡಗಿಸಿಕೊಂಡು. ಮಕ್ಕಳನ್ನು ಓದಿಸಿದರು. ಒಂದು ಎಕರೆಯಲ್ಲಿ ಬಾಳೆ, ತೆಂಗು ಬೆಳೆಯುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಹಾಗೂ ಮಣ್ಣನ್ನು ನಂಬಿದ್ದಾರೆ. ಅವರ ನಂಬಿಕೆ ಹುಸಿಯಾಗಲಿಲ್ಲ’ ಎಂದು ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT