ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಧಾರೆ: ಚೆಕ್‌ಡ್ಯಾಮ್‌ಗಳಿಗೆ ಜೀವಕಳೆ

ರಾಮನಗರ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಕಿರುಅಣೆಕಟ್ಟುಗಳ ನಿರ್ಮಾಣ: ನರೇಗಾ ಯೋಜನೆ ಅಡಿ ಕಾಮಗಾರಿ
Last Updated 27 ಮೇ 2017, 19:30 IST
ಅಕ್ಷರ ಗಾತ್ರ
ರಾಮನಗರ: ಸತತ ನಾಲ್ಕು ವರ್ಷ ಬರಗಾಲಕ್ಕೆ ತುತ್ತಾಗಿದ್ದ ಕನಕಪುರ ತಾಲ್ಲೂಕಿನ ಜನತೆ ಈ ಬಾರಿಯ ಬೇಸಿಗೆಯಲ್ಲಿಯೇ ಹೆಚ್ಚು ನೀರು ಕಾಣತೊಡಗಿದ್ದಾರೆ. ಇಲ್ಲಿನ ಹಳ್ಳಕೊಳ್ಳಗಳಿಗೆ ಅಡ್ಡಲಾಗಿ ನಿರ್ಮಾಣ ಗೊಂಡಿರುವ ಚೆಕ್‌ಡ್ಯಾಮ್‌ಗಳಲ್ಲಿ ಜೀವಜಲ ಸಂಗ್ರಹವಾಗತೊಡಗಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ.
 
ಕಳೆದ ವರ್ಷ ಈ ಕಿರು ಅಣೆಕಟ್ಟೆಗಳು ನಿರ್ಮಾಣವಾಗುವ ಹೊತ್ತಿಗೆಲ್ಲ ಮಳೆಗಾಲ ಮುಗಿದಿತ್ತು. ಬರಗಾಲದ ಕಾರಣ ಹಳ್ಳಗಳು ಬರಿದಾಗಿದ್ದವು. ಈ ಬಾರಿಯ ಬೇಸಿಗೆಯ ಮಳೆಯಲ್ಲಿ ಇವುಗಳ ಒಡಲು ತುಂಬತೊಡಗಿದೆ.
 
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿ ರಾಮನಗರ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿ ಬರೋಬ್ಬರಿ ಒಂದು ಸಾವಿರ ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಬಹುಪಾಲು ಕನಕಪುರದಲ್ಲಿಯೇ ನಿರ್ಮಾಣವಾಗಿವೆ. ಈ ಮೂಲಕ ಅಂತರ್ಜಲ ವೃದ್ಧಿ, ಪ್ರವಾಹ ನಿಯಂತ್ರಣ ಹಾಗೂ ಕೃಷಿ ಕಾರ್ಯಕ್ಕೆ ನೀರಿನ ಸದ್ಬಳಕೆಯ ಗುರಿ ಹೊಂದಲಾಗಿದೆ.
 
ವರವಾದ ಮಳೆ: ಮೇ ತಿಂಗಳಿನಲ್ಲಿ ರಾಮನಗರ ಜಿಲ್ಲೆಯಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ಕನಕಪುರ ತಾಲ್ಲೂಕಿನಲ್ಲಿ 99.4 ಮಿಲಿಮೀಟರ್‌ಗೆ ವಾಡಿಕೆಗೆ ಬದಲಾಗಿ 201.2 ಮಿ.ಮೀ. ಮಳೆಯಾಗಿದ್ದು, ಶೇ 102 ಹೆಚ್ಚುವರಿ ವರ್ಷಾಧಾರೆಯಾಗಿದೆ. ಇದರಿಂದ ಹಳ್ಳಗಳು ಉಕ್ಕಿ ಹರಿದಿದ್ದು, ಚೆಕ್‌ ಡ್ಯಾಮ್‌ಗಳಿಗೆ ಜೀವಕಳೆ ಬಂದಂತಾಗಿದೆ. ಅತಿಯಾದ ಮಳೆಯಿಂದಾಗಿ ಒಂದೆರಡು ಕಡೆ ಹೊಸ ಅಣೆಕಟ್ಟೆಗಳೂ ಒಡೆದುಹೋಗಿವೆ.
 
‘ಹಿಂದೆಲ್ಲ ಮಳೆ ಬಂತೆಂದರೆ ಹಳ್ಳಗಳಲ್ಲಿ ಪ್ರವಾಹ ಉಂಟಾಗಿ ಒಂದೆರಡು ದಿನದಲ್ಲಿಯೇ ನೀರು ಬಸಿದು ಹೋಗುತ್ತಿತ್ತು. ಆದರೆ ಈ ಅಣೆಕಟ್ಟೆಗಳಿಂದಾಗಿ ಇಂದು ನೀರು ಇಂಗತೊಡಗಿದ್ದು, ನಮ್ಮ ಹೊಲಗಳಲ್ಲಿನ ಕೊಳವೆಬಾವಿಗಳಿಗೂ ಮತ್ತೆ ಜೀವ ಬರುತ್ತಿದೆ’ ಎಂದು ಕನಕಪುರತಾಲ್ಲೂಕಿನ ಸಾತನೂರಿನ ರೈತ ಶಿವಶಂಕರ್ ಸಂತಸ ವ್ಯಕ್ತಪಡಿಸಿದ್ದಾರೆ.
 
ನರೇಗಾ ಅಡಿ ಕಾಮಗಾರಿ: 2016–17ನೇ ಸಾಲಿನಲ್ಲಿ ಈ ಯೋಜನೆಯ ಅಡಿ ಜಿಲ್ಲೆಯಾದ್ಯಂತ  ‘ಮಲ್ಟಿ ಆರ್ಚ್‌’ ಮಾದರಿಯ ಚೆಕ್‌ಡ್ಯಾಮ್‌ಗಳ ನಿರ್ಮಾ
ಣಕ್ಕೆ ಒತ್ತು ನೀಡಲಾಗಿತ್ತು. ಪ್ರತಿ ಚೆಕ್‌ ಡ್ಯಾಮ್‌ನ ನಿರ್ಮಾಣಕ್ಕೆ ಸರಾಸರಿ ₹ 5ರಿಂದ 6 ಲಕ್ಷದಷ್ಟು ವ್ಯಯಿಸಲಾಗಿದೆ. ಉದ್ಯೋಗ ಚೀಟಿ ಹೊಂದಿದ ಕಾರ್ಮಿಕರನ್ನು ಇವುಗಳ ನಿರ್ಮಾಣ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಕಾಮಗಾರಿ ವೆಚ್ಚ ಯೋಜನೆಯಿಂದಲೇ ಭರಿಸಲಾಗಿದೆ.

ಕನಕಪುರ ಮುಂದು: ನರೇಗಾ ಅನುಷ್ಠಾನದಲ್ಲಿ ಕನಕಪುರ ತಾಲ್ಲೂಕು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇಲ್ಲಿ ಮಳೆಗಾಲದಲ್ಲಿ ಉಕ್ಕಿ ಹರಿಯುವ ಹಳ್ಳಗಳನ್ನು ಗುರುತಿಸಿ, ಅವುಗಳಿಗೆ ಈ ಕಿರು ಅಣೆಕಟ್ಟೆಗಳನ್ನು ನಿರ್ಮಿಸಲಾಗುತ್ತಿದೆ. ಕೆಲವು ಹಳ್ಳಗಳಿಗೆ ಸಾಲಾಗಿ ನಾಲ್ಕಾರು ಚೆಕ್‌ಡ್ಯಾಮ್‌ಗಳನ್ನು ನಿರ್ಮಾಣ ಮಾಡಲಾಗಿದೆ.
 
2016–17ನೇ ಸಾಲಿನಲ್ಲಿ ಈ ತಾಲ್ಲೂಕು ಒಂದರಲ್ಲಿಯೇ ಸುಮಾರು 949 ಚೆಕ್‌ಡ್ಯಾಮ್‌ಗಳ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳಲ್ಲಿ 843 ಕಾಮಗಾರಿಗಳು ಪೂರ್ಣಗೊಂಡಿವೆ. ಈ ಅವಧಿಯಲ್ಲಿ ಚನ್ನಪಟ್ಟಣ ತಾಲ್ಲೂಕಿನಲ್ಲಿ 41, ಮಾಗಡಿಯಲ್ಲಿ 45 ಹಾಗೂ ರಾಮನಗರದಲ್ಲಿ 7 ಚೆಕ್‌ಡ್ಯಾಮ್‌ಗಳು ನಿರ್ಮಾಣಗೊಂಡಿವೆ. 
 
ಜಿಲ್ಲೆಯಲ್ಲಿ 2017–18ನೇ ಸಾಲಿನಲ್ಲಿ ಏಪ್ರಿಲ್‌ ಅಂತ್ಯಕ್ಕೆ 132 ಚೆಕ್‌ಡ್ಯಾಮ್‌ಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಇವುಗಳ ಪೈಕಿ 29 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಪಿ. ಶೈಲಜಾ ತಿಳಿಸಿದರು
****
ನರೇಗಾ ಅಡಿ ರಾಜ್ಯದಲ್ಲಿಯೇ ಅತಿಹೆಚ್ಚು ಚೆಕ್‌ಡ್ಯಾಮ್‌ಗಳು ರಾಮನಗರ ಜಿಲ್ಲೆಯಲ್ಲಿ ನಿರ್ಮಾಣವಾಗಿವೆ. ಇದು ಅಂತರ್ಜಲ ಮಟ್ಟದ ಸುಧಾರಣೆಗೆ ಸಹಕಾರಿ ಆಗಲಿದೆ
ಸಿ.ಪಿ. ಶೈಲಜಾ, ಸಿಇಒ, ರಾಮನಗರ ಜಿಲ್ಲಾ ಪಂಚಾಯಿತಿ
****
ಚೆಕ್‌ಡ್ಯಾಮ್‌ಗಳಿಂದ ರೈತರಿಗೆ ಅನುಕೂಲವಿದೆ. ಆದರೆ ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಿದರೆ ಹೆಚ್ಚು ಪ್ರಯೋಜನಕಾರಿ
ಸಂಪತ್‌ಕುಮಾರ್, ಕಾರ್ಯಾಧ್ಯಕ್ಷ, ರಾಮನಗರ ಜಿಲ್ಲಾ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT