ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಕಾಲ ರಕ್ಷಣಾ ಸನ್ನದ್ಧ ಸ್ಥಿತಿ ಅಗತ್ಯ: ಅರುಣ್‌ ಜೇಟ್ಲಿ

Last Updated 28 ಮೇ 2017, 19:43 IST
ಅಕ್ಷರ ಗಾತ್ರ

ಚಳ್ಳಕೆರೆ: ನೆರೆಯ ದೇಶಗಳಿಂದ ರಾಷ್ಟ್ರದ ಸುರಕ್ಷತೆಗೆ ಬೆದರಿಕೆ ಇದ್ದು, ರಕ್ಷಣಾ ಸನ್ನದ್ಧ ಸ್ಥಿತಿ ಸದಾಕಾಲ ಗರಿಷ್ಠ ಮಟ್ಟದಲ್ಲಿರಬೇಕಾದ  ಅಗತ್ಯವಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕುದಾಪುರದಲ್ಲಿ ತಲೆ ಎತ್ತಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ‘ಯುದ್ಧ ವಿಮಾನಗಳ ಪರೀಕ್ಷಾ ವಲಯ’ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ವೈಮಾನಿಕ ರಕ್ಷಣಾ ಕ್ಷೇತ್ರದಲ್ಲಿನ ಭಾರತದ ಅಗತ್ಯವನ್ನು ಈ ವಲಯ ಪೂರೈಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘70 ವರ್ಷಗಳಿಂದ ಭಾರತ ಭದ್ರತೆಯ ಆತಂಕ ಎದುರಿಸುತ್ತಲೇ ಇದೆ. ಈ ಕಾರಣಕ್ಕಾಗಿ ದೇಶವು ದೀರ್ಘ ಕಾಲದ ಸಂಶೋಧನೆ, ಅಭಿವೃದ್ಧಿ ಮತ್ತು ಪರೀಕ್ಷಾ ವ್ಯವಸ್ಥೆ ಹೊಂದುವ ಅಗತ್ಯ ಇತ್ತು.  ಈ ವಲಯ ಸ್ಥಾಪನೆಯಿಂದ ಅದು ಸಾಕಾರಗೊಂಡಿದೆ’ ಎಂದರು.

ವೈಮಾನಿಕ ರಕ್ಷಣಾ ಸನ್ನದ್ಧ ಸ್ಥಿತಿಯ ಪರೀಕ್ಷಾರ್ಥ ಪ್ರಯೋಗಕ್ಕೆ ಇದು ಅತ್ಯಂತ ಸೂಕ್ತ ಸ್ಥಳ . ಜನ ಸಾಂದ್ರತೆಯೂ ಕಡಿಮೆ. ಇಂತಹದ್ದೊಂದು ಪರೀಕ್ಷಾ ವಲಯ ದೇಶದಲ್ಲೇ ಮೊದಲು. ಜಾಗತಿಕವಾಗಿ ಪ್ರಾಮುಖ್ಯ ಪಡೆಯುವ ಕೇಂದ್ರವಾಗಿ ಇದು ರೂಪುಗೊಳ್ಳಲಿದೆ. ಮುಂದಿನ ದಿನಗಳಲ್ಲಿ ವಿವಿಧ ಶ್ರೇಣಿಯ ಯುದ್ಧ ವಿಮಾನಗಳ ಪರೀಕ್ಷೆ ಇಲ್ಲಿ ನಡೆಯುತ್ತದೆ ಎಂದರು.

ರಕ್ಷಣಾ ಉತ್ಪನ್ನಗಳ ಖರೀದಿ ಬಹಳ ವರ್ಷಗಳಿಂದ ಹೊರ ದೇಶಗಳಿಂದಲೇ ಆಗುತ್ತಿತ್ತು. ಈಗ ಮೇಕ್ ಇನ್ ಇಂಡಿಯಾ ಅಡಿ ಸ್ಥಳೀಯವಾಗಿ ಅವುಗಳನ್ನು ತಯಾರಿಸಲಾಗುತ್ತಿದೆ. ಇದರಿಂದ ಸಾಕಷ್ಟು ಹಣ ಉಳಿಯಲಿದೆ. ಜಾಗತಿಕ ಶ್ರೇಷ್ಠತೆ ಸಾಧಿಸಬಲ್ಲ ತಾಂತ್ರಿಕ ಪರಿಣತಿಯ ಪ್ರತಿಭೆಗಳು ದೇಶದಲ್ಲಿದ್ದಾರೆ. ಇಂತಹ  ಉತ್ಕೃಷ್ಟ ಪ್ರತಿಭೆಗಳನ್ನು ಬಳಸಿಕೊಂಡರೆ ಭಾರತ ಈ  ಕ್ಷೇತ್ರದಲ್ಲಿಯೂ ಜಾಗತಿಕ ನಾಯಕನಾಗಬಹುದು ಎಂದರು.

ರಹಸ್ಯ ಮತ್ತು ಕೌತುಕದ ಪರೀಕ್ಷಾ ತಾಣ: ನಾಗರಿಕ ಸಂಪರ್ಕದಿಂದ ಬಹಳ ದೂರ. ಹೊರ ಜಗತ್ತಿಗೆ ರಹಸ್ಯವೇ ಆಗಿರುವ ತಾಣ. ಆಗೊಮ್ಮೆ- ಈಗೊಮ್ಮೆ ಹಾರುವ ಚಿತ್ರ- ವಿಚಿತ್ರ ಗಾತ್ರಗಳ ವಿಮಾನಗಳು ಆಸುಪಾಸಿನ ಜನರಲ್ಲಿ ವಿಸ್ಮಯ ಮೂಡಿಸಿವೆ. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕುರುಚಲು ಪೊದೆಗಳು. ಕುರಿಗಾಹಿಗಳನ್ನು ಬಿಟ್ಟರೆ ಮನುಷ್ಯರ ಸುಳಿವೇ ಇಲ್ಲ. ಚಳ್ಳಕೆರೆ ತಾಲ್ಲೂಕಿನ ವರವಿನಕಾವಲಿನಲ್ಲಿರುವ ಡಿಆರ್‌ಡಿಓ ವೈಮಾನಿಕ ಪರೀಕ್ಷಾ ವಲಯದ ಚಿತ್ರಣವಿದು. 4,090 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಯುದ್ಧ ವಿಮಾನಗಳ ಪರೀಕ್ಷಾ ನೆಲೆ ಭಾರತಕ್ಕೆ ಪ್ರತಿಷ್ಠೆ ಮಾತ್ರವಲ್ಲ, ಜಾಗತಿಕ ಪ್ರತಿಷ್ಠಿತ ಗುಂಪಿಗೂ (ಗ್ಲೊಬಲ್ ಇಲೈಟ್ ಗ್ರೂಪ್) ಸೇರ್ಪಡೆಗೊಳ್ಳಲಿದೆ.

‘ಹಿಂದೆ ಡಿಆರ್‌ಡಿಓ ಪರೀಕ್ಷಾ ವಲಯ ಕೋಲಾರದಲ್ಲಿತ್ತು. ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಆಗುತ್ತಿದ್ದಂತೆ ಹಾರಾಟದ ವಲಯ ತೊಡಕಿನಿಂದ ಸ್ಥಳಾಂತರಗೊಳ್ಳುವುದು ಅನಿವಾರ್ಯ ಆಯಿತು. ಆಗ ರಾಜ್ಯ ಸರ್ಕಾರ ಈ ಪ್ರದೇಶವನ್ನು ಸೂಚಿಸಿತು’ ಎಂದು ಡಿಆರ್‌ಡಿಓ ಹಿರಿಯ ಅಧಿಕಾರಿ ಅಜಯ್ ಸಿಂಗ್ ತಿಳಿಸಿದರು.

ವೈಮಾನಿಕ ಪರೀಕ್ಷಾ ವಲಯಕ್ಕೆ 2,000 ಎಕರೆ ಮತ್ತು ವಸತಿ ಇತ್ಯಾದಿಗಳಿಗೆ 219 ಎಕರೆ ಬಳಸಿಕೊಳ್ಳಲಾಗಿದೆ. ರನ್‌ವೇ 2 ಕಿ.ಮೀ ಉದ್ದವಿದ್ದು, ಅದನ್ನು 3 ಕಿ.ಮೀ.ಗೂ ಹೆಚ್ಚಿಸಬಹುದಾಗಿದೆ ಎಂದರು.

ಇಲ್ಲಿ ಮಾನವ ರಹಿತ ವಿಮಾನ (ಯುಎವಿ) ಮತ್ತು ಇತರ ಯುದ್ಧ ವಿಮಾನಗಳ ಪರೀಕ್ಷೆ ನಡೆಸಬಹುದಾಗಿದೆ. ಅನೇಕ ರೀತಿಯ ಯುಎವಿಗಳ ಜೋಡಣೆ ಮತ್ತು ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ರೇಂಜ್ ಕಂಟ್ರೋಲ್ ಸೆಂಟರ್ ಸ್ಥಾಪಿಸಲಾಗಿದ್ದು, ಇಲ್ಲಿ ವೈಮಾನಿಕ ಸಂಚಾರವನ್ನು ತೋರಿಸುವ ಡಿಸ್ಪ್ಲೇ ವ್ಯವಸ್ಥೆ ಇದೆ. ರಿಮೋಟ್ ಕಂಟ್ರೋಲ್ ಮೂಲಕ ರಾಡಾರ್ ನಿಯಂತ್ರಣವನ್ನು ನಿರ್ವಹಿಸಬಹುದು. ಕಣ್ಗಾಲಿಗೆ ಪ್ರೈಮರಿ ಮತ್ತು ಸೆಕೆಂಡರಿ ರಾಡಾರ್‌ಗಳಿವೆ ಎಂದರು.

ಈ ಯೋಜನೆಯನ್ನು ಅತ್ಯಂತ ಕಡಿಮೆ ಅಂದರೆ, ₹ 290 ಕೋಟಿ ವೆಚ್ಚದಲ್ಲಿ ಸಾಕಾರಗೊಳಿಸಲಾಗಿದೆ ಎಂದು ಸಿಂಗ್ ಹೇಳಿದರು.

ಇಡೀ ಪ್ರದೇಶ ಈಗ ಬೆಂಗಾಡಿನಂತೆ ಕಂಡರೂ ಮುಂದಿನ ಕೆಲವೇ ವರ್ಷಗಳಲ್ಲಿ ಹಸಿರಿನಿಂದ ಕಂಗೊಳಿಸುವ ನಂದನವನವಾಗಲಿದೆ. ಇಲ್ಲಿ ಬೀಳುವ ಅತಿ ಕಡಿಮೆ ಮಳೆಯ ನೀರನ್ನೇ ಸಂಗ್ರಹಿಸಲಾಗುವುದು. ಸ್ಥಳೀಯ ಬಳಕೆಗೆ ಮಾತ್ರವಲ್ಲದೆ, ಸುತ್ತಮುತ್ತಲಿನ ಹಳ್ಳಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಅವರು ವಿವರಿಸಿದರು.
*
ಪ್ರಾತ್ಯಕ್ಷಿಕೆ
ಮಾನವ ರಹಿತ ವಿಮಾನ ತಪಸ್ ಮತ್ತು ಶತ್ರು ದೇಶದ ವಿಮಾನಗಳ ಬಗ್ಗೆ ಮೊದಲೇ ಸೂಚನೆ ನೀಡುವ ಏವಾಕ್ಸ್ ವಿಮಾನದ ಹಾರಾಟದ ಪ್ರಾತ್ಯಕ್ಷಿಕೆ ನಡೆಯಿತು. ಮಾನವ ರಹಿತ ವಿಮಾನವನ್ನು ಭೂ ನಿಯಂತ್ರಣ ಕೇಂದ್ರದಿಂದ ಕ್ಯಾಪ್ಟನ್ ಸ್ಟೀಫನ್ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT