ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳೇ ಸೈ!

Last Updated 28 ಮೇ 2017, 19:30 IST
ಅಕ್ಷರ ಗಾತ್ರ

ಆದರೆ ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳೇ ಗಮನಾರ್ಹ ಸಾಧನೆ ಮಾಡಿರುವುದನ್ನು ಅಧ್ಯಯನಗಳು ತಿಳಿಸುತ್ತಿವೆ.

ಇನ್ನು ಕೆಲವೇ ದಿನಗಳಲ್ಲಿ ಶಾಲೆಗಳು ಪುನಾರಂಭವಾಗಲಿವೆ. ಎಷ್ಟೋ ಜನ ಪೋಷಕರಿಗೆ ತಮ್ಮ ಮಕ್ಕಳಿಗೆ ತಾವಿಷ್ಟಪಟ್ಟ ಶಾಲೆಯಲ್ಲಿ ಪ್ರವೇಶವನ್ನು ದೊರಕಿಸಿಕೊಳ್ಳುವುದು ಒಂದು ಯುದ್ಧವನ್ನು ಗೆದ್ದಂತೆಯೇ ಎನಿಸುತ್ತದೆ.

ಹಾಗೆಯೇ, ಮತ್ತೆ ಕೆಲವರು ಹಲವು ವರ್ಷಗಳು ಕಾದು ತಮ್ಮ ನೆಚ್ಚಿನ ಶಾಲೆಯಲ್ಲಿ ಮಗುವಿಗೆ ಸೀಟನ್ನು ಪಡೆದುಕೊಳ್ಳುತ್ತಾರೆ. ಮತ್ತೆ ಕೆಲವರು ‘ಒಳ್ಳೆಯ’ ಖಾಸಗಿ ಶಾಲೆಗೆ ತಮ್ಮ ಮಗುವನ್ನು ಸೇರಿಸಬೇಕು ಎಂಬ ಪ್ರಯತ್ನದಲ್ಲಿ ಅನೇಕ ತ್ಯಾಗಗಳನ್ನು ಮಾಡಿರುತ್ತಾರೆ.

ಸಾಲ ಮಾಡಿಕೊಂಡಿರುತ್ತಾರೆ. ಇದ್ದ ಚೂರುಪಾರು ಆಸ್ತಿಪಾಸ್ತಿಯನ್ನು ಪರಭಾರೆ ಮಾಡಿದವರೂ ಉಂಟು. ಅವರೆಲ್ಲರೂ ತಮ್ಮ ಅಭಿಪ್ರಾಯದಲ್ಲಿ ಮಕ್ಕಳನ್ನು ಅತ್ಯುತ್ತಮ ಶಾಲೆಗೆ ಸೇರಿಸಿದ್ದೇವೆ –ಎಂದು ನಿಟ್ಟುಸಿರುಬಿಟ್ಟಿರುತ್ತಾರೆ. ಹಾಗೆ ಮಾಡಲಾಗದವರು ಅಪರಾಧಪ್ರಜ್ಞೆಯನ್ನು ಬೆಳೆಸಿಕೊಂಡಿರುವುದೂ ಉಂಟು.

ಇವುಗಳ ಆಧಾರಶ್ರುತಿ ಏನು? ‘ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಬೇಕು’. ಇದು ಹೆತ್ತವರ–ಪೋಷಕರ ಸಹಜ ತುಡಿತವೇ. ಇದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಮತ್ತೆ ಬರೋಣ.

ನಮ್ಮ ದೇಶದಲ್ಲಿ ಇಂದು ಎರಡು ಬಗೆಯ ಶಿಕ್ಷಣವ್ಯವಸ್ಥೆಯಿದೆ. ಒಂದು – ಜನರ ತೆರಿಗೆಹಣದಿಂದ ಸರ್ಕಾರವೇ ನಡೆಸುವ ‘ಸರ್ಕಾರಿ ಶಾಲೆಗಳು’. ಇದನ್ನು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಎನ್ನುತ್ತಾರೆ.  ನಮ್ಮ ಸರ್ಕಾರಿ ಶಾಲೆಗಳು (ಮತ್ತು ಸರ್ಕಾರಿ ಆಸ್ಪತ್ರೆಗಳು) ನಮ್ಮ ಆತ್ಮಗೌರವದ ಪ್ರತೀಕ. ಇಲ್ಲಿ ಉಚಿತ ಶಿಕ್ಷಣ, ಪುಸ್ತಕ, ಬಟ್ಟೆ ಆಹಾರ ನೀಡುವ ವ್ಯವಸ್ಥೆ ಇರುತ್ತದೆ.

ಇವು ಸಂಪೂರ್ಣ ಸರ್ಕಾರಿ ನಿಯಂತ್ರಣದಲ್ಲಿರುವ ಶಾಲೆಗಳು. ಜನರು ‘ಗೌರ್ಮೆಂಟ್‍ ಸ್ಕೂಲ್’ ಎಂದು ಕರೆಯುವ ಶಾಲೆಗಳಿವು. ಮತ್ತೊಂದು – ಜನರಿಂದ ಇಂತಿಷ್ಟು ಎಂದು ಶುಲ್ಕ ತೆಗೆದುಕೊಂಡು ನಡೆಸಲಾಗುವ ಶಾಲೆಗಳು. ಇವುಗಳ ಮೇಲೆ ಸರ್ಕಾರ ತುಸು ಹಿಡಿತವಿರುವುದಾದರೂ, ಪೂರ್ತಿಯಾಗಿ ತಮ್ಮ ಮರ್ಜಿಯಲ್ಲಿಯೇ  ನಡೆಯುವ ಶಾಲೆಗಳಿವು; ‘ಖಾಸಗಿ ಶಾಲೆಗಳು’.

ಈಗ ಮಕ್ಕಳನ್ನು ‘ಅತ್ಯುತ್ತಮ’ ಶಾಲೆಗೆ ಸೇರಿಸುವ ವಿಷಯಕ್ಕೆ ಬರೋಣ. ಕಳೆದ ಎರಡು–ಮೂರು ದಶಕದಲ್ಲಿ ಭಾರತಾದ್ಯಂತ ಕಂಡುಬರುತ್ತಿರುವ ಹೊಸ ಬೆಳೆವಣಿಗೆಯೆಂದರೆ ‘ನಮ್ಮ ಪೋಷಕರ ನಡೆ, ಖಾಸಗಿ ಶಾಲೆಗಳ ಕಡೆ’. ಅದು ಹೇಗೋ, ಸರ್ಕಾರಿ ಶಾಲೆಗಳೆಂದರೆ ತಾತ್ಸಾರ ಮೂಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಈ ಭಾವ ಬಲಿತು, ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುವ ಹಂತ ತಲುಪಿರುವುದಂತೂ ನಿಜ. ‘ಏನಾದರೂ ಮಾಡಿ ಒಂದು ಖಾಸಗಿ ಶಾಲೆಗೆ ಮಗುವನ್ನು ಸೇರಿಸಿಬಿಟ್ಟರೆ ಸಾಕು! ಇನ್ನೇನು ಮಾಡಬೇಕಿಲ್ಲ!

ನಮ್ಮ ಮಗುವಿನ ಜೀವನ ಸುಗಮವಾಗಿಬಿಡುತ್ತದೆ’ ಎಂಬ ಅಭಿಪ್ರಾಯ ಗಟ್ಟಿಯಾಗುತ್ತಿದೆ. ಇದನ್ನು ಪುಷ್ಟೀಕರಿಸಲು ಖಾಸಗಿ ಶಾಲೆಗಳು ಅನೇಕ ತಂತ್ರಗಳನ್ನು ಹೂಡುತ್ತಿವೆ. ಈ ಮಾತು ಹೇಳುವಾಗಲೇ ಹೇಳಲೇಬೇಕಾದ್ದು: ಇಂದು ಖಾಸಗಿ ವಲಯದಲ್ಲಿ ಅದ್ಭುತವಾದ ಪ್ರಯೋಗಗಳು ನಡೆಯುತ್ತಿವೆ. ಹೊಸ ಹೊಸ ಶಿಕ್ಷಣ ಸಿದ್ಧಾಂತಗಳನ್ನು ಆಧಾರವಾಗಿಟ್ಟುಕೊಂಡು ಶಿಕ್ಷಣ ನೀಡುತ್ತಿವೆ. ಅವು ನಿಜಕ್ಕೂ ಒಳ್ಳೆಯ ಪ್ರಯೋಗಗಳೇ ಹೌದು. ಆದರೆ ಇಂಥವು ಬೆರಳೆಣಿಕೆಯಷ್ಟು ಮಾತ್ರ.

ಭಾರತದಲ್ಲಿ ಇಂದು ಈ ವಿಷಯವನ್ನು ಕುರಿತು ಅನೇಕ ಸಂಶೋಧನೆಗಳು ನಡೆಯುತ್ತಿವೆ. ಡಿ.ಡಿ. ಕರೋಪಾಡಿ ಈ ಕ್ಷೇತ್ರದಲ್ಲಿ ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ. ಶಿಕ್ಷಣ ಸಂಶೋಧನಾ ಪತ್ರಿಕೆಯಲ್ಲಿನ ಪ್ರಕಟವಾಗಿರುವ ಅವರ ‘ಖಾಸಗಿ ಶಾಲೆಗಳು ನಿಜಕ್ಕೂ ಒಳ್ಳೆಯ ಕಲಿಕೆಯನ್ನು ನೀಡುತ್ತಿದೆಯೇ?’ ಎಂಬ ಮಹತ್ವದ ಅಧ್ಯಯನ ನಮ್ಮ ಕಣ್ಣನ್ನು ತೆರೆಸುವಂಥದ್ದು.

ಖಾಸಗಿ ಶಾಲೆಗಳು ನಿಜಕ್ಕೂ ಭಾರತದಲ್ಲಿ ಜನ ತಮ್ಮ ಅಮೂಲ್ಯ ಸಂಪನ್ಮೂಲಗಳನ್ನು ಅಡವಿಟ್ಟು ಮಕ್ಕಳನ್ನು ಸೇರಿಸುವಷ್ಟು ಚೆನ್ನಾಗಿವೆಯೇ? –  ಎಂದರೆ, ಉತ್ತರ: ಉಸಿರು ಬಿಗಿಹಿಡಿಯಿರಿ, ‘ಖಂಡಿತ ಇಲ್ಲ!’ ಮಾತ್ರವಲ್ಲ, ಬಹಳಷ್ಟು ಕಡೆ ಸರ್ಕಾರಿ ಶಾಲೆಗಳೇ ಈ ಖಾಸಗಿ, ಅದ್ಧೂರಿ ಶಾಲೆಗಳಿಗಿಂತ ಹೆಚ್ಚು ಪ್ರಸ್ತುತವೂ, ಮೌಲಿಕ ಶಿಕ್ಷಣವನ್ನು ನೀಡುತ್ತಿರುವ ವ್ಯವಸ್ಥೆಯೂ ಆಗಿದೆ. ಇದು ಈ ನಿಟ್ಟಿನಲ್ಲಿ ಕಳೆದ ಎರಡು ದಶಕಗಳಲ್ಲಿ ವಸ್ತುನಿಷ್ಠವಾಗಿ ನಡೆದ ಶಿಕ್ಷಣ ಸಂಶೋಧನೆಗಳ ಹೂರಣ! ಇದೊಂದು ಕಟು, ಸಿಹಿ ಸತ್ಯ!



ಹೋಲಿಕೆ ಹೇಗೆ?
ಸರ್ಕಾರದ ಶಾಲೆಗಳು ಸರ್ಕಾರದಿಂದ ನಿರ್ದೇಶಿತವಾದ ಪರೀಕ್ಷೆಗಳನ್ನು ನಡೆಸುತ್ತವೆ ಹಾಗೂ ಅದರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತವೆ. ಖಾಸಗಿ ಶಾಲೆಗಳಲ್ಲಿ ಅನೇಕ ಪರೀಕ್ಷೆಗಳು, ಪದ್ಧತಿಗಳಿವೆ. ಹಾಗಾಗಿ, ಇವನ್ನು ನೇರವಾಗಿ ಹೋಲಿಸಲಾಗದು. ಅಂತೆಯೇ, ಖಾಸಗಿ ಶಾಲೆಯ ಮಕ್ಕಳು ಬಹಳಷ್ಟು ಬಾರಿ ಒಂದು ಉನ್ನತ ಆರ್ಥಿಕ ಸಾಮಾಜಿಕ ವ್ಯವಸ್ಥೆಯಿರುವ ಕುಟುಂಬಗಳಿಂದ ಬಂದಿರುತ್ತಾರೆ.

ಸರ್ಕಾರಿ ಶಾಲೆಗಳಲ್ಲಿ ಹೀಗಲ್ಲದೆ ವಿವಿಧ ಆರ್ಥಿಕ, ಸಾಮಾಜಿಕ ಸ್ತರಗಳಿಂದ ಮಕ್ಕಳು ಬಂದಿರುತ್ತಾರೆ; ಹೀಗಾಗಿ ನೇರ ಹೋಲಿಕೆಯೇ ಸಲ್ಲದು. ಆದರೆ, ಈ ಎಲ್ಲ (ಖಾಸಗಿ ಮತ್ತು ಸರ್ಕಾರಿ) ಶಾಲಾ ಮಕ್ಕಳ ಕಲಿಕೆಯನ್ನು ಮಾನದಂಡವಾಗಿಟ್ಟುಕೊಂಡರೆ ಸರ್ಕಾರಿ ಶಾಲೆಗಳಲ್ಲಿಯೇ ಮಕ್ಕಳ ಕಲಿಕೆ ಹೆಚ್ಚು ಅರ್ಥಪೂರ್ಣವಾಗಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ನಗರ ಪ್ರದೇಶದ ಖಾಸಗಿ ಶಾಲೆಗಳು
ನಗರಪ್ರದೇಶಗಳ ಖಾಸಗಿ ಶಾಲೆಗಳು, ದೊಡ್ಡ ಅಂತಾರಾಷ್ಟ್ರೀಯ ಶಾಲೆಗಳು ಒಟ್ಟಾರೆ ‘ಎಲೀಟ್‍ ಶಾಲೆಗಳು’ ಲೈಟ್‍ ಎಂದು ಹೆಸರಾದ ಶಾಲೆಗಳನ್ನು ತಂತ್ರಜ್ಞಾನ ದೈತ್ಯ ಸಂಸ್ಥೆ ವಿಪ್ರೊ ಮತ್ತು ಎಡ್ಯುಕೇಷನ್‍ ಇನಿಷಿಯೇಟಿವ್ಸ್ ಸಂಸ್ಥೆಗಳು ಅಧ್ಯಯನಕ್ಕೊಳಪಡಿಸಿದವು. ದೇಶದ ಮಹತ್ವದ ಶಾಲೆಗಳು ಎಂದು ಹೆಸರಾದ ಈ ಶಾಲೆಗಳ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲ, ಆಗಬೇಕಾದ್ದು ಅಗಾಧ ಪ್ರಮಾಣದಲ್ಲಿದೆ ಎಂಬುದು ಆ ಆಧ್ಯಯನದ ಫಲಿತಾಂಶ!

ಈ ಶಾಲೆಗಳ ಸಾಧನೆ ಜಾಗತಿಕ ಸರಾಸರಿಗಿಂತ ತೀರಾ ಕಡಿಮೆಯಿತ್ತು. ಇಲ್ಲಿನ ವಿದ್ಯಾರ್ಥಿಗಳು ಉರು ಹೊಡೆಯುವುದು, ಪದೇ ಪದೇ ಮಾಡುವಂತಹ ಕೆಲಸಗಳಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುವವರೇ ಹೊರತಾಗಿ ಅವರಲ್ಲಿ ವಿಷಯ ಕುರಿತಾದ ಸ್ಪಷ್ಟನೆಯಾಗಲಿ, ಕಲಿಕೆಯಾಗಲಿ, ಸ್ವತಂತ್ರ ಚಿಂತನೆ ಮತ್ತು ಅನ್ವಯ ಕುಶಲತೆಗಳು ಇರಲೇ ಇಲ್ಲ! ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳದ್ದೇ ಮೇಲುಗೈ. 

ಮತ್ತೊಂದು ಅಂತಾರಾಷ್ಟ್ರೀಯ ಪರಿಶೀಲನೆಯಲ್ಲಿ (ಪಿಸಾ 2009+)74 ರಾಷ್ಟ್ರಗಳ ಇಂತಹ ಶಾಲೆಗಳು ಭಾಗವಹಿಸಿದ್ದ ಪರಿಶೀಲನೆಯಲ್ಲಿ ಭಾರತವನ್ನು ಕೆಳಗಿನಿಂದ ಎರಡನೇ ಸ್ಥಾನದಲ್ಲಿ ನಿಲ್ಲಿಸಿದವು; ಕಜಕಿಸ್ಥಾನದ ಮೇಲೆ ಭಾರತವಿತ್ತು! ಆನಂತರ ಭಾರತ ಈ ಪರಿಶೀಲನೆಯಲ್ಲಿ ಭಾಗವಹಿಸಿಲ್ಲ!

ಸರ್ಕಾರಿ ಶಾಲೆಗಳನ್ನು ಬೆಂಬಲಿಸಿ!
ಈ ಎಲ್ಲ ಕಾರಣಗಳಿಂದ ಸರ್ಕಾರಿ ಶಾಲೆಗಳನ್ನು ಬೆಂಬಲಿಸಿ. ಪೋಷಕರು, ಸಮಾಜ ತುಸುವೇ ಹೆಚ್ಚು ಮುತುವರ್ಜಿ ವಹಿಸಿದರೆ ನಮ್ಮದೇ ಹಣದಲ್ಲಿ ನಡೆಯುವ ಸರ್ಕಾರಿ ಶಾಲೆಗಳು ನಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ. ಆದರೆ, ಇಲ್ಲಿ ನಮ್ಮೆಲ್ಲರ ಸಕ್ರಿಯ ಭಾಗವಹಿಸುವಿಕೆ ಅವಶ್ಯಕ.

ಆಂಧ್ರಪ್ರದೇಶದಲ್ಲಿ ನಡೆದ ಪ್ರಯೋಗ
ಇಂತಹ ಒಂದು ಕ್ಲಿಷ್ಟ ವಿಷಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮಕ್ಕಳ ಕಲಿಕೆಯನ್ನು ಕ್ರಮಬದ್ಧವಾಗಿ, ದೀರ್ಘಕಾಲೀನ ಅಧ್ಯಯನಕ್ಕೆ ಒಳಪಡಿಸಿ ಸಂಶೋಧನೆ ನಡೆಸಲಾಯಿತು. ಈ ಪ್ರಯೋಗವನ್ನು ಭಾರತದಲ್ಲಿ ನಡೆಸಲಾದ ಅತಿದೊಡ್ಡ ಮತ್ತು ವಿಶ್ವದ ಅತಿದೊಡ್ಡ ಶೈಕ್ಷಣಿಕ ಕ್ಷೇತ್ರದ ಪ್ರಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಇತರ ಅಧ್ಯಯನಗಳಿಗೆ ಅಧಿಕೃತ ಮಾಹಿತಿಯನ್ನೂ ಒದಗಿಸಿದ ಅಧ್ಯಯನವಿದು. ಒಟ್ಟು ಐದು ವರ್ಷಗಳ ಕಾಲ (2008ರಿಂದ 2013) ಆಂಧ್ರಪ್ರದೇಶದ ಐದು ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ನಡೆದ ವಿಶಿಷ್ಟ ಪ್ರಯೋಗವಿದು.

ಇಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಸ್ತರದ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಿ ಖಾಸಗಿ ಶಾಲೆಗಳಲ್ಲಿ ಓದಲು ಅವಕಾಶ ನೀಡಲಾಯಿತು. ಭಾರತದಲ್ಲಿ ಶಿಕ್ಷಣದ ಭವಿಷ್ಯದ ದೃಷ್ಟಿಯಿಂದ ಇದು ಮಹತ್ವದ ಅಧ್ಯಯನ. 

‘ಈ ವಿದ್ಯಾರ್ಥಿವೇತನ ಪಡೆದ ಮಕ್ಕಳು ಖಾಸಗಿ ಶಾಲೆಗಳಲ್ಲಿ ಶೈಕ್ಷಣಿಕವಾಗಿ ಹೆಚ್ಚೇನು ಗಳಿಸಲಿಲ್ಲ’ ಎಂಬುದನ್ನು ನಿರ್ಣಾಯಕವಾಗಿ ಈ ಅಧ್ಯಯನವು ಸಾಬೀತುಮಾಡಿತು. ತೆಲುಗು, ಗಣಿತ, ಸಮಾಜ ಮತ್ತು ಇಂಗ್ಲಿಷ್‍ ವಿಷಯಗಳಲ್ಲಿ ಈ ಮಕ್ಕಳ ಶೈಕ್ಷಣಿಕ ಸಾಧನೆ ಸರ್ಕಾರಿ ಶಾಲೆಗಳಲ್ಲಿಯೇ ಓದಿದ ಇವರ ಸಹಪಾಠಿಗಳಿಗಿಂತ ಯಾವುದೇ ರೀತಿಯಲ್ಲಿ ಉತ್ತಮವಾಗಿರಲಿಲ್ಲ.

ಆಂಧ್ರಪ್ರದೇಶದಲ್ಲಿ ನಡೆದ ಪ್ರಯೋಗವನ್ನು ಇಡೀ ದೇಶಕ್ಕೆ ಅನ್ವಯಿಸಿ ಸರ್ಕಾರಿ ಶಾಲೆಗಳಿಗೇ ಹೆಚ್ಚು ಅಂಕಗಳನ್ನು ಕೊಟ್ಟುಬಿಡಬಹುದೇ? ಎಂದರೆ ‘ಹೌದು’ಎನ್ನಲು ಬೇಕಾದ ಪೂರಕ ಅಧ್ಯಯನಗಳು ಈಗಾಗಲೆ ನಡೆದಿದ್ದು ಆಂಧ್ರಪ್ರದೇಶದ ಪ್ರಯೋಗದ ಮಹತ್ವವನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT