ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ರಂಜಾನ್‌ ಉಪವಾಸ ಆರಂಭ

Last Updated 28 ಮೇ 2017, 5:30 IST
ಅಕ್ಷರ ಗಾತ್ರ

ಚಿಂತಾಮಣಿ: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್‌ (ಈದ್‌–ಉಲ್‌ –ಫಿತರ್‌)  ಉಪವಾಸ ಮೇ 28 ರಿಂದ ಆರಂಭವಾಗಲಿದೆ. ತಿಂಗಳು ಉಪವಾಸ ಆಚರಿಸುವುದು, ನಗರ ಹಾಗೂ ತಾಲ್ಲೂಕಿನಾದ್ಯಂತ ಎಲ್ಲ ಮುಸ್ಲಿಮರು ನಿತ್ಯ ಬೆಳಿಗ್ಗೆ 3.30 ಗಂಟೆಗೆ ಶಹರಿ ರಂಜಾನ್‌ ಆಚರಣೆಯಿಂದ ದಿನದ ಕಾಯಕ ಪ್ರಾರಂಭ ಮಾಡುತ್ತಾರೆ.

ಬೆಳಿಗ್ಗೆ 5 ಗಂಟೆಗೆ , ಮಧ್ಯಾಹ್ನ 1.30, ಸಂಜೆ 5 ಗಂಟೆ, 6–30, ರಾತ್ರಿ 8 ಗಂಟೆ ಹೀಗೆ  ದಿನಕ್ಕೆ 5 ಬಾರಿ ನಮಾಜ್‌ ಮಾಡುವುದು ವಿಶೇಷ. 7 ವರ್ಷದ ಮಕ್ಕಳಿಂದ ವಯೋವೃದ್ಧರು ಎಲ್ಲರ ಮುಖದಲ್ಲಿ ಆನಂದದ ಕಳೆ ತುಂಬಿ ತುಳುಕುತ್ತದೆ. ಶಾಬಾನ್‌ ತಿಂಗಳ ಕೊನೆಯಲ್ಲಿ ಎಲ್ಲರ ದೃಷ್ಠಿ ಆಕಾಶದತ್ತ ನೆಟ್ಟಿರುತ್ತದೆ. ಕವಿದಿರುವ ಮೋಡಗಳ ನಡುವೆ ಬಾಲಚಂದ್ರನ ಮಿಂಚು ನೋಟಕ್ಕಾಗಿ ಕಾದಿರುತ್ತಾರೆ.

‘ರಂಜಾನ್‌ ಮಾಸದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ಥದವರೆಗೆ  ಉಪವಾಸ ಆಚರಿಸುವುದು ವಿಶೇಷವಾಗಿದೆ. ಉಪವಾಸ ಮಾಡುವುದರಿಂದ  ಮುಸ್ಲಿಮರಲ್ಲಿ ಮನೋನಿಗ್ರಹ ಶಕ್ತಿಯನ್ನು ಹೆಚ್ಚಿಸಿ ಮನಸ್ಸಿನ ಕಾಮನೆಗಳ ಮೇಲೆ ಹತೋಟಿಯನ್ನು ಸಾಧಿಸುವ ಉದ್ದೇಶ ಹೊಂದಿದೆ. ರಂಜಾನ್‌ ಮಾಸದಲ್ಲಿ ಉಪವಾಸ ಮಾಡುವುದರಿಂದ ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳನ್ನು ಮಾಡುವುದರ ಜತೆಗೆ ವ್ಯಕ್ತಿಯ ಸಾತ್ವಿಕತೆಯ ಪರಿವರ್ತೆನೆ ಹೊಂದಲು ಸಹಕಾರಿಯಾಗುತ್ತದೆ’ ಎಂದು ಧರ್ಮಗುರು  ಮಹಮದ್‌ ಅಸ್ಲಾಂ ಅಭಿಪ್ರಾಯಪಡುತ್ತಾರೆ.

ಉಪವಾಸದ ದಿನಗಳಲ್ಲಿ ಸಂಜೆ 6.45ಗಂಟೆಯ ನಂತರವೇ ಊಟ ಮಾಡುತ್ತಾರೆ. ಸಮೋಸ ಮತ್ತು ಖರ್ಜೂರಗಳನ್ನು  ವಿಶೇಷವಾಗಿ  ಸೇವಿಸುತ್ತಾರೆ. ಮಸೀದಿಗಳ ರಸ್ತೆಗಳಲ್ಲಿ  ವಿವಿಧ ರೀತಿಯ ಸಮೋಸ ಅಂಗಡಿಗಳು ತಲೆ ಎತ್ತಿರುತ್ತವೆ. ‘ಇಸ್ಲಾಂ ಅಲ್ಲದೆ ಹಿಂದು, ಬೌದ್ಧ, ಸಿಖ್‌ ಧರ್ಮಗಳಲ್ಲೂ ಸಹ ಉಪವಾಸವನ್ನು ಪ್ರತಿಪಾದಿಸಲಾಗಿದೆ.  ಉಪವಾಸ ವ್ರತ ಕೇವಲ  ಭೌತಿಕ ಆರೋಗ್ಯವನ್ನಷ್ಟೇ ಅಲ್ಲ, ಅಧ್ಯಾತ್ಮ ಸಾಧನೆಗೂ ನೆರವಾಗುತ್ತದೆ. ಕುರಾನ್‌ ಉಪವಾಸದ ಪ್ರಾಮುಖ್ಯ ಎತ್ತಿ ಹಿಡಿದಿದೆ.

ಆರೋಗ್ಯದ ದೃಷ್ಟಿಯಿಂದ ಉಪವಾಸದ ಆಚರಣೆ ಸ್ವಾಗತಾರ್ಹವಾದುದು. ಆರೋಗ್ಯದ ಜತೆಗೆ ಹೃದಯದಲ್ಲಿ ಭಕ್ತಿಯನ್ನು ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ’ ಎಂದು ಲೇಖಕ ಕೆ.ಎಸ್‌.ನೂರುಲ್ಲಾ ಹೇಳುತ್ತಾರೆ.

ರಂಜಾನ್‌ ಮಾಸದಲ್ಲಿ ನಗರದ ಎಲ್ಲ ಮಸೀದಿಗಳಲ್ಲಿ ಮೌಲ್ವಿಗಳು ಮಾನವನಿಗೆ ಸನ್ಮಾರ್ಗ, ಮಾರ್ಗದರ್ಶನ ಮತ್ತು ಸತ್ಯಾಸತ್ಯತೆಗಳಲ್ಲಿರುವ ಅಂತರವನ್ನು ಮನದಟ್ಟು ಮಾಡುವ ಉಪದೇಶ ನೀಡುತ್ತಾರೆ. ಮುಸ್ಲಿಂ ಸಮುದಾಯವು ರಂಜಾನ್‌ ಪುಣ್ಯ ಗಳಿಕೆಯ ಮಾಸವನ್ನಾಗಿ ಪರಿಗಣಿಸುತ್ತಾರೆ. ದಾನ ಧರ್ಮಗಳು ಯಥೇಚ್ಚವಾಗಿ ನಡೆಯುತ್ತವೆ.

ಉಪವಾಸ ಆಚರಿಸುವ ಇವರು ಚಂದ್ರ ಕಂಡಕೂಡಲೇ ಪರಸ್ಪರ ಈದ್‌ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಬ್ಬದ ಖರೀದಿಗಾಗಿ ಪೇಟೆಗೆ ತೆರಳಿ ಭರ್ಜರಿ ಖರೀದಿ ನಡೆಸುತ್ತಾರೆ.  ಶ್ರೀಮಂತ ಬಡವರೆನ್ನದೆ ಎಲ್ಲ ಮುಸ್ಲಿಮರು ಹೊಸ ಉಡುಗೆ ತೊಡುಗೆಗಳಲ್ಲಿ ಮಿಂದು ತೇಲುತ್ತಾರೆ. ರಂಜಾನ್‌ ಮಾಸದ ಕೊನೆಯ 10 ದಿನ ಕೆಲವರು ಜಾಗರಣೆ ಮಾಡುವ ಪದ್ಧತಿಯೂ ಇದೆ.

ರಂಜಾನ್‌ ಮಾಸದಲ್ಲಿ ಇಫ್ತಾರ್‌ ಕೂಟಗಳಿಗೆ ಸಾಮೂಹಿಕ ಆಮಂತ್ರಣಗಳು ಸಾಮಾನ್ಯವಾಗಿರುತ್ತವೆ. ಕೂಟಗಳಿಗೆ ಎಲ್ಲ ಧರ್ಮದವರನ್ನು ಆಮಂತ್ರಿಸಲಾಗುತ್ತದೆ. ಉಳ್ಳವರು ಬಡಬಗ್ಗರಿಗೆ ಬಟ್ಟೆ ಬರೆಗಳನ್ನು ವಿತರಿಸುತ್ತಾರೆ. ಸ್ಥಿತಿವಂತರು ತಮ್ಮ ಉಳಿತಾಯದ ಸ್ವಲ್ಪ ಭಾಗವನ್ನು ಝಕಾತ್‌ ನೀಡುತ್ತಾರೆ. ಧರ್ಮದ ಬಡವರು ಹಬ್ಬ ಆಚರಿಸಲು ಅನುವಾಗುವಂತೆ ಕುಟುಂಬಗಳ ಮೇಲೆ ಫಿತ್ರ ಝಕಾತ್‌ ಕಡ್ಡಾಯವಾಗಿರುತ್ತದೆ. ಈದ್‌ ನಮಾಜ್‌ ನಿರ್ವಹಿಸುವ ಮೊದಲು ಝಕಾತ್‌ ಸಂದಾಯ ಮಾಡುತ್ತಾರೆ.

ರಂಜಾನ್‌ ಹಬ್ಬದ ದಿನ ಎಲ್ಲ ಮುಸ್ಲಿಮರು ವಿಶೇಷ ನಮಾಜ್‌ ಮಾಡಲು ಮೆರವಣಿಗೆಯಲ್ಲಿ ನಗರದ ಬಾಗೇಪಲ್ಲಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳುತ್ತಾರೆ. ನಮಾಜಿನಲ್ಲಿ ಎಲ್ಲರೂ ಒಟ್ಟಾಗಿ ಭುಜಕ್ಕೆ ಬುಜ ತಾಗಿಸಿ ವಿನಮ್ರ ಭಾವದಿಂದ ನಮಾಜ್‌ ಮಾಡುವ ದೃಶ್ಯ ವಿಹಂಗಮವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT