ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ತ್ಯಾಜ್ಯಕ್ಕೆ ಸಿಗುವುದೆ ಮುಕ್ತಿ?

Last Updated 28 ಮೇ 2017, 6:43 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಜೀವನದಿ ಲಕ್ಷ್ಮಣತೀರ್ಥ ಇಲ್ಲಿ 50 ಕಿ.ಮೀ ಹರಿದಿದ್ದರೂ ಕುಡಿಯಲು ಯೋಗ್ಯವಿಲ್ಲದಾಗಿರುವುದು ವಿಪರ್ಯಾಸ. ಕೊಡಗಿನಲ್ಲಿ ಹುಟ್ಟಿ ನಾಗರಹೊಳೆ ರಾಷ್ಟ್ರೀಯ ಅರಣ್ಯ ಮೂಲಕ ಹರಿದು ಬರುವ ನದಿ ಶುದ್ಧವಾಗಿದೆ. ಆದರೆ ಹನಗೋಡು ಹೋಬಳಿ ಅಣೆಕಟ್ಟೆಯ ತಳಭಾಗದಲ್ಲಿ ತ್ಯಾಜ್ಯ ನೀರು ಸೇರುತ್ತಿದೆ. ನದಿ ಪಾತ್ರದಲ್ಲಿ ಬರುವ ಬಹುತೇಕ ಗ್ರಾಮಗಳ ತ್ಯಾಜ್ಯ ನದಿಒಡಲು ಸೇರಿ ಹುಣಸೂರಿಗೆ ಬರುವಷ್ಟರಲ್ಲಿ ಮತ್ತಷ್ಟು ಕಲುಷಿತವಾಗಿದೆ.

ನಗರದ 26 ಕಡೆಗಳಿಂದ ತ್ಯಾಜ್ಯ ನೀರು ದೊಡ್ಡ ಪ್ರಮಾಣದಲ್ಲಿ ನೇರವಾಗಿ ನದಿ ಸೇರುವ ಮೂಲಕ ನೀರು ಸಂಪೂರ್ಣ ಕಲುಷಿತವಾಗಿ ಉಪಯೋಗಕ್ಕೆ ಬಾರದಂತಾಗಿದೆ.
ನದಿಗೆ ಪ್ಲಾಸ್ಟಿಕ್‌ ಬಾಟಲಿ, ರೆಫ್ರಿಜರೇಟರ್‌, ತ್ಯಾಜ್ಯ ನೀರು ಸೇರಿದಂತೆ  ಬಹಿರ್ದೆಸೆಗೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ.  ಹೀಗಾಗಿ ಯಾವ ಯಾವ ರೀತಿ ನೀರು ಕಲುಷಿತಗೊಳ್ಳುತ್ತಿದೆ ಎಂಬುದು ಹೇಳತೀರದಾಗಿದೆ.

‘ರೆಫ್ರಿಜರೇಟರ್‌ ಬಳಕೆಯಿಂದ ಓಝೋನ್‌ ಪದರಕ್ಕೆ ಹಾನಿ ಆಗಲಿದೆ. ಆದರೆ, ತುಕ್ಕು ಹಿಡಿದ ರೆಫ್ರಿಜರೇಟರ್‌ರನ್ನೇ ನದಿಗೆ ಎಸೆಯುತ್ತಿರುವುದರಿಂದ  ಬೀರುವ ಅಡ್ಡ ಪರಿಣಾಮ ಊಹಿಸಲೂ ಅಸಾಧ್ಯ ಎನ್ನುತ್ತಾರೆ ಸ್ಥಳೀಯ ಪರಿಸರ ಹೋರಾಟಗಾರ ಸಂಜಯ್.

ಕ್ರಮ: ನದಿಗೆ ತ್ಯಾಜ್ಯ ನೀರು ಸೇರಲು ಬಿಡದಂತೆ ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಸಾರ್ವಜನಿಕರು ನಮ್ಮ ನದಿ ಸ್ವಚ್ಛವಾಗಿರಬೇಕು ಎಂಬ ಕಾಳಜಿ ಹೊಂದಬೇಕು. ಇಲಾಖೆಯೇ ಎಲ್ಲ ಕೆಲಸ ಮಾಡವುದು ಅಸಾಧ್ಯ ಎಂದು ನಗರಸಭೆ ಪರಿಸರ ಎಂಜಿನಿಯರ್ ರವಿಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

‘ನದಿ ಎರಡೂ ಅಂಚಿನಲ್ಲಿ ತ್ಯಾಜ್ಯ ನೀರು ಸೇರುವುದನ್ನು ತಡೆಯಲು ₹ 20ಕೋಟಿ ವೆಚ್ಚದ ಯೋಜನೆ ಇದ್ದು  ಅನುದಾನ ಬಿಡುಗಡೆಯಾದ ಬಳಿಕ ಕಾಮಗಾರಿ ಆರಂಭವಾಗಲಿದೆ’ ಎಂದು ಅವರು ಹೇಳಿದರು.

ನದಿ ಸಂರಕ್ಷಣೆಗೆ 10 ವರ್ಷದ ಹಿಂದೆ ಪಶ್ಚಿಮ ಘಟ್ಟಗಳ ಕಾವಲು ಸಮಿತಿ ಅಧ್ಯಕ್ಷ ಆಶೀಸರ ಅವರು ಚಾಲನೆ ನೀಡಿದ್ದರು. ಈ ಕಾರ್ಯ ಕೆಲವು ದಿನಗಳು ಮಾತ್ರ ನಡೆದು ನಂತರದಲ್ಲಿ ಮೌನವಾಯಿತು. ಈಗ ಮತ್ತೆ ಸಾರ್ವಜನಿಕರೇ ‘ಲಕ್ಷ್ಮಣತೀರ್ಥ ನದಿ ಉಳಿಸಿ’ ಹೋರಾಟ ಸಮಿತಿ ರಚಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೋರಾಟ ಸಮಿತಿ ಸದಸ್ಯ ಡೀಡ್‌ ಶ್ರೀಕಾಂತ್‌  ಹೇಳಿದರು.

ಮನವಿಗೆ ಉಪವಿಭಾಗಾಧಿಕಾರಿಗಳು ಸ್ಪಂದಿಸಿ, ಮೊದಲ ಸುತ್ತಿನ ಸಭೆ ನಡೆಸಿ ನದಿ ಮೂಲ ಹಾಗೂ ತ್ಯಾಜ್ಯ ಸೇರುವ ಸ್ಥಳಗಳ ಪಟ್ಟಿ ಮಾಡಲು ತಹಶೀಲ್ದಾರ್‌ರಿಗೆ ಸೂಚಿಸಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ಸೇರುತ್ತಿದ್ದು, ನಗರಸಭೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎನ್ನುತ್ತಾರೆ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಪುರುಷೋತ್ತಮ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT