ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಶಿಕ್ಷಕರಿಗೆ ಮತ್ತೊಮ್ಮೆ ವರ್ಗಾವಣೆ ಭಾಗ್ಯ

ಶಿಕ್ಷಕರ ವರ್ಗಾವಣೆಗೆ ಕರಡು ನಿಯಮಾವಳಿ ಸಿದ್ಧ
Last Updated 27 ಮೇ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ಹೆಚ್ಚುವರಿ ಶಿಕ್ಷಕರು ಎಂದು ಗುರುತಿಸಿ ಬೇರೆ ಶಾಲೆಗಳಿಗೆ ಸ್ಥಳ ನಿಯುಕ್ತಿಗೊಂಡವರಿಗೂ ಈ ಬಾರಿ ವರ್ಗಾವಣೆಯ ಅವಕಾಶ ಸಿಗಲಿದೆ. 
 
‘ಶಿಕ್ಷಕರ ವರ್ಗಾವಣೆ ತಿದ್ದುಪಡಿ ಅಧಿನಿಯಮ–2017’ರ ಅನ್ವಯ ಹೊಸ ನಿಯಮಾವಳಿ ರಚಿಸಲು ಶುಕ್ರವಾರ ನಡೆದ ಸಭೆಯಲ್ಲಿ ಕರಡು ಪ್ರತಿ ಸಿದ್ಧಪಡಿಸಲಾಗಿದೆ.
 
ಹಿಂದೆ ಇದ್ದ ಕಠಿಣ ನಿಯಮಗಳನ್ನು ಈ ಬಾರಿ ಸರಳಗೊಳಿಸಿ, ಶಿಕ್ಷಕರಿಗೆ ಅನುಕೂಲವಾಗುವಂತೆ ನಿಯಮ ರೂಪಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
 
ಮಕ್ಕಳು ಹಾಗೂ  ಶಿಕ್ಷಕರ ಅನುಪಾತಕ್ಕಿಂತ ಹೆಚ್ಚಿನ ಸಂಖ್ಯೆಯ ಶಿಕ್ಷಕರಿದ್ದ ಶಾಲೆಗಳಿಂದ ಕಡಿಮೆ ಸಂಖ್ಯೆಯ ಶಿಕ್ಷಕರಿದ್ದ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ಕಡ್ಡಾಯವಾಗಿ ಸ್ಥಳ ನಿಯುಕ್ತಿ ಮಾಡಲಾಗಿತ್ತು.
 
2015–16, 2016–17 ನೇ ಸಾಲಿನಲ್ಲಿ ಹೆಚ್ಚುವರಿ ಶಿಕ್ಷಕರನ್ನು ಘಟಕದಿಂದ (ಘಟಕ ಎಂದರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಜಿಲ್ಲೆಯ ವ್ಯಾಪ್ತಿ) ಹೊರಗೆ ಕಳುಹಿಸಲಾಗಿತ್ತು. 
 
ಹೆಚ್ಚುವರಿ ಶಿಕ್ಷಕರನ್ನು ಕಡ್ಡಾಯವಾಗಿ ಎತ್ತಂಗಡಿ ಮಾಡಿದ್ದರಿಂದ ಶಿಕ್ಷಕರ ಆಕ್ರೋಶಕ್ಕೆ ಇಲಾಖೆ ತುತ್ತಾಗಿತ್ತು. ಇದನ್ನು ಸರಿಪಡಿಸಲು ಮುಂದಾಗಿರುವ ಇಲಾಖೆ, ಹೆಚ್ಚುವರಿ ಶಿಕ್ಷಕರು ತಮಗೆ ಅನುಕೂಲವಾಗುವ ಸ್ಥಳಕ್ಕೆ ವರ್ಗಾವಣೆ ಕೋರಿ ಅರ್ಜಿ ಹಾಕಲು ಈ ಬಾರಿ ಅವಕಾಶ ಕಲ್ಪಿಸಿದೆ.  
 
ವರ್ಗಾವಣೆಗೆ ಅರ್ಜಿ ಸಲ್ಲಿಸಲು ಒಂದು ಸ್ಥಳದಲ್ಲಿ ಮೂರು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಿರಬೇಕು ಎಂಬ  ನಿಯಮ  ಇಂತಹ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕರಡು ನಿಯಮಾವಳಿ ಹೇಳಿದೆ.
 
‘ಸೇವಾವಧಿಯಲ್ಲಿ ಒಮ್ಮೆಯೂ ಕೂಡ ಪರಸ್ಪರ ವರ್ಗಾವಣೆ ನಿಯಮದಡಿ  ವರ್ಗಾವಣೆ ಸೌಲಭ್ಯ ಪಡೆಯದೇ ಇದ್ದವರಿಗೆ ಒಂದು ಬಾರಿ ಅವಕಾಶ ಕಲ್ಪಿಸಲು ಇಲಾಖೆ ಮುಂದಾಗಿದೆ. 
 
ಸೇವಾವಧಿಯಲ್ಲಿ ಎರಡು ಬಾರಿ ಪರಸ್ಪರ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು ಎಂಬ  ಸಲಹೆ ಸಭೆಯಲ್ಲಿ ಬಂದಿತು. ಆದರೆ, ಇದನ್ನು ಸರ್ಕಾರದ ವಿವೇಚನೆಗೆ ಬಿಡಲಾಯಿತು’ ಎಂದು ಮೂಲಗಳು ತಿಳಿಸಿವೆ.
 
ಆದರೆ, ‘ಎ’ ವಲಯದ ಒಳಗೆ (ಜಿಲ್ಲಾ ಕೇಂದ್ರ ಮತ್ತು ಮಹಾನಗರ ಪಾಲಿಕೆ ಪ್ರದೇಶ) ಪರಸ್ಪರ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಎ ವಲಯದಲ್ಲಿರುವರು ‘ಬಿ’ ವಲಯ(ಅರೆ ನಗರ) ಅಥವಾ ‘ಸಿ’ ವಲಯಕ್ಕೆ (ಗ್ರಾಮೀಣ)ಪರಸ್ಪರ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 
 
ಶೇ 10ರಿಂದ ಶೇ 15ರವರೆಗೆ ಅವಕಾಶ: ಘಟಕದ ವ್ಯಾಪ್ತಿಯಲ್ಲಿರುವ ಒಟ್ಟಾರೆ ಶಿಕ್ಷಕರ ಸಂಖ್ಯೆಯ ಶೇ 10ರಷ್ಟು ಶಿಕ್ಷಕರನ್ನು ವರ್ಗಾವಣೆ ಮಾಡಲು ನಿಯಮಾವಳಿ ಅವಕಾಶ ನೀಡಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಸಂಖ್ಯೆ ಇಲ್ಲದೇ ಇದ್ದರೆ ಈ ಪ್ರಮಾಣವನ್ನು ಶೇ 15ಕ್ಕೆ ಹೆಚ್ಚಿಸಲು ಅವಕಾಶ ನೀಡಲಾಗಿದೆ. ಆದರೆ ‘ಎ’ ವಲಯ (ನಗರ ಪ್ರದೇಶ)ದಲ್ಲಿರುವ ಖಾಲಿ ಹುದ್ದೆಗಳಿಗೆ  ಶೇ 15ರ ಗರಿಷ್ಠ ಮಿತಿ ಅನ್ವಯವಾಗುವುದಿಲ್ಲ. 
 
10 ವರ್ಷ ಒಂದೇ ಸ್ಥಳದಲ್ಲಿದ್ದರೆ ಕಡ್ಡಾಯ ವರ್ಗ: ‘ಎ’ ವಲಯದಲ್ಲಿ 10 ವರ್ಷ ಸೇವೆ ಸಲ್ಲಿಸಿದವರನ್ನು ಕಡ್ಡಾಯವಾಗಿ ‘ಬಿ’ ಅಥವಾ ‘ಸಿ’ ವಲಯಕ್ಕೆ ವರ್ಗಾವಣೆ ಮಾಡಲು ನಿಯಮಾವಳಿ ಅವಕಾಶ ಒದಗಿಸಿದೆ. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರು,  ಮಾಜಿ ಸೈನಿಕರ ಪತ್ನಿಯರು, 2 ವರ್ಷಕ್ಕಿಂತ ಕಡಿಮೆ ಸೇವಾವಧಿಯುಳ್ಳ ಶಿಕ್ಷಕರಿಗೆ ಈ ನಿಯಮದಿಂದ ವಿನಾಯಿತಿ ಸಿಗಲಿದೆ.
 
ಗರಿಷ್ಠ ಸೇವಾವಧಿ ಆಧರಿಸಿ ಶಿಕ್ಷಕರನ್ನು ವರ್ಗಾವಣೆ ಮಾಡಲು ಇಲಾಖೆ ಮುಂದಾಗಿದೆ. ಬೆಂಗಳೂರು  ಸೇರಿದಂತೆ ಬಹುತೇಕ ನಗರಗಳಲ್ಲಿ 22 ವರ್ಷದಿಂದ 26 ವರ್ಷದಷ್ಟು ಸುದೀರ್ಘ ಸೇವೆ ಸಲ್ಲಿಸಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಶಿಕ್ಷಕ ವೃಂದದ ಶೇ 10ರಷ್ಟು ಮಿತಿಗೆ ಒಳಪಟ್ಟು ವರ್ಗಾವಣೆ ಮಾಡಬೇಕು ಎಂದು ನಿಯಮ ಅನ್ವಯವಾದರೆ ‘ಎ’ವಲಯದಲ್ಲಿ 20 ವರ್ಷಕ್ಕಿಂತ ಹೆಚ್ಚಿನ ಅವಧಿ ಸೇವೆ ಸಲ್ಲಿಸಿದ ಶಿಕ್ಷಕರು ಮಾತ್ರ ಈ ಬಾರಿ ಕಡ್ಡಾಯ ವರ್ಗಾವಣೆಗೆ ಗುರಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT