ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛಗೊಂಡಿತು ಹೊಸಹೊಳಲಿನ ಕಲ್ಯಾಣಿ

Last Updated 29 ಮೇ 2017, 7:14 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಒಂದು ಕಾಲದಲ್ಲಿ ಇಡೀ ಗ್ರಾಮಕ್ಕೆ ನೀರಿನ ಮೂಲವಾಗಿದ್ದ ಹೊಸಹೊಳಲಿನ ಕಲ್ಯಾಣಿ ಅಶುಚಿತ್ವದ ತಾಣವಾಗಿ, ಗಿಡಗಂಟೆಗಳಿಂದ, ಹೂಳಿ ನಿಂದ ತುಂಬಿತ್ತು. ಅದನ್ನು ಸ್ವಚ್ಛಗೊಳಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಕಾರ್ಯವನ್ನು ಗ್ರಾಮದ ಯುವಕರು,  ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಮಾಡಿದ್ದಾರೆ.

1935ರಲ್ಲಿ ಗ್ರಾಮದ ಚಿಕ್ಕಕೆರೆಯ ಬಳಿ ಈ ಕಲ್ಯಾಣಿ ನಿರ್ಮಾಣವಾಗಿತ್ತು. ಸದಾ ನೀರು ತುಂಬಿರುತ್ತಿದ್ದ ಇದು, ಗ್ರಾಮಸ್ಥರ ಕುಡಿಯುವ ನೀರಿಗೂ ಆಸರೆಯಾಗಿತ್ತು. ಆದರೆ, ತೀವ್ರ ಬರದಿಂದಾಗಿ ಕಲ್ಯಾಣಿ ಬತ್ತಿಹೋಗಿತ್ತು. ಗ್ರಾಮಸ್ಥರು ಹಾಗೂ ಪುರಸಭೆ ಚಿಕ್ಕಕೆರೆಯನ್ನು ನಿರ್ಲಕ್ಷಿಸಿದ ಪರಿಣಾಮ ಕಲ್ಯಾಣಿ ಪಾಳು ಬಿದ್ದಿತ್ತು. ಇದರಿಂದ ಕಲ್ಯಾಣಿಯಲ್ಲಿ ಹೂಳುತುಂಬಿ ಜೀವಸೆಲೆಯೇ ಮಾಯವಾಗಿತ್ತು. 

ಈ ಬಗ್ಗೆ ‘ಪ್ರಜಾವಾಣಿ’ಯ ಮೇ 19ರ ಸಂಚಿಕೆಯಲ್ಲಿ ಪ್ರಕಟವಾದ ‘ಬತ್ತಿಹೊಂದ ಹೊಸಹೊಳಲಿನ ಐತಿಹಾಸಿಕ ಕೆರಗಳು’ ವರದಿಯಲ್ಲಿ ಈ ಕಲ್ಯಾಣಿಯ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಹಾಗೂ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ತಮ್ಮೂರಿನ ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ತೀರ್ಮಾನಿಸಿದರು. 

ಈಗ ಕಲ್ಯಾಣಿಗೆ ಮರು ಜೀವ ಬಂದಿದ್ದು, ಸ್ವಚ್ಛತಾ ಕಾರ್ಯ ಮುಗಿದ ರಾತ್ರಿಯೇ ಸುರಿದ ಮಳೆ ನೀರು ಕಲ್ಯಾಣಿಯಲ್ಲಿ ಸಂಗ್ರಹವಾಗಿದೆ. ಇದು ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.
ಕಲ್ಯಾಣಿಯ ಸ್ವಚ್ಛತಾ ಕಾರ್ಯಕ್ಕೆ ಚಾಲನೆನೀಡಿ ಮಾತನಾಡಿದ ವೇದಿಕೆಯ ಮುಖಂಡ ನಟರಾಜು, ‘ಕಲ್ಯಾಣಿಗಳು, ಕೆರೆ–ಕಟ್ಟೆಗಳನ್ನು ನಿರ್ಲಕ್ಷಿಸಿ ಅವುಗಳನ್ನು ಕಸತುಂಬುವ  ತಾಣವಾಗಿ ಬಳಸಿದ್ದರಿಂದಲೇ ಅಂತರ್ಜಲ ಕುಸಿದು ಕುಡಿಯುವ ನೀರಿಗೂ ಪರದಾಡುವಂತಾಗಿದೆ.

ಇನ್ನಾದರೂ ಎಚ್ಚೆತ್ತು ಪ್ರತಿ ಹಳ್ಳಿಗಳಲ್ಲಿರುವ ಕಲ್ಯಾಣಿ ಗಳನ್ನು ಸ್ವಚ್ಛಗೊಳಿಸಬೇಕು.  ಗ್ರಾಮಸ್ಥರು ಸಹಕಾರ ನೀಡಿದರೆ ವಾರಕ್ಕೊಂದು ದಿನ ವೇದಿಕೆಯ ಸದಸ್ಯರು ಇಂತಹ ಸ್ವಚ್ಚತಾ ಕಾರ್ಯಕ್ಕೆ ಮೀಸಲಿಡುವರು ಎಂದರು.ಶಾಸಕ ನಾರಾಯಣಗೌಡ ಸೇರಿದಂತೆ ಹಲವು ಗಣ್ಯರು ಸ್ಥಳಕ್ಕೆ ಭೇಟಿ ಮಾಡಿ ಯುವಕರ ಕಾರ್ಯಕ್ಕೆ ಬೆನ್ನುತಟ್ಟಿ ಪ್ರೊತ್ಸಾಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT