ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

...ಎಂದಿಗೂ ಬತ್ತದ ಹಳ್ಳ

Last Updated 29 ಮೇ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಬರಗಾಲದ ಸನ್ನಿವೇಶದಲ್ಲೂ ಹಳ್ಳವೊಂದು ಬತ್ತದೆ ಹರಿಯುತ್ತಿದ್ದು, ತನ್ನ ಪಾತ್ರದ ಬಾವಿಗಳನ್ನು ತುಂಬಿಸುತ್ತಿದೆ ಎಂದರೆ ನಂಬುತ್ತೀರಾ?

ಅದ್ಹೇಗೆ ನಂಬುವುದು ಎಂಬ ಉತ್ತರ ನಿಮ್ಮದಾಗಿದ್ದರೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಎಮ್‌.ಬಸಾಪುರ, ಬನ್ನೆಟ್ಟಿ, ಕೆ.ಗೋನಾಳ, ಕೆ.ಹೊಸ್ಸೂರು ಗ್ರಾಮಗಳಿಗೆ ಬನ್ನಿ. ಈ ಗ್ರಾಮಗಳ ಪರಿಸರದಲ್ಲಿ ಹರಿಯುವ ದೊಡ್ಡ ಹಳ್ಳ–ಗ್ರಾಮಸ್ಥರು ಅದಕ್ಕೆ ಬಸಾಪುರ ಹಳ್ಳ ಎಂದು ಕರೆಯುವುದು ರೂಢಿ– ಹರಿಯುವುದನ್ನು ನೀವೇ ಕಣ್ಣಾರೆ ಕಾಣಬಹುದು. ಈ ಹಳ್ಳ ಎಂದಿಗೂ ಬತ್ತಿದ ಉದಾಹರಣೆ ಇಲ್ಲ. ಆದರೆ, ಈ ಬಾರಿ ಕೊಂಚ ತೆಳ್ಳಗೆ ಹರಿಯುತ್ತಿದೆ. 

ಯಾಕೀ ಹಳ್ಳ ಈಗಲೂ ಹರಿಯುತ್ತಿದೆ?: ಯಲಬುರ್ಗಾ ತಾಲ್ಲೂಕಿನಿಂದ ಆರಂಭವಾಗುವ ಈ ಹಳ್ಳ ಕುಷ್ಟಗಿ ಮಾರ್ಗವಾಗಿ ಹರಿದು ಟೆಂಗುಂಟಿ, ಮುದೇನೂರ ಮೂಲಕ ಸುಮಾರು 150 ಕಿ.ಮೀ ದೂರ ಹರಿದು ಲಿಂಗಸ್ಗೂರು ತಾಲ್ಲೂಕು ಪ್ರವೇಶಿಸಿ ಬಸವಸಾಗರ ಅಣೆಕಟ್ಟು ಸೇರುತ್ತದೆ. ಉಳಿದ ಹಳ್ಳಿಗಳಲ್ಲಿ ಈ ಹಳ್ಳ ಮಳೆಗಾಲ ಹೊರತುಪಡಿಸಿದರೆ ಸದಾ ಹರಿಯುವುದಿಲ್ಲ. ಎಮ್‌.ಬಸಾಪುರ, ಬನ್ನೆಟ್ಟಿ, ಕೆ.ಗೋನಾಳ, ಕೆ.ಹೊಸ್ಸೂರು ಈ ನಾಲ್ಕು ಹಳ್ಳಿಗಳ ಸುಮಾರು 5 ಕಿ.ಮೀ ಪ್ರದೇಶದಲ್ಲಿ ಮಾತ್ರ ಸದಾ ಹರಿಯುತ್ತದೆ.

ಗ್ರಾಮಸ್ಥರು ಹಳ್ಳದ ಉಸುಕು ಎತ್ತುವುದಕ್ಕೆ ಕಡಿವಾಣ ಹಾಕಿರುವುದು, ಹಳ್ಳದ ಸುತ್ತ ಎರ್ರಾಬಿರ್ರಿ ಕೊಳವೆಬಾವಿ ಕೊರೆಸದಿರುವುದು, ಹಳ್ಳದ ಜಲಾನಯನ ಪ್ರದೇಶದಲ್ಲಿ ಗುಡ್ಡಗಳಿರುವುದು, ಭೂಮಿ ಪದರು ಶಿಲೆಯಿಂದ ಕೂಡಿರುವುದು, ರೈತರು ನೇರವಾಗಿ ಹಳ್ಳಕ್ಕೆ ಪಂಪ್‌ಸೆಟ್‌ ಹಚ್ಚದಿರುವುದು, ಅಲ್ಲಲ್ಲಿ ಮಳೆ ನೀರು ಇಂಗಲು ಹೊಂಡಗಳನ್ನು ತೋಡಿರುವುದು...



ಇಂತಹ ಕಾರಣಗಳಿಂದ ಈ ಪ್ರದೇಶದಲ್ಲಿ ನೀರು ಸದಾ ಹರಿಯುತ್ತದೆ ಎಂದು ತಜ್ಞರು ಕಾರಣ ಕೊಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ನಾಲ್ಕು ಗ್ರಾಮಗಳಲ್ಲಿ ಹರಿದು ಬರುವ ಹಳ್ಳದ ಭೂಪ್ರದೇಶ ತಗ್ಗಿನಿಂದ ಕೂಡಿದೆ. ಇಲ್ಲಿ ನೀರು ಬಸಿದು ಬಂದು ನಿರಂತರವಾಗಿ ಹರಿಯುತ್ತದೆ ಎಂದು ಎಂಜಿನಿಯರ್‌ ವೀರೇಶ ಬಂಗಾರಶೆಟ್ಟರ ಹೇಳುತ್ತಾರೆ.

ಈ ಭಾಗದ ಭೂಮಿ ಹದಿನೈದು ಅಡಿ ಆಳದವರೆಗೆ ಗರಸು ಮಣ್ಣಿನಿಂದ ಕೂಡಿದ್ದರೆ ನಂತರ ಉಸುಕು ಹೊಂದಿದೆ. ಗರಸಿನಲ್ಲಿ ಕೊರೆದ ಕೊಳವೆ ಬಾವಿಗಳ ನೀರು ತೋಟಗಳಿಗೆ ಸಾಕಾಗುವುದಿಲ್ಲ. ಇನ್ನೂ ಆಳವಾಗಿ ಕೊರೆದರೆ ಉಸುಕು ಬರುತ್ತದೆ. ನಂತರ ನೀರು ಸಿಗುವುದು ವಿರಳ. ಹೀಗಾಗಿ ಕೊಳವೆ ಬಾವಿಗಳ ಸಹವಾಸವೇ ಬೇಡ ಎಂದು ಇಲ್ಲಿನ ರೈತರು ಕೈಬಿಟ್ಟಿದ್ದಾರೆ. ಹೆಚ್ಚು ಕಡಿಮೆ ಈ ಪ್ರದೇಶ ಮರಳು ಮಣ್ಣಿನಿಂದ ಕೂಡಿದ್ದರಿಂದ ಇಲ್ಲಿ ತೆರೆದ ಬಾವಿಗಳನ್ನೇನಾದರೂ ತೋಡಿದರೆ ನಾಲ್ಕಾರು ವರ್ಷಗಳಲ್ಲಿ ಮುಚ್ಚಿ ಹೋಗುತ್ತವೆ.

ಅಂಥ ಬಾವಿಗಳನ್ನು ಉಳಿಸಿಕೊಳ್ಳಬೇಕಾದರೆ ಬಾವಿ ಸುತ್ತಲೂ ಕಲ್ಲಿನ ಕಟ್ಟಡ ಇಲ್ಲವೆ ಸಿಮೆಂಟ್ ರಿಂಗ್‌ಗಳನ್ನು ಹಾಕಬೇಕು. ಕೆಲವರು 20 ಅಡಿವರೆಗೆ ಗ್ರಾಮೀಣ ತಂತ್ರಜ್ಞಾನ ಬಳಸಿಕೊಂಡು ಕೈಬೋರು ಕೊರೆಸಿ ತರಕಾರಿ ತೋಟಗಳಿಗೆ ನೀರು ಹಾಯಿಸುತ್ತಿದ್ದರೆ, ಬಹುತೇಕರು ಮನೆ ಬಳಕೆಗೆ ಸಹ ಕೈಬೋರು ಹಾಕಿಸಿಕೊಂಡಿದ್ದಾರೆ.



ಪರಮ ಭಕ್ತಿ: ಬಾವಿಯ ನೀರು ನಿರಂತರ ಬಳಕೆಯಲ್ಲಿರಲಿ ಎಂದು ಗ್ರಾಮಸ್ಥರು ಊರಲ್ಲಿ ಡಂಗುರ ಹೊಡೆಸಿ ಬಾವಿಯ ನೀರನ್ನೇ ಹೆಚ್ಚಾಗಿ ಬಳಸಬೇಕು ಎಂದು ಸೂಚನೆ ನೀಡಿದ್ದಾರೆ. ‘ನಮ್ಮ ಗ್ರಾಮಗಳಲ್ಲಿ ನಳಗಳು ಬಂದಿವೆ. ಹಾಗಂತ ಬಾವಿಯ ನೀರು ಬಳಕೆ ಮಾಡದೆ ಬಿಟ್ಟರೆ ನೀರು ಮಲಿತು ಹಾಳಾಗುತ್ತದೆ. ಈ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎನ್ನುತ್ತಾರೆ ಯುವಕ ಹನುಮೇಶ.

ಪ್ರತಿವರ್ಷ ಮುಂಗಾರು ಆಗಮನದ ಸಂದರ್ಭದಲ್ಲಿ ‘ನಮಗೆ ವರ್ಷಪೂರ್ತಿ ನೀರು ನೀಡು ತಾಯಿ’ ಎಂದು ಗ್ರಾಮಸ್ಥರು ಗಂಗಾಪೂಜೆ ಮಾಡುತ್ತಾರೆ. ಗ್ರಾಮದ ಎಡಬಲದ ದಂಡೆಯಲ್ಲಿರುವ ಹಳ್ಳಿಗರು ಸ್ನಾನ ಮಾಡಲು, ಬಟ್ಟೆ ತೊಳೆಯಲು, ಜಾನುವಾರುಗಳಿಗೆ ನೀರುಣಿಸಿ ಮೈತೊಳೆಯಲು ಈ ಹಳ್ಳವನ್ನೇ ಆಶ್ರಯಿಸಿದ್ದಾರೆ. ಅಷ್ಟೇ ಅಲ್ಲ, ಗೃಹಿಣಿಯರು ಪಾತ್ರೆಗಳನ್ನು ನೇರವಾಗಿ ಹಳ್ಳಕ್ಕೆ ತಂದು ಲಕಲಕ ಹೊಳೆಯುವಂತೆ ತೊಳೆದುಕೊಂಡು ಹೋಗುತ್ತಾರೆ.


ಇಲ್ಲಿದೆ ನೋಡಿ ಕೈಬೋರು ಕೊರೆಯುವ ರಟ್ಟೆ ಬಲದ ತಂತ್ರಜ್ಞಾನ

ಹಳ್ಳದ ನೆರವಿದೆ: ಹಳ್ಳದಿಂದ ಕೊಂಚ ದೂರವಿರುವ ಮೇಗೂರು, ಬಳೂಟಗಿ, ಬನ್ನೆಟ್ಟಿ, ಸಿರಗುಂಪಿ, ರಾಮತಾಳ, ಬ್ಯಾಲಿಹಾಳ, ಬೆಂಚಮಟ್ಟಿ, ಮುದೇನೂರಿನಂತಹ ಹತ್ತಾರು ಗ್ರಾಮಗಳಲ್ಲಿ ಅಂತರ್ಜಲ ಸಮತೋಲನ ಕಾಯ್ದುಕೊಳ್ಳಲು ವಿಶಾಲ ಪಾತ್ರ ಹೊಂದಿರುವ ಈ ಹಳ್ಳವೇ ಆಸರೆ. ನೀರು ಮೇಲ್ಮಟ್ಟದಲ್ಲಿರುವುದರಿಂದ ಸಾವಿರ ರೂಪಾಯಿ ಖರ್ಚು ಮಾಡಿದರೆ ಸಾಕು, ಸ್ಥಳೀಯ ಅನುಭವಿ ರೈತ ಎಂಜಿನಿಯರ್‌ಗಳು ಮನೆ ಮುಂದೆ ಪಾಯ ನೋಡಿ ಒಂದೇ ದಿನದಲ್ಲಿ ನೆಲ ಕುಟ್ಟಿ ಕೈಬೋರು ಹಾಕಿ ಕುಡಿಯಲು ನೀರು ತೆಗೆದು ಕೊಡುತ್ತಾರೆ. ಹಳ್ಳದ ದಂಡೆ ಮೇಲಿರುವ ಹಳ್ಳಿಗರು ತೆರೆದ ಬಾವಿ ನೀರು ಬಳಸಿದರೆ, ಹಳ್ಳದಿಂದ ಕೊಂಚ ದೂರದಲ್ಲಿರುವ ಹಳ್ಳಿಗರು ಭುಜಬಲವನ್ನು ಮಾತ್ರ ಬಯಸುವ ದೇಸಿ ತಂತ್ರಜ್ಞಾನಕ್ಕೆ ಮೊರೆಹೋಗಿದ್ದಾರೆ.

ಹತ್ತಾರು ಅಡಿ ಉದ್ದದ ಎರಡು ಅಂಗುಲದ ಕಬ್ಬಿಣದ ರಾಡ್‌ ತುದಿಯ ಮೇಲ್ಗಡೆ ಕಬ್ಬಿಣದ ಬಟ್ಟಲವನ್ನು ಕಟ್ಟಿರುತ್ತಾರೆ. ಬಾಹುಬಲ ಹೊಂದಿದ ನಾಲ್ಕಾರು ಜಟ್ಟಿಗರು ಒಂದೇ ಅಳತೆಯಲ್ಲಿ ರಾಡ್ ಹಿಡಿದು ನೆಲ ಕುಟ್ಟುತ್ತಾರೆ. ಹೀಗೆ ನಿರಂತರ ನೆಲ ಕುಟ್ಟುತ್ತಿದ್ದಂತೆ ಮೊನಚಾದ ರಾಡ್ ನೆಲ ಸೀಳಿ ರಂಧ್ರ ಕೊರೆಯುತ್ತಾ ಮುಂದೆ ಸಾಗುತ್ತದೆ.

ಕುಟ್ಟುವ ರಭಸಕ್ಕೆ ಮೇಲ್ಗಡೆ ಚಿಮ್ಮಿದ ಮಣ್ಣು ರಾಡ್‌ ಮೇಲ್ಗಡೆ ಕಟ್ಟಿರುವ ಬಟ್ಟಲದಲ್ಲಿ ಬೀಳುತ್ತದೆ. ಮಣ್ಣು ಯಾವಾಗ ಬಟ್ಟಲು ತುಂಬುತ್ತದೆಯೋ ಆಗ ರಾಡ್ ಸಮೇತ ಮೇಲೆತ್ತಿ ಮಣ್ಣು ತುಂಬಿದ ಬಟ್ಟಲು ಖಾಲಿ ಮಾಡಿ ಪುನಃ ಕೊಳವೆಗೆ ಇಳಿಸಿ ಕುಟ್ಟುತ್ತಾರೆ.

ನೀರು ದೊರೆತ ನಂತರ ನಾಲ್ಕಾರು ಅಡಿಗಳಷ್ಟು ಕೊರೆಯುತ್ತಾರೆ. ನೀರು ಬರುವುದಿಲ್ಲ ಎಂಬ ಭೀತಿಯಂತೂ ಇಲ್ಲವೆ ಇಲ್ಲ. ಈ ತಂತ್ರಜ್ಞಾನಕ್ಕೆ ವಿದ್ಯುತ್‌ ಬೇಕಾಗಿಲ್ಲ, ಇಂಧನ ಅವಶ್ಯಕತೆ ಇಲ್ಲ, ಸುತ್ತಲಿನ ನಾಲ್ಕಾರು ಹಳ್ಳಿಗಳಲ್ಲಿ ಇಂತಹ ಕೈಬೋರು ಸಾಮಾನ್ಯ.

ಬಳೂಟಗಿ ಗ್ರಾಮದಲ್ಲಿ 500 ಮನೆಗಳಿವೆ, ಅಲ್ಲಿ 400 ಕೈಬೋರುಗಳಿವೆ. ಇಂಥ ಕೊಳವೆಬಾವಿ ಕೊರೆಯಲು ₹3 ಸಾವಿರ ತಗುಲುತ್ತದೆ. ಅಂತರ್ಜಲ ವೃದ್ಧಿಗೆ ಪೂರಕವಾದ ಬದುಕಿನ ಸಂಸ್ಕೃತಿ ಈ ಊರುಗಳಲ್ಲಿ ಹೆಜ್ಜೆ–ಹೆಜ್ಜೆಗೂ ಕಾಣಸಿಗುತ್ತದೆ.

ಕೈಗೆ ಸಿಗುವ ನೀರು
ಹಳ್ಳದ ದಂಡೆಯ ಮೇಲಿರುವ ಕೆ.ಬಸಾಪುರ ಹಳ್ಳಿಯ ಬಾವಿಗಳು ಸದಾ ನೀರಿನಿಂದ ತುಂಬಿರುತ್ತವೆ. ಇಂತಹ ಬೇಸಿಗೆಯಲ್ಲೂ ಈ ಬಾವಿಯಲ್ಲಿ ಕೇವಲ ಹತ್ತು ಅಡಿ ಹಗ್ಗ ಇಳಿಬಿಟ್ಟರೆ ಸಾಕು ಸಿಹಿನೀರು ದೊರಕುತ್ತದೆ. ಮಳೆಗಾಲದಲ್ಲಿ ಬಾಗಿ ನೀರು ತುಂಬಿಕೊಳ್ಳಬಹುದು ಎಂದು ಗ್ರಾಮದ ಶಿವಪುತ್ರಪ್ಪ ಹೆಮ್ಮೆಯಿಂದ ಹೇಳುತ್ತಾರೆ. ಅಲ್ಲದೆ ಬಾವಿ ನೀರಿನ ಮೇಲೆ ಅತಿಯಾದ ನಂಬಿಕೆ ಇಟ್ಟುಕೊಂಡಿರುವ ಈ ಗ್ರಾಮಸ್ಥರು ತಮ್ಮೂರಿನಲ್ಲಿ ಕೊಳವೆಬಾವಿಯಿಂದ ಕಿರು ನೀರಿನ ಪೂರೈಕೆ ವ್ಯವಸ್ಥೆ ಇದ್ದರೂ ಬಾವಿ ನೀರನ್ನೆ ಕುಡಿಯಲು ಬಳಸುತ್ತಾರೆ.

‘1981-82ರಲ್ಲಿ ಈಗಿನಕ್ಕಿಂತ ಭೀಕರ ಬರ ಎದುರಾಗಿತ್ತು, ಆದರೆ ನಮ್ಮೂರಿನ ಹಳ್ಳ ಮಾತ್ರ ಹರಿಯುತ್ತಿತ್ತು. ಕುಡಿಯುವ ನೀರಿಗಾಗಿ ಸುತ್ತಲಿನ ಹಳ್ಳಿಗರು ಚಕ್ಕಡಿ ಕಟ್ಟಿಕೊಂಡು ಬಂದು ಈ ಬಾವಿಯ ನೀರು ತೆಗೆದುಕೊಂಡು ಹೋಗುತ್ತಿದ್ದರು, ಎಷ್ಟೇ ನೀರು ಖರ್ಚಾದರೂ ಬಾವಿಯಲ್ಲಿನ ನೀರಿನ ಸೆಲೆ ಮಾತ್ರ ಕಡಿಮೆಯಾಗಿದ್ದಿಲ್ಲ’ ಎಂದು ವೃದ್ಧ ಚನ್ನವೀರಪ್ಪ ಹೇಳುತ್ತಾರೆ.

ನೀರುಣಿಸುವಲ್ಲಿ ಮುಂದೆ
ಅಂತರ್ಜಲದ ಅನುಕೂಲತೆ ಇವರಿಗಿದ್ದರೂ ಭೂಮಿಗೆ ನೀರುಣಿಸುವ ತಮ್ಮ ಕೆಲಸದಿಂದ ಮಾತ್ರ ಹಿಂದೆ ಸರಿದಿಲ್ಲ. ಕೃಷಿಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದ್ದು ಹಳ್ಳದ ಸುತ್ತಮುತ್ತಲಿನ ಪ್ರತಿಯೊಂದು ಹಳ್ಳಿಯಲ್ಲಿ 70ಕ್ಕೂ ಹೆಚ್ಚು ಕೃಷಿ ಹೊಂಡಗಳು ನಿರ್ಮಾಣವಾಗಿವೆ. ಕೃಷಿಹೊಂಡಗಳು ಅಂತರ್ಜಲ ಹೆಚ್ಚಳಕ್ಕೂ ಕಾರಣವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT