ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಡಿಯೊ ಮೂಲಕ ದೇಶದ ಮುಸ್ಲಿಮರಿಗೆ ರಂಜಾನ್ ಶುಭಾಶಯ ಕೋರಿದ ಪ್ರಧಾನಿ ಮೋದಿ

Last Updated 28 ಮೇ 2017, 6:28 IST
ಅಕ್ಷರ ಗಾತ್ರ

ನವದೆಹಲಿ: ಮುಸ್ಲಿಮರ ಪವಿತ್ರ ತಿಂಗಳು ರಂಜಾನ್ ಆರಂಭದ ಸಂದರ್ಭದಲ್ಲಿ ದೇಶದ ಎಲ್ಲ ಮುಸ್ಲಿಮರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

‘ಮನದ ಮಾತು’ ತಿಂಗಳ ರೇಡಿಯೊ ಕಾರ್ಯಕ್ರಮದ 32ನೇ ಕಂತಿನಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಂಜಾನ್ ಆರಂಭದ ಈ ಶುಭ ಸಂದರ್ಭದಲ್ಲಿ ಜಗತ್ತಿನ ಎಲ್ಲರಿಗೂ ಶುಭಾಶಯಗಳು. ದೇಶದ ಮುಸ್ಲಿಂ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳು. ಭಾರತವು ಧಾರ್ಮಿಕ ವೈವಿಧ್ಯತೆಯುಳ್ಳ ದೇಶ. ವೈವಿಧ್ಯತೆ ಎಂಬುದು ನಮ್ಮ ಶಕ್ತಿ. ಎಲ್ಲ ಧರ್ಮಗಳ ಮತ್ತು ನಂಬಿಕೆಗಳ ಜನರು ಇಲ್ಲಿ ಜತೆಯಾಗಿ ಶಾಂತಿಯಿಂದ ಜೀವನ ನಡೆಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ’ ಎಂದು ಹೇಳಿದರು.

ಇದುವರೆಗಿನ ಎಲ್ಲ ‘ಮನದ ಮಾತು’ ಕಾರ್ಯಕ್ರಮಗಳ ಭಾಷಣದ ಅಂಶಗಳನ್ನೊಳಗೊಂಡ ಪುಸ್ತಕ ‘ಮನದ ಮಾತು: ರೇಡಿಯೊ ಮೂಲಕ ಸಮಾಜಿಕ ಕ್ರಾಂತಿ’ ಎಂಬ ಪುಸ್ತಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಪುಸ್ತಕ ಬಿಡುಗಡೆಯ ನಂತರ ನಡೆದ ಮೊದಲ ‘ಮನದ ಮಾತು’ ಕಾರ್ಯಕ್ರಮ ಇದಾಗಿದೆ.

ಸಾವರ್ಕರ್‌ ಸ್ಫೂರ್ತಿ: ಇಂದು ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜಯಂತಿ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರವನ್ನು ಎಂದಿಗೂ ಮರೆಯಲಾಗದು. ಅಂಡಮಾನ್ ನಿಕೋಬಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿಕೊಂಡು ಅವರು ಬರೆದ ಪುಸ್ತಕವೇ ನನಗೆ ಸ್ಫೂರ್ತಿ. ಅಲ್ಲಿ ಕರಿನೀರ ಶಿಕ್ಷೆ ಅನುಭವಿಸುತ್ತಿರುವ ಸಂದರ್ಭ ಅವರು ಸಾಕಷ್ಟು ಬರೆದಿದ್ದಾರೆ ಎಂದು ಮೋದಿ ಹೇಳಿದರು.

ಪರಿಸರ ಸಂರಕ್ಷಣೆಗೆ ಕರೆ: ಜೂನ್‌ 5 ವಿಶ್ವ ಪರಿಸರ ದಿನ. ಭೂಮಿ ನಮ್ಮ ತಾಯಿ. ನಾವೆಲ್ಲ ಅದರ ಮಕ್ಕಳು. ಪ್ರಕೃತಿಯೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಿ ಉತ್ತಮ ಭೂಮಿಯನ್ನು ನಮ್ಮದಾಗಿಸೋಣ. ನಮ್ಮ ಪೂರ್ವಜರು ಪ್ರಕೃತಿಯನ್ನು ರಕ್ಷಿಸಿದ್ದರ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ. ಪರಿಸರ ರಕ್ಷಿಸುವುದನ್ನು ನಾವು ಮುಂದುವರಿಸಿದರೆ ಮಂದಿನ ತಲೆಮಾರಿಗೆ ಅದರಿಂದ ಪ್ರಯೋಜನವಾಗಲಿದೆ ಎಂದು ಪ್ರಧಾನಿ ಹೇಳಿದರು.

ವಿಶ್ವಕ್ಕೆ ಭಾರತದ ಮಹತ್ವದ ಕೊಡುಗೆ ಯೋಗ: ಭಾರತವು ಜಗತ್ತಿಗೆ ನೀಡಿದ ಅತ್ಯಂತ ಮಹತ್ವದ ಕೊಡುಗೆಯಾಗಿದೆ ಯೋಗ ಎಂದು ಮೋದಿ ತಿಳಿಸಿದರು. ಅತ್ಯಲ್ಪ ಅವಧಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಜಗತ್ತಿನಾದ್ಯಂತ ಪಸರಿಸಿದೆ. ಜೂನ್ 21 ವಿಶ್ವ ಯೋಗ ದಿನ ಎಂದೇ ಗುರುತಿಸಿಕೊಂಡಿದೆ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT