ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಕದ್ದು ಸಾಗಣೆ: ರೇಣುಕಾಚಾರ್ಯ ಕೈವಾಡ

ಸಮಸ್ಯೆ ಉಂಟಾಗಲು ಸರ್ಕಾರದ ನೀತಿ ಕಾರಣ: ಆರೋಪಗಳಿಗೆ ಶಾಸಕ ಶಾಂತನಗೌಡ ತಿರುಗೇಟು
Last Updated 29 ಮೇ 2017, 4:25 IST
ಅಕ್ಷರ ಗಾತ್ರ
ಹೊನ್ನಾಳಿ: ‘ತಾಲ್ಲೂಕಿನ ಜನರಿಗೆ ಕಡಿಮೆ ದರಕ್ಕೆ ಗುಣಮಟ್ಟದ ಮರಳನ್ನು ಕೊಡಬೇಕು ಎನ್ನುವ ಬೇಡಿಕೆಗೆ ನನ್ನ ಸಂಪೂರ್ಣ ಸಹಕಾರವಿದೆ’ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು. 
 
ತಾಲ್ಲೂಕಿನ ಹೊಳೆಹರಳಹಳ್ಳಿ, ಗೋವಿನಕೋವಿ ಹಾಗೂ ಅಚ್ಯುತಾಪುರದ ಮರಳು ಕ್ವಾರಿಗಳಿಗೆ ಶನಿವಾರ ಅವರು ಭೇಟಿ ನೀಡಿದರು. ನಂತರ ಚೀಲೂರಿನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮರಳು ಬೇಡಿಕೆದಾರರ ಅಹವಾಲು ಆಲಿಸಿ ಮಾತನಾಡಿದರು.
 
‘ತಾಲ್ಲೂಕಿನ ಮರಳು ಗುತ್ತಿಗೆದಾರರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿಯೇ ಈ ಸಮಾರಂಭ ಏರ್ಪಡಿಸಲಾಗಿದೆ. ತಾಲ್ಲೂಕಿನಲ್ಲಿ ಸಮಸ್ಯೆ ಉಂಟಾಗಲು ನಾನು ಹೊಣೆಯಲ್ಲ. ಸರ್ಕಾರದ ನೀತಿಗಳು ಕಾರಣ’ ಎಂದು ಅವರು ಹೇಳಿದರು.
 
‘ಇಡೀ ರಾಜ್ಯಕ್ಕೆ ಎಂ ಸ್ಯಾಂಡ್ ಪೂರೈಸುವ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದವರಿಗೆ ಯಕಶ್ಚಿತ್ ಒಂದು ಮಾಲ್ ಕಟ್ಟಲು ಹೊನ್ನಾಳಿಯ ಮರಳು ಬೇಕೇ’ ಎಂದು ಅವರು ಪ್ರಶ್ನಿಸಿದರು.
 
ಮರಳು ಕದ್ದು ಹೊಡೆಯುತ್ತಿದ್ದಾರೆ:  ‘ಅಚ್ಯುತಾಪುರದ ಕ್ವಾರಿಯ ಮರಳಿನ ಪ್ರಮಾಣ ಅಗಾಧವಾಗಿದೆ. ಇದೊಂದೇ ಕ್ವಾರಿ ನಮ್ಮ ಮರಳಿನ ಸಮಸ್ಯೆಯನ್ನು ನೀಗಿಸಬಲ್ಲದು. ಆದರೆ, ಈ ಕ್ವಾರಿಯನ್ನು ಗುತ್ತಿಗೆ ಪಡೆಯುವ ಉದ್ದೇಶದಿಂದ ಮಾಜಿ ಸಚಿವ ರೇಣುಕಾಚಾರ್ಯ ಗುತ್ತಿಗೆದಾರರ ಮೇಲೆ ಪ್ರಭಾವ ಬೀರಿ ಅರ್ಜಿಗಳನ್ನು ಹಿಂಪಡೆಯುವಂತೆ ನೋಡಿಕೊಂಡಿದ್ದಾರೆ.

ತಮ್ಮ ಆಪ್ತರಾದ ಗುತ್ತಿಗೆದಾರ ಎಚ್.ಪಿ.ರಾಮಮೂರ್ತಿ ಹಾಗೂ ಕೃಷ್ಣನಾಯ್ಕ ಅವರಿಗೆ ಗುತ್ತಿಗೆ ಸಿಗುವಂತೆ ನೋಡಿಕೊಂಡಿದ್ದಾರೆ. ಇಲ್ಲಿನ ಮರಳನ್ನು ಕದ್ದು ಸಾಗಣೆ ಮಾಡುವುದರ ಹಿಂದೆ ರೇಣುಕಾಚಾರ್ಯ ಅವರ ಕೈವಾಡವಿದೆ.
 
ಈ ಕ್ವಾರಿಯಲ್ಲಿನ ಮಣ್ಣು ಮಿಶ್ರಿತ ಮರಳನ್ನು ಟ್ರ್ಯಾಕ್ಟರ್ ಒಂದಕ್ಕೆ ₹ 8 ಸಾವಿರಕ್ಕೆ, ಜರಡಿ ಹಿಡಿದ ಮರಳನ್ನು ಲಾರಿಯೊಂದಕ್ಕೆ ₹ 40 ಸಾವಿರಕ್ಕೆ ಮಾರಿಕೊಳ್ಳುತ್ತಿದ್ದಾರೆ’ ಎಂದು ಅವರು ಆರೋಪಿಸಿದರು. ಗುರುಕುಲ ವಿದ್ಯಾಸಂಸ್ಥೆಗೆ ಮರಳು ಖರೀದಿಸಲು ಪಡೆದುಕೊಂಡಿರುವ ಪರ್ಮಿಟ್‌ ಅನ್ನು ಯಾರು ಬೇಕಾದರೂ ಪರಿಶೀಲಿಸಬಹುದು ಎಂದು ಸವಾಲು ಹಾಕಿದರು.
 
‘ಮನೆ ಕಟ್ಟುವವರು ಮರಳಿನ ಅಭಾವ ಸೃಷ್ಟಿಸಿಲ್ಲ. ಶೇ 90ರಷ್ಟು ಜನ ಜಿಪಿಎಸ್ ಅಳವಡಿಸಿಕೊಂಡು ಮರಳು ಮಾರಿಕೊಳ್ಳುತ್ತಿದ್ದಾರೆ. ಅದಕ್ಕೆ ನಾನು ಹೊಣೆಯಲ್ಲ’ ಎಂದರು.
 
‘ತಾಲ್ಲೂಕನ್ನು ಬಯಲುಶೌಚ ಮುಕ್ತ ಮಾಡುವ ಉದ್ದೇಶದಿಂದ ಶೌಚಾಲಯ ನಿರ್ಮಿಸಲು ಪುಕ್ಕಟೆಯಾಗಿ ಮರಳು ಕೊಡಿಸಿದ್ದೇನೆ. ಈಗಾಗಲೇ ಶೇ 85ರಷ್ಟು ಸಾಧನೆಯಾಗಿದೆ. ಅ. 2ರ ವೇಳೆಗೆ ಶೇ 100 ಸಾಧಿಸುವ ಕನಸು ಹೊಂದಿದ್ದೇನೆ’ ಎಂದರು.
 
ತಹಶೀಲ್ದಾರ್ ಎನ್.ಜೆ.ನಾಗರಾಜ್ ಅವರು ತಾಲ್ಲೂಕಿನ ಮರಳಿನ ಸಂಪೂರ್ಣ ಸಮಸ್ಯೆಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿರುವುದಾಗಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ಜಿ.ವಿಶ್ವನಾಥ್, ತಾಲ್ಲೂಕು ಪಂಚಾಯ್ತಿ ಸದಸ್ಯ ಪೀರ್ಯಾನಾಯ್ಕ, ಪುಷ್ಪಾ ದೇವೀರಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ್, ಬಿಜೆಪಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಎ.ಬಿ.ಹನುಮಂತಪ್ಪ, ಸುರೇಶ್ ಬಿಸಾಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಣ್ಣಕ್ಕಿ ಬಸವನಗೌಡ, ಗದ್ದಿಗೇಶ್, ಎಪಿಎಂಸಿ ಅಧ್ಯಕ್ಷ ಎಸ್.ಎಸ್.ಬೀರಪ್ಪ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶಿವಪ್ಪ ಹುಲಿಕೆರೆ, ಯುವ ಕಾಂಗ್ರೆಸ್ ಅಧ್ಯಕ್ಷ ಮಧುಗೌಡ ಇದ್ದರು.
****
‘ಅವರೊಬ್ಬ ಮಹಾನ್ ಕಳ್ಳ’
‘ನನ್ನ ಹಾಗೂ ನನ್ನ ಮಕ್ಕಳ ಮೇಲೆ ಮಾಜಿ ಸಚಿವ ರೇಣುಕಾಚಾರ್ಯ ಒಂದು ವಾರದಿಂದ ಆರೋಪ ಮಾಡುತ್ತಿದ್ದಾರೆ. ಅವರು ನನ್ನನ್ನು ಸುಳ್ಳ ಎಂದು ಕರೆದಿದ್ದಾರೆ. ಅವರೊಬ್ಬ ಮಹಾನ್ ಕಳ್ಳ’ ಎಂದು ಶಾಂತನಗೌಡ ಆಕ್ರೋಶ ವ್ಯಕ್ತಪಡಿಸಿದರು.
****
ಪ್ರತಿ ಟ್ರ್ಯಾಕ್ಟರ್‌ ಮರಳಿಗೆ ₹ 1,800
ಆಶ್ರಯ ಹಾಗೂ ಶೌಚಾಲಯ ಕಟ್ಟಿಸಿಕೊಳ್ಳುವವರಿಗೆ ಟ್ರ್ಯಾಕ್ಟರ್ ಒಂದಕ್ಕೆ ₹ 1,800ರಂತೆ ನಿರ್ಮಿತಿ ಕೇಂದ್ರದ ಮೂಲಕ ಮರಳು ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. 

ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ವಿನಯ ಬಣಕಾರ್ ₹ 3,600 ದರಕ್ಕೆ ಮರಳು ಕೊಡುವಂತೆ ಗುತ್ತಿಗೆದಾರರಿಗೆ ಆದೇಶಿಸಲಾಗುವುದು ಎಂದು ಶಾಂತನಗೌಡ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT