ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟಿ ಅವಕಾಶಗಳ ಮುಕ್ತ ಚರ್ಚೆ

Last Updated 29 ಮೇ 2017, 5:43 IST
ಅಕ್ಷರ ಗಾತ್ರ

ತುಮಕೂರು: ಜೈವಿಕ ತಂತ್ರಜ್ಞಾನ (ಬಿಟಿ) ವಿಷಯದಲ್ಲಿರುವ ಸವಾಲುಗಳು, ಭವಿಷ್ಯದ ಅವಕಾಶಗಳು, ದೇಶ, ವಿದೇಶಗಳಲ್ಲಿರುವ ಉದ್ಯೋಗಾವಕಾಶಗಳು... ಹೀಗೆ ಬಿಟಿ ವಿಷಯದ ಕುರಿತು ಹಲವು ವಿಷಯಗಳ ಮಂಥನಕ್ಕೆ ನಗರದ ಸಿದ್ದಗಂಗಾ ತಾಂತ್ರಿಕ ಕಾಲೇಜಿನ (ಎಸ್‌ಐಟಿ) ಕ್ಯಾಂಪಸ್‌ ಶನಿವಾರ ವೇದಿಕೆ ಒದಗಿಸಿತ್ತು.

ಕಾಲೇಜಿನ ಬಿಟಿ ವಿಭಾಗ ‘ಎಂಜಿನಿಯರಿಂಗ್‌ ಅವಕಾಶಗಳು ಮತ್ತು ಜೈವಿಕ ತಂತ್ರಜ್ಞಾನ ಕೌಶಲದ ಅಗತ್ಯಗಳು’ ಕುರಿತು ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಗುಂಪು ಚರ್ಚೆ ಕಾರ್ಯಾಗಾರ ಹಮ್ಮಿಕೊಂಡಿತ್ತು.

ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಬಿಟಿ ಕುರಿತು ಅವರಲ್ಲಿರುವ ತಿಳಿವಳಿಕೆ ಮತ್ತು ಭವಿಷ್ಯದಲ್ಲಿ ಯಾವ ರೀತಿ ತೊಡಗಬಹುದು ಎನ್ನುವ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ನೇರವಾಗಿ ಪ್ರಶ್ನೆಗಳನ್ನು ಕೇಳಿದರು. ಚೀಟಿಯಲ್ಲಿಯೂ ಪ್ರಶ್ನೆ ಬರೆದು ಕಳುಹಿಸಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಂಡರು.

ರಾಜ್ಯ ಸರ್ಕಾರದ ಜೈವಿಕ ತಂತ್ರಜ್ಞಾನ ಸರಳೀಕೃತ ಘಟಕದ ಅಧಿಕಾರಿ ಜಗದೀಶ್ ಮಿತ್ತೂರ್, ‘ಜೈವಿಕ ತಂತ್ರಜ್ಞಾನ ಎನ್ನುವುದು ಒಂದು ದೊಡ್ಡ ಮರದಂತೆ. ಅದರಲ್ಲಿ ಹಲವು ಘಟಕಗಳಿವೆ. ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಒಂದು ವಿಭಾಗವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಬೇಕು’ ಎಂದರು.

ಬಿಟಿಯ ಯಾವ ಘಟಕದಲ್ಲಿ ಅಧ್ಯಯನ ನಡೆಸಲು ಆಸಕ್ತರಾಗಿದ್ದೀರಿ ಎಂದು ವಿದ್ಯಾರ್ಥಿನಿ ಫೈಜಾ ಅವರನ್ನು ಜಗದೀಶ್ ಕೇಳಿದರು. ‘ಪಶು ವೈದ್ಯಕೀಯ ವಿಷಯದಲ್ಲಿ ನಾನು ಪಿಎಚ್‌.ಡಿ ಪಡೆಯಬೇಕು ಎಂದಿದ್ದೇನೆ. ಉತ್ತಮ ಹಾಲು ಮತ್ತು ಮಾಂಸ ನೀಡುವ ರಾಸುಗಳ ಅಭಿವೃದ್ಧಿ ಕುರಿತು ಅಧ್ಯಯನ ನಡೆಸುತ್ತೇನೆ’ ಎಂದು ವಿದ್ಯಾರ್ಥಿನಿ ಉತ್ತರಿಸಿದರು.

ನೀರಿನ ಸಮಸ್ಯೆಗಳನ್ನು ಬಿಟಿ ತಂತ್ರಜ್ಞಾನದ ಮೂಲಕ ಬಗೆಹರಿಸುವ ಬಗ್ಗೆ ಪ್ರಶ್ನಿಸಿದರು ವಿದ್ಯಾರ್ಥಿನಿ ಆಶಿಕಾ. ‘ಹೊಸದನ್ನು ಕಂಡು ಹಿಡಿಯಬೇಕು ಎನ್ನುವ ಆಸೆ ಇದೆ. ಅದರಲ್ಲಿಯೂ ರಾಜ್ಯದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಬಡವರು ಹಣ ನೀಡಿ ಟ್ಯಾಂಕರ್‌ ನೀರನ್ನು ಖರೀದಿಸಲು ಸಾಧ್ಯವಿಲ್ಲ. ಬಿಟಿ ಮೂಲಕ ನೀರಿನ ಸಮಸ್ಯೆಯನ್ನು ಯಾವ ರೀತಿ ಪರಿಹರಿಸಬಹುದು ಎನ್ನುವ ಕುರಿತು ಅಧ್ಯಯನ ನಡೆಸುವ ಆಸೆ ಇದೆ’ ಎಂದರು.

ಆಗ ಜಗದೀಶ್, ‘ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇದೆ. ಬಿಟಿ ಮೂಲಕ ನೀರನ್ನು ಉಳಿಸುವ ಬಗ್ಗೆ ಹಾಗೂ ಕಡಿಮೆ ನೀರು ಬಳಸಿ ಕೃಷಿ ಚಟುವಟಿಕೆ ನಡೆಸುವ ಬಗ್ಗೆ ಅಧ್ಯಯನ ನಡೆಸಬಹುದು. ನೀರಿನಂತಹ ಸಾಮಾಜಿಕ ಸಮಸ್ಯೆಗಳಿಗೂ ಬಿಟಿಯಲ್ಲಿ ಪರಿಹಾರಗಳನ್ನು ಕಂಡುಕೊಳ್ಳಬಹುದು’ ಎಂದು ಉತ್ತರಿಸಿದರು.

‘ಹೊಸ ಆವಿಷ್ಕಾರಗಳನ್ನು ಮಾಡಬೇಕು ಎನ್ನುವ ಆಸೆ ಇದೆ’ ಎನ್ನುವ ಮಾತು ಸಂವಾದದಲ್ಲಿ ಪಾಲ್ಗೊಂಡ ಬಹುತೇಕ ವಿದ್ಯಾರ್ಥಿಗಳಿಂದ ವ್ಯಕ್ತವಾಯಿತು. ಬಯೋಕಾನ್ ಅಕಾಡೆಮಿ ನಿರ್ದೇಶಕ ಈಶ್ವರನ್, ಮಾಧವನ್ ವಾಸುದೇವನ್, ಭಾಸ್ಕರ್, ಗೌರಿಶಂಕರ್ ಸಂವಾದದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT