ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಕಾಂಗ್ರೆಸ್ ರಣತಂತ್ರ

ರಾಜ್ಯ ನಾಯಕರ ಜೊತೆ ಇಂದು ರಾಹುಲ್‌ ಚರ್ಚೆ
Last Updated 28 ಮೇ 2017, 19:40 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷಕ್ಕೆ ಕಾಯಕಲ್ಪ ನೀಡಿ, ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸುವ ಸಂಬಂಧ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸೋಮವಾರ ದೆಹಲಿಯಲ್ಲಿ ರಾಜ್ಯ ನಾಯಕರ ಜತೆ ಮಹತ್ವದ ಚರ್ಚೆ ನಡೆಸಲಿದ್ದಾರೆ.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತೂ ಅವರು ಸಮಾಲೋಚನೆ ನಡೆಸಲಿದ್ದಾರೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಆಗಿರುವ ಕೆ.ಸಿ. ವೇಣುಗೋಪಾಲ್‌ ಈಗಾಗಲೇ ಬೆಂಗಳೂರಿನಲ್ಲಿ ಪಕ್ಷದ ಹಿರಿಯ ನಾಯಕರು, ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು, ಜಿಲ್ಲಾ ಘಟಕಗಳ ಪದಾಧಿಕಾರಿಗಳ ಜೊತೆ ಎರಡು ಸುತ್ತು ಮಾತುಕತೆ ನಡೆಸಿ, ಸಮಗ್ರ ವರದಿ ಸಿದ್ಧಪಡಿಸಿದ್ದಾರೆ. ಈ ವರದಿಯನ್ನು ಮುಂದಿಟ್ಟುಕೊಂಡೇ ರಾಹುಲ್‌ ರಾಜ್ಯದ ಮುಖಂಡರ ಜೊತೆ ಚರ್ಚಿಸಲಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಅನೇಕ ಸಲ ರಾಜ್ಯ ನಾಯಕರು ಪ್ರತ್ಯೇಕ ಗುಂಪುಗಳಲ್ಲಿ ಸೋನಿಯಾ ಮತ್ತು ರಾಹುಲ್‌ ಅವರನ್ನು ಭೇಟಿ ಮಾಡಿದ್ದರೂ, ಹೈಕಮಾಂಡ್‌ ಈ ರೀತಿ ಒಟ್ಟಿಗೆ ಪಕ್ಷದ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸುತ್ತಿರುವುದು ಇದೇ ಮೊದಲು ಎಂದೂ ಮೂಲಗಳು ವಿವರಿಸಿವೆ.

ಮುಖ್ಯಮಂತ್ರಿ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಜಿ. ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಲೋಕಸಭೆ ಕಾಂಗ್ರೆಸ್‌ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಎಂ. ವೀರಪ್ಪ ಮೊಯಿಲಿ, ಆಸ್ಕರ್‌ ಫರ್ನಾಂಡಿಸ್‌, ಬಿ.ಕೆ. ಹರಿಪ್ರಸಾದ್‌, ಸಚಿವರಾದ ಎಂ.ಬಿ. ಪಾಟೀಲ, ಆರ್‌.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್‌, ರೋಷನ್‌ ಬೇಗ್‌ ಮತ್ತಿತರರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾಂಗ್ರೆಸ್‌ ಯಾವ ಜಿಲ್ಲೆಗಳಲ್ಲಿ ದುರ್ಬಲವಾಗಿದೆ. ಯಾವ ಜಿಲ್ಲೆಗಳಲ್ಲಿ ಗುಂಪುಗಾರಿಕೆ, ಒಳಜಗಳವಿದೆ. ಅದನ್ನು ನಿವಾರಿಸುವುದು ಹೇಗೆ. ಯಾವ ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದೆ. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಶಕ್ತಿ ಮತ್ತು ದೌರ್ಬಲ್ಯಗಳೇನು ಎಂಬ ಮಾಹಿತಿಗಳನ್ನು ವೇಣುಗೋಪಾಲ್‌ ವರದಿ ಒಳಗೊಂಡಿದೆ. ವರದಿಯಲ್ಲಿರುವ ಎಲ್ಲ ಅಂಶಗಳನ್ನು ರಾಹುಲ್‌ ವಿವರವಾಗಿ ಚರ್ಚಿಸುವ ಸಾಧ್ಯತೆಯಿದೆ.

ಇದೇ ಸಂದರ್ಭದಲ್ಲಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ನೇಮಕ ವಿಷಯವೂ ಚರ್ಚೆಗೆ ಬರಲಿದೆ. ವಿಧಾನಸಭೆ ಚುನಾವಣೆಗೆ ಹೆಚ್ಚು ಸಮಯ ಇಲ್ಲದೇ ಇರುವುದರಿಂದ ಪರಮೇಶ್ವರ್‌ ಅವರನ್ನೇ ಮುಂದುವರಿಸಬೇಕೇ ಎಂಬ ಚಿಂತನೆಯೂ ಪಕ್ಷದಲ್ಲಿದೆ. ಮುಖ್ಯಮಂತ್ರಿ ಹಿಂದುಳಿದ ವರ್ಗದವರು. ಪರಮೇಶ್ವರ್‌ ಪರಿಶಿಷ್ಟ ಜಾತಿಯವರು.  ದಲಿತರು ಮತ್ತು ಹಿಂದುಳಿದವರ ಸಮೀಕರಣದೊಂದಿಗೆ ಕಾಂಗ್ರೆಸ್‌ ಚುನಾವಣೆಗೆ ಹೋಗಬೇಕು. ಈ ಸಮುದಾಯಗಳ ಜೊತೆ  ಮುಸ್ಲಿಮರೂ ಒಳಗೊಂಡರೆ ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆ ಎಂಬ ಅಭಿಪ್ರಾಯವನ್ನು ಅನೇಕ ನಾಯಕರು ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ವಿರೋಧಿಸುತ್ತಿರುವ ಕೆಲವು ನಾಯಕರು ಪರಮೇಶ್ವರ್‌ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವಂತೆ ವೇಣುಗೋಪಾಲ್‌ ಅವರ ಮೇಲೆ ಒತ್ತಡ ಹೇರಿದ್ದಾರೆ. ಚುನಾವಣೆ ಹತ್ತಿರವಿರುವಾಗ ಹೊಸಬರನ್ನು ನೇಮಿಸಿದರೆ ಪ್ರಯೋಜನವಿಲ್ಲ. ಹೊಸಬರಿಗೆ ಪಕ್ಷದ  ಒಳಹೊರಗನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯಾವಕಾಶ ಬೇಕಾಗಲಿದೆ ಎನ್ನುವ ನಿಲುವನ್ನು ಅವರು ಹೊಂದಿದ್ದಾರೆ.

ಆದರೆ, ಸಿದ್ದರಾಮಯ್ಯ ಮಾತ್ರ ವೀರಶೈವ ಸಮಾಜದ ಎಸ್‌.ಆರ್‌. ಪಾಟೀಲ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ವೀರಶೈವರು ರಾಜ್ಯದಲ್ಲಿ ಪ್ರಬಲವಾಗಿದ್ದು, ಪಾಟೀಲರ ನೇಮಕದಿಂದ ಗಣನೀಯ ಮತಗಳನ್ನು ಕಾಂಗ್ರೆಸ್‌ಗೆ ಸೆಳೆಯಬಹುದು ಎಂಬ ಲೆಕ್ಕಾಚಾರ ಮುಖ್ಯಮಂತ್ರಿಗಿದೆ.

ಈ ಲೆಕ್ಕಾಚಾರದಿಂದ ಕಾಂಗ್ರೆಸ್‌ಗೆ ಲಾಭವಾಗುವುದಿಲ್ಲ. ಎಸ್‌.ಆರ್. ಪಾಟೀಲರನ್ನು ನೇಮಿಸಿದರೆ ಅವರು ‘ಡಮ್ಮಿ ಅಧ್ಯಕ್ಷ’ರಾಗುತ್ತಾರೆ. ಮುಖ್ಯಮಂತ್ರಿ ತೆಗೆದುಕೊಳ್ಳುವ ಎಲ್ಲ ತೀರ್ಮಾನಗಳಿಗೂ ಅವರು ಕಣ್ಣುಮುಚ್ಚಿ ಸಹಿ ಹಾಕುತ್ತಾರೆ ಎಂಬ ಆಕ್ಷೇಪ ಕೇಳಿಬಂದಿದೆ.

ಎಸ್‌.ಆರ್‌. ಪಾಟೀಲ ಇಲ್ಲದಿದ್ದರೆ, ಎಂ.ಬಿ. ಪಾಟೀಲರಾದರೂ ಪರವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಎಂ.ಬಿ. ಪಾಟೀಲರಿಗೆ ಸಚಿವ ಸ್ಥಾನ ಬಿಟ್ಟು, ಕೆಪಿಸಿಸಿ ಅಧ್ಯಕ್ಷರಾಗುವ ಆಸಕ್ತಿ ಇಲ್ಲ. ಎರಡನ್ನೂ ಕೊಟ್ಟರೆ ಆಗಬಹುದು ಎಂದೂ ಹೇಳಿದ್ದಾರೆ.

ರಾಜ್ಯದ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರ ಪರವಾಗಿಯೂ ದೊಡ್ಡ ಲಾಬಿ ನಡೆಯುತ್ತಿದೆ. ಹೈಕಮಾಂಡ್‌ ಮುಂದೆ ತಮ್ಮ ಹೆಸರು ಪ್ರಸ್ತಾಪಿಸುವಂತೆ ಶಿವಕುಮಾರ್‌ ನೇರವಾಗಿ ಸಿದ್ದರಾಮಯ್ಯ ಅವರಿಗೆ ಕೇಳಿದ್ದಾರೆ.


‘ನಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ನನ್ನ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿ. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ನೀವೇ ಮುಖ್ಯಮಂತ್ರಿ ಆಗಿ. ನಾನು ನಿಮಗೆ ಕೈಕೊಡುವ ವ್ಯಕ್ತಿಯಲ್ಲ. ನಿಮಗೆ ನಿಷ್ಠವಾಗಿರುತ್ತೇನೆ’ ಎಂದೂ ಮುಖ್ಯಮಂತ್ರಿ ಅವರಿಗೆ ಶಿವಕುಮಾರ್‌ ಹೇಳಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿರುವ  ಖರ್ಗೆ  ಅವರಿಗೆ ಕೇಂದ್ರದಲ್ಲೇ ಹೆಚ್ಚಿನ ಜವಾಬ್ದಾರಿ ಇದೆ. ಇದರಿಂದಾಗಿ ಅವರು ರಾಜ್ಯಕ್ಕೆ ಬರುವ ಸಾಧ್ಯತೆ ಕಡಿಮೆ ಎಂದೂ ಪಕ್ಷದ ವಲಯದಲ್ಲಿ ಹೇಳಲಾಗುತ್ತಿದೆ.

ಖರ್ಗೆಗೆ ಹೆಚ್ಚಿನ ಜವಾಬ್ದಾರಿ?
ಖರ್ಗೆ ಅವರನ್ನು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡದಿದ್ದರೂ, ಇನ್ನೂ ಹೆಚ್ಚಿನ ಜವಾಬ್ದಾರಿ ನೀಡುವ ಕುರಿತು ಹೈಕಮಾಂಡ್‌ ಚಿಂತಿಸುತ್ತಿದೆ. ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಸಮಿತಿ ಅಥವಾ ರಾಜ್ಯ ಕಾಂಗ್ರೆಸ್‌ ನಿಯಂತ್ರಣಕ್ಕೆ ಸಮಿತಿ ರಚಿಸಿ ಅದರ ಹೊಣೆಯನ್ನು ನೀಡುವ ಸಂಭವವಿದೆ.  ಈ ಸಮಿತಿಯಲ್ಲಿ ಪ್ರಮುಖ ನಾಯಕರನ್ನು ಸದಸ್ಯರಾಗಿ ನೇಮಿಸುವ ಸಾಧ್ಯತೆಯಿದೆ ಎಂದೂ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT