ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಕ್ಕಿನ ಸವಲತ್ತು ನೀಡದಿದ್ದರೆ ಇಲ್ಲೇ ಪ್ರಾಣತ್ಯಾಗ’

Last Updated 28 ಮೇ 2017, 7:24 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಎಂಡೊ ಸಂತ್ರಸ್ತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿ ಶನಿವಾರ ಕೊಕ್ಕಡದ ಆಟೋರಿಕ್ಷಾ ನಿಲ್ದಾಣದ ಬಳಿ ಹಾಕಿದ ಬೃಹತ್ ವೇದಿಕೆಯಲ್ಲಿ ಅನಿರ್ದಿಷ್ಟ ಅವಧಿಯ ಪ್ರತಿಭಟನೆ, ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭವಾಯಿತು.

ಕೊಕ್ಕಡದ ಎಂಡೊ ವಿರೋಧಿ ಹೋರಾಟ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಈ ಪ್ರತಿಭಟನೆಯಲ್ಲಿ ಸ್ವತಃ ಹತ್ತಾರು ಎಂಡೊ ಪೀಡಿತರು ಪಾಲ್ಗೊಂಡಿದ್ದರು. ಕರುಳು ಕಿತ್ತು ಬರುವ ನರಳಾಟ, ಚೀರಾಟ. ವಯಸ್ಸು 30 ದಾಟಿದ ಯುವಕ ಮಗುವಿನಂತೆ ಅಂಗಾತ ಬಿದ್ದುಕೊಂಡಿರುವಂತದ್ದು. ಇನ್ನೂ ಕೆಲವರದ್ದು ಮುರುಟು ಕಟ್ಟಿದ ಕೈ ಕಾಲುಗಳು. ನೋಡಲು, ಅನುಭವಿಸಲು ಅಸಾಧ್ಯವಾಗದ ರೀತಿಯಲ್ಲಿ ಬದುಕು ಹೆಣೆಯುತ್ತಿರುವ ನೂರಾರು ಜೀವಗಳು ಅಲ್ಲಿದ್ದವು.

‘ಇಲ್ಲೇ ಪ್ರಾಣ ಪಕ್ಷಿ ಕಳಚಲಿದೆ’: ‘ನನ್ನ ಮನೆಯಲ್ಲಿ ದುಡಿಯುವ ಗಂಡಸರಿಲ್ಲ, ದುಡಿಯುವ ವಯಸ್ಸಿನ ಜೀವ ದುಡಿಯ ಲಾರದ ಸ್ಥಿತಿಯಲ್ಲಿದೆ. ನರಳಾಟದ ಮಕ್ಕಳನ್ನು ಬಿಟ್ಟು ಎಲ್ಲಿಯೂ ಹೋಗು ವಂತಿಲ್ಲ. ದುಡಿದು ಸಂಪಾದಿಸುವಂತಿಲ್ಲ. ಈ ಪರಿಯ ಗೋಳಾಟದ ನರಳಾಟದ ಬದುಕು ನೀಡಿದ ಸರ್ಕಾರ ಎಂಡೋ ಪೀಡಿತರ ಹಕ್ಕಿನ ಸವಲತ್ತನ್ನು ನೀಡದೇ ಹೋದರೆ ಕೊಕ್ಕಡದಲ್ಲೇ ನಮ್ಮೆಲ್ಲರ  ಪ್ರಾಣ ಪಕ್ಷಿ ಕಳಚಲಿದೆ’ ಎಂದು ವೇದಿಕೆ ಮಧ್ಯೆ ಕುಳಿತಿದ್ದ ಎಂಡೋ ಸಂತ್ರಸ್ತ ಮಹಿಳೆ ಕಮಲಾ ಕನ್ಯಾಡಿ ಹೇಳಿದರು.

ಎಂಡೋಪೀಡಿತರ ಬದುಕಿನ ಸಂಕಷ್ಟವನ್ನು ಎಳೆ ಎಳೆಯಾಗಿ ವಿವರಿಸಿದ ಅವರು, ‘ನಮ್ಮ ಸಮಸ್ಯೆಯನ್ನು ರಾಜ ಕೀಯ ಕಣ್ಣಿನಿಂದ ದಯವಿಟ್ಟು ನೋಡ ದಿರಿ. ಕೇರಳದಲ್ಲಿ ಎಂಡೋಪೀಡಿತರಿಗೆ ನ್ಯಾಯೋಚಿತ ಸೌಲಭ್ಯ ಒದಗಿಸಲು ಸಾಧ್ಯವಿರುವಾಗ ನಮಗ್ಯಾಕೆ ಒದಗಿಸಲು ಅಸಾಧ್ಯ?’ ಎಂದು ಕೇಳಿದರು. ಎಂಡೊ ಪೀಡಿತ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರದೀಪ ಮಾತನಾಡಿ, ‘ನಮ್ಮ ಹಕ್ಕು ನಮಗೆ ನೀಡಿ. ಅದಕ್ಕಾಗಿ ನಮ್ಮನ್ನು ಮತ್ತೆ ಮತ್ತೆ ಬೀದಿಗಿಳಿಯುವಂತೆ ಮಾಡ ಬೇಡಿ’ ಎಂದರು.

ಅಂಗಾತ ಮಲಗಿದ್ದ, ಕುಕ್ಕುರು ಕುಳಿತಿದ್ದ, ಮಲಗಲೂ ಆಗದೆ, ನಿಲ್ಲದೂ ಆಗದೆ ತೆವಳುತ್ತಿದ್ದ ಜೀವಗಳು ಎಂಡೊ ಪೀಡಿತರು ಮಾತು ಬಾರದೆ ಮೌನವಾ ಗಿಯೇ ಪತ್ರಕರ್ತರ ಮುಂದೆ ನೋವು ತೋಡಿಕೊಳ್ಳುತ್ತಿದ್ದರು. ಪ್ರತಿಭಟನೆಯ ಮುಂದಾಳು, ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ ಮಾತನಾಡಿ, ಎಂಡೋಪೀಡಿತರ ಬವಣೆ ಬಗೆಹರಿಸಲು ಪ್ರಯತ್ನಿಸಬೇಕಾಗಿದ್ದ ರಾಜ್ಯ ಸರ್ಕಾರ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತಿದೆ. ಸರ್ಕಾರವನ್ನು ಎಚ್ಚರಿಸಲು ಎಂಡೋ ಪೀಡಿತರೊಂದಿಗೆ ಇಡೀ ನಾಗರಿಕ ಸಮಾಜ ಒಗ್ಗೂಡಿ ಹೋರಾಡಬೇಕಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ‘ನನ್ನ 35 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಈ ರೀತಿಯ ಹೃದಯಕ್ಕೆ ವೇದನಾ ಮಯವಾದ ಸನ್ನಿವೇಶ ನಾನು ಕಂಡಿಲ್ಲ’ ಎಂದರು. ಆರೋಗ್ಯ ಸಚಿವ ರನ್ನು ಸ್ಥಳಕ್ಕೆ ಕರೆಸುವ, ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುವ ಭರವಸೆ ನೀಡಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಎಸ್. ಅಂಗಾರ, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬೆಳ್ತಂಗಡಿ ಬಿಜೆಪಿ ಅಧ್ಯಕ್ಷ ರಂಜನ್ ಗೌಡ ಬೆಳ್ತಂಗಡಿ, ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ,  ಭಜರಂಗದ ನಾಯಕ ರಾದ ಶರಣ್ ಪಂಪ್‌ವೆಲ್, ಭಾಸ್ಕರ ಧರ್ಮಸ್ಥಳ, ನೆಲ್ಯಾಡಿ ಚರ್ಚ್ ಧರ್ಮ ಗುರು ಸ್ಟೀಫ್ಹನ್ ಜಯರಾಜ್, ವಿವಿಧ ಸಂಘಟನೆಗಳ ಮುಂದಾಳುಗ ಳಾದ ನಯನಾ ರೈ, ದಿನೇಶ್ ಶೆಟ್ಟಿ ಮಂಗ ಳೂರು, ಮಂಜುನಾಥ ಬೆಂಗಳೂರು ಮಾತನಾಡಿ ಬೆಂಬಲ ಸೂಚಿಸಿದರು.

ಅಧಿಕಾರಿಗಳ ಜತೆ ಮಾತುಕತೆಗೆ ನಕಾರ
ಪ್ರತಿಭಟನಾ ಸ್ಥಳಕ್ಕೆ ಪುತ್ತೂರು ಉಪವಿಭಾಗಾಧಿಕಾರಿ ರಘುನಂದ ಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಬೆಳ್ತಂಗಡಿ ತಹಶೀಲ್ದಾರ್ ತಿಪ್ಪೇಸ್ವಾಮಿ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತನಾಡಲು ಬಯಸಿದರಾದರೂ, ನಮ್ಮ ನೋವಿಗೆ ಸ್ಪಂದಿಸಬೇಕಾದ ಸರ್ಕಾರದ ಮಂತ್ರಿಗಳು ಸ್ಥಳಕ್ಕೆ ಬರಬೇಕು, ಯಾರೇ ಅಧಿಕಾರಿಗಳಲ್ಲಿ ಮಾತನಾಡಿ ಪ್ರಯೋಜನವಿಲ್ಲ.

ಮಂತ್ರಿಗಳು ಬಂದು ಸ್ಪಂದಿಸಿದರೆ ಪ್ರತಿಭಟನೆಯನ್ನು ಸ್ಥಗಿತಗೊಳಿಸುವು ದಾಗಿ ತಿಳಿಸಿದರು. ಇದರ ಪರಿಣಾಮ ಅಧಿಕಾರಿಗಳು ಹಿಂತಿರುಗಿದರು.ಬೆಳ್ತಂಗಡಿ ರೋಟರಿ ಕ್ಲಬ್ ಪದಾಧಿಕಾರಿಗಳು, ವಕೀಲರಾದ ಧನಂಜಯ ರಾವ್, ಸುಬ್ರಹ್ಮಣ್ಯ ಅಗರ್ತ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.500 ಕ್ಕೂ ಮಿಕ್ಕಿ ಎಂಡೋ ಸಂತ್ರಸ್ತರು  ಈ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು. ನವೀನ್ ನೆರಿಯ ಸ್ವಾಗತಿಸಿ, ಪುರಂದರ ಗೌಡ ಕಡಿರ ನಿರೂಪಿಸಿದರು

‘ಲಿಖಿತ ಭರವಸೆ ದೊರಕದೆ ವಿರಮಿಸಲ್ಲ’
ಕೇರಳ ಮಾದರಿಯಲ್ಲಿ ಪರಿಹಾರ ನೀಡಬೇಕು ಎಂದು ಈ ಹಿಂದೆ ಹೋರಾಟ ಮಾಡಿದಾಗ ಕರ್ನಾಟಕ ಮಾದರಿಯ ಸೌಲಭ್ಯ ಪ್ರಕಟವಾಗುತ್ತದೆ ಎಂಬ ಭರವಸೆ ದೊರೆಯಿತೇ ವಿನಃ ಬದುಕು ಬೆಳಗಿಸುವ ಯಾವುದೇ ಯೋಜನೆ ಸರ್ಕಾರದಿಂದ ಪ್ರಕಟವಾಗಿಲ್ಲ.

ಅದಕ್ಕಾಗಿ ನಿರ್ಣಾಯಕ ಹೋರಾಟ ಆಮರಣಾಂತ ಹೋರಾಟದತ್ತ ನಮ್ಮ ಚಿತ್ತ ಹರಿದಿದೆ. ಎಂಡೊ ಪೀಡಿತರಿಗೆ ನ್ಯಾಯ ದೊರಕಿಸಲು ನಾವು ಅಸಮರ್ಥರಾದರೆ ನಮ್ಮ ಬದುಕೂ ಇಲ್ಲೇ ಕೊನೆಗೊಳ್ಳಲಿ ಎಂಬ ದೃಢ ನಿರ್ಧಾರದಿಂದ ಈ ಹೋರಾಟ ನಡೆಯುತ್ತಿದೆ ಎಂದು ಕೊಕ್ಕಡ ಎಂಡೊ ವಿರೋಧಿ ಹೋರಾಟ ಸಮಿತಿ ಸಂಚಾಲಕ ಶ್ರೀಧರ ಗೌಡ ಹೇಳಿದರು.

* *

ನಮ್ಮ ಬೇಡಿಕೆಗಳನ್ನು ಈಡೇರಿ ಸುವ ಬಗ್ಗೆ ಮುಖ್ಯಮಂತ್ರಿ ಯವರು ಬಂದು ನಮಗೆ ಲಿಖಿತ ಭರವಸೆ ನೀಡಬೇಕು, ಅಲ್ಲಿಯ ತನಕ ನಮ್ಮ ಆಮರಣಾಂತರ ಉಪವಾಸ ಮುಂದುವರಿಯಲಿದೆ.
ಶ್ರೀಧರ ಗೌಡ
ಎಂಡೊ ವಿರೋಧಿ ಹೋರಾಟ ಸಮಿತಿ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT