ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯಾಸ ಪಂದ್ಯದಲ್ಲಿ ವಿರಾಟ್ ಪಡೆಗೆ ಜಯ

ಶಮಿ–ಭುವಿ ಮಿಂಚು; ವಿರಾಟ್ ಕೊಹ್ಲಿ ಅರ್ಧಶತಕ
Last Updated 28 ಮೇ 2017, 19:30 IST
ಅಕ್ಷರ ಗಾತ್ರ

ಲಂಡನ್: ಮೊಹಮ್ಮದ್ ಶಮಿ (47ಕ್ಕೆ3) ಮತ್ತು ಭುವನೇಶ್ವರ್ ಕುಮಾರ್ (28ಕ್ಕೆ3) ಅವರ ಅಮೋಘ ಬೌಲಿಂಗ್‌ ಬಲದಿಂದ ಭಾರತ ತಂಡವು ಭಾನುವಾರ ನಡೆದ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 45 ರನ್‌ ಗಳಿಂದ ಜಯಿಸಿತು.

ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪೂರ್ವಭಾವಿಯಾಗಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ  ನ್ಯೂಜಿಲೆಂಡ್ ತಂಡವು 38.4 ಓವರ್‌ಗಳಲ್ಲಿ 189 ರನ್‌ಗಳ ಅಲ್ಪಮೊತ್ತಕ್ಕೆ ಕುಸಿಯಿತು. 

ನಂತರ ಗುರಿ ಬೆನ್ನತ್ತಿದ್ದ ಭಾರತ ತಂಡವು 26 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 129 ರನ್‌ ಗಳಿಸಿದ್ದಾಗ ಮಳೆ ಆರಂಭವಾಯಿತು. ಆಗ ಡಕ್ವರ್ಥ್ ಲೂಯಿಸ್‌ ನಿಯಮವನ್ನು ಅನ್ವಯಿಸಲಾಯಿತು. ಅದರ ಪ್ರಕಾರ 26 ಓವರ್‌ಗಳಲ್ಲಿ 85 ರನ್‌ಗಳ ಗುರಿ ನಿಗದಿಯಾಯಿತು.

ಆದರೆ ಮಳೆ ಬರುವ ಮುನ್ನವೇ ಭಾರತ ತಂಡವು ಆ ಗುರಿಯನ್ನು ಮೀರಿ 45 ರನ್‌ಗಳನ್ನು ಹೆಚ್ಚು ಗಳಿಸಿದ್ದರಿಂದ ವಿಜೇತ ತಂಡವೆಂದು ಘೋಷಿಸಲಾಯಿತು. ನಾಯಕ ವಿರಾಟ್ ಕೊಹ್ಲಿ (52; 55ಎ, 6ಬೌಂ) ಮತ್ತು ಮಹೇಂದ್ರಸಿಂಗ್ ದೋನಿ (ಔಟಾಗದೆ 17; 21ಎ, 2 ಬೌಂ, 1ಸಿ) ಕ್ರೀಸ್‌ನಲ್ಲಿದ್ದರು.

ಶಮಿ–ಭುವಿ ಬೌಲಿಂಗ್ ಮಿಂಚು
ಮಂಡಿ ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೊಹಮ್ಮದ್ ಶಮಿ ಅವರು ಕಳೆದ ಒಂದು ವರ್ಷದಿಂದ ಏಕದಿನ ಪಂದ್ಯಗಳಲ್ಲಿ ಆಡಿರಲಿಲ್ಲ.  ಆದ್ದರಿಂದ ಈ ಪಂದ್ಯವು ಅವರ ಫಿಟ್‌ನೆಸ್ ಪರೀಕ್ಷೆಯ ವೇದಿಕೆಯಾಗಿತ್ತು.  ಅದರಲ್ಲಿ ಅವರು ಉತ್ತೀರ್ಣರಾದರು.

ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಮಾರ್ಟಿನ್ ಗಪ್ಟಿಲ್ ಫೀಲ್ಡರ್‌ ಭುವನೇಶ್ವರ್ ಕುಮಾರ್‌ಗೆ ಕ್ಯಾಚಿತ್ತರು.
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರಿಗೂ 9ನೇ ಓವರ್‌ನಲ್ಲಿ ಶಮಿ ಚಳ್ಳೇಹಣ್ಣು ತಿನ್ನಿಸಿ ದರು. ಅವರ ಲೆಗ್‌ಕಟರ್ ಎಸೆತವನ್ನು ತಪ್ಪಾಗಿ ಅಂದಾಜಿಸಿ ಆಡಿದ ಕೇನ್ ಅವರು ಅಜಿಂಕ್ಯ ರಹಾನೆಗೆ ಕ್ಯಾಚ್ ಆದರು.

ನಂತರದ ಎಸೆತದಲ್ಲಿ ನೀಲ್ ಬ್ರೂಮ್ ಅವರು ಕಟ್ ಮಾಡುವ ಯತ್ನದಲ್ಲಿ ವಿಕೆಟ್‌ಕೀಪರ್ ದೋನಿಗೆ ಕ್ಯಾಚ್ ಆದರು. ಇದರಿಂದಾಗಿ ಕಿವೀಸ್ ತಂಡವು 9 ಓವರ್‌ಗಳಲ್ಲಿ 63 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತು. ಆದರೆ ಆರಂಭಿಕ ಬ್ಯಾಟ್ಸ್‌ಮನ್ ಲೂಕ್ ರಾಂಚಿ (66; 63ಎ, 6ಬೌಂ, 2ಸಿ) ಗಟ್ಟಿಯಾಗಿ ನಿಂತರು. ಒಂದೆಡೆ ವಿಕೆಟ್ ಬಿದ್ದರೂ ದಿಟ್ಟತನದಿಂದ ಆಡಿದರು.

ಕೋರಿ ಆ್ಯಂಡರ್ಸನ್ 13 ರನ್ ಗಳಿಸಿ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಮಿಷೆಲ್ ಸ್ಯಾಂಟನರ್ ಕೂಡ 12 ರನ್ ಗಳಿಸಿ ಆಶ್ವಿನ್ ಎಸೆತದಲ್ಲಿ ಜಡೇಜಗೆ ಕ್ಯಾಚಿತ್ತರು.

ಜಿಮ್ಮಿ ನಿಶಮ್ ಮಾತ್ರ (46 ರನ್)  ಉತ್ತಮವಾಗಿ ಆಡಿದರು. ಅದಕ್ಕೂ ಮುನ್ನವೇ ರಾಂಚಿ ರವೀಂದ್ರ ಜಡೇಜ ಎಸೆತದಲ್ಲಿ ಕ್ಲೀನ್‌ಬೌಲ್ಡ್‌ ಆಗಿದ್ದರು.  ಉಳಿದ ಬ್ಯಾಟ್ಸ್‌ಮನ್‌ಗಳು ಮಿಂಚಲಿಲ್ಲ.

ವಿರಾಟ್ ಅರ್ಧಶತಕ: ಗುರಿ ಬೆನ್ನತ್ತಿದ ಭಾರತ ತಂಡವು ಆರಂಭದಲ್ಲಿ ಆಘಾತ ಅನುಭವಿಸಿತು. ಅಜಿಂಕ್ಯ ರಹಾನೆ (7 ರನ್) ಐದನೇ ಓವರ್‌ನಲ್ಲಿ ಔಟಾದರು. ನಂತರ ಶಿಖರ್ ಧವನ್ (40 ರನ್) ಮತ್ತು ವಿರಾಟ್ ಕೊಹ್ಲಿ ಅವರು ಉತ್ತಮವಾಗಿ ಆಡಿ ಇನಿಂಗ್ಸ್‌ ಬೆಳೆಸಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ 68 ರನ್‌ ಸೇರಿಸಿದರು.

19ನೇ ಓವರ್‌ನಲ್ಲಿ ಶಿಖರ್ ಔಟಾದರು. ನಂತರ ಬಂದ ದಿನೇಶ್ ಕಾರ್ತಿಕ್ ಸೊನ್ನೆ ಸುತ್ತಿದರು. ಕೊಹ್ಲಿ ಜೊತೆಗೂಡಿದ ದೋನಿ  ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.  ಆದರೆ,  26 ಓವರ್ ಮುಗಿದಾಗ ಮಳೆ ಆರಂಭವಾಯಿತು.

ಸಂಕ್ಷಿಪ್ತ ಸ್ಕೋರು
ನ್ಯೂಜಿಲೆಂಡ್: 38.4 ಓವರ್‌ಗಳಲ್ಲಿ 189 (ಲೂಕ್ ರಾಂಚಿ 66, ಕೋರಿ ಆ್ಯಂಡರ್ಸನ್ 13, ಮಿಷೆಲ್ ಸ್ಯಾಂಟನರ್ 12, ಜಿಮ್ಮಿ ನಿಶಾಮ್  ಔಟಾಗದೆ 46, ಮೊಹಮ್ಮದ್ ಶಮಿ 47ಕ್ಕೆ3, ಭುವನೇಶ್ವರ್ ಕುಮಾರ್ 28ಕ್ಕೆ3, ರವೀಂದ್ರ ಜಡೇಜ 8ಕ್ಕೆ2, ಆರ್. ಆಶ್ವಿನ್ 32ಕ್ಕೆ1, ಉಮೇಶ್ ಯಾದವ್ 11ಕ್ಕೆ1)

ಭಾರತ: (ಡಕ್ವರ್ಥ್–ಲೂಯಿಸ್ ನಿಯಮದಲ್ಲಿ 85ರನ್‌ಗಳ ಗುರಿ) 26 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 129: (ಶಿಖರ್ ಧವನ್ 40, ವಿರಾಟ್ ಕೊಹ್ಲಿ ಔಟಾಗದೆ 52, ಮಹೇಂದ್ರಸಿಂಗ್ ದೋನಿ ಔಟಾಗದೆ 17, ಟೀಮ್ ಸೌಧಿ 37ಕ್ಕೆ1, ಟ್ರೆಂಟ್ ಬೌಲ್ಟ್ 34ಕ್ಕೆ1, ಜಿಮ್ಮಿ ನಿಶಮ್ 11ಕ್ಕೆ1) 

ಫಲಿತಾಂಶ: ಭಾರತ ತಂಡಕ್ಕೆ  45 ರನ್‌ಗಳ ಜಯ. (ಡಕ್ವರ್ಥ್ ಲೂಯಿಸ್ ನಿಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT