ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಆರ್‌ಡಿಒ ಎಟಿಆರ್‌ಗೆ ಜೇಟ್ಲಿ ಚಾಲನೆ ಇಂದು

ಮಾನವರಹಿತ ಯುದ್ಧ ವಿಮಾನಗಳ ಪರೀಕ್ಷಾರ್ಥ ಹಾರಾಟ ನೆಲೆ
Last Updated 27 ಮೇ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ಚಿತ್ರದುರ್ಗ ಜಿಲ್ಲೆ  ಚಳ್ಳಕೆರೆ ತಾಲ್ಲೂಕಿನ ಕುದಾಪುರ ಬಳಿ ವಿಜ್ಞಾನ ನಗರಿಯಲ್ಲಿ ತಲೆ ಎತ್ತಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾನವ ರಹಿತ (ಯುಎವಿ)  ಯುದ್ಧ ವಿಮಾನಗಳ ಪರೀಕ್ಷಾರ್ಥ ವಾಯುನೆಲೆಯನ್ನು (ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ –ಎಟಿಆರ್‌) ರಕ್ಷಣಾ ಸಚಿವ ಅರುಣ್ ಜೇಟ್ಲಿ ಭಾನುವಾರ ಉದ್ಘಾಟಿಸಲಿದ್ದಾರೆ.
 
ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಮಾನವರಹಿತ ಯುದ್ಧ ವಿಮಾನಗಳನ್ನು ಪರೀಕ್ಷಾರ್ಥ ಹಾರಾಟ ನಡೆಸಲು ಸುಮಾರು 4,290 ಎಕರೆ ಪ್ರದೇಶದಲ್ಲಿ  ಸುಸಜ್ಜಿತ ವಾಯುನೆಲೆ ನಿರ್ಮಿಸಲಾಗಿದೆ. ಈ ವಿಮಾನಗಳ ಟೇಕಾಫ್, ಲ್ಯಾಂಡಿಂಗ್ ಮತ್ತು ಹಾರಾಟ ಸಾಮರ್ಥ್ಯವನ್ನು ಇಲ್ಲಿ ಒರೆಗೆ ಹಚ್ಚಲಾಗುತ್ತದೆ. ದೇಶದ ರಕ್ಷಣಾ ವ್ಯವಸ್ಥೆಗೆ ಬಲ ತುಂಬುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದೇ ಪರಿಗಣಿಸಲಾಗಿದೆ. 
 
ಎಟಿಆರ್‌ ಕಾಮಗಾರಿ ಕೆಲವು ತಿಂಗಳ ಹಿಂದೆಯೇ ಪೂರ್ಣಗೊಂಡಿದ್ದು, ಈಗಾಗಲೇ ವಿಮಾನಗಳ ಹಾರಾಟ ಪರೀಕ್ಷೆ ನಡೆಯುತ್ತಿದೆ. ಹಲವು ವಿಜ್ಞಾನಿಗಳು ಇಲ್ಲಿ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. 
 
ಮಾನವರಹಿತ ವಿಮಾನ ‘ತಪಸ್ 201’ (ರುಸ್ತುಂ– 2) ವಿಮಾನದ ಪರೀಕ್ಷಾರ್ಥ ಹಾರಾಟ ನವೆಂಬರ್‌ನಲ್ಲಿ ಈ ವಾಯುನೆಲೆಯಲ್ಲಿ  ಯಶಸ್ವಿಯಾಗಿ ನಡೆದಿತ್ತು.
 
ಗಡಿಯಾಚೆ ಬೇಹುಗಾರಿಕೆ ನಡೆಸುವ ಜತೆಗೆ ಶತ್ರುಪಡೆಗಳನ್ನು ಹೊಡೆದುರುಳಿಸಲು ನೆರವು ನೀಡುವ ‘ತಪಸ್‌ 201’, 200 ಕಿ.ಮೀ ದೂರದವರೆಗಿನ ಪ್ರದೇಶದಲ್ಲಿ ದಿನದ 24 ಗಂಟೆಯೂ ಹದ್ದಿನ ಕಣ್ಣಿಟ್ಟು, ಭೂ-ವಾಯು-ನೌಕಾ ಪಡೆಗಳಿಗೆ ಸಚಿತ್ರ ಮಾಹಿತಿ ರವಾನಿಸುವ ಮೂಲಕ ಸೇನೆಯ ನೆರವಿಗೆ ನಿಲ್ಲುವ ಸಾಮರ್ಥ್ಯ ಹೊಂದಿದೆ.
 
‘28 ಕಿ.ಮೀ ಸುತ್ತಳತೆಯಲ್ಲಿ ನಿರ್ಮಾಣಗೊಂಡಿರುವ ಈ ಹೊಸ ವಾಯುನೆಲೆ, ರಾಡಾರ್‌ ನಿಗಾ ಹೊಂದಿದೆ. ಒಳಭಾಗದಲ್ಲಿ ಸುಮಾರು 3 ಕಿ.ಮೀ.ನಲ್ಲಿ ತಪಸ್‌ಗಾಗಿ 2.3 ಕಿಮೀ ಉದ್ದ ರನ್‌ವೇ ನಿರ್ಮಿಸಲಾಗಿದೆ. ಒಂಬತ್ತು ತಿಂಗಳಿನಿಂದ ಇಲ್ಲಿ ಕಾಮಗಾರಿ ನಡೆಯುತ್ತಿತ್ತು. ವಿಜ್ಞಾನಿಗಳು ಚಳ್ಳಕೆರೆಯ ಸುತ್ತಮುತ್ತವೇ ನೆಲೆಸಿದ್ದು, ಹಿರಿಯ ಅಧಿಕಾರಿಗಳು ಬೆಂಗಳೂರಿನಿಂದ ಆಗಾಗ ಇಲ್ಲಿಗೆ ಬರುತ್ತಾರೆ’ ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ.
 
ರಕ್ಷಣಾ ವ್ಯವಸ್ಥೆಗೆ ಪೂರಕವಾದ ವೈಮಾನಿಕ ಪ್ರಯೋಗ ನಡೆಸಲು ವಿಶಾಲ ಪ್ರದೇಶ ಅಗತ್ಯವಿದೆ. ಪ್ರಯೋಗಾರ್ಥ ಇಲ್ಲಿ ಆಗಾಗ ಹಾರಾಟ ನಡೆಸ
ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ, ದೇಶೀಯ ನಿರ್ಮಾಣದ  ಮಾನವರಹಿತ ಯುದ್ಧ ವಿಮಾನಗಳ ಪರೀಕ್ಷಾರ್ಥ ಹಾರಾಟ ಇಲ್ಲಿ ನಡೆಯಲಿದೆ. ಸೇನಾ ಭದ್ರತೆಯಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.
 
ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿ, ಸುಮಾರು 10,500 ಎಕರೆ ಪ್ರದೇಶದಲ್ಲಿ ವಿಜ್ಞಾನ ನಗರಿ ತಲೆ ಎತ್ತಿದೆ. ಹೊರಭಾಗದಲ್ಲಿ ಸುಮಾರು 3 ಕಿ.ಮೀ ಅಂತರದಲ್ಲಿ 200 ಎಕರೆ ಪ್ರದೇಶದಲ್ಲಿ ಶಾಲೆ, ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡ ಟೌನ್‌ಶಿಪ್‌ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT