ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿರಂಗ ಹೇಳಿಕೆಗೆ ಅವಕಾಶ ಇಲ್ಲ

Last Updated 29 ಮೇ 2017, 7:29 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಸತ್ತಿದ್ದು, ಕಾರ್ಯಕರ್ತರನ್ನು ಕಡೆಗಣಿ ಸಲಾಗುತ್ತಿದೆ ಎಂಬ ಹೇಳಿಕೆಗೆ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ.ರಮೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದು, ‘ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ನೀಡುವುದನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷ ವಿರೋಧಿ ಚಟುವಟಿಕೆ ನಡೆಸು ವವರ ವಿರುದ್ಧ ಕ್ರಮ ಕೈಗೊಳ್ಳಲು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ. ಮಡಿಕೇರಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಕಾರ್ಯಕರ್ತರು, ಪದಾಧಿ ಕಾರಿಗಳು ನೀಡಿರುವ ಹೇಳಿಕೆಗಳನ್ನು ಗಮನಿಸಲಾಗುವುದು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷರ ನಡೆಯ ಬಗ್ಗೆ ಅಸಮಾಧಾನವಿದ್ದರೆ ಪಕ್ಷದ ಕಚೇರಿಯಲ್ಲಿ ಚರ್ಚಿಸಲಿ, ಅದನ್ನು ಬಿಟ್ಟು ವೇದಿಕೆಯ ಮೇಲೆ ಆವೇಶದ  ಮಾತುಗಳನ್ನು ಆಡುವುದು ಸರಿಯಲ್ಲ. ಅದಕ್ಕೆ ಕಾಂಗ್ರೆಸ್‌ನಲ್ಲಿ ಅವಕಾಶವೂ ಇಲ್ಲ. ಮಡಿಕೇರಿಯ ಸಭೆಗೆ ನನ್ನನ್ನೂ ಆಹ್ವಾನಿಸಿರಲಿಲ್ಲ’ ಎಂದು ಮಾಹಿತಿ ನೀಡಿದರು.

‘ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಕೊಡಗು ಜಿಲ್ಲೆಯ ಮುಖಂಡರ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌, ರಾಜ್ಯ ಉಸ್ತುವಾರಿ ವೇಣುಗೋಪಾಲ್‌, ವಿಷ್ಣುನಾಥನ್‌, ಹುಸೇನ್‌, ರಾಣಿ ಸತೀಶ್‌, ಸಿದ್ದರಾಜು ಉಪಸ್ಥಿತಿಯಲ್ಲಿ ನಡೆಯಿತು. ಎರಡು ಕ್ಷೇತ್ರಗಳ ಬಗ್ಗೆ ಪಕ್ಷದ ಸಂಘಟನೆಯ ವಿವರ ಪಡೆದುಕೊಂಡರು’ ಎಂದು ರಮೇಶ್‌ ವಿವರರಿಸಿದರು.

‘ಇದೇ ವೇಳೆ ಕಾಯಂ ಅಧ್ಯಕ್ಷರ ನೇಮಕದ ಪ್ರಸ್ತಾಪವೂ ಆಯಿತು. ಪ್ರಭಾರ ಅಧ್ಯಕ್ಷರನ್ನೇ ಕಾಯಂಗೊಳಿಸುವ ಚರ್ಚೆಯೂ ನಡೆದಿದೆ. ಪಕ್ಷದ ಆದೇಶಕ್ಕೆ ತಲೆಬಾಗಿ ಕೆಲಸ ಮಾಡುವ ಕಾರ್ಯಕರ್ತ ನಾನು. ಈಗ ಅಧ್ಯಕ್ಷರ ಆಯ್ಕೆ ವಿಚಾರ ಗೊಂದಲದಲ್ಲಿದ್ದು, ಕಾಯಂ ಅಧ್ಯಕ್ಷರ ನೇಮಕ ಆದೇಶ ಪ್ರತಿಬರುವ ತನಕ ನಾನೇ ಪ್ರಭಾರನಾಗಿ ಕಾರ್ಯ ನಿರ್ವಹಿ ಸುತ್ತೇನೆ. ಅಂದಿನ ಸಭೆಯಲ್ಲಿ ನಡೆದ ಚರ್ಚೆಯಂತೆ ಆದೇಶ ಬಂದರೆ ಮಾಹಿತಿ ನೀಡುತ್ತೇನೆ’ ಎಂದು ಸ್ಪಷ್ಪನೆ ನೀಡಿದರು.

‘ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ‘ಬಿ’ ಕಾಂಪ್ಲೆಕ್ಸ್‌ ಕೊಟ್ಟರೆ ಮಾತ್ರ ಪಕ್ಷಕ್ಕೆ ಭವಿಷ್ಯವಿದೆ ಎಂದು ಕೆಲವರು ವಾದಿಸುತ್ತಿದ್ದಾರೆ. ನಾನು ಪ್ರಬಲನೋ, ದುರ್ಬಲನೋ ಎಂಬುದು ಕೊಡಗಿನ ಜನರಿಗೆ ಗೊತ್ತಿದೆ. ಅವರೇ ನಿರ್ಧರಿಸಲಿ’ ಎಂದು ಪಕ್ಷದ ಕೆಲವು ಮುಖಂಡರ ವಿರುದ್ಧ ಹರಿಹಾಯ್ದರು.

‘ಪಕ್ಷ ಯಾರನ್ನೂ ಕಡೆಗಣಿಸುವ ಕೆಲಸ ಮಾಡಿಲ್ಲ. ಯಾರೂ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಐದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನು ಕರೆಸಿ ಸಮಾಲೋಚನೆ ಮಾಡಲಾಗುವುದು. ಸಮಸ್ಯೆಗಳಿದ್ದರೆ ಪಕ್ಷದ ಕಚೇರಿಯಲ್ಲಿ ಹೇಳಿಕೆ ನೀಡಲಿ. ಈ ಬಾರಿ ಎಐಸಿಸಿ ಬ್ಲಾಕ್‌ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದೆ. ಬ್ಲಾಕ್‌ಮಟ್ಟದಲ್ಲಿ ಪಕ್ಷ ಹೇಗೆ ಸಂಘಟನೆಯಾಗಿದೆ ಎಂಬುದನ್ನು ಅವರೇ ಖುದ್ದು ಪರಿಶೀಲನೆ ನಡೆಸಲಿದ್ದಾರೆ’ ಎಂದು ಎಚ್ಚರಿಸಿದರು.

ಬಿಜೆಪಿ ವಿರುದ್ಧವೂ ಗರಂ: ‘ರಾಜ್ಯ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ಬಿಜೆಪಿ ಮುಖಂಡರು ಆರೋಪಿಸುತ್ತಿದ್ದಾರೆ.  ಭ್ರಷ್ಟಾಚಾರದ ಜನಕರು ಬಿಜೆಪಿ ಮುಖಂಡರು. ಅವರ ಆಡಳಿತಾವಧಿಯಲ್ಲಿ ಯಾರೆಲ್ಲ ಜೈಲಿಗೆ ಹೋಗಿದ್ದರು ಎಂಬುದು ರಾಜ್ಯದ ಜನರಿಗೆ ಅರಿವಿದೆ’ ಎಂದರು. ಪತ್ರಿಕಾಗೋಷ್ಠಿಯಲ್ಲಿ ತನ್ನೀರಾ ಮೈನಾ, ಯುವ ಘಟಕದ ಅಧ್ಯಕ್ಷ ಹನೀಫ್‌, ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್‌, ಅಬ್ದುಲ್‌ ಸಲಾಂ ಹಾಜರಿದ್ದರು.

‘ಬಿಜೆಪಿ ಬಾವುಟ ಹಿಡಿದು ಜಾತ್ಯತೀತವಾದಿ ಆಗಿ ಬದಲಾಗಿಲ್ಲ’
ಮಡಿಕೇರಿ: ‘ನನ್ನ ಜೀವನದುದ್ದಕ್ಕೂ ಕೋಮುವಾದಿಗಳ ವಿರುದ್ಧ ಹೋರಾಟ ಮಾಡಿಕೊಂಡೇ ಬಂದಿರುವೆ. ಕೆಲವರಂತೆ ಬಿಜೆಪಿ ಬಾವುಟ ಹಿಡಿದು ಕೊನೆಗೆ ಜಾತ್ಯತೀತವಾದಿ ಆಗಿ ಬದಲಾಗಿಲ್ಲ’ ಎಂದು ಟಿ.ಪಿ. ರಮೇಶ್‌ ಅವರು ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯ ಅವರಿಗೆ ಟಾಂಗ್‌ ನೀಡಿದರು.

‘ಸಮಾಜದಲ್ಲಿ ಸಂಘರ್ಷ ಉಂಟುಮಾಡುವ ಹೇಳಿಕೆಯನ್ನು ಎಂದಿಗೂ ನೀಡಿಲ್ಲ. ಕೋಮುವಾದಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. 1994ರಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಸ್ವಲ್ಪ ಅಂತರದಿಂದ ಸೋಲು ಕಂಡಿದ್ದೆ. ನಾನೇನು ಶ್ರೀಮಂತನಲ್ಲ. ಬಡತನದಿಂದ ಬೆಳೆದುಬಂದ ಮನುಷ್ಯ’ ಎಂದು ಹೇಳಿದರು.

‘ಸುಬ್ಬಯ್ಯ ಅವರೇ ಬಿಜೆಪಿ ನಾಯಕರಿಗೆ ಸಿಹಿ ಹಾಗೂ ಪಟಾಕಿ ಪೂರೈಕೆ ಮಾಡಿರಲೂಬಹುದು. ಅವರಂತೆ ನಾನು ಇನ್ನೊಬ್ಬರ ತೇಜೋವಧೆಯ ಕೆಲಸ ಮಾಡುವುದಿಲ್ಲ. ಮಾರ್ಗದರ್ಶನದ ಬದಲಿಗೆ ಬಾಯಿ ಚಪಲಕ್ಕೆ ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ. ಎಲ್ಲ ವಿಚಾರಗಳೂ ಗೊತ್ತಿವೆ. ಯಾರ ಪ್ರಮಾಣ ಪತ್ರದ ಅಗತ್ಯವೂ ಇಲ್ಲ. ನಾನು ಮಳೆಗೆ ಹುಟ್ಟಿದ ಅಣಬೆಯಲ್ಲ’ ಎಂದು ಎಚ್ಚರಿಸಿದರು.

* * 

ಅಧ್ಯಕ್ಷರ ಆಯ್ಕೆ  ಪಕ್ಷದ ಆಂತರಿಕ ವಿಚಾರ. ಎ.ಕೆ. ಸುಬ್ಬಯ್ಯ ಅವರಿಗೆ ಸಂಬಂಧವಿಲ್ಲ. ಅವರು ಪಕ್ಷದ ನಾಯಕರೂ ಅಲ್ಲ, ಪ್ರಾಥಮಿಕ ಸದಸ್ವತವನ್ನೂ ಪಡೆದುಕೊಂಡಿಲ್ಲ
ಟಿ.ಪಿ.ರಮೇಶ್‌
ಅಧ್ಯಕ್ಷ, ಕಾಂಗ್ರೆಸ್‌ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT