ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೋಕ್ಷ ಸಮರಕ್ಕೆ ಪ್ರತಿತಂತ್ರ

ಕಾಶ್ಮೀರದಲ್ಲಿ ಸೇನೆಯ ವಿಶಿಷ್ಟ ಕಾರ್ಯತಂತ್ರಕ್ಕೆ ಜ. ರಾವತ್‌ ಬೆಂಬಲ
Last Updated 28 ಮೇ 2017, 19:47 IST
ಅಕ್ಷರ ಗಾತ್ರ

– ಮಾನಸ್‌ ಪ್ರತಿಮ್‌ ಭುಯಾನ್‌

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸೇನೆಯು ‘ಪರೋಕ್ಷ ಯುದ್ಧ’ದ ವಿರುದ್ಧ ಹೋರಾಡಬೇಕಿದೆ. ನೇರವಲ್ಲದ ನೀಚ ಯುದ್ಧಕ್ಕೆ ತಕ್ಕ ಉತ್ತರ ನೀಡಲು ವಿಶಿಷ್ಟ ವಿಧಾನಗಳನ್ನು ಅನುಸರಿಸುವುದು ಅನಿವಾರ್ಯ ಎಂದು ಸೇನಾ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಅಭಿಪ್ರಾಯಪಟ್ಟರು.

ಪಾಕಿಸ್ತಾನದ ಹೆಸರು ಉಲ್ಲೇಖಿಸದ ಅವರು, ನೆರೆಯ ದೇಶ ನಡೆಸುವ ಅಸಾಂಪ್ರದಾಯಿಕ ಯುದ್ಧಕ್ಕೆ ಅದೇ ರೀತಿಯ ಪ್ರತಿಕ್ರಿಯೆ ನೀಡುವ ಅಗತ್ಯ
ವನ್ನು ಪಿಟಿಐ ಗೆ ನೀಡಿದ  ಸಂದರ್ಶನದಲ್ಲಿ ಪ್ರತಿಪಾದಿಸಿದರು.

ಪ್ರತಿಭಟನಾಕಾರರ ಕಲ್ಲೆಸೆತದಿಂದ ರಕ್ಷಣೆ ಪಡೆಯಲು ಕಾಶ್ಮೀರದಲ್ಲಿ ಯುವಕನೊಬ್ಬನನ್ನು ಸೇನೆಯು ಮಾನವ ಗುರಾಣಿಯಂತೆ ಬಳಸಿದ್ದನ್ನು ರಾವತ್‌ ಬಲವಾಗಿ ಸಮರ್ಥಿಸಿಕೊಂಡರು. ಇದು ವಿಶಿಷ್ಟ ಕಾರ್ಯತಂತ್ರದ ಒಂದು ಭಾಗ ಎಂದು ಅವರು ಹೇಳಿದರು.

ಯುವಕನನ್ನು ಜೀಪಿಗೆ ಕಟ್ಟಿದ ಯುವ ಅಧಿಕಾರಿ ಮೇ. ಲೀತುಲ್‌ ಗೊಗೊಯ್‌ ಅವರಿಗೆ ವಿಚಾರಣೆ ಬಾಕಿ ಇರುವಾಗಲೇ ಶ್ಲಾಘನಾ ಪದಕ ನೀಡಿದ್ದು ಸರಿಯಾದ ಕ್ರಮ ಎಂದೂ ಅವರು ಹೇಳಿದರು.  ಉಗ್ರರ ಚಟುವಟಿಕೆಗಳಿಂದ ಜರ್ಜರಿತವಾಗಿರುವ ರಾಜ್ಯದಲ್ಲಿ ಕ್ಲಿಷ್ಟಕರ ಪರಿಸ್ಥಿತಿ ಎದುರಿಸುತ್ತಿರುವ ಯುವ ಅಧಿಕಾರಿಗಳ ಆತ್ಮಸ್ಥೈರ್ಯ ಇದರಿಂದ ಹೆಚ್ಚುತ್ತದೆ ಎಂದು ರಾವತ್‌ ಹೇಳಿದರು.

ಮಾನವ ಹಕ್ಕುಗಳ ಹೋರಾಟಗಾರರು, ಕಾಶ್ಮೀರಿ ಗುಂಪುಗಳು ಮತ್ತು ಸೇನೆಯ ಕೆಲವು ನಿವೃತ್ತ ಅಧಿಕಾರಿಗಳು ಗೊಗೊಯ್‌ ಅವರಿಗೆ ಶ್ಲಾಘನಾ ಪದಕ ನೀಡಿದ್ದನ್ನು ವಿರೋಧಿಸಿದ್ದರು. ಭಯೋತ್ಪಾದನಾ ತಡೆ ಕಾರ್ಯಾಚರಣೆಯಲ್ಲಿ ಗೊಗೊಯ್‌ ಅವರು ಸಲ್ಲಿಸಿದ ನಿರಂತರ ಸೇವೆಗೆ ಈ ಪದಕ ನೀಡಲಾಗಿತ್ತು.

‌‘ಜನರು ನಮ್ಮತ್ತ ಕಲ್ಲು, ಪೆಟ್ರೋಲ್‌ ಬಾಂಬ್‌ ಎಸೆಯುತ್ತಿದ್ದಾರೆ. ನಾವೇನು ಮಾಡಬೇಕು ಎಂದು ನಮ್ಮ ಯೋಧರು ಕೇಳುವಾಗ, ಸುಮ್ಮನೆ ನಿಂತು ಸತ್ತು ಹೋಗಿ ಎಂದು ನಾನು ಹೇಳಬೇಕೇ? ಚಂದದ ಶವಪೆಟ್ಟಿಗೆಯೊಂದಿಗೆ ನಾನು ಬರುತ್ತೇನೆ. ನಿಮ್ಮ ದೇಹವನ್ನು ಸಕಲ ಸೇನಾ ಗೌರವಗಳೊಂದಿಗೆ ಊರಿಗೆ ಕಳುಹಿಸುತ್ತೇನೆ ಎಂದು ಸೇನಾ ಮುಖ್ಯಸ್ಥನಾಗಿರುವ ನಾನು ಹೇಳಬೇಕೇ? ಅಲ್ಲಿ ಕೆಲಸ ಮಾಡುವ ಯೋಧರ ಆತ್ಮಸ್ಥೈರ್ಯ ಕಾಯುವ ಕೆಲಸವನ್ನು ನಾನು ಮಾಡಲೇಬೇಕು’ ಎಂದು ರಾವತ್‌ ದೃಢ ಧ್ವನಿಯಲ್ಲಿ ಹೇಳಿದರು.

‘ಕಲ್ಲೆಸೆಯುವ ಬದಲಿಗೆ ಜನರು ಬಂದೂಕಿನಿಂದ ಗುಂಡು ಹಾರಿಸುತ್ತಿದ್ದರೆ ಯೋಧರ ಕೆಲಸ ಸರಳವಾಗುತ್ತಿತ್ತು. ಆಗ ನಮಗೇನು ಬೇಕೋ ಅದನ್ನು ನಾವು ಮಾಡಬಹುದಿತ್ತು’ ಎಂದು ರಾವತ್‌ ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ದೇಶದ ಜನರಿಗೆ ಸೇನೆ ಮೇಲೆ ಭಯ ಇಲ್ಲ ಎಂದಾದರೆ ಆ ದೇಶ ಮುಳುಗಿ ಹೋಗುತ್ತದೆ ಎಂದೇ ಅರ್ಥ ಎಂದು ಸುದೀರ್ಘ ಕಾಲ ಕಾಶ್ಮೀರದಲ್ಲಿ ಕೆಲಸ ಮಾಡಿದ ಅನುಭವ ಇರುವ ರಾವತ್‌ ಹೇಳಿದರು.

‘ಶತ್ರುಗಳಿಗೆ ನಮ್ಮ ಬಗ್ಗೆ ಭಯ ಇರಬೇಕು. ಅದೇ ಹೊತ್ತಿಗೆ ದೇಶದ ಜನರಿಗೂ ಭಯ ಇರಬೇಕು. ನಮ್ಮದು ಸ್ನೇಹಪರ ಸೇನೆ. ಆದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕೆಲಸಕ್ಕೆ ಸೇನೆಯನ್ನು ನಿಯೋಜಿಸಿದಾಗ ಜನರಿಗೆ ಸೇನೆಯ ಬಗ್ಗೆ ಭಯ ಇರಲೇಬೇಕು’ ಎನ್ನುವುದು ಅವರ ಅಭಿಪ್ರಾಯ.

‘ಸೇನೆಯ ಮುಖ್ಯಸ್ಥನಾಗಿ ಯೋಧರ ಆತ್ಮಸ್ಥೈರ್ಯ ಕಾಪಾಡುವುದು ನನ್ನ ಕಾಳಜಿ. ಅದು ನನ್ನ ಕೆಲಸ. ನಾನು ಯುದ್ಧಭೂಮಿಯಿಂದ ದೂರದಲ್ಲಿ ಇರುವವನು. ಅಲ್ಲಿನ ಪರಿಸ್ಥಿತಿ ಮೇಲೆ ಪ್ರಭಾವ ಬೀರುವುದು ನನಗೆ ಸಾಧ್ಯವಿಲ್ಲ. ನಾನು ನಿಮ್ಮೊಂದಿಗೆ ಇದ್ದೇನೆ ಎಂದಷ್ಟೇ ಯೋಧರಿಗೆ ನಾನು ಹೇಳಬಹುದು. ಯಾವಾಗ ಬೇಕಿದ್ದರೂ ಪರಿಸ್ಥಿತಿ ಕೈಮೀರಿ ಹೋಗಬಹುದು. ಹಾಗೆ ಕೈಮೀರಿದಾಗ, ಯೋಧರಲ್ಲಿ ದುರುದ್ದೇಶ ಇಲ್ಲ ಎಂದಾದರೆ ನಾನು ಅವರ ಜತೆಗಿರುತ್ತೇನೆ’ ಎಂದು ರಾವತ್‌ ಸ್ಪಷ್ಟವಾದ ಭರವಸೆ ನೀಡಿದರು.

ಗೊಗೊಯ್‌ ಪ್ರಕರಣದಲ್ಲಿ ಸೇನಾ ನ್ಯಾಯಾಲಯದಲ್ಲಿ ಏನು ನಡೆಯಬಹುದು ಎಂಬುದರ ಸ್ಥೂಲ ತಿಳಿವಳಿಕೆ ನನಗೆ ಇದೆ. ಹಾಗಾಗಿಯೇ ಅವರಿಗೆ ಶ್ಲಾಘನಾ ಪದಕ ನೀಡಲಾಗಿದೆ. ಗೊಗೊಯ್‌ ಅವರನ್ನು ಶಿಕ್ಷಿಸುವ ಅಗತ್ಯವಾದರೂ ಏನು ಎಂದು ಅವರು ಪ್ರಶ್ನಿಸಿದರು.
*
ಸೇನಾ ಮುಖ್ಯಸ್ಥರು ಹೇಳಿದ್ದೇನು?
*   ಕಾಶ್ಮೀರ ಕಣಿವೆಯ ಪರಿಸ್ಥಿತಿಯನ್ನು ನಿಭಾಯಿಸುವಾಗ ಗರಿಷ್ಠ ಮಟ್ಟದ ಸಂಯಮ ಕಾಯ್ದುಕೊಳ್ಳಲಾಗಿದೆ
*   ಕಾಶ್ಮೀರದ 4 ಜಿಲ್ಲೆಗಳು ಪ್ರಕ್ಷುಬ್ಧವಾಗಿವೆ. ಇಡೀ ಕಾಶ್ಮೀರವೇ ನಿಯಂತ್ರಣ ತಪ್ಪಿದೆ ಎಂದು ಹೇಳುವುದು ತಪ್ಪು
*   ಕಾಶ್ಮೀರ ಸಮಸ್ಯೆಗೆ ಸಮಗ್ರವಾದ ಪರಿಹಾರ ಬೇಕು. ಅದರಲ್ಲಿ ಎಲ್ಲರೂ ಭಾಗಿಯಾಗಬೇಕು. ರಕ್ಷಣೆಯ ಖಾತರಿ ನೀಡುವುದು ಸೇನೆಯ ಕೆಲಸ. ಹಿಂಸೆಯಲ್ಲಿ ಭಾಗಿಯಾಗದ ಜನರಿಗೆ ಸೇನೆ ರಕ್ಷಣೆ ನೀಡುತ್ತದೆ
*   ಸೇನೆಯ ಯುವ ಅಧಿಕಾರಿ ಲೆ. ಉಮರ್‌ ಫಯಾಜ್‌ ಅವರು ರಜೆಯಲ್ಲಿ ದ್ದಾಗ ಹತ್ಯೆಯಾದರು. ಇದರ ಬಗ್ಗೆ ಯಾಕೆ ದೊಡ್ಡ ಗದ್ದಲ ಸೃಷ್ಟಿಯಾಗಲಿಲ್ಲ
*   ಪಾಕಿಸ್ತಾನದ ಜತೆಗೆ ‘ಸೀಮಿತವಾದ ಯುದ್ಧ’ ನಡೆಯಲಿದೆ ಎಂದು ಹೇಳುವುದು ಸಾಧ್ಯವಿಲ್ಲ
*   ಅನಂತ್‌ನಾಗ್‌ನಲ್ಲಿ ಚುನಾವಣೆ ನಡೆಯಬೇಕಿದೆ. ಆಗ ರಕ್ಷಣೆಯ ಕೆಲಸವನ್ನು ಸೇನೆಯೇ ಮಾಡಬೇಕು. ರಕ್ಷಣೆಗೆ ಸೇನೆ ಹೋಗದಿದ್ದರೆ ಜನರು, ಸೇನೆ ಮತ್ತು ಪೊಲೀಸ್‌ ಇಲಾಖೆಯ ನಡುವಣ ವಿಶ್ವಾಸ ಕಳೆದು ಹೋಗುತ್ತದೆ.

*
ಕಾಶ್ಮೀರದಲ್ಲಿ ತಕ್ಷಣವೇ  ರಾಷ್ಟ್ರಪತಿ ಆಳ್ವಿಕೆ ಹೇರಬೇಕು. ತ್ವರಿತವಾಗಿ ಅರಾಜಕತೆಯತ್ತ ಸಾಗುತ್ತಿರುವುದನ್ನು  ತಡೆಯಲು ಬೇರೆ ಮಾರ್ಗವೇ ಇಲ್ಲ.
ಫಾರೂಕ್‌ ಅಬ್ದುಲ್ಲಾ,
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT