ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರಿಂದ ಸುಲಿಗೆ: ಜಿಲ್ಲಾಡಳಿತ ಮೌನ

Last Updated 28 ಮೇ 2017, 6:36 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮಾಂದಲ್‌ಪಟ್ಟಿಯ ಸೇತುವೆ ಬಳಿ ಶನಿವಾರ ಜೀಪು ಚಾಲಕರು ಹಾಗೂ ಗ್ರಾಮಸ್ಥರು ನಡುವೆ ವಾಗ್ವಾದ ನಡೆಯಿತು, ಪೊಲೀಸರು ಮದ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಬೇಕಾಯಿತು.

ಮಾಂದಲ್‌ಪಟ್ಟಿಗೆ ಜೀಪುಗಳ ಸಂಚಾರ ನಿಯಂತ್ರಿಸಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಚಾಲಕರು ಬಂದರು. ಅಲ್ಲಿ ವಾಗ್ವಾದ ನಡೆಯಿತು.
ಮಡಿಕೇರಿಯಿಂದ ಸುಮಾರು 22 ಕಿಲೋಮೀಟರ್ ದೂರದ ಮಾಂದಲ್‌ಪಟ್ಟಿಗೆ ಕಿರಿದಾದ ರಸ್ತೆಯಲ್ಲಿ ಸಂಚರಿಸಬೇಕು. ಮಾಂದಲ್‌ಪಟ್ಟಿಗೆ ಹೋಗುವ ಮಾರ್ಗದ ತನಕವೂ ಪ್ರವಾಸಿಗರ ವಾಹನ ತೆರಳಲು ಅವಕಾಶವಿದೆ.

ನಗರದಿಂದ ಸುಮಾರು 4 ಕಿ.ಮೀ ದೂರದ ನಂದಿಮೊಟ್ಟೆಯಲ್ಲೇ ಪ್ರವಾಸಿಗರ ವಾಹನಗಳನ್ನು ಜೀಪ್ ಚಾಲಕರು ಅಡ್ಡಗಟ್ಟಿ, ಮುಂದೆ ವಾಹನಗಳಿಗೆ ಅವಕಾಶವಿಲ್ಲ ಎನ್ನುತ್ತಾರೆ. ಜೀಪಿನಲ್ಲಿ ಕರೆದೊಯ್ಯುತ್ತಾರೆ.‘ಇದಕ್ಕಾಗಿ ಪ್ರವಾಸಿಗರಿಂದ ₹ 3,000 ತನಕ ಬಾಡಿಗೆ ಹಣ ಪಡೆಯಲಾಗುತ್ತದೆ’ ಎಂಬ ಆರೋಪ ಸ್ಥಳೀಯರಾದ ಮಕ್ಕಂದೂರಿನ ಅರವಿಂದ್‌ ಅವರದು.

ಶನಿವಾರ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಾರೆ ಎಂಬ ಮಾಹಿತಿ ಇದ್ದ ಕಾರಣಕ್ಕೇ  ಜೀಪುಗಳ ಸಂಚಾರವನ್ನು ಒಂದುದಿನ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು. ನಂದಿಮೊಟ್ಟೆ ಬಳಿ ಪ್ರವಾಸಿಗರನ್ನು ತಡೆದ ಚಾಲಕರು, ಮುಂದೆ ರಸ್ತೆತಡೆ ನಡೆದಿದೆ ಎಂದು ಸಂಜೆಯತನಕ ಪ್ರವಾಸಿಗರನ್ನು ವಾಪಸ್‌ ಕಳುಹಿಸಿದರು. ಪ್ರವಾಸಿಗರು ನಿರಾಶೆಯಿಂದ ವಾಪಸಾದರು. ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎನ್ನಲಾಗಿದೆ.

ನಂದಿಮೊಟ್ಟೆ ಬಳಿ ರಸ್ತೆ ಕಿರಿದಾಗಿದೆ. ಒಂದು ಬದಿ ಪ್ರವಾಸಿಗರನ್ನು ಕರೆದೊಯ್ಯುವ ಜೀಪುಗಳು ಸಾಲಾಗಿ ನಿಂತರೆ ಮತ್ತೊಂದು ಬದಿ ಪ್ರವಾಸಿ ವಾಹನಗಳು ನಿಲುಗಡೆ ಮಾಡಲಾಗುತ್ತದೆ. ಇದರ ನಡುವೆ ಗ್ರಾಮಸ್ಥರು ಓಡಾಡುವುದೇ ಕಷ್ಟವಾಗಿದೆ ಎಂದು ವ್ಯಾಪ್ತಿಯ ಗ್ರಾಮಸ್ಥರು ನೋವು ತೋಡಿಕೊಂಡರು.

ಈ ಹಿಂದೆಯೂ ಪ್ರತಿಭಟನೆ ನಡೆದಿತ್ತು. ಜಿಲ್ಲಾಧಿಕಾರಿ ಅನಧಿಕೃತವಾಗಿ ಪ್ರವಾಸಿಗರನ್ನು ಕರೆದೊಯ್ಯುವ ಜೀಪ್ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಇಲಾಖೆಗೆ ಸೂಚಿಸಿದ್ದರು. ಅದರಂತೆ ಕ್ರಮ ಕೈಗೊಂಡಿದ್ದ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರವಾಸಿಗರನ್ನು ಕರೆದೊಯ್ಯುವ ವಾಹನಗಳಿಗೆ ಹಳದಿ ಬಣ್ಣದ ಫಲಕ ಕಡ್ಡಾಯವೆಂದು ಆದೇಶ ಹೊರಡಿಸಿದ್ದರು. ಆದೇಶ ಪಾಲಿಸದ ವಾಹನಗಳನ್ನು ಮುಟ್ಟುಗೋಲು ಹಾಕಿ ದಂಡ ವಿಧಿಸಿದ್ದರು.

ಸ್ಥಳೀಯ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಸಭೆ ನಡೆಸಿ ರಸ್ತೆ ಬದಿ ಖಾಸಗಿ ಜಾಗದೊಳಗೆ ಜೀಪ್ ನಿಲುಗಡೆಗೆ ಸೂಚಿಸಿತ್ತು. ಪರಿಣಾಮ ಜೀಪ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ಸಂಚಾರವೂ ಸುಗಮವಾಗಿತ್ತು.ಇದು, ದೇವಸ್ತೂರು ಹಾಗೂ ಹೆಬ್ಬಟ್ಟಗೇರಿ ಗ್ರಾಮಸ್ಥರಿಗೆ ನೆಮ್ಮದಿ ನೀಡಿತ್ತು. ಈಗ ಮತ್ತೆ ಖಾಸಗಿ ಜೀಪುಗಳ ಹಾವಳಿ ಮಿತಿಮೀರಿದೆ ಎಂದು ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

* * 

ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. ಕಾಯಂ ಆರ್‌ಟಿಒ ಇಲ್ಲದಿರುವುದೂ ಸಮಸ್ಯೆಯಾಗಿದೆ
ರಿಚರ್ಡ್‌ ವಿನ್ಸೆಂಟ್‌ ಡಿಸೋಜ
ಜಿಲ್ಲಾಧಿಕಾರಿ

 * * 

ಮಾಂದಲ್‌ಪಟ್ಟಿ ವನ್ಯಜೀವಿಗಳ ತಾಣವಾದರೂ ಪ್ರವಾಸಿಗರನ್ನು ಒಳಗೆ ಬಿಡುತ್ತಾರೆ. ಅರಣ್ಯ ಇಲಾಖೆಯ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು
ಅರವಿಂದ್‌ ಮುಖಂಡ, ಮಕ್ಕಂದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT