ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಭೋಜನ ಮತ್ತು ತಾರತಮ್ಯ

Last Updated 28 ಮೇ 2017, 19:59 IST
ಅಕ್ಷರ ಗಾತ್ರ

ಬಿಜೆಪಿ ನಾಯಕ  ಬಿ.ಎಸ್.ಯಡಿಯೂರಪ್ಪನವರು ತಮ್ಮ ಬರ ಅಧ್ಯಯನ ಪ್ರವಾಸದಲ್ಲಿ ಅಲ್ಲಲ್ಲಿ ದಲಿತರ ಮನೆಗಳಲ್ಲಿ ಉಪಾಹಾರ-ಊಟ  ಮಾಡುತ್ತಿದ್ದಾರೆ. ಚಿತ್ರದುರ್ಗ ಮತ್ತು ಬಾಗಲಕೋಟೆಗಳಲ್ಲಿ ಯಡಿಯೂರಪ್ಪ ತಮ್ಮ ದಲಿತಪರ(?) ಇಂತಹ ಧೋರಣೆಯನ್ನು ಪ್ರದರ್ಶಿಸಿದ್ದಾರೆ. ಮೇಲ್ನೋಟಕ್ಕೆ ಇದು ಉತ್ತಮ ನಡೆಯಂತೆ ಭಾಸವಾಗುತ್ತದೆ. ಆದರೆ ಆಳದಲ್ಲಿ? ಮತ್ತದೇ ತಾರತಮ್ಯದ, ದಲಿತರನ್ನು ಇತರರಿಂದ ದೂರ ಇಟ್ಟು ನೋಡುವ ಸ್ಥಾಪಿತ ಹಿತಾಸಕ್ತಿಗಳ ಯಜಮಾನಿಕೆಯ ಧೋರಣೆಯಂತೆ ಸಾರ್ವಜನಿಕವಾಗಿ ಇದು ಬಿಂಬಿತವಾಗುತ್ತಿರುವುದಂತೂ ಸುಳ್ಳಲ್ಲ. 

ನಿಜ, ದಲಿತರಿಗೆ ಒಳ್ಳೆಯದಾಗಬೇಕು, ಅವರಿಗೆ ಒಳ್ಳೆಯದು ಮಾಡಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ವೋಟ್ ಬ್ಯಾಂಕ್ ನೆಪವಾದರೂ ಸರಿ ಮತ್ತಾವುದೇ ನೆಪವಾದರೂ ಸರಿ ಮಾನವೀಯ ನೆಲೆಗಟ್ಟಿನಲ್ಲಿ ಅದು ಆಗಲೇಬೇಕು. ಆದರೆ ಅದಕ್ಕೆ ಆಧಾರವಾಗಬೇಕಿರುವುದು? ಅನುಕಂಪವೇ? ಅಥವಾ ‘ನಾವಿದ್ದೇವೆ ನಿಮ್ಮನ್ನು ಕಾಪಾಡಲು’ ಎಂಬ ಯಜಮಾನಿಕೆಯ ಧೋರಣೆಯೇ?

‘ದಲಿತರ ಮನೆಗಳಲ್ಲಿ ಭೋಜನ’ದ ನಡೆಯಲ್ಲಿ ಕಂಡುಬರುತ್ತಿರುವುದೇ ಇದು. ‘ನಾವು ಶ್ರೇಷ್ಠ, ನಿಮ್ಮ ಮನೆಗೆ ನಾವು ಬರುತ್ತಿದ್ದೇವೆ, ಆದ್ದರಿಂದ ನಿಮ್ಮ ಜೀವನ ಪಾವನ’, ಆ ಮೂಲಕ ಇತರರಿಗೆ ‘ನೋಡಿ, ಅವರು ದಲಿತರು. ಆದ್ದರಿಂದ ಅವರ ಮನೆಯಲ್ಲಿ ಊಟ ಮಾಡಬೇಕು. ಅವರ ಮನೆಯಲ್ಲಿ ನೀರು ಕುಡಿಯಬೇಕು. ಅವರು ದಲಿತರು... ಅವರು ದಲಿತರು...’ ಹೀಗೆಯೇ ಹೇಳುತ್ತಾ ಹೋದರೆ, ಹೇಳುತ್ತಾ ಹೇಳುತ್ತಾ ಒಬ್ಬರಾದ ಮೇಲೆ ಮತ್ತೊಬ್ಬರು ದಲಿತರ ಕೇರಿಗಳಲ್ಲಿ ಭೋಜನ ಮಾಡುತ್ತಾ ಹೋದರೆ (ಅದು ಹೋಟೆಲ್‌ನಿಂದ ತಂದಿದ್ದಾದರೂ ಸರಿ, ಮನೆಯಲ್ಲಿ ಮಾಡಿದ್ದಾದರೂ ಸರಿ) ದಲಿತರು ಮುಖ್ಯವಾಹಿನಿಗೆ ಬರುವುದಾದರೂ ಹೇಗೆ? ಇತರರಂತೆ ದಲಿತರು ಎಂಬ ಸಾಮಾನ್ಯ ಪ್ರಜ್ಞೆ ಜಗತ್ತಿನಲ್ಲಿ ಮೂಡುವುದಾದರೂ ಹೇಗೆ?

  ಈ ಹಿನ್ನೆಲೆಯಲ್ಲಿ ಇದರ ಹಿಂದಿನ ಮನಸ್ಥಿತಿಯನ್ನು ಅರಿಯಲು ನಾವು ಅಂಬೇಡ್ಕರರ ಬರಹಗಳ ಮೊರೆ ಹೋಗುವುದಾದರೆ, ಅಂಬೇಡ್ಕರರು ತಮ್ಮ ‘ಅಸ್ಪೃಶ್ಯರು ಅಥವಾ ಭಾರತದ ಕೊಳೆಗೇರಿಯ ಮಕ್ಕಳು’ ಕೃತಿಯಲ್ಲಿ ‘ತಾರತಮ್ಯದ ಸಮಸ್ಯೆ’ ಎಂಬ ಅಧ್ಯಾಯದಲ್ಲಿ ಇದನ್ನು ಸೂಕ್ಷ್ಮವಾಗಿ ದಾಖಲಿಸಿದ್ದಾರೆ. ಅಂಬೇಡ್ಕರರು ಬರೆಯುತ್ತಾರೆ: ‘ಕೆಲ ಬಗೆಯ ತಾರತಮ್ಯಗಳಿವೆ. ಮೇಲ್ನೋಟಕ್ಕೆ ಅವು ಸರಿ ಎನಿಸುತ್ತವೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಅದರ ಅರಿವಾಗುತ್ತದೆ. ಅಂದಹಾಗೆ ಇಂತಹ ತಾರತಮ್ಯದ ಪ್ರಕರಣಗಳಲ್ಲಿ ಅಸ್ಪೃಶ್ಯರ ಗೌರವ ಮತ್ತು ಘನತೆಯನ್ನು ಇತರರಿಗಿಂತ ಕೀಳು ಎಂದು ಬಿಂಬಿಸುವ ತಂತ್ರಗಾರಿಕೆ ಅಡಗಿರುತ್ತದೆ.

ಉದಾಹರಣೆಗೆ ಹಿಂದೂ ನೇತಾರನೊಬ್ಬನನ್ನು ಭಾರತದ ಶ್ರೇಷ್ಠ ನೇತಾರ ಎನ್ನಲಾಗುತ್ತದೆ, ಯಾರೂ ಕೂಡ ಆತನನ್ನು ಕಾಶ್ಮೀರಿ ಬ್ರಾಹ್ಮಣ (ಆತ ಅದೇ ಆಗಿದ್ದರೂ ಕೂಡ) ಎನ್ನುವುದಿಲ್ಲ. ಆದರೆ ಅದೇ ನೇತಾರ ಅಸ್ಪೃಶ್ಯ ಸಮುದಾಯದವನಾಗಿದ್ದರೆ ಆತನನ್ನು ಹಾಗೆಂದೇ ಕರೆಯಲಾಗುತ್ತದೆ, ಅಸ್ಪೃಶ್ಯ ನೇತಾರ ಎಂದೇ ಬಿಂಬಿಸಲಾಗುತ್ತದೆ. ಹಾಗೆಯೇ ಹಿಂದೂ ವೈದ್ಯನೊಬ್ಬನನ್ನು ಭಾರತದ ಶ್ರೇಷ್ಠ ವೈದ್ಯ ಎನ್ನಲಾಗುತ್ತದೆ. ಯಾರೂ ಕೂಡ ಆತನನ್ನು ಐಯ್ಯಂಗಾರ್ ಎಂದು (ಆತ ಅದೇ ಆಗಿದ್ದರೂ ಕೂಡ) ಕರೆಯುವುದಿಲ್ಲ. ಆದರೆ ಅದೇ ವೈದ್ಯ ಅಸ್ಪೃಶ್ಯ ಸಮುದಾಯದವನಾಗಿದ್ದರೆ ಆತನನ್ನು ಹಾಗೆಂದೇ ಕರೆಯಲಾಗುತ್ತದೆ, ಅಸ್ಪೃಶ್ಯ ವೈದ್ಯ ಎಂದೇ ಬಿಂಬಿಸಲಾಗುತ್ತದೆ. ಮುಂದುವರೆದು ಹಿಂದೂ ಹಾಡುಗಾರನೊಬ್ಬನನ್ನು ಭಾರತದ ಶ್ರೇಷ್ಠ ಹಾಡುಗಾರ ಎನ್ನಲಾಗುತ್ತದೆ, ಆದರೆ ಅದೇ ವ್ಯಕ್ತಿ ಅಸ್ಪೃಶ್ಯ ಸಮುದಾಯದವನಾಗಿದ್ದರೆ ಆತನನ್ನು ಅಸ್ಪೃಶ್ಯ ಹಾಡುಗಾರ ಎಂದೇ ಬಿಂಬಿಸಲಾಗುತ್ತದೆ. ಅಂತೆಯೇ ಹಿಂದೂ ಕುಸ್ತಿಪಟುವೊಬ್ಬನನ್ನು ಭಾರತದ ಶ್ರೇಷ್ಠ ಕುಸ್ತಿಪಟು ಎನ್ನಲಾಗುತ್ತದೆ, ಆದರೆ ಅದೇ ವ್ಯಕ್ತಿ ಅಸ್ಪೃಶ್ಯ ಸಮುದಾಯವನಾಗಿದ್ದರೆ ಆತನನ್ನು ಅಸ್ಪೃಶ್ಯ ಕುಸ್ತಿಪಟು ಎಂದೇ ಬಿಂಬಿಸಲಾಗುತ್ತದೆ’.

‘ಈ ದಿಸೆಯಲ್ಲಿ ಈ ಬಗೆಯ ತಾರತಮ್ಯ ‘ಅಸ್ಪೃಶ್ಯರು ಅದೆಷ್ಟೇ ಸಾಧನೆಗೈದರೂ ಅವರು ಕನಿಷ್ಠ’ ಎಂಬ ಹಿಂದೂಗಳ ಭಾವನೆಯಲ್ಲಿ ತನ್ನ ಮೂಲವನ್ನು ಹೊಂದಿದೆ. ಇದರರ್ಥ ಅಸ್ಪೃಶ್ಯರಲ್ಲಿ ಹುಟ್ಟುವ ಶ್ರೇಷ್ಠ ವ್ಯಕ್ತಿಗಳು ಅವರು ಅಸ್ಪೃಶ್ಯರಲ್ಲಷ್ಟೆ ಶ್ರೇಷ್ಠ. ಅವರು ಯಾವುದೇ ಕಾರಣಕ್ಕೂ ಹಿಂದೂಗಳಲ್ಲಿ ಇರುವ ಇತರ ಶ್ರೇಷ್ಠ ವ್ಯಕ್ತಿಗಳಿಗಿಂತ ಶ್ರೇಷ್ಠವಿರಲಿ ಸಮವೂ ಕೂಡ ಆಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ಬಗೆಯ ತಾರತಮ್ಯ ಲಕ್ಷಣದಲ್ಲಿ ಸಾಮಾಜಿಕ ಬಗೆಯದ್ದಾದರೂ ಇದು ಆರ್ಥಿಕ ತಾರತಮ್ಯಕ್ಕಿಂತ ಕಡಿಮೆಯಾದದ್ದಂತೂ ಅಲ್ಲವೇ ಅಲ್ಲ’. ತಾರತಮ್ಯದ ಸೂಕ್ಷ್ಮ ಮಾದರಿಯ ಬಗ್ಗೆ ಅಂಬೇಡ್ಕರರು ಹೀಗೆ ಹೇಳುತ್ತಾ ಹೋಗುತ್ತಾರೆ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ: 5, ಪು:109).

ಅಂದಹಾಗೆ ಅಂಬೇಡ್ಕರರ ಈ ಮಾತುಗಳ ಹಿನ್ನೆಲೆಯಲ್ಲಿ ಹಾಲಿ ದಲಿತರ ಮನೆಯಲ್ಲಿ ಆಹಾರ ಸೇವನೆ ಕುರಿತು ಹೇಳುವುದಾದರೆ, ಕೇಳುವುದಾದರೆ ದಲಿತ ಕೇರಿಗಳು ಕೇರಿಗಳಲ್ಲವೇ? ಇದುವರೆವಿಗೂ ದಲಿತರ ಮನೆಯಲ್ಲಿ ತಯಾರಿಸುತ್ತಿದ್ದ ಅಡುಗೆ ಅದೇನು ಅಡುಗೆಯಲ್ಲವೇ? ಬೇರೆ ಕೇರಿಗಳನ್ನು ಬಿಟ್ಟು, ಬೇರೆ ಮನೆಗಳನ್ನು ಬಿಟ್ಟು ದಲಿತರ ಕೇರಿಗಳಲ್ಲೇ ದಲಿತರ ಮನೆಗಳಲ್ಲೇ ಊಟ ವಾಸ್ತವ್ಯವೆಂದರೆ... ಇದು ಅಂಬೇಡ್ಕರರು ಹೇಳಿದ ‘ಅಸ್ಪೃಶ್ಯರು ಅದೆಷ್ಟೇ ಸಾಧನೆಗೈದರೂ ಅವರು ಕನಿಷ್ಠ’ ಎಂಬ ಹಿಂದೂಗಳ ಭಾವನೆಯ ಬಿಂಬಿತವಲ್ಲವೇ? ಎಂಬುದು.

ಹೇಗೆಂದರೆ ಅಂಬೇಡ್ಕರರು ಹೇಳಿದಂತೆ ಅಸ್ಪೃಶ್ಯ ಕುಸ್ತಿಪಟುವೊಬ್ಬನನ್ನು ಭಾರತೀಯ ಕುಸ್ತಿಪಟು ಎನ್ನದೆ ಅಸ್ಪೃಶ್ಯ ಕುಸ್ತಿ ಪಟು ಎಂದಂತೆ ದಲಿತರ ಮನೆಯ ಊಟವನ್ನು ಮತದಾರರೊಬ್ಬರ ಮನೆಯ ಊಟ, ಜನಸಾಮಾನ್ಯರೊಬ್ಬರ ಮನೆಯ ಊಟ, ಕಡೇ ಪಕ್ಷ ಹಿಂದೂಗಳ ಮನೆಯ ಊಟ ಎನ್ನದೆ ದಲಿತರ ಮನೆಯ ಊಟ ಎಂದಂತೆ ಮತ್ತು ಅದನ್ನು ತಿಂದದ್ದರಿಂದ ತಮಗೇನೂ ಆಗಿಲ್ಲ ಎಂಬಂತೆ... ಇದು ತಾರತಮ್ಯದ ಮತ್ತೊಂದು ರೂಪವಲ್ಲದೆ ಇನ್ನೇನು?

ತಾರತಮ್ಯದ ಈ ನಿಟ್ಟಿನಲ್ಲಿ ಅಂಬೇಡ್ಕರರ ಈಗಲೂ ಪ್ರಸ್ತುತವಾಗಿರುವ ಈ ಮುಂದಿನ ನುಡಿಗಳನ್ನು ಉಲ್ಲೇಖಿಸುವುದಾದರೆ, ಅಂಬೇಡ್ಕರರು ಹೇಳುತ್ತಾರೆ:
‘ದೇಶದ ಪ್ರತಿಯೊಂದು ಮೂಲೆಯಲ್ಲಿಯೂ ಅಸ್ಪೃಶ್ಯರು ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ, ತಾರತಮ್ಯವನ್ನು ಅನುಭವಿಸುತ್ತಿದ್ದಾರೆ, ಅನ್ಯಾಯವನ್ನು ಎದುರಿಸುತ್ತಿದ್ದಾರೆ. ಭಾರತದ ಅತ್ಯಂತ ದುರದೃಷ್ಟ ಜನರೆಂದರೆ ಅಸ್ಪೃಶ್ಯರು ಮತ್ತು ಈ ಸತ್ಯ (ಅಸ್ಪೃಶ್ಯತೆ) ಅದೆಷ್ಟು ಭೀಕರ ಎಂದು ತಿಳಿದಿರುವುದು ಅದರ ಅನನುಕೂಲಗಳನ್ನು ಈಗಲೂ ಅನುಭವಿಸುತ್ತಿರುವ ಅಸ್ಪೃಶ್ಯರಿಗಷ್ಟೇ ಹೊರತು ಇನ್ನಾರಿಗೂ ಅಲ್ಲ. ಅದರಲ್ಲೂ ಆಗಾಗ ಎದುರಾಗುವ ತಾರತಮ್ಯಗಳು ಅಸ್ಪೃಶ್ಯರಿಗೆ ಅಡ್ಡವಾಗಿರುವ ಬಲಿಷ್ಠ ತಡೆಗೋಡೆಗಳಾಗಿವೆ ಮತ್ತು ಇವು ಅಸ್ಪೃಶ್ಯರನ್ನು ಮೇಲೇಳದಂತೆ ತಡೆಯುತ್ತಿವೆ. ಅಂದಹಾಗೆ ಈ ತಾರತಮ್ಯಗಳು ಅಸ್ಪೃಶ್ಯರನ್ನು ಒಂದಲ್ಲಾ ಒಂದು ಭಯದಿಂದ– ಅದು ನಿರುದ್ಯೋಗವಿರಬಹುದು, ದಬ್ಬಾಳಿಕೆ ಇರಬಹುದು, ದಾಳಿ ಇರಬಹುದು– ನರಳುವಂತೆ ಮಾಡುತ್ತಿವೆ. ಅಸ್ಪೃಶ್ಯರ ಬದುಕು, ಅದು ಅಭದ್ರತೆಯ ಕೂಪವಾಗಿದೆ’.

ವಸ್ತುಸ್ಥಿತಿ ಹೀಗಿರುವಾಗ ಅಂತಹ ತಾರತಮ್ಯ ರೂಪದ ನಡೆ ಸಮಾಜದಲ್ಲಿ ಮತ್ತೆ ಮತ್ತೆ ನಡೆದರೆ ಅದು ಶೋಷಿತರಲ್ಲಿ ಅಭದ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆಯೋ? ಕಡಿಮೆಗೊಳಿಸುತ್ತದೆಯೋ? ಪ್ರತಿಯೊಬ್ಬರೂ ಯೋಚಿಸಬೇಕಾದ ವಿಷಯವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT