ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮೋಟರ್ ಅಪಹರಣ: ನಿರ್ದೇಶಕರ ಸೆರೆ

ಪ್ರಕರಣ ದಾಖಲಾದ ನಾಲ್ಕೇ ತಾಸುಗಳಲ್ಲಿ ಆರೋಪಿಗಳ ಬಂಧನ
Last Updated 27 ಮೇ 2017, 19:29 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಿನಿಮಾಗಳ ಜಾಹೀರಾತು ಪ್ರಚಾರಕ (ಪ್ರಮೋಟರ್) ಪರಮೇಶ್ ಎಂಬುವರನ್ನು ಅಪಹರಿಸಿದ್ದ ಚಲನಚಿತ್ರ ನಿರ್ದೇಶಕರಾದ ಮದನ್, ಚಲಪತಿ ಹಾಗೂ ಅವರ ಮೂವರು ಸಹಚರರನ್ನು ಪ್ರಕರಣ ದಾಖಲಾದ 4 ತಾಸುಗಳಲ್ಲೇ ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.

‘ಮದನ್ ಅವರು ಇತ್ತೀಚೆಗೆ ತೆರೆ ಕಂಡ ‘ಎರಡು ಕನಸು’ ಸಿನಿಮಾ ನಿರ್ದೇಶಿಸಿದ್ದರು. ಚಲಪತಿ ‘ವೇಗ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇವರ ಜತೆ ಕಿರಣ್, ಮೂರ್ತಿ ಹಾಗೂ ಮೋಹನ್ ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳು ಮೇ 24ರಂದು ಪರಮೇಶ್ ಅವರನ್ನು ಅಪಹರಿಸಿದ್ದರು. ಈ ಸಂಬಂಧ ಅವರ ತಂದೆ ಗುರುಸಿದ್ದಯ್ಯ ಶುಕ್ರವಾರ ಮಾಗಡಿ ರಸ್ತೆ ಠಾಣೆಗೆ ದೂರು ಕೊಟ್ಟಿದ್ದರು’ ಎಂದು ತನಿಖಾಧಿಕಾರಿಗಳು ಹೇಳಿದರು.

ಏನಿದು ವಿವಾದ?: ಹಾಸನ ಜಿಲ್ಲೆಯ ಕೊಪ್ಪಲು ಗ್ರಾಮದ ಪರಮೇಶ್, ನಾಲ್ಕು ವರ್ಷಗಳಿಂದ ಸಿನಿಮಾ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮದನ್ ಅವರು ತಮ್ಮ ಸಿನಿಮಾದ ಪ್ರಚಾರ ಕಾರ್ಯಕ್ಕಾಗಿ ಅವರಿಗೆ ₹ 16 ಲಕ್ಷ ಕೊಟ್ಟಿದ್ದರು ಎನ್ನಲಾಗಿದೆ.

‘ಹಣವನ್ನು ಪೂರ್ತಿಯಾಗಿ ಬಳಸದ ಪರಮೇಶ್, ಕೇವಲ ₹ 8 ಲಕ್ಷದಲ್ಲೇ ಪ್ರಚಾರ ಮುಗಿಸಿದ್ದಾರೆ. ಉಳಿದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ’ ಎಂಬುದು ಮದನ್ ಆರೋಪ. ಆದರೆ, ‘ಪ್ರಚಾರಕ್ಕೆ ₹ 13 ಲಕ್ಷ ಖರ್ಚಾಗಿದೆ’ ಎಂದು ಪರಮೇಶ್ ಹೇಳುತ್ತಾರೆ. ಇದೇ ವಿಚಾರವಾಗಿ ಪರಸ್ಪರರ ನಡುವೆ ಹಲವು ದಿನಗಳಿಂದ ಮನಸ್ತಾಪವಿತ್ತು. ₹ 8 ಲಕ್ಷ ವಾಪಸ್ ಕೊಡಲು ಪರಮೇಶ್ ಒಪ್ಪದಿದ್ದಾಗ ಅವರನ್ನು ಅಪಹರಿಸಲು ಸಂಚು ರೂಪಿಸಿದ ಮದನ್, ಈ ಕೆಲಸಕ್ಕೆ ಗೆಳೆಯ ಚಲಪತಿ ಅವರ ನೆರವು ಕೇಳಿದ್ದರು. ನಂತರ ಇಬ್ಬರೂ ಸೇರಿ ಇತರೆ ಮೂವರು ಹುಡುಗರನ್ನು ಹೊಂದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಆರೋಪಿಗಳು

ಅಪಹರಿಸಿ ಥಳಿತ: ‘ಮೇ 24ರ ಮಧ್ಯಾಹ್ನ ಪರಮೇಶ್‌ಗೆ ಕರೆ ಮಾಡಿದ್ದ ಚಲಪತಿ, ‘ನಾನು ವೇಗ ಎಂಬ ಸಿನಿಮಾ ಮಾಡುತ್ತಿದ್ದೇನೆ. ಅದರ ಪ್ರಚಾರ ಕೆಲಸವನ್ನು ನೀನೇ ಮಾಡು. ಈ ಬಗ್ಗೆ ಮಾತನಾಡಬೇಕು. ತಕ್ಷಣ ಬಸವೇಶ್ವರನಗರ 8ನೇ ಮುಖ್ಯರಸ್ತೆಯ ಗಣೇಶ ದೇವಸ್ಥಾನದ ಬಳಿ ಬಾ’ ಎಂದಿದ್ದರು. ಅಂತೆಯೇ ಅಲ್ಲಿಗೆ ತೆರಳಿದ್ದ ಅವರನ್ನು ಐದೂ ಮಂದಿ ಕಾರಿನಲ್ಲಿ ಅಪಹರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮದನ್ ಅವರ ತೋಟದ ಮನೆಗೆ ಕರೆದೊಯ್ದ ಆರೋಪಿಗಳು, ಅವರನ್ನು 2 ದಿನ ಅಕ್ರಮ ಬಂಧನದಲ್ಲಿರಿಸಿದ್ದರು. ಈ  ಅವಧಿಯಲ್ಲಿ ಕ್ರಿಕೆಟ್ ಬ್ಯಾಟ್, ವಿಕೆಟ್ ಹಾಗೂ ಬೆಲ್ಟ್‌ನಿಂದ ಮನಸೋ ಇಚ್ಛೇ ಹಲ್ಲೆ ನಡೆಸಿದ್ದರು.

ಮೇ 26ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪರಮೇಶ್ ತಂದೆ ಗುರುಸಿದ್ದಯ್ಯ ಅವರಿಗೆ ಕರೆ ಮಾಡಿದ್ದ ಆರೋಪಿಗಳು, ‘ನಿಮ್ಮ ಮಗನನ್ನು ಅಪಹರಿಸಿದ್ದೇವೆ. ₹ 8 ಲಕ್ಷ ತೆಗೆದುಕೊಂಡು ಸಂಜೆಯೊಳಗೆ ಹೆಬ್ಬಾಳಕ್ಕೆ ಬನ್ನಿ. ಇಲ್ಲದಿದ್ದರೆ ಮಗ ಜೀವಂತವಾಗಿ ಇರುವುದಿಲ್ಲ’ ಎಂದಿದ್ದರು. ಇದರಿಂದ ಕಂಗಾಲದ ತಂದೆ, ಸಂಬಂಧಿ ಶಂಕರ್ ಜತೆ ಮಧ್ಯಾಹ್ನ 2 ಗಂಟೆಗೆ ಠಾಣೆಯ ಮೆಟ್ಟಿಲೇರಿದ್ದರು.

ತನಿಖೆ ಪ್ರಾರಂಭ: ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಪೊಲೀಸರ ಒಂದು ತಂಡ ಅಪಹರಣಾಕಾರರ ಪತ್ತೆ ಕಾರ್ಯದಲ್ಲಿ ತೊಡಗಿತ್ತು. ಮತ್ತೊಂದು ತಂಡ ಫಿರ್ಯಾದಿದಾರರ ಜತೆ ಮಫ್ತಿಯಲ್ಲಿ ಸಂಜೆ 4 ಗಂಟೆಗೆ ಹೆಬ್ಬಾಳಕ್ಕೆ ತೆರಳಿತ್ತು. ಅಲ್ಲಿಗೆ ಹೋಗಿ ಆರೋಪಿಗಳಿಗೆ ಕರೆ ಮಾಡಿದರೆ, ಸಾದರಹಳ್ಳಿ ಗೇಟ್ ಬಳಿ ಬರುವಂತೆ ಹೇಳಿದ್ದರು. ಅದರಂತೆ ತಂಡ ಅಲ್ಲಿಗೆ ಹೋಯಿತು. ಮತ್ತೆ ಸ್ಥಳ ಬದಲಿಸಿದ ಅಪಹರಣಕಾರರು, ಕನ್ನಮಂಗಲ ಗೇಟ್ ಬಳಿ ಕಾಯುತ್ತಿರುವುದಾಗಿ ತಿಳಿಸಿದ್ದರು.

ಇತ್ತ ಸಿಡಿಆರ್ ಆಧರಿಸಿ ಕಾರ್ಯಾಚರಣೆಗೆ ಇಳಿದಿದ್ದ ಇನ್ನೊಂದು ತಂಡ, ಸಂಜೆ 6 ಗಂಟೆ ಸುಮಾರಿಗೆ ತೋಟದ ಮನೆಯಲ್ಲೇ ಮೂರು ಮಂದಿಯನ್ನು ವಶಕ್ಕೆ ಪಡೆಯಿತು. ಇನ್ನಿಬ್ಬರನ್ನು ದೇವನಹಳ್ಳಿಯ ಕಾಡಯರ್ರಪ್ಪನಹಳ್ಳಿಯಲ್ಲಿ ಬಂಧಿಸಿದ ಮಫ್ತಿಯಲ್ಲಿದ್ದ ತಂಡ, ಪರಮೇಶ್ ಅವರನ್ನು ರಕ್ಷಿಸುವ ಮೂಲಕ ಪ್ರಕರಣ ಸುಖಾಂತ್ಯಗೊಳಿಸಿತು.
*
ಹಲ್ಲೆಯಿಂದ ಗಾಯಗೊಂಡಿರುವ ಪರಮೇಶ್‌ಗೆ 2 ದಿನ ವಿಶ್ರಾಂತಿ ಬೇಕೆಂದು ವೈದ್ಯರು ಹೇಳಿದ್ದಾರೆ. ಹೀಗಾಗಿ, ಅವರ ಹೇಳಿಕೆ ಪಡೆದಿಲ್ಲ. ಹೆಚ್ಚಿನ ವಿಚಾರಣೆಗಾಗಿ ಬಂಧಿತರನ್ನು ಕಸ್ಟಡಿಗೆ ಪಡೆದಿದ್ದೇವೆ.
ತನಿಖಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT