ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂದೋ ಬರಿದಾದ ನದಿ...

Last Updated 29 ಮೇ 2017, 19:30 IST
ಅಕ್ಷರ ಗಾತ್ರ

ಕಳೆದ ವಾರ ವಿಜಯಪುರ ಕಡೆಗೆ ಪ್ರವಾಸ ಹೋಗಿದ್ದೆ. ಎಂತಹ ಬಿಸಿಲು ಅಂತೀರಿ, ಎಲ್ಲಿ ನೆತ್ತಿ ಸುಟ್ಟು, ಸಿಡಿದು ಹೋಗುವುದೇನೋ ಎಂಬಷ್ಟು ಹೆದರಿಕೆ. ಕೊರ್ತಿ–ಕೊಲ್ಹಾರದಲ್ಲಿ ಕುಡಿಕೆ ಮೊಸರು ತಿಂದರೂ ತೀರದ ದಾಹ.

ಕೃಷ್ಣೆಯತ್ತ ಹೋಗಿಬರಲು ಮನಸ್ಸು ಮಾಡಿದಾಗ ಮೊಸರು ಮಾರುವ ಅಜ್ಜಿ, ‘ಯಪ್ಪಾ, ಅಲ್ಲೇನೈತಿ ಅಂತ ಹೊಕ್ಕೀದಿ. ಒಂದ್‌ ಮುಕ್ಕೂ ನೀರಿಲ್ಲ. ಬರೀ ಕರಿಮಣ್ಣು’ ಎಂದು ಧೈರ್ಯಗೆಡಿಸಿದರು. ಏನೇ ಆಗಲಿ, ಒಮ್ಮೆ ಹೋಗಿಬಂದರಾಯ್ತೆಂದು ಅತ್ತ ಹೊರಟೇಬಿಟ್ಟೆ, ಹೇಗೂ ಕ್ಯಾಮೆರಾ ಬೇರೆ ಜತೆಗಿತ್ತಲ್ಲ.

ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಮೇಲೆ ನಾನು ಹೆಜ್ಜೆ ಹಾಕುತ್ತಿದ್ದೆ. ‘ಇದು ಬ್ರಿಟಿಷರು ಕಟ್ಟಿದ ಸೇತುವೆ. ನದಿ ತುಂಬಿದಾಗ ನೀರೊಳಗೆ ಮುಳುಗಿರುತ್ತದೆ’ ಎಂದು ಜತೆಯಲ್ಲಿದ್ದವರು ಹೇಳಿದರು. ಸೇತುವೆ ಮೇಲಿನಿಂದ ಯಾವ ದಿಕ್ಕಿನತ್ತ ನೋಡಿದರೂ ಕಪ್ಪುಮಣ್ಣು ಕಣ್ಣಿಗೆ ರಾಚುತ್ತಿತ್ತು.

ನದಿ ಪಾತ್ರವೆಲ್ಲ ಬರಿದೋ ಬರಿದು. ನೀರಿನಲ್ಲೇ ಮುಳುಗಿರುತ್ತಿದ್ದ ಸೇತುವೆ ಎಷ್ಟೊಂದು ಮಜಬೂತಾಗಿದೆಯಲ್ಲ ಎಂದುಕೊಳ್ಳುತ್ತಾ, ನದಿಪಾತ್ರಕ್ಕೆ ಧುಮುಕಿದೆ. ಅಲ್ಲಿಯೇ ಬ್ರಿಟಿಷರೇ ಕಟ್ಟಿಸಿದ್ದ ಒಂದು ಬಾವಿ ಬೇರೆ ಇರಬೇಕೇ? ಹೂಳು ತುಂಬಿಹೋಗಿರುವ ಆ ಬಾವಿಯಲ್ಲಿ ಸ್ವಲ್ಪ ನೀರು ನಿಂತಿತ್ತು.

ದೂರದಲ್ಲಿ ಅರ್ಥ್‌ ಮೂವರ್‌ಗಳು ಟಿಪ್ಪರ್‌ಗೆ ಮಣ್ಣು ತುಂಬುತ್ತಿದ್ದವು. ಒಬ್ಬ ಯುವಕ, ಬಾಲಕಿ ಜತೆಗೆ ಸೇರಿಕೊಂಡು ನೆಲದಲ್ಲಿ ಏನೋ ಆರಿಸುತ್ತಿದ್ದ. ಹೋಗಿ ನೋಡಿದರೆ, ಪಸೆಯೆಲ್ಲ ಬರಿದಾಗಿ ನೀರಿಲ್ಲದೆ ಪ್ರಾಣಬಿಟ್ಟ ಮೀನುಗಳನ್ನು ಅವರು ಆಯುತ್ತಿದ್ದರು.

ಕೆಲವು ಮೀನುಗಳು ಇನ್ನೇನು ಪ್ರಾಣ ಬಿಡುವ ಹಂತದಲ್ಲಿದ್ದವು. ಹಸಿ ನೆಲದ ಮೇಲೆ ಅವುಗಳ ಒದ್ದಾಟ ನಡೆದಿತ್ತು. ಕುರಿಗಳ ಹಿಂಡು ಬಿಸಿಲಲ್ಲೇ ಬಿಡಾರ ಹೂಡಿತ್ತು. ತಿನ್ನಲು ಹಸಿರಿಲ್ಲ, ಕುಡಿಯಲು ನೀರಿಲ್ಲ. ನೆಲವಾದರೂ ಸ್ವಲ್ಪ ಹಸಿಯಾಗಿದೆಯಲ್ಲ ಎಂದು ಅವುಗಳೆಲ್ಲ ಅಲ್ಲಿಯೇ ತಳವೂರಿದಂತಿತ್ತು.


ಬಾಲಕಿಯೊಬ್ಬಳು ಕೊಡ ಎತ್ತಿಕೊಂಡು ಹೊರಟಿದ್ದಳು. ‘ಎಲ್ಲಿದೆಯಮ್ಮ ನೀರು’ ಎಂದು ಕೇಳಿದಾಗ, ಸೇತುವೆಯತ್ತ ಕೈತೋರಿದಳು. ಸೇತುವೆಗೆ ಹೊಂದಿಕೊಂಡ ತಗ್ಗು ಪ್ರದೇಶದಲ್ಲಿ ಸ್ವಲ್ಪ ನೀರು ನಿಂತಿತ್ತು. ಆ ನೀರಿನಲ್ಲಿ ನಾಯಿಯೊಂದು ಮಲಗಿತ್ತು. ನಾಯಿಯನ್ನು ಓಡಿಸಿದ ಬಾಲಕಿಯ ಅಮ್ಮ, ಅಲ್ಲಿನ ಗಲೀಜು ನೀರನ್ನೇ ಮೊಗೆದು ತುಂಬುತ್ತಿದ್ದರು.

‘ಈ ನೀರನ್ನು ಏನು ಮಾಡುತ್ತೀರಿ’ ಎಂದು ಕೇಳಿದಾಗ, ‘ಕುಡಿಯಾಕ ಬೇಕಲ್ರೀ ಸಾಹೇಬ್ರ’ ಎಂದು ಆ ಮಹಿಳೆ ಉತ್ತರಕೊಟ್ಟರು. ಭಾರವಾದ ಹೃದಯದಿಂದ ಸೇತುವೆ ಕಡೆಗೆ ಹೆಜ್ಜೆಹಾಕಿದೆ. ಎತ್ತ ನೋಡಿದರೆ ಮತ್ತದೇ ಕಪ್ಪುಮಣ್ಣು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT