ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಯರಿಗಳ ಸರದಾರ ಇಟಗಿ ಈರಣ್ಣ

Last Updated 28 ಮೇ 2017, 8:51 IST
ಅಕ್ಷರ ಗಾತ್ರ

ಶಿವಮೊಗ್ಗ: ಕೇವಲ ಶಾಯರಿ ಕವಿತೆ ರಚಿಸಿದ್ದಲ್ಲದೆ, ಅವು ಬೆಳೆದುಬಂದ ಬಗೆ, ಜನಪ್ರಿಯತೆಗೆ ಕಾರಣವನ್ನೂ ಇಟಗಿ ಈರಣ್ಣ ತಮ್ಮ ಕೃತಿಗಳಲ್ಲಿ ಓದುಗರಿಗೆ ನೀಡಿದ್ದಾರೆ ಎಂದು ಸಾಹಿತಿ ನಾ.ಡಿಸೋಜ ತಿಳಿಸಿದರು.

ಜಯದೇವ ಬಡಾವಣೆಯಲ್ಲಿ ಶನಿವಾರ ಗೀತಾಂಜಲಿ ಪ್ರಕಾಶನ ಹಮ್ಮಿಕೊಂಡಿದ್ದ ಕವಿ ಇಟಗಿ ಈರಣ್ಣನವರಿಗೆ ಭಾವನಮನ, ನಾಟಕ ಪ್ರದರ್ಶನ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಟಗಿ ಈರಣ್ಣನವರನ್ನು ಕನ್ನಡ ಸಾಹಿತ್ಯ ಲೋಕ ಶಾಯರಿಗಳ ಸರದಾರ, ಶಾಯರಿಗಳ ಜನಕ ಹಾಗೂ ದೋಹೆಗಳ ಪಿತಾಮಹ ಎಂಬ ಬಿರುದಿನಿಂದ ಕರೆಯುತ್ತದೆ. ಚಲನಚಿತ್ರದ ಕವಿಯೂ ಆಗಿದ್ದ ಈರಣ್ಣನವರು, ‘ಸ್ಪರ್ಶ’ ಚಿತ್ರದಲ್ಲಿನ ಚಂದಕಿಂತ ಚಂದ.. ನೀನೆ ಸುಂದರ.. ಎಂಬ ಗೀತೆ ರಚಿಸಿದ್ದಾರೆ. ಅದು ಇಂದಿಗೂ ಮೆಲುಕು ಹಾಕುವಂತಿದೆ ಎಂದು ಹೇಳಿದರು.

ಕನ್ನಡ ಸಾಕಷ್ಟು ಶ್ರೀಮಂತಿಕೆಯಿಂದ ಕೂಡಿದ ಭಾಷೆ. ಅನ್ಯ ಪ್ರಾಕಾರದ ಯಾವುದೇ ಭಾಷೆಯನ್ನೂ ಸ್ವೀಕಾರ ಮಾಡುವ ಗುಣ ಕನ್ನಡ ಸಾಹಿತ್ಯ ಹೊಂದಿದೆ. ನಮ್ಮ ದೇಶದ್ದಲ್ಲದ ಶಾಯರಿಯನ್ನು ಈ ನೆಲದ ಪ್ರಾಕಾರವೆಂದೇ ಭಾವಿಸಿ, ಕನ್ನಡ ಸಾಹಿತ್ಯ ಸ್ವೀಕರಿಸಿದೆ. 1977ರಲ್ಲಿ ಇಟಗಿ ಈರಣ್ಣನವರು ಶಾಯರಿಗಳನ್ನು ಬರೆಯಲು ಆರಂಭಿಸಿದ ನಂತರ, ಅನೇಕ ಲೇಖಕರು ಶಾಯರಿ ಬರವಣಿಗೆಗೆ ಕೈ ಹಾಕಿದರು ಎಂದು ತಿಳಿಸಿದರು.

ಜನ ಮಾಧ್ಯಮದ ಮೂಲಕ ತಮ್ಮನ್ನು ಪ್ರಪಂಚಕ್ಕೆ ತೆರೆದುಕೊಂಡ ಇಟಗಿ ಈರಣ್ಣನವರು, ಓದುಗರಿಗೆ ಸಂತಸವಾಗುವಂತೆ ಕವಿತೆಗಳನ್ನು ಬರೆದಿದ್ದಾರೆ. ಭಾವನಾತ್ಮಕವಾಗಿ ಶಾಯರಿ ರಚಿಸುವ ಮೂಲಕ ಓದುಗರನ್ನು ಮಂತ್ರಮುಗ್ಧ ರನ್ನಾಗಿಸಿದ್ದಾರೆ ಎಂದರು.

ಕವಿ ಈರಣ್ಣನವರ ಶಾಯರಿಗಳನ್ನು ಓದುತ್ತಿದ್ದರೆ, ಬದುಕಿನ ಅನೇಕ ಘಟನೆಗಳು ಕಣ್ಮುಂದೆ ಸುಳಿದಾಡುತ್ತಿವೆ. ಅನುಭವಿಸಿದ್ದನ್ನು ವ್ಯಕ್ತಪಡಿಸಲಾಗದ ಭಾವನೆಯನ್ನೂ ಸಹ ಈರಣ್ಣನವರು ಶಾಯರಿಗಳ ಮೂಲಕ ಆತ್ಮೀಯವಾಗಿ ನೀಡಿದ್ದಾರೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಇಟಗಿ ಈರಣ್ಣ ಅವರ ಶಿಷ್ಯ ಶ್ರೀಧರ್, ‘ಇಟಗಿ ಈರಣ್ಣನವರು ಒಂದು ರೀತಿ ಬದುಕಿನ ಕವಿ. ನಮಗೆ ಸಾಹಿತ್ಯದ ರುಚಿ ಹತ್ತಿಸಿದವರು. ಎತ್ತರದ ವ್ಯಕ್ತಿತ್ವದ ವ್ಯಕ್ತಿಯಾಗಿರುವ ಇಟಗಿ ಈರಣ್ಣನವರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯಕ್ಕೆ ಸೇವೆ ಸಲ್ಲಿಸುವೆ’ ಎಂದರು.

ಡಾ.ಬಸವರಾಜ್ ಸಬರದ ಮಾತನಾಡಿ, ‘ಶಾಯರಿ ಬರಹಗಳಿಂದಲೇ ಕನ್ನಡ ಕಾವ್ಯ ಮಹತ್ವವನ್ನು ಇಟಗಿ ಈರಣ್ಣ ಸಾರಿದ್ದಾರೆ. ಮೂಲತಃ ಬಯಲುಸೀಮೆಯಿಂದ ಬಂದಿದ್ದರೂ ನಾಡಿನ ಎಲ್ಲ ಭಾಗದ ಜನರ ಮನಸ್ಸಿಗೆ ತಾಗುವಂತೆ ಕವಿತೆ ರಚಿಸಿದ ಕನ್ನಡದ ಮೊದಲ ಕವಿ ಇಟಗಿ ಈರಣ್ಣ’ ಎಂದು ತಿಳಿಸಿದರು.

ಜಯದೇವ ಬಡಾವಣೆಯ ನಿವಾಸಿಗಳ ಸಂಘದ ಅಧ್ಯಕ್ಷೆ ಸಂಧ್ಯಾ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್.ಪಿ. ದಿನೇಶ್ ಸ್ವಾಗತಿಸಿದರು. ಶಾರದಾ ಇಟಗಿ ಈರಣ್ಣ ಇದ್ದರು.

* * 

ಬದುಕಿನ ಭಾವಗಳ ಜಲಪಾತವೇ ಇಟಗಿ ಈರಣ್ಣನವರ ಶಾಯರಿಗಳಲ್ಲಿ ಮೇಳೈಸಿದೆ.
ನಾ.ಡಿಸೋಜ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT