ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಯ ಹಾದಿಯಲ್ಲಿ ಅವಕಾಶಗಳ ಆಗರ

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಶೈಕ್ಷಣಿಕ ಮೇಳ
Last Updated 27 ಮೇ 2017, 19:39 IST
ಅಕ್ಷರ ಗಾತ್ರ
ಬೆಂಗಳೂರು: ಶೈಕ್ಷಣಿಕ ಬದುಕಿನ ಕವಲು ಹಾದಿಯಲ್ಲಿರುವ ವಿದ್ಯಾರ್ಥಿಗಳವರು. ಯಾವ ದಿಕ್ಕಿನಲ್ಲಿ ಸಾಗಿದರೆ ಭವಿಷ್ಯ ಉಜ್ವಲವಾದೀತು ಎಂಬ ಗೊಂದಲ ಅವರಿಗೆ. ಮಕ್ಕಳ ನಾಳೆಗಳನ್ನು ಸುಂದರಗೊಳಿಸುವ ಕನಸು ಪೋಷಕರಿಗೆ.
 
‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’  ಪತ್ರಿಕೆಗಳ ಆಶ್ರಯದಲ್ಲಿ ಶನಿವಾರ ಇಲ್ಲಿ ಏರ್ಪಡಿಸಿದ್ದ  ‘ಎಡ್ಯುವರ್ಸ್‌ ಜ್ಞಾನದೇಗುಲ’ ಶೈಕ್ಷಣಿಕ ಮೇಳ, ಬದಲಾಗುತ್ತಿರುವ ಶೈಕ್ಷಣಿಕ ಜಗತ್ತಿನಲ್ಲಿ ಮುನ್ನಡೆಯುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಹೊಂದಿರುವ ತಳಮಳವನ್ನು ಹೋಗಲಾಡಿಸುವ ಪ್ರಯತ್ನ ಮಾಡಿತು.   
 
ಶೈಕ್ಷಣಿಕ ತಜ್ಞರು, ಸಾಧಕರು  ಶಿಕ್ಷಣ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಅವಕಾಶಗಳ ಬಗ್ಗೆ ವಿವರಿಸಿದರು.   ವಿದ್ಯಾರ್ಥಿಗಳ   ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರಿಸಿದರು. ಪೋಷಕರ  ಮನದಲ್ಲಿದ್ದ ಗೊಂದಲಗಳನ್ನು ನಿವಾರಿಸಿದರು.  ಯಾವ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದೆ ಎಂಬ ಬಗ್ಗೆ ವಿಶ್ಲೇಷಣೆ ನಡೆಸಿದರು.

 
ಈ ಶತಮಾನ ಭಾರತೀಯರದು: ವೃತ್ತಿ ಅವಕಾಶಗಳ ಕುರಿತು ಮಾತನಾಡಿದ ಇಂಡಿಯಾ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಸೆಮಿಕಂಡಕ್ಟರ್‌ ಅಸೋಸಿಯೇಷನ್‌ (ಐಇಎಸ್‌ಎ) ಅಧ್ಯಕ್ಷ ಎಂ.ಎನ್‌.ವಿದ್ಯಾಶಂಕರ್‌, ‘18ನೇ ಶತಮಾನದುದ್ದಕ್ಕೂ ಇಂಗ್ಲೆಂಡ್‌ ಪಾರಮ್ಯ ಮೆರೆಯಿತು. 19 ಮತ್ತು 20ನೇ ಶತಮಾನವನ್ನು ಅಮೆರಿಕ ಆಳಿತು. 21ನೇ ಶತಮಾನವೇನಿದ್ದರೂ ಭಾರತೀಯರಿಗೆ ಸೇರಿದ್ದು. ನಮ್ಮ ದೇಶದಲ್ಲಿ ಹೊಸ ಅವಕಾಶಗಳ ಆಗರವೇ ಸೃಷ್ಟಿಯಾಗುತ್ತಿವೆ. ಹೊಸ ಅವಕಾಶಗಳನ್ನು ಬಾಚಿಕೊಳ್ಳಲು ಯುವಜನತೆ ಸಜ್ಜಾಗಬೇಕು’ ಎಂದು ಕಿವಿಮಾತು ಹೇಳಿದರು.
 
‘ನಮ್ಮ ದೇಶವು ಎಲೆಕ್ಟ್ರಾನಿಕ್ಸ್‌ ಸರಕುಗಳನ್ನು ಆಮದು ಮಾಡಿಕೊಳ್ಳಲು ವರ್ಷದಲ್ಲಿ ₹ 5.16 ಲಕ್ಷ ಕೋಟಿ ವ್ಯಯಿಸುತ್ತಿದೆ.  ಈ ಸರಕುಗಳನ್ನು  ದೇಶದಲ್ಲೇ ಉತ್ಪಾದಿಸಲು ಕೇಂದ್ರ ಸರ್ಕಾರ  ಉತ್ತೇಜನ ನೀಡುತ್ತಿದೆ. ಇದು ಹೊಸ ಉದ್ಯೋಗ ಸೃಷ್ಟಿಗೆ ನಾಂದಿ ಹಾಡಿದೆ. ಉತ್ಪಾದನಾ ಕ್ಷೇತ್ರದಲ್ಲಿ ಭಾರಿ ಬಂಡವಾಳ ಹೂಡಿಕೆ ಆಗುತ್ತಿದೆ’ ಎಂದರು. 
 
ಉದ್ಯೋಗ ಸೃಷ್ಟಿಸಿ: ‘ದೇಶದಲ್ಲಿ ಉದ್ಯೋಗಾವಕಾಶಗಳ ವ್ಯಾಪ್ತಿ ಕ್ಷಿಪ್ರ ಗತಿಯಲ್ಲಿ ವಿಸ್ತರಿಸುತ್ತಿದೆ.   ಉದ್ದಿಮೆಗಳನ್ನು ಆರಂಭಿಸಲು ಇದ್ದ ನಿರ್ಬಂಧಗಳನ್ನು ಒಂದೊಂದಾಗಿ ಸಡಿಲಿಸಲಾಗುತ್ತಿದೆ. ಯುವಜನರು ಉದ್ಯಮಿಗಳಾಗಿ ಹೊಸ ಉದ್ಯೋಗಾವಕಾಶ ಸೃಷ್ಟಿಸಲು ಈಗ ಸಕಾಲ’ ಎಂದರು. 
 
ಅರೆ ವೈದ್ಯಕೀಯ ಕೋರ್ಸ್‌ಗೆ  ಬೇಡಿಕೆ: ‘ವೈದ್ಯಕೀಯ ಕೋರ್ಸ್‌ಗಳಿಗೆ ಇರುವಷ್ಟೇ ಬೇಡಿಕೆ ಅರೆ ವೈದ್ಯಕೀಯ ಕೋರ್ಸ್‌ಗಳಿಗೂ ಇದೆ. ಕೆಲವು ಅರೆ ವೈದ್ಯಕೀಯ ಸಿಬ್ಬಂದಿಯೂ ವೈದ್ಯರಷ್ಟೇ ಸಂಬಳವನ್ನೂ ಪಡೆಯುತ್ತಾರೆ’ ಎಂದರು.
 
ಬಯೊಮೆಡಿಕಲ್‌ ಎಂಜಿನಿಯರಿಂಗ್‌–ಹೊಸ ಅವಕಾಶ: ‘ಅತ್ಯಾಧುನಿಕ ವೈದ್ಯಕೀಯ ಪರಿಕರಗಳನ್ನು ಉತ್ಪಾದಿಸುವ ಬಯೊಮೆಡಿಕಲ್‌ ಎಂಜಿನಿಯರಿಂಗ್‌  ಕ್ಷೇತ್ರ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದಿದೆ.  ಈ ಪರಿಕರಗಳ  ನಿರ್ವಹಣೆ ವಿಶೇಷ ಕೌಶಲವನ್ನು ಬಯಸುತ್ತದೆ. ಈ ಕ್ಷೇತ್ರ ಸಾಕಷ್ಟು ಉದ್ಯೋಗ ಸೃಷ್ಟಿಸುತ್ತಿದೆ’ ಎಂದರು. 
 
ಕಾನೂನು ತಜ್ಞರಿಗೆ ಬೇಡಿಕೆ: ‘ಅಂತರರಾಷ್ಟ್ರೀಯ ವ್ಯಾಪಾರ ಹೆಚ್ಚಿದಂತೆ ಉದ್ದಿಮೆ ಹಾಗೂ ತೆರಿಗೆ   ಸಂಬಂಧಿ  ಕಾನೂನು ತಜ್ಞರಿಗೆ  ಬೇಡಿಕೆ ಜಾಸ್ತಿ ಆಗುತ್ತಿದೆ. ಕೆಲವು ದೇಶಗಳು ಜ್ಞಾನಾಧಾರಿತ ಕೆಲಸಗಳನ್ನು ಹೊರಗುತ್ತಿಗೆ ನೀಡುತ್ತಿವೆ. ಕಾನೂನು ಸಮರಗಳಿಗೆ ಪೂರಕವಾಗಿ ಸಾಕ್ಷ್ಯಗಳನ್ನು, ವಿವರಣೆಗಳನ್ನು ಸಿದ್ಧಪಡಿಸುವ ಕಾರ್ಯವನ್ನು ನಿರ್ವಹಿಸುವ ದೇಶಗಳಲ್ಲಿ  ಭಾರತ ಮುಂಚೂಣಿಯಲ್ಲಿದೆ’ ಎಂದರು.   
 
‘ಪರಿಸರ ಕಾನೂನುಗಳ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಇತ್ತೀಚೆಗೆ ದೇಶದ ನಿಯಂತ್ರಣ ಪ್ರಾಧಿಕಾರಗಳು ಕಾನೂನು ತಜ್ಞರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳುತ್ತಿವೆ’ ಎಂದು ವಿವರಿಸಿದರು. 
 
ಸೇವೆಗಳ ಜೋಡಣೆ:  ‘ಭಿನ್ನ ರೀತಿಯ ಸೇವೆಗಳನ್ನು ಒಂದಕ್ಕೊಂದು ಜೋಡಿಸುವುದು ಇತ್ತೀಚಿನ ಪ್ರವೃತ್ತಿಗಳಲ್ಲಿ ಒಂದು. ರೆಫ್ರಿಜರೇಟರ್‌ಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವ ದಿನದಲ್ಲಿ ನಾವಿದ್ದೇವೆ. ಕಚೇರಿಯಲ್ಲೇ ಕುಳಿತು ಮಕ್ಕಳು ತರಗತಿಗೆ ಹಾಜರಾಗಿದ್ದಾರೋ ಇಲ್ಲವೋ ಎಂಬುದನ್ನು ತಿಳಿಯಬಹುದು.  ಆ್ಯಂಬುಲೆನ್ಸ್‌ನಲ್ಲಿ ಸಣ್ಣ ಸೆನ್ಸರ್‌ ಅಳವಡಿಸುವ ಮೂಲಕ ಸಿಗ್ನಲ್ ಸ್ವಯಂಚಾಲಿತವಾಗಿ ತೆರವುಗೊಳ್ಳುವಂತೆ ಮಾಡಬಹುದು. ಇಂತಹ ವಿನೂತನ ಆಯ್ಕೆಗಳು ಹೊಸ ಉದ್ಯೋಗಾವಕಾಶ ಸೃಷ್ಟಿಸುತ್ತಿವೆ’ ಎಂದರು. 
 
‘ರೋಬೋಟಿಕ್ಸ್‌ಗಳು ಉದ್ಯೋಗವನ್ನು ಕಸಿದುಕೊಳ್ಳುತ್ತವೆ ಎಂಬುದು ತಪ್ಪುಕಲ್ಪನೆ. ಇವು ಸೇವೆಯ ವೈವಿಧ್ಯವನ್ನು ಹೆಚ್ಚಿಸಲಿವೆ’ ಎಂದರು.
ಮಾನವಿಕ ವಿಷಯಗಳಿಗೂ ಬೇಡಿಕೆ: ಸಂಗೀತ, ಆರ್ಥಿಕ ವ್ಯವಸ್ಥೆ, ಮನರಂಜನೆ ಕ್ಷೇತ್ರಗಳೂ ಉತ್ತಮ ಆದಾಯ ತರಬಲ್ಲವು. ಸ್ಥಳೀಯ ಭಾಷಾ ಕಲಿಕೆ ಉದ್ಯೋಗಾವಕಾಶ ಸೃಷ್ಟಿಸಬಲ್ಲದು’ ಎಂದರು.
 
ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್‌ ಬಾಲಕೃಷ್ಣನ್‌  ವೃತ್ತಿ ಅವಕಾಶಗಳ ಆಯ್ಕೆಗಳ ಬಗ್ಗೆ ಮಾತನಾಡಿದರು.  
****
ಸೈಬರ್‌ ಸುರಕ್ಷತೆ: ಹೇರಳ ಉದ್ಯೋಗಾವಕಾಶ
ಇಂಟರ್ನೆಟ್‌ ಬಳಕೆ ಹೆಚ್ಚುತ್ತಿದ್ದಂತೆಯೇ ಸೈಬರ್‌ ಸುರಕ್ಷತೆಗೆ ಸಂಬಂಧಿಸಿದ ಉದ್ಯೋಗಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ.   ಸದುದ್ದೇಶದ ಹ್ಯಾಕರ್‌ಗಳನ್ನು (ಸಿಇಎಚ್‌) ಸರ್ಕಾರಿ ಸಂಸ್ಥೆಗಳು ನೇಮಿಸಿಕೊಳ್ಳುತ್ತಿವೆ. ಅಮೆರಿಕದಲ್ಲಿ ಸೈಬರ್‌ ಭದ್ರತೆಗೆ ಸಂಬಂಧಿಸಿದ 2.09 ಲಕ್ಷ ಹುದ್ದೆಗಳು ಖಾಲಿ ಇವೆ. ಭಾರತದಲ್ಲಿ ಈ ಸಂಬಂಧ ಇನ್ನು ಮೂರು ವರ್ಷಗಳಲ್ಲಿ 10 ಲಕ್ಷ ಹುದ್ದೆಗಳು ಸೃಷ್ಟಿಯಾಗಲಿವೆ’ ಎಂದು ವಿದ್ಯಾಶಂಕರ್‌ ಮಾಹಿತಿ ನೀಡಿದರು.
****
ಡೇಟಾ ವಿಶ್ಲೇಷಣೆ– ಉದಯೋನ್ಮುಖ ಕ್ಷೇತ್ರ

‘ಬೃಹತ್‌ ಪ್ರಮಾಣದಲ್ಲಿ ದತ್ತಾಂಶಗಳ ವಿಶ್ಲೇಷಣೆ (ಬಿಗ್‌ ಡೇಟಾ ಅನಾಲಿಸಿಸ್‌) ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದಿರುವ ಕ್ಷೇತ್ರ. ಕಳೆದ 200 ವರ್ಷಗಳಲ್ಲಿ ಎಷ್ಟು ದತ್ತಾಂಶ ರೂಪುಗೊಂಡಿತೋ ಅಷ್ಟೇ ಎರಡೇ ವರ್ಷಗಳಲ್ಲಿ ಸಿದ್ಧವಾಗಿದೆ. ದತ್ತಾಂಶಗಳನ್ನು ಒಂದಕ್ಕೊಂದು ಸಂಬಂಧ ಕಲ್ಪಿಸಿ ಹೊಸ ಹೊಳಹುಗಳನ್ನು  ಪಡೆಯುವ ಈ ಕ್ಷೇತ್ರಕ್ಕೆ ಮಿತಿ ಎಂಬುದೇ ಇಲ್ಲ. ಆಧಾರ್‌ ಕಾರ್ಡ್‌  ಜೋಡಿಸಿ  ಬೇರೆ ಬೇರೆ ರೀತಿಯ ಸೇವೆಗಳನ್ನು ಒದಗಿಸುವುದು ಇದಕ್ಕೊಂದು ಉದಾಹರಣೆ’ ಎಂದು ವಿದ್ಯಾಶಂಕರ್‌ ತಿಳಿಸಿದರು.

‘ದೇಶದಲ್ಲಿ ಸ್ಮಾರ್ಟ್‌ ಪೋನ್‌ ಬಳಕೆ ಹೆಚ್ಚುತ್ತಿದೆ. ಕೇವಲ 70 ದಿನಗಳಲ್ಲಿ 10 ಕೋಟಿ ಮಂದಿ ಜಿಯೊ ಮೊಬೈಲ್‌ ಸೇವೆಯನ್ನು ಆರಿಸಿಕೊಂಡಿದ್ದಾರೆ. ಇದು ಇಂಟರ್ನೆಟ್‌ ಆಧಾರಿತ ಸ್ಮಾರ್ಟ್‌ ಪೋನ್‌ಗಳ ಬಳಕೆ ಎಷ್ಟು ಜನಪ್ರಿಯವಾಗುತ್ತಿದೆ ಎಂಬುದಕ್ಕೆ ಉದಾಹರಣೆ.  ಇದು ಇನ್ನಷ್ಟು ಉದ್ಯೋಗಾವಕಾಶಗಳ ಸೃಷ್ಟಿಗೆ ನೆರವಾಗುತ್ತಿದೆ’ ಎಂದರು.


ಎಂ.ಎನ್‌.ವಿದ್ಯಾಶಂಕರ್‌

****
30ರಂದು ಸಿಇಟಿ ಫಲಿತಾಂಶ

ಮೇ 30ರಂದು ಸಿಇಟಿ ಫಲಿತಾಂಶ ಪ್ರಕಟವಾಗಲಿದೆ. ಜೂನ್‌ 1ರಿಂದ ಎನ್‌ಸಿಸಿ, ಅಂಗವಿಕಲರು ಹಾಗೂ ಸೇನಾ   ಕೋಟಾದ ಸೀಟು ಹಂಚಿಕೆಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಆರಂಭವಾಗಲಿದೆ.  ಜೂನ್‌ 5ರಿಂದ ಸಾಮಾನ್ಯ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ಆರಂಭವಾಗಲಿದೆ
ಕೆ.ಎಸ್.ಮಂಜುನಾಥ್‌, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ
****
ಆನ್‌ಲೈನ್‌ ಕೌನ್ಸೆಲಿಂಗ್‌?

ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ  ಕಾಮೆಡ್‌–ಕೆ ಸೀಟು ಹಂಚಿಕೆಗೂ ಈ ವರ್ಷದಿಂದ ಆನ್‌ಲೈನ್‌ ಕೌನ್ಸೆಲಿಂಗ್‌ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ.
ಪ್ರೊ.ವೈ.ಎಸ್.ರಾಮ ರಾವ್‌ , ಕಾಮೆಡ್‌– ಕೆ ಸೀಟು ಹಂಚಿಕೆ ಪ್ರಕ್ರಿಯೆ ಸಮಿತಿ ಸದಸ್ಯ
****
ಸಿಇಟಿ– ಸೀಟು ಆಯ್ಕೆ ಬಗ್ಗೆ ಎಚ್ಚರವಿರಲಿ
ಸಿಇಟಿ ಅಂಕಗಳ ಆಧಾರದಲ್ಲಿ  ನಿರ್ದಿಷ್ಟ ಕಾಲೇಜಿನಲ್ಲಿ ಸೀಟು ಆಯ್ಕೆ ಮಾಡುವ  ಮುನ್ನ ಸಾಕಷ್ಟು ಯೋಚಿಸಿ  ನಿರ್ಧಾರ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ತಳೆಯುವ ತಪ್ಪು ನಿರ್ಧಾರಕ್ಕೆ ಮತ್ತೆ ಪರಿತಪಿಸಬೇಕಾಗುತ್ತದೆ.
ಎ.ಎಸ್‌.ರವಿ, ಕೆಇಎ, ಸಾರ್ವಜನಿಕ ಸಂಪರ್ಕಾಧಿಕಾರಿ
****
ಶೈಕ್ಷಣಿಕ ಮೇಳ– ವಿದ್ಯಾರ್ಥಿಗಳ ಅನಿಸಿಕೆ
ವಾಸ್ತುಶಿಲ್ಪ ಕೋರ್ಸ್‌ ಬಗ್ಗೆ ಆಸಕ್ತಿ ಇದೆ. ಯಾವ ಕಾಲೇಜಿನಲ್ಲಿ ಆ ಕೋರ್ಸ್‌ ಇದೆ, ಅಲ್ಲಿ ಏನೆಲ್ಲ ಅನುಕೂಲಗಳಿವೆ ಎಂಬ ಬಗ್ಗೆ ತಿಳಿಯಲು ಬಹಳ ಅನುಕೂಲವಾಯಿತು
ತೇಜಸ್ವಿನಿ, ಬೆಂಗಳೂರು

ಮೊದಲ ವರ್ಷದ ಪಿಯುಸಿ ಓದುತ್ತಿದ್ದೇನೆ. ವಿಧಿವಿಜ್ಞಾನ ವಿಷಯದಲ್ಲಿ ಆಸಕ್ತಿ ಇದೆ. ಮುಂದೆ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಅನೇಕ ಗೊಂದಲಗಳಿವೆ. ಅದನ್ನು ನಿವಾರಿಸಿಕೊಳ್ಳಲು ದಾರಿಯಾಯಿತು
ಸೌಂದರ್ಯ, ಬೆಂಗಳೂರು

ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದೇನೆ. ಸಿಇಟಿ ಫಲಿತಾಂಶವನ್ನು ಎದುರು ನೋಡುತ್ತಿದ್ದು, ಎಲೆಕ್ಟ್ರಿಕಲ್‌ ಎಂಜಿನಿಯರ್‌ ಆಗುವ ಕನಸಿದೆ.  ಶಿಕ್ಷಣ ಸಂಸ್ಥೆಗಳ ಬಗ್ಗೆ ತಿಳಿದುಕೊಂಡರೆ  ಸಿಇಟಿ ಕೌನ್ಸೆಲಿಂಗ್‌ನಲ್ಲಿ ಸೂಕ್ತ ಕಾಲೇಜನ್ನು   ಆಯ್ಕೆ ಮಾಡುವುದು ಸುಲಭ
ಧನುಷ್‌, ಬೆಂಗಳೂರು

ಸಾಗರಜೀವಿಗಳ ಅಧ್ಯಯನದಲ್ಲಿ  ಆಸಕ್ತಿ ಹೊಂದಿದ್ದೇನೆ. ಅದಕ್ಕೆ ಸಂಬಂಧಪಟ್ಟ ಕೋರ್ಸ್‌ ಯಾವ ಕಾಲೇಜಿನಲ್ಲಿ ಇದೆ ಎಂಬ ಬಗ್ಗೆ ತಿಳಿಯಲು ಇಲ್ಲಿಗೆ ಬಂದಿದ್ದೇನೆ. ಆದರೆ, ಇಲ್ಲಿರುವ ಯಾವ ಕಾಲೇಜಿನಲ್ಲೂ ಆ ಕೋರ್ಸ್‌ ಇಲ್ಲದಿರುವುದು ಬೇಸರ ಮೂಡಿಸಿದೆ
ದಂತಿನ್‌, ಬೆಂಗಳೂರು

ಕಂಪ್ಯೂಟರ್ ಸೈನ್ಸ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಆಸಕ್ತಿ ಹೊಂದಿದ್ದೇನೆ. ನನ್ನ ಅಂಕಗಳಿಗೆ, ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುವ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬೇಕಿದೆ
ಮಾನಸ, ಬೆಂಗಳೂರು

ಅಂತರಿಕ್ಷಯಾನದ ವಿಷಯದಲ್ಲಿ ಸಂಶೋಧನೆ ಕೈಗೊಳ್ಳುವಾಸೆ. ಯಾವ ಕಾಲೇಜುಗಳಲ್ಲಿ ಈ ಕೋರ್ಸ್‌ ಇದೆ ಎಂದು ತಿಳಿಯಲು ಬಂದಿದ್ದೇನೆ. ಈ ಕ್ಷೇತ್ರದಲ್ಲಿ ನಮ್ಮ ದೇಶ ಹಿಂದುಳಿದಿದೆ.  ದೇಶಕ್ಕಾಗಿ  ಕೊಡುಗೆ ನೀಡುವ ಬಯಕೆ ಇದೆ
ಎಂ. ತನುಶ್ರೀ, ಮಂಗಳೂರು
****

ಪೋಷಕರು ಏನಂತಾರೆ?

ಮಕ್ಕಳ ಆಸಕ್ತಿ ಏನೆಲ್ಲ ಇದೆ ಎಂದು ತಿಳಿಯಲು ಎಡ್ಯುವರ್ಸ್ ಜ್ಞಾನದೇಗುಲ ನೆರವಾಯಿತು.   ಕೋರ್ಸ್‌ ನ ಉಪಯೋಗವೇನು, ಯಾವುದಕ್ಕೆ  ಬೇಡಿಕೆ ಇದೆ ಎಂಬುದನ್ನು ಇಲ್ಲಿ ತಿಳಿದುಕೊಂಡೆ
ಸಂಜೀವ್‌, ಬೆಂಗಳೂರು

ಮಕ್ಕಳ ಗೊಂದಲಗಳನ್ನು ನಿವಾರಿಸುವ ಎಂ.ಎನ್‌.ವಿದ್ಯಾಶಂಕರ್‌ ಅವರ ವಿಚಾರಗೋಷ್ಠಿ ಬಹಳ ಉಪಯುಕ್ತವಾಗಿತು. ಪಿಯುಸಿ ಮುಗಿದ ನಂತರ ಈ ರೀತಿಯ ಸಲಹೆ ಮಕ್ಕಳಿಗೆ ಹೆಚ್ಚು ಅಗತ್ಯವಿರುತ್ತದೆ
ಅಬ್ದುಲ್‌, ಬೆಂಗಳೂರು

ಯಾವ ಕೋರ್ಸ್‌ಗಳಿಗೆ ಎಷ್ಟು ಶುಲ್ಕ ಇದೆ ಎಂಬುದು ಒಂದೇ ವೇದಿಕೆಯಲ್ಲಿ ತಿಳಿಯುತ್ತದೆ. ಕಾಲೇಜುಗಳನ್ನು ಹುಡುಕಿಕೊಂಡು ಅಲೆಯುವುದು ಇದರಿಂದ ತಪ್ಪಿದಂತಾಯಿತು
ಬಾಲಸುಬ್ರಹ್ಮಣ್ಯ, ಬೆಂಗಳೂರು

ಮಕ್ಕಳ ಮುಂದಿನ ವಿದ್ಯಾಭ್ಯಾಸದ ಕುರಿತು ಏನೆಲ್ಲ ಆಯ್ಕೆಗಳಿವೆ ಎಂಬುದು ತಿಳಿಸಲು ಸಹಕಾರಿಯಾಗಿದೆ. ಕೇವಲ ಬೆಂಗಳೂರಿನ ಕಾಲೇಜುಗಳಲ್ಲದೆ ರಾಜ್ಯದ ವಿವಿಧ ಭಾಗದ ಕಾಲೇಜುಗಳಲ್ಲಿ ಪರಿಚಯಿಸಿರುವ ನೂತನ ಕೋರ್ಸ್‌ಗಳ ಬಗ್ಗೆ ಮಾಹಿತಿ ದೊರೆಯಿತು
ಉಷಾ, ಬೆಂಗಳೂರು

ಎಲ್ಲರೂ ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್ ಕಲಿಯಲು ಬಯಸುತ್ತಾರೆ. ಅದನ್ನು ಹೊರತುಪಡಿಸಿ ಯಾವೆಲ್ಲ ಕೋರ್ಸ್‌ಗಳು ಇವೆ. ಅವುಗಳ ಬೇಡಿಕೆ ಏನು ಎಂಬ ಬಗ್ಗೆ ತಿಳಿಯಿತು
ಭಾಸ್ಕರ್‌, ಬೆಂಗಳೂರು
****
ವಿದ್ಯಾರ್ಥಿವೇತನ, ಶೈಕ್ಷಣಿಕ ಸಾಲದ ಮಾಹಿತಿ
ಬೆಂಗಳೂರು: ದೀಕ್ಷಾ ಸಂಸ್ಥೆ ವಿದ್ಯಾದಾನ ಎಂಬ ಹೆಸರಿನಲ್ಲಿ ಪಿಯುಸಿ ಎರಡು ವರ್ಷ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತದೆ.
‘ವಾರ್ಷಿಕ ಆದಾಯ ₹40,000ಕ್ಕಿಂತ ಕಡಿಮೆ ಇರುವ ಕುಟುಂಬಗಳ ಮಕ್ಕಳಿಗಾಗಿ ಈ ವಿದ್ಯಾರ್ಥಿ ವೇತನವನ್ನು ಪ್ರಾರಂಭಿಸಿದ್ದೇವೆ.

ಎಲ್ಲಾ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ಈ ವಿದ್ಯಾರ್ಥಿಗಳಿಗೂ ನಮ್ಮದೇ ಶಿಕ್ಷಣ ಸಂಸ್ಥೆಯಲ್ಲಿ ಸೀಟು ನೀಡಲಾಗುವುದು’ ಎಂದು ಸಂಸ್ಥೆಯ ನೇಹಾ ತಿಳಿಸಿದರು.



ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲು ಅನೇಕ ಬ್ಯಾಂಕ್‌ಗಳು ಸಾಲ ಸೌಲಭ್ಯದ ವಿವರಗಳನ್ನು  ಒದಗಿಸಿದವು. ‘ಕೆನರಾ ಬ್ಯಾಂಕ್‌ನಲ್ಲಿ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ₹ 4 ಲಕ್ಷದವರೆಗೆ ಯಾವುದೇ  ಭದ್ರತೆ ಇಲ್ಲದೆಯೇ ಸಾಲ ನೀಡುವ ಸೌಲಭ್ಯವಿದೆ.

ಅದೇ ರೀತಿ ಐಐಟಿ/ಐಐಎಂ ವಿದ್ಯಾರ್ಥಿಗಳಿಗಾಗಿ ವಿದ್ಯಾ ತುರಂತ್‌ ಯೋಜನೆಯನ್ನು ಪರಿಚಯಿಸಿದ್ದೇವೆ’ ಎಂದು ಕೆನರಾ ಬ್ಯಾಂಕ್‌ ಕಂಟೋನ್ಮೆಂಟ್‌ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಲತಾ ತಿಳಿಸಿದರು.
****
ಒಂದೇ ಸೂರಿನಡಿ ಸಮಗ್ರ ಮಾಹಿತಿ
ಬೆಂಗಳೂರು:
  ಪಿಯುಸಿ ನಂತರದ ಶಿಕ್ಷಣಾವಕಾಶಗಳ ಸಮಗ್ರ ಮಾಹಿತಿ ಪಡೆಯಲು ವಿದ್ಯಾರ್ಥಿಗಳು ಹಾಗೂ ಪೋಷಕರು ವಿವಿಧ ಶಿಕ್ಷಣ ಸಂಸ್ಥೆಗಳ ಮಳಿಗೆಗಳಿಗೆ ಮುಗಿಬಿದ್ದರು.

ಮೇಳದಲ್ಲಿ ಒಟ್ಟು 65 ಕಾಲೇಜುಗಳು ಮಳಿಗೆಗಳನ್ನು ತೆರೆದಿದ್ದವು. ರಾಜ್ಯದ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಲಭ್ಯವಿರುವ  ಪಿಯುಸಿಯಿಂದ ಸ್ನಾತಕೋತ್ತರ ಶಿಕ್ಷಣದವರೆಗಿನ ವಿವಿಧ ಕೋರ್ಸ್‌ಗಳು ಹಾಗೂ ಸೀಟುಗಳ  ಮಾಹಿತಿ ಇಲ್ಲಿ ಒಂದೇ ಸೂರಿನಡಿ ಲಭ್ಯವಿತ್ತು.

ಇಷ್ಟದ ಕೋರ್ಸ್‌ ಯಾವ ಕಾಲೇಜಿನಲ್ಲಿ ಲಭ್ಯ ಇದೆ. ಅಲ್ಲಿ ಶುಲ್ಕ ಕೈಗೆಟಕುವಂತಿದೆಯೇ ಎಂಬ ಬಗ್ಗೆ ಕಾಲೇಜಿನ ಪ್ರತಿನಿಧಿಗಳಿಂದಲೇ ನೇರವಾಗಿ ಮಾಹಿತಿ ಪಡೆದರು.   

ಮೇಳಕ್ಕೆ ಬರುವ ವಿದ್ಯಾರ್ಥಿಗಳ ಜೊತೆ  ಸಮಾಲೋಚನೆ ನಡೆಸುತ್ತಿದ್ದ ಕಾಲೇಜಿನ ಸಿಬ್ಬಂದಿ,  ಕೋರ್ಸ್‌ಗಳು  ಹಾಗೂ ಅವುಗಳ ಅನುಕೂಲಗಳ ಬಗ್ಗೆ  ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ  ವಿವರಿಸಿದ್ದರು. ಅವರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದರು.

‘ಇಷ್ಟದ ವಿಷಯಕ್ಕೆ ಮಾರುಕಟ್ಟೆಯಲ್ಲಿ ಯಾವ ರೀತಿಯ ಅವಕಾಶಗಳಿವೆ ಎಂದು ಒಂದಿಷ್ಟು ವಿದ್ಯಾರ್ಥಿಗಳು ಕೇಳಿದರೆ, ಸಂಶೋಧನೆ ಮಾಡಲು ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಕೆಲವರ ಪ್ರಶ್ನೆಯಾಗಿರುತ್ತದೆ’ ಎಂದು ಮೇಳದಲ್ಲಿ ಭಾಗವಹಿಸಿದ್ದ ಉಪನ್ಯಾಸಕರೊಬ್ಬರು ತಿಳಿಸಿದರು.
‘ಹೊಸ ಕೋರ್ಸ್‌ ಏನಿದೆ’ ಎಂದು ವಿದ್ಯಾರ್ಥಿಗಳು ಕೇಳುತ್ತಿದ್ದರೆ, ಅದಕ್ಕೆ ಎಷ್ಟು ಶುಲ್ಕವಾಗುತ್ತದೆ ಎಂಬುದು ಪೋಷಕರ ಪ್ರಶ್ನೆಯಾಗಿರುತ್ತಿತ್ತು.

ವಿದ್ಯಾರ್ಥಿಗಳು ಎಲ್ಲಾ ಮಳಿಗೆಗಳಿಗೆ ಹೋಗಿ ಗೊಂದಲ ಸೃಷ್ಟಿಸಿಕೊಳ್ಳದೆ, ತಮ್ಮ ಆಯ್ಕೆಯ ಕಾಲೇಜುಗಳಿಂದ ಮಾತ್ರ ಸಮಗ್ರ ಮಾಹಿತಿ ಪಡೆಯುತ್ತಿದ್ದರು.

ಏರೋಸ್ಪೇಸ್‌ಗೆ ಹೆಚ್ಚಿದ ಬೇಡಿಕೆ: ಏರೋಸ್ಪೇಸ್‌ ವಿಷಯದಲ್ಲಿ ಬೇಡಿಕೆ ಹೆಚ್ಚಿದ್ದು ಕೆಲವು ಕಾಲೇಜುಗಳು ಈ ಶೈಕ್ಷಣಿಕ ವರ್ಷದಿಂದ ಆ ವಿಷಯವನ್ನು ಪರಿಚಯಿಸಿವೆ. ಬೆಳಗಾವಿಯ ಗೋಗಟೆ ತಾಂತ್ರಿಕ ಕಾಲೇಜು, ಎಂ.ಎಸ್‌. ರಾಮಯ್ಯ ವಿಶ್ವವಿದ್ಯಾಲಯದಲ್ಲಿ ಈ ಕೋರ್ಸ್‌ಗಳು ಲಭ್ಯವಿವೆ.

‘ಇಸ್ರೊ ಸಾಧನೆಯಿಂದ ಅನೇಕ ವಿದ್ಯಾರ್ಥಿಗಳು ಪ್ರೇರಣೆ ಪಡೆದಿದ್ದು, ಕಳೆದ ವರ್ಷದಿಂದ ಈ ಕೋರ್ಸ್‌ ಬಗ್ಗೆ ಅನೇಕ ವಿದ್ಯಾರ್ಥಿಗಳು ವಿಚಾರಿಸಿದ್ದಾರೆ’ ಎಂದು ವಿಶ್ವವಿದ್ಯಾಲಯದ ಪ್ರತಿನಿಧಿ ತಿಳಿಸಿದರು.

ಆನರ್ಸ್‌ಗೆ ಮತ್ತೆ ಬೇಡಿಕೆ: ಬಹಳ ವರ್ಷಗಳ ಹಿಂದೆ ವಿಜ್ಞಾನ ಆನರ್ಸ್‌ ಕಲಿಕೆ ಸಾಮಾನ್ಯವಾಗಿತ್ತು. ಈಗ ಮತ್ತೆ ವಿಷಯ ಪರಿಣತಿಗೆ ಶೈಕ್ಷಣಿಕ ಸಂಸ್ಥೆಗಳು ಹೆಚ್ಚು ಆದ್ಯತೆ ನೀಡಲಾರಂಭಿಸಿವೆ. ಕೆಲವು ಕಾಲೇಜುಗಳು ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಳಲ್ಲೂ ಆನರ್ಸ್‌ ಪದವಿ ಪರಿಚಯಿಸಿವೆ.

ಗಾರ್ಡನ್‌ ಸಿಟಿ ಕಾಲೇಜು ಬಿ.ಎಸ್ಸಿ ಜೈವಿಕ ತಂತ್ರಜ್ಞಾನ ಆನರ್ಸ್‌, ಬಿ.ಕಾಂ ಆನರ್ಸ್‌ ಹಾಗೂ ಬಿ.ಎ ಪತ್ರಿಕೋದ್ಯಮ ಆನರ್ಸ್‌ ಪದವಿಯನ್ನು ಪ್ರಾರಂಭಿಸಿದೆ. ದಯಾನಂದ ಸಾಗರ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ಆನರ್ಸ್‌ ಪದವಿಯನ್ನು ಕಳೆದ ವರ್ಷದಿಂದ ಪ್ರಾರಂಭಿಸಲಾಗಿದೆ.

ಅಸಾಂಪ್ರದಾಯಿಕ ಕೋರ್ಸ್‌:  ಅಸಾಂಪ್ರದಾಯಿಕ ವಿಷಯಕ್ಕೆ ಸಂಬಂಧಿಸಿದ ಕೋರ್ಸ್‌ ಆಯ್ಕೆ ನೀಡಿದ್ದ ವಿಜ್‌ಟೂನ್ಜ್‌ ಶೈಕ್ಷಣಿಕ ಸಂಸ್ಥೆ ಮೇಳದಲ್ಲಿ ವಿದ್ಯಾರ್ಥಿಗಳ ಆಕರ್ಷಣೆಯ ಕೇಂದ್ರವಾಗಿತ್ತು.

ಇತ್ತೀಚೆಗೆ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ವಿಎಕ್ಸ್‌ಎಫ್‌, ಅನಿಮೇಶನ್‌ ಕೋರ್ಸ್‌ ಬಗ್ಗೆ ಇಲ್ಲಿ ಪರಿಚಯಿಸಲಾಗುತ್ತಿತ್ತು. ಅದಲ್ಲದೆ, ಕಲಾಕೃತಿ ಕಲಿಕೆ, ಚಿತ್ರಕಲೆಯನ್ನು ಇಲ್ಲಿ ಕಲಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT