ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಮನೆ ಜಲಾವೃತ; 10 ಮನೆ ಕುಸಿತ

Last Updated 28 ಮೇ 2017, 6:48 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಹೆಮ್ಮರಗಾಲದ  ಚೆಕ್‌ಡ್ಯಾಂ ಒಡೆದು ಹೆಡತಲೆ ಗ್ರಾಮಕ್ಕೆ ನೀರು ನುಗ್ಗಿದೆ. 60 ಮನೆಗಳು ಜಲಾವೃತವಾಗಿದ್ದು, 10ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಹೆಮ್ಮರಗಾಲದಲ್ಲಿ ಇತ್ತೀಚೆಗಷ್ಟೇ ₹ 40 ಲಕ್ಷ ವೆಚ್ಚದಲ್ಲಿ ಚೆಕ್‌ಡ್ಯಾಂ ನಿರ್ಮಿಸಲಾಗಿತ್ತು.

ಶನಿವಾರ ಬೆಳಗಿನ ಜಾವ 3.30ರ ಸುಮಾರಿಗೆ ಮಳೆನೀರು ಮನೆಗಳಿಗೆ ನುಗ್ಗಿದೆ. ನಿದ್ರೆಯಲ್ಲಿದ್ದ ಜನರು ಗಾಬರಿಯಿಂದ ಮನೆಯಿಂದ ಹೊರ ಬಂದಿದ್ದು, ಏನಾಗುತ್ತಿದೆ ಎಂದು ಅರಿವಾಗದೆ ಆತಂಕಕ್ಕೆ ಒಳಗಾಗಿದ್ದರು.

‘ಉಪ್ಪಾರ ಸಮುದಾಯದ ಬೀದಿಯ ಮನೆಗಳು, ಶಾಲೆ, ಮಹದೇಶ್ವರ ದೇವಸ್ಥಾನಕ್ಕೂ ನೀರು ನುಗ್ಗಿದೆ. ಮನೆಯಿಂದ ಹೊರಬಂದು ಎಲ್ಲಿಗೆ ಎಲ್ಲಿಗೆ ಹೋಗಬೇಕು ಎಂದು ತಿಳಿಯಲಿಲ್ಲ. ಬೆಚ್ಚನೆಯ ಜಾಗವೂ ಸಿಗಲಿಲ್ಲ. ಹೀಗಾಗಿ ರಾತ್ರಿಯಿಡೀ ರಸ್ತೆಯಲ್ಲಿಯೇ ನಿಂತಿದ್ದೆವು’ ಎಂದು ತೊಂದರೆಗೊಳಗಾದ ಜನರು ಅಳಲು ತೋಡಿಕೊಂಡರು.

ಸುದ್ದಿ ತಿಳಿದು ಶಾಸಕ ಕಳಲೆ ಕೇಶವಮೂರ್ತಿ, ಸಂಸದ ಆರ್. ಧ್ರುವನಾರಾಯಣ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗ್ರಾಮಸ್ಥರು, ‘ನೀರು ರಭಸವಾಗಿ ಮನೆಗೆ ನುಗ್ಗುತ್ತಿತ್ತು. ಎಲ್ಲರೂ ಮನೆಯಿಂದ ಹೊರ ಬಂದೆವು.

ನೀರಿನ ಹರಿವಿನ ಪ್ರಮಾಣ ಹೆಚ್ಚಾಗುತ್ತಲೇ ಇತ್ತು. ನೀರಿನ ರಭಸ ಕಡಿಮೆ ಮಾಡಲು ಹೆಡತಲೆ ಮುಖ್ಯ ರಸ್ತೆಯ ಮಧ್ಯದಲ್ಲೇ ಹಳ್ಳ ತೋಡಿ ನೀರು ಹರಿಯುವ ದಿಕ್ಕನ್ನು ಬದಲಾಯಿಸಿದೆವು’ ಎಂದು ಪರಿಸ್ಥಿತಿ ವಿವರಿಸಿದರು.

‘ಮತ್ತೆ ಮಳೆ ಬಂದಾಗ ಗ್ರಾಮಕ್ಕೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಿ. ಆಂಜನೇಯ ದೇವಾಲಯದ ಪಕ್ಕದ ರಸ್ತೆಯಲ್ಲಿ ಸೇತುವೆ ಇಲ್ಲದೆ ಇರುವುದರಿಂದ ಈ ಭಾಗದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ’ ಎಂದು ಜನಪ್ರತಿನಿಧಿಗಳ ಎದುರು ಸಮಸ್ಯೆ ಹೇಳಿಕೊಂಡರು.

ಶಾಸಕ ಕೇಶವಮೂರ್ತಿ ಮಾತನಾಡಿ, ‘ಗುಂಡ್ಲುಪೇಟೆ ಸುತ್ತಮುತ್ತ ಬಿದ್ದ ಮಳೆಯ ನೀರು ಹಳೆಪುರ ಕೆರೆಯಲ್ಲಿ ತುಂಬಿ ಭಾರಿ ಪ್ರಮಾಣದಲ್ಲಿ ಚೆಕ್‌ಡ್ಯಾಂ ಕಡೆಗೆ ಹರಿದು ಬಂದಿದೆ. ಈ ಕಾರಣದಿಂದ ಚೆಕ್‌ಡ್ಯಾಂ ಒಡೆದು ಅವಾಂತರ ಸೃಷ್ಟಿಯಾಗಿದೆ. ಇನ್ನು ಮುಂದೆ ಮಳೆ ಬಂದಾಗ ಅರಸನ ಕೆರೆಗೆ ನೀರು ಹರಿದು ಹೋಗುವಂತೆ ಮಾಡಿ’ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

‘ಆಂಜನೇಯ ದೇವಾಲಯ ಎದುರು ಲೋಕೋಪಯೋಗಿ ಇಲಾಖೆಯಿಂದ ಬೃಹತ್ ಸೇತುವೆ ನಿರ್ಮಾಣಕ್ಕೆ ಸಚಿವ ಎಚ್.ಸಿ. ಮಹದೇವಪ್ಪ, ಸಂಸದ ಆರ್.ಧ್ರುವನಾರಾಯಣ ಜೊತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಬಾರದ ಮಳೆ ಬಂದಾಗ:  ತಾಲ್ಲೂಕಿನ ಈ ಭಾಗದಲ್ಲಿ 2 ವರ್ಷಗಳಿಂದ ಬರದ ಛಾಯೆ ಆವರಿಸಿ ಜನತೆ ನೀರಿಗಾಗಿ ಪರಿತಪಿಸುತ್ತಿದ್ದರು. ಒಂದು ವಾರದಿಂದ ಸುರಿದ ಮಳೆಯಿಂದಾಗಿ ಗ್ರಾಮದ ಸುತ್ತಮುತ್ತಲಿನ ಕೆರೆ ಕಟ್ಟೆಯಲ್ಲಿ ನೀರು ತುಂಬಿರುವುದನ್ನು ನೋಡಿ ಸಂತಸಪಟ್ಟಿದ್ದರು. ಆದರೆ ಈಗ ಮನೆ ಕುಸಿದಿದ್ದರಿಂದ ಆತಂಕಕ್ಕೀಡಾಗಿದ್ದಾರೆ. 

ಜಿಲ್ಲಾ ಪಂಚಾಯಿತಿ ಸದಸ್ಯೆ ಲತಾ ಸಿದ್ದಶೆಟ್ಟಿ, ಮಾಜಿ ಸದಸ್ಯ ಕೆ.ಬಿ.ಸ್ವಾಮಿ, ವಿಶ್ವಕರ್ಮ ನಿಗಮದ ಅಧ್ಯಕ್ಷ ನಂದಕುಮಾರ್, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್‌.ಸಿ.ಬಸವರಾಜು, ಹೆಮ್ಮರಗಾಲ ಸೋಮಣ್ಣ, ತಾ.ಪಂ. ಸದಸ್ಯ ಮಹದೇವನಾಯ್ಕ, ಸಿದ್ದಶೆಟ್ಟಿ, ಉಪವಿಭಾಗಾಧಿಕಾರಿ ಶಿವಲಿಂಗಯ್ಯ, ತಹಶೀಲ್ದಾರ್ ದಯಾನಂದ್, ಬಿಇಒ ನಾರಾಯಣ್ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT