ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕಡ: ಎಂಡೊ ಸಂತ್ರಸ್ತರಿಂದ ಉಪವಾಸ ಸತ್ಯಾಗ್ರಹ ಆರಂಭ

Last Updated 27 ಮೇ 2017, 19:30 IST
ಅಕ್ಷರ ಗಾತ್ರ
ಉಪ್ಪಿನಂಗಡಿ: ಎಂಡೊ ಸಂತ್ರಸ್ತರಿಗೆ ಕೇರಳ ಮಾದರಿಯ ಪರಿಹಾರ ಪ್ಯಾಕೇಜ್‌ ನೀಡಬೇಕು ಎಂಬ ಪ್ರಮುಖ ಬೇಡಿಕೆ ಸಹಿತ ಒಟ್ಟು 20 ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಶನಿವಾರ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡದಲ್ಲಿ ಎಂಡೊ ಸಂತ್ರಸ್ತರ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭವಾಯಿತು.
 
ಸ್ವತಃ ಮುಖ್ಯಮಂತ್ರಿ ಅವರೇ ಸ್ಥಳಕ್ಕೆ ಬಂದು, ಕಷ್ಟ ಆಲಿಸದ ಹೊರತು ಸತ್ಯಾಗ್ರಹ ಕೊನೆಗೊಳಿಸುವುದಿಲ್ಲ ಎಂದು ಕೊಕ್ಕಡ ಎಂಡೊ ವಿರೋಧಿ ಹೋರಾಟ ಸಮಿತಿ ಸಂಚಾಲಕ ಶ್ರೀಧರ ಗೌಡ ಹೇಳಿದ್ದಾರೆ. ಹತ್ತಾರು ಎಂಡೊ ಸಂತ್ರಸ್ತರ ಜತೆಗೆ ನೂರಾರು ನಾಗರಿಕರು ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.
 
‘ನನ್ನ ಮನೆಯಲ್ಲಿ ದುಡಿಯುವ ಗಂಡಸರಿಲ್ಲ, ದುಡಿಯುವ ವಯಸ್ಸಿನ ಜೀವ ದುಡಿಯಲಾರದ ಸ್ಥಿತಿಯಲ್ಲಿದೆ. ನರಳಾಟದ ಮಕ್ಕಳನ್ನು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ. ದುಡಿದು ಸಂಪಾದಿಸುವಂತಿಲ್ಲ.
 
ಈ ಪರಿಯ ಗೋಳಾಟದ ನರಳಾಟದ ಬದುಕು ನೀಡಿದ ಸರ್ಕಾರ ಎಂಡೋಪೀಡಿತರ ಹಕ್ಕಿನ ಸವಲತ್ತನ್ನು ನೀಡದೇ ಹೋದರೆ ಕೊಕ್ಕಡದಲ್ಲೇ ನಮ್ಮೆಲ್ಲರ ಪ್ರಾಣ ಪಕ್ಷಿ ಕಳಚಲಿದೆ’ ಎಂದು ವೇದಿಕೆಯ ಮಧ್ಯೆ ಕುಳಿತಿದ್ದ ಎಂಡೋ ಸಂತ್ರಸ್ತ ಮಹಿಳೆ ಕಮಲಾ ಕನ್ಯಾಡಿ ಹೇಳಿದರು.
 
ಎಂಡೊ ಪೀಡಿತ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರದೀಪ ಮಾತನಾಡಿ, ‘ನಮ್ಮ ಹಕ್ಕು ನಮಗೆ ನೀಡಿ. ಅದಕ್ಕಾಗಿ ನಮ್ಮನ್ನು ಮತ್ತೆ ಮತ್ತೆ ಬೀದಿಗಿಳಿಯುವಂತೆ ಮಾಡಬೇಡಿ’ ಎಂದು ಕೇಳಿಕೊಂಡರು.
****
ಅಧಿಕಾರಿಗಳೊಂದಿಗೆ ಮಾತುಕತೆಗೆ ನಕಾರ

ಪ್ರತಿಭಟನಾ ಸ್ಥಳಕ್ಕೆ ಪುತ್ತೂರು ಉಪವಿಭಾಗಾಧಿಕಾರಿ ರಘುನಂದ ಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಬೆಳ್ತಂಗಡಿ ತಹಶೀಲ್ದಾರ್ ತಿಪ್ಪೇಸ್ವಾಮಿ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತನಾಡಲು ಬಯಸಿದರು.

‘ನಮ್ಮ ನೋವಿಗೆ ಸ್ಪಂದಿಸಬೇಕಾದ ಮಂತ್ರಿಗಳು ಸ್ಥಳಕ್ಕೆ ಬರಬೇಕು. ಅಧಿಕಾರಿಗಳಲ್ಲಿ ಮಾತನಾಡಿ ಪ್ರಯೋಜನವಿಲ್ಲ. ಮಂತ್ರಿಗಳು ಬಂದು ಸ್ಪಂದಿಸಿದರೆ ಪ್ರತಿಭಟನೆಯನ್ನು ಸ್ಥಗಿತಗೊಳಿಸುತ್ತೇವೆ’ ಎಂದರು. ಹೀಗಾಗಿ ಅಧಿಕಾರಿಗಳು ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT